50 ವರ್ಷಗಳ ಹಿಂದೆ ಸುಖಿ ಮತ್ತು ಹರಿಯಾ ನಡುವೆ ಪ್ರೀತಿ ಮೂಡಿತ್ತು. ಆದರೆ ಅವರ ಕುಟುಂಬಗಳು ಮದುವೆಗೆ ಅವಕಾಶ ನೀಡಿರಲಿಲ್ಲ.
ಭೋಪಾಲ್ (ಜು.05): ಎಷ್ಟೊಂದು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಿ ಮದುವೆಯಾದ ಸಂಬಂಧಗಳೂ ಮುರಿದು ಬೀಳುತ್ತವೆ. ಆದರೆ ಇಲ್ಲೊಂದು ಜೋಡಿ ಯಾವುದೇ ಸಂಪ್ರದಾಯ, ಶಾಸ್ತ್ರದ ಹಂಗಿಲ್ಲದೆ ತಮ್ಮ ಜೀವನದ 50 ವರ್ಷಗಳನ್ನು ಜೊತೆಯಾಗಿ ‘ಲಿವಿಂಗ್'ಟುಗೆದರ್’ ಸಂಬಂಧದಲ್ಲಿ ಜೀವನ ನಡೆಸಿ, ಈಗ ಮೋಕ್ಷಕ್ಕೋಸ್ಕರ ಮದುವೆಯಾಗಿ ಸುದ್ದಿಯಾಗಿದೆ.
ಮಧ್ಯಪ್ರದೇಶದ ಟಿಕಾಮಾರ್ಗ್ ಜಿಲ್ಲೆಯ ಸುಖಿ ಕುಶ್ವಾಹ (80) ಮತ್ತು ಹರಿಯಾ (75) ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆ ವೇಳೆ ಪೈಟ್ಪುರ ಗ್ರಾಮದಲ್ಲಿ ಅತಿಥಿಗಳಿಗೆ ಅದ್ದೂರಿ ಸ್ವಾಗತ, ಡಿಜೆ ಸಂಗೀತ ಆಯೋಜಿಸಲಾಗಿತ್ತು.
50 ವರ್ಷಗಳ ಹಿಂದೆ ಸುಖಿ ಮತ್ತು ಹರಿಯಾ ನಡುವೆ ಪ್ರೀತಿ ಮೂಡಿತ್ತು. ಆದರೆ ಅವರ ಕುಟುಂಬಗಳು ಮದುವೆಗೆ ಅವಕಾಶ ನೀಡಿರಲಿಲ್ಲ. ಆದರೆ ಮನೆಬಿಟ್ಟು ಹೋದ ಜೋಡಿ ಇಷ್ಟು ವರ್ಷಗಳ ಕಾಲ ಸಂತೋಷದಿಂದ ಬದುಕಿತ್ತು. ಆದರೆ ವಯಸ್ಸಾದಂತೆ,ಇತ್ತೀಚೆಗೆ ಅವರಿಗೆ ತಮ್ಮ ನಿಧನದ ನಂತರ ತಮಗೆ ಮೋಕ್ಷ ಸಿಗಲಾರದು ಎಂದೆನಿಸಿತ್ತು. ಈ ವಿಷಯವನ್ನು ಅವರು ತಮ್ಮ ದೊಡ್ಡ ಮಗನಲ್ಲಿ ತಿಳಿಸಿದ್ದರು. ಮಗ ಮುನ್ನಾ ಈ ಬಗ್ಗೆ ಎಲ್ಲರಲ್ಲಿ ಸಲಹೆ ಪಡೆದು ಮತ್ತು ಹೆತ್ತವರ ಭಾವನೆಗೆ ಬೆಲೆಕೊಟ್ಟು ಮದುವೆಯನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದರು.
