ಬದುಕು ಬದಲಿಸಿದ ಸೋರೆ ಬುರುಡೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 11:45 AM IST
Life changed after Sore burade
Highlights

ಒಂದು ಐಡಿಯಾ ಬದುಕು ಬದಲಿಸಬಹುದು ಅನ್ನುವುದಕ್ಕೆ ಸಾಕ್ಷಿ ಸೀಮಾ ಮತ್ತು ಕೃಷ್ಣ ಪ್ರಸಾದ್ ದಂಪತಿ. ಯಾವುದೋ ಒಂದು ದಿನ ಕೀನ್ಯಾದಲ್ಲಿ ಸೋರೆ ಬುರುಡೆ ಕಲಾಕೃತಿ ನೋಡಿದ ಇವರು ಮೈಸೂರಿಗೆ ಬಂದು ತಮ್ಮ ಸಹಜ ಸಮೃದ್ಧಿ ಸಂಸ್ಥೆ ಮೂಲಕ ಸೋರೆ ಬುರುಡೆ ತಳಿ ಸಂರಕ್ಷಣೆ ಮಾಡಿ, ಕೃಷಿ ಕಲಾ ಎಂಬ ಸಂಸ್ಥೆ ಕಟ್ಟಿ ಹೆಣ್ಣು ಮಕ್ಕಳನ್ನು ಒಟ್ಟು ಗೂಡಿಸಿ ಸೋರೆ ಬುರುಡೆಯಿಂದ ಕಲಾಕೃತಿ ರಚಿಸಿದರು. ಈಗ ಈ ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ. ಈ ಸಕ್ಸೆಸ್ ಸ್ಟೋರಿ ಇಲ್ಲಿ

 

ಸೋರೆ ಬುರುಡೆಯಲ್ಲಿ ಕಲಾಕೃತಿ ತಯಾರಿಸಬಹುದಾ? ಆ ಕಲಾಕೃತಿಯನ್ನು ವಿದೇಶಕ್ಕೆ ಕಳಿಸಬಹುದಾ? ಅದರಿಂದ ದುಡ್ಡು ಸಂಪಾದನೆ ಮಾಡಬಹುದಾ?

ಇವೆಲ್ಲವೂ ಆಗಬಹುದು ಅಂತ ತೋರಿಸಿಕೊಟ್ಟಿರುವುದು ಮೈಸೂರಿನ ಸೀಮಾ ಮತ್ತು ಕೃಷ್ಣ ಪ್ರಸಾದ್ ದಂಪತಿ. ಒಂದು ಐಡಿಯಾ ಅವರ ಬದುಕು ಬದಲಿಸಿದೆ. ಅಷ್ಟೇ ಅಲ್ಲ, ಎಷ್ಟೋ ಮಂದಿ ಹೆಣ್ಮಕ್ಕಳ ಬದುಕು ಕೂಡ ಬದಲಾಗಿದೆ. ಆರಂಭದಲ್ಲಿ ಸೋರೆ ತಳಿ ಉಳಿಸಬೇಕು ಎಂದು ಹೊರಟ ದಂಪತಿ ಸಹಜ ಸಮೃದ್ಧಿ ಸಂಸ್ಥೆ ಕಟ್ಟಿದರು. ಇದೀಗ ಕೃಷಿಕಲಾ ಎಂಬ ಉಪ ಸಂಸ್ಥೆ ಕಟ್ಟಿ ಸೋರೆ ಬುರುಡೆಯಲ್ಲಿ ಕಲಾಕೃತಿ ರಚಿಸುತ್ತಿದ್ದಾರೆ. ಸುಮಾರು ೫೮ ಬಗೆಯ ಸೋರೆ ತಳಿಗಳನ್ನು ಸಂರಕ್ಷಣೆ ಮಾಡಿರುವ ಈ ದಂಪತಿಗಳು ಸ್ಥಳೀಯ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಿ ಸೋರೆ ಬೆಳೆಸಿ ಒಂದಕ್ಕೆ ಸುಮಾರು ೫೦ ರಿಂದ ೧೦೦ ರುಪಾಯಿ ಕೊಟ್ಟು ಕೊಂಡುಕೊಳ್ಳುತ್ತಾರೆ. ಇದಾದ ನಂತರ ಮೈಸೂರಿನ ವಾಜಮಂಗಲದಲ್ಲಿ ತಾವೇ ಕೃಷಿಕಲಾ ಎನ್ನುವ ಕಲಾಕೃತಿ ಉತ್ಪಾದನಾ ಕೇಂದ್ರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳಿಂದ ಕಲಾಕೃತಿಗಳ ತಯಾರಿ ಕೆಲಸ ನಡೆಯುತ್ತದೆ. ಅವರಿಗೆ ಈ ಐಡಿಯಾ ಹೊಳೆದಿದ್ದು ಕೀನ್ಯಾದಲ್ಲಿ.

ಕೀನ್ಯಾದಲ್ಲಿ ಕಲಿತದ್ದು

‘ನಾನು ನನ್ನ ಗಂಡ ಕೃಷ್ಣ ಪ್ರಸಾದ್ ಕೀನ್ಯಾ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ಸೋರೆ ಬುರುಡೆಗಳಲ್ಲಿ ಸುಂದರವಾದ ಕಲಾಕೃತಿ ಮೂಡಿಸಿದ್ದನ್ನು ನೋಡಿ ಇಷ್ಟವಾಯಿತು. ಇವೆಲ್ಲವನ್ನೂ ಅಲ್ಲಿ ಬುಡಕಟ್ಟು ಜನಾಂಗದವರೇ ತಯಾರು ಮಾಡಿದ್ದರು. ಇದರ ಜೊತೆಗೆ ತಾಂಜೇನಿಯಾದಲ್ಲಿ ಸೋರೆ ಬುರುಡೆಯ ಬಳಕೆ ತುಂಬಾ ಹೆಚ್ಚಾಗಿದೆ. ಲೋಟ, ಬಿಂದಿಗೆ, ಹೂಜಿಗಳು, ಸುಂದರ ಕಲಾಕೃತಿಗಳನ್ನು ತಯಾರು ಮಾಡಲಾಗಿತ್ತು. ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಹೋದರೂ ಅವುಗಳ ಬಳಕೆ ಎದ್ದು ಕಾಣುತ್ತಿತ್ತು. ಇದೆಲ್ಲವನ್ನೂ ನೋಡಿ ನಾವೂ ಯಾಕೆ ಹೀಗೊಂದು ಪ್ರಯತ್ನ ಮಾಡಬಾರದು ಎಂದುಕೊಂಡದ್ದೇ ಮೈಸೂರಿಗೆ ಬಂದು ಸೋರೆ ಕಲಾಕೃತಿ ಪ್ರಯೋಗ ಮಾಡಿದೆವು’ ಎನ್ನುತ್ತಾರೆ ಸೀಮಾ.

ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ವ್ಯಾಪಾರ

ಕೀನ್ಯಾದಿಂದ ವಾಪಸ್ ಬಂದು ಮೊದಲು ಮಾಡಿದ ಕೆಲಸ ಇಲ್ಲಿನ ಸ್ಥಳೀಯ ಸೋರೆ ತಳಿಗಳನ್ನು ಪತ್ತೆ ಮಾಡುವುದು. ಹೀಗೆ ಪತ್ತೆ ಮಾಡಲು ಹೊರಟ ಇವರಿಗೆ ಸಿಕ್ಕಿದ್ದು ಕೇವಲ ಮೂವತ್ತು ಬಗೆಯ ತಳಿ. ಇದರಲ್ಲಿ ತಿನ್ನಲು ಯೋಗ್ಯವಾದ ಸೋರೆ, ತಿನ್ನಲು ಯೋಗ್ಯವಲ್ಲದ ಸೋರೆ ಎಂದು ಎರಡು ಬಗೆ ಇವೆ. ಮೊದ ಮೊದಲು ಎಲ್ಲಾ ಬಗೆಯ ತಳಿಗಳ ಸಂರಕ್ಷಣೆ, ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದರು. ನಂತರ ಈ ತಳಿಗಳನ್ನು ರೈತರಿಗೆ ನೀಡಿ ಅವರಿಂದ ಬೆಳೆದ ಸೋರೆಗಳನ್ನು ಖರೀದಿಸಿ ಕಲಾಕೃತಿ ಮಾಡಿದರು. ಇವರ ತಂಡದ ಪ್ರಯತ್ನಕ್ಕೆ ಮೊದಲ ಗೆಲುವು ಸಿಕ್ಕಿದ್ದು ದೆಹಲಿಯಲ್ಲಿ. ಅಲ್ಲಿ ನಡೆದ ಕರಕುಶಲ ಮೇಳದಲ್ಲಿ ಕೃಷಿ ಕಲಾ ತಂಡ ಒಂದೇ ದಿನ ೨೦ ಸಾವಿರ ವ್ಯಾಪಾರ ಮಾಡಿತು. ಆಗಲೇ ಈ ರೀತಿಯ ಕಲಾಕೃತಿಗೆ ಒಳ್ಳೆಯ ಬೇಡಿಕೆ ಇದೆ ಎಂದು ಗೊತ್ತಾಗಿ ಕಾನ್ಫಿಡೆನ್ಸ್ ಬೆಳೆದು ತನ್ನ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದು.

ಕಲಾಕೃತಿ ಮಾಡುವುದು ಹೇಗೆ

ಸೋರೆಕಾಯಿಯ ಹೊರ ಪದರ ಗಟ್ಟಿಯಾಗಿರುವುದೇ ಕಲಾಕೃತಿ ರಚನೆಗೆ ಪೂರಕ. ಕೊಡತಿ, ಉದ್ದ, ತಂಬೂರಿ, ಹಂಸ, ಗದೆ ಹೀಗೆ ನಾನಾ ಬಗೆಯಿರುವ ಸೋರೆಯನ್ನು ಬಲಿತ ನಂತರ ಕಿತ್ತು ಒಂದೂವರೆ ತಿಂಗಳುಗಳ ಕಾಲ ಚೆನ್ನಾಗಿ ಒಣಗಿಸಲಾಗುತ್ತೆ. ಹೀಗೆ ಒಣಗಿದ ಸೋರೆಯ ಒಳ ಭಾಗದಲ್ಲಿ ಇರುವ ಬೀಜಗಳನ್ನೆಲ್ಲಾ ತೆಗೆದು ಚೆನ್ನಾಗಿ ಶುಚಿ ಮಾಡಿಕೊಂಡ ನಂತರ ಈ ಬುರುಡೆಗಳು ಕಲಾಕೃತಿಯಾಗಲು ಸಿದ್ಧ. ಮುಖ್ಯವಾಗಿ ಬುರುಡೆಯ ಶೇಪ್ ನೋಡಿಕೊಂಡೇ ಕಲಾಕೃತಿಯನ್ನು ನಿರ್ಧರಿಸಲಾಗುತ್ತದೆ. ಬುರುಡೆಯ ಮೇಲೆ ಬಣ್ಣ ಬಳೆದು ಒಂದು ರೀತಿಯಲ್ಲಿ ಕಲಾಕೃತಿ ರಚನೆ ಮಾಡಿದರೆ, ಚೆನ್ನಾಗಿ ಕಾದ ಕಬ್ಬಿಣದ ಸಲಾಕೆಗಳನ್ನು ಬಳಸಿಕೊಂಡು ವಿವಿಧ ಆಕಾರದಲ್ಲಿ ರಂಧ್ರ ಮಾಡುವುದರ ಮೂಲಕವೂ ಕಲಾಕೃತಿ ರಚನೆ ಮಾಡಲಾಗುತ್ತದೆ. ಸದ್ಯ ವಿವಿಧ ಕ್ರಾಫ್ಟ್ ಮೇಳಗಳಲ್ಲಿ, ಆನ್‌ಲೈನ್‌ನಲ್ಲಿ, ಬೆಂಗಳೂರಿನ ವಿವಿಧ ಫೆಸ್ಟ್‌ಗಳಲ್ಲಿ ಮಾರಾಟವಾಗುತ್ತಿರುವ ಈ ಕಲಾಕೃತಿಗಳು ವಿದೇಶಗಳನ್ನೂ ತಲುಪಿವೆ. 

loader