ವೀಕೆಂಡ್ ಪಾರ್ಟಿ ಮಾಡಿದ್ರೆ ಒತ್ತಡ ನೀಗುತ್ತಾ?

Know the reasons for depression
Highlights

ಕಚೇರಿಯಲ್ಲಿ ನಿಗದಿಪಡಿಸಿದ ಕೆಲಸ ಮಾಡಲಾಗದ ನ್ಯೂನತೆ, ಕೆಲಸದಲ್ಲಿ ಅತೃಪ್ತಿ, ಕಾರ್ಯಭಾರದ ಒತ್ತಡ, ಮೇಲಧಿಕಾರಿಗಳಿಂದ ಸಿಗದ ಮೆಚ್ಚುಗೆ ಹೀಗೆ ನೂರೆಂಟು ತಳಮಳಗಳು ಮನುಷ್ಯನನ್ನು ಇಂದು ಮಾನಸಿಕ ಖಿನ್ನತೆಗೆ ನೂಕುತ್ತಿವೆ.

- ಡಾ. ಆದಿತ್ಯ ಪಾಂಡುರಂಗಿ
ಆತ ಸ್ಫುರದ್ರೂಪಿ ಯುವಕ. ಹೆಸರು ಸ್ವರೂಪ (ಹೆಸರು ಬದಲಾ ಯಿಸಲಾಗಿದೆ)ಯೌವ್ವನದ ಹೊಸ್ತಿಲಲ್ಲಿ ಹೊಂಗನಸು ಕಾಣುವ ವಯಸ್ಸು. ಮೈ ಮನದಲ್ಲಿ ನೂರೆಂಟು ಬಯಕೆಗಳ ಮೂಟೆ ಹೊತ್ತು ಕನಸಿನ ಗೋಪುರ ಏರುವ ಕಾಲ. ಮನೆಯಲ್ಲಿ ತಿನ್ನಲು ಉಣ್ಣಲು ಜತೆಗೆ ಕೇಳಿದ್ದನ್ನು ಕೊಡಿಸುವ ಪಾಲಕರು ಎಲ್ಲವೂ ಇದೆ. ಆದರೆ ಈ ವಯೋಸಹಜ ಬಯಕೆ, ಕಾಮನೆಗಳು ಅವನಲ್ಲಿ ಇರಲಿಲ್ಲ. ಏಕಾಂತ, ಮನೆಯವರು ಮಾತನಾಡಿಸಿದರೆ ಸಿಡಿಸಿಡಿ ಮಾಡುವುದು, ಮಾತು ಮಾತಿಗೆ ರೇಗುವುದು, ಯಾವುದೇ ಚಟುವಟಿಕೆಗಳಲ್ಲೂ ಆಸಕ್ತಿಯಿಲ್ಲ. ಕಳೆಗುಂದಿದ ಮುಖ ಹಾಕಿಕೊಂಡು ತಾನಾಯ್ತು ತನ್ನ ರೂಮ್ ಆಯ್ತು ಎಂದುಕೊಂಡು ಇರುವುದು ಆತನ ಜೀವನಶೈಲಿಯಾಗಿತ್ತು. ಇದರಿಂದ ಪಾಲಕರ ಆತಂಕ ಹೆಚ್ಚಿಸಿತ್ತು. ಮುಂದೆ ಮನೋವೈದ್ಯರ ಆಪ್ತಸಂವಾದ ಮತ್ತು ಸಲಹೆ ಮೇರೆಗೆ ಕ್ರಮೇಣ ಆತ ಗುಣಮುಖನಾದ ಆ ಮಾತು ಬೇರೆ. ಆದರೆ ಇಂದು ಈ ಸಮಸ್ಯೆ ಸರ್ವವ್ಯಾಪಿಯಾಗುತ್ತಿದೆ.

ಎಷ್ಟೆಲ್ಲ ಕಾರಣ?
ಕಚೇರಿಯಲ್ಲಿ ನಿಗದಿಪಡಿಸಿದ ಕೆಲಸ ಮಾಡಲಾಗದ ನ್ಯೂನತೆ, ಕೆಲಸದಲ್ಲಿ ಅತೃಪ್ತಿ, ಕಾರ್ಯಭಾರದ ಒತ್ತಡ, ಮೇಲಧಿಕಾರಿಗಳಿಂದ ಸಿಗದ ಮೆಚ್ಚುಗೆ ಹೀಗೆ ನೂರೆಂಟು ತಳಮಳಗಳು ಮನುಷ್ಯನನ್ನು ಇಂದು ಮಾನಸಿಕ ಖಿನ್ನತೆಗೆ ನೂಕುತ್ತಿವೆ. ಜತೆಜತೆಗೆ ಕೀಳರಿಮೆಯನ್ನೂ ಉಂಟುಮಾಡುತ್ತಿವೆ. ಉದ್ಯೋಗಿಗಳದ್ದು ಒಂದು ತರಹದ ಸಮಸ್ಯೆಯಾದರೆ ಇನ್ನು ವಿದ್ಯಾರ್ಥಿಗಳದ್ದು ಮತ್ತೊಂದು ತರಹದ ಸಮಸ್ಯೆ. ಪರೀಕ್ಷಾ ಭಯ, ಪಾಲಕರಿಂದ ಅಂಕಗಳಿಕೆಯ ಒತ್ತಡದ ಮಧ್ಯೆ ಸ್ನೇಹಿತರೊಡನೆ ಮೋಜು ಮಸ್ತಿ ಮಾಡಬೇಕೆನ್ನುವ ಹಂಬಲ, ವಯೋಸಹಜ ಮನೋಕಾಮನೆಗಳನ್ನು ಅದಮಿಟ್ಟುಕೊಳ್ಳಲಾಗದ ಸ್ಥಿತಿ ಎದುರಿಸುವ ಹದಿಹರೆಯದ ವಿದ್ಯಾರ್ಥಿಗಳು ಇಂದು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮ ಮಾದಕದ್ರವ್ಯಗಳ ದಾಸರಾಗುತ್ತಿದ್ದಾರೆ. ಇದರಿಂದ ಅವರ
ವೈಯಕ್ತಿಕ ಬದುಕಿನ ಜತೆಗೆ ಪಾಲಕರ ಆತಂಕವೂ ವೃದ್ಧಿಯಾಗುತ್ತಾ ಹೋಗುತ್ತದೆ. ಪಾಲಕರು ಸಹ ಮಕ್ಕಳನ್ನು ಈ ವೇಳೆ ಸ್ನೇಹಿತರಂತೆ ಭಾವಿಸಬೇಕು. 
ಕಟ್ಟುನಿಟ್ಟಿನ ಆಚರಣೆ, ಜೀವನಶೈಲಿ ಹೇರಬಾರದು. ಉತ್ತಮ ಸ್ನೇಹಿತನಾಗಿ ಅವನ ಆಸೆ ಆಕಾಂಕ್ಷೆಗಳನ್ನು ಅರಿತು ಸೂಕ್ತಸಲಹೆ ಹಾಗೂ ಆಪ್ತಸಂವಾದ ನಡೆಸಿದಾಗ ಮಕ್ಕಳು ಕೀಳರಿಮೆ ಹಾಗೂ ಖಿನ್ನತೆಯಿಂದ ಹೊರಬರುತ್ತಾರೆ. ಲವಲವಿಕೆಯಿಂದ ಪುಟಿದೇಳುತ್ತಾರೆ. ಚೈತನ್ಯದ ಚಿಲುಮೆಗಳಾಗುತ್ತಾರೆ.

ರೋಗಗಳಿಗೆ ಆಹ್ವಾನ 
ಒತ್ತಡದಿಂದ ನಿದ್ರಾಹೀನತೆ ಆರಂಭವಾಗುತ್ತದೆ. ನಿದ್ರಾಹೀನತೆಯಿಂದ ಜೈವಿಕಚಕ್ರಗಳಲ್ಲಿ ಏರುಪೇರಾಗಿ ಹೃದಯಸಂಬಂಧಿ
ಕಾಯಿಲೆಗಳು ಬರುತ್ತವೆ.ಒತ್ತಡಕ್ಕೆ ಸಿಲಕಿದಾಗ ಮನುಷ್ಯನ ವರ್ತನೆ ಯಲ್ಲೂ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಧೂಮಪಾನ ಅಥವಾ ಮದ್ಯಪಾನಕ್ಕೆ ಮೊರೆ ಹೋಗುತ್ತಾರೆ. ಆಗ ರಕ್ತದೊತ್ತಡ ಶುರುವಾಗುತ್ತದೆ. ಹೀಗೆ ಸಮಸ್ಯೆಗಳ ಸುಳಿ ಬೆಳೆಯುತ್ತ ಹೋಗುತ್ತದೆ. ಜಂಕ್ ಫುಡ್ ಸೇವನೆ ಹಾಗೂ ವ್ಯಾಯಾಮರಹಿತ ಬದುಕು ಕೊಬ್ಬಿನ ಕಣಜವಾಗುತ್ತದೆ. ಬಾಯಿರುಚಿಗೆ ಜೋತು ಬಿದ್ದು ಮಧುಮೇಹದಂತಹ ರೋಗಗಳನ್ನು ಬರಮಾಡಿಕೊಂಡಂತೆ ಈ ಆಹಾರಸೇವನೆ ಕ್ರಮ. ಹಿತ-ಮಿತವಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಧ್ಯಾನ ಮೊದಲಾದ ಕ್ರಮಗಳಿಂದ ಇದಕ್ಕೆ ಪೂರ್ಣವಿರಾಮ ಹಾಕಬಹುದು ಅಲ್ಲದೇ ಮಾನಸಿಕವಾಗಿಯೂ ಸದೃಢತೆ ಸಾಧಿಸಬಹುದು. 

ಪಾರ್ಟಿ ಮಾಡಿದ್ರೆ ಒತ್ತಡ ನೀಗುತ್ತಾ?
ಇಂದು ಯಾರನ್ನೂ ಕೇಳಿದರೂ ಅದರಲ್ಲೂಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೇಗಿದ್ದೀರಾ ಎಂದು ಕೇಳಿದ್ರೆ ಮೊದಲು ಬರುವ ಉತ್ತರ ಎಂದರೆ ಸಿಕ್ಕಾಪಟ್ಟೆ ವರ್ಕ ಪ್ರೆಶರ್ ಎಂಬುದು. ಹಾಗಿದ್ದರೆ ಇದಕ್ಕೆ ಪರಿಹಾರ ಅಂತ ಕೇಳಿದ್ರೆ ಏನಿಲ್ಲಾ ದೋಸ್ತ್ ವೀಕೆಂಡ್‌ಗೆ ಸಹೋದ್ಯೋಗಿಗಳ ಜತೆಗೆ ಪಾರ್ಟಿ(ಡ್ರಿಂಕ್ಸ್) ಮಾಡ್ತೇನೆ ಎಂಬ ಸಿದ್ಧ ಉತ್ತರ. ಈ ಜೀವನಶೈಲಿಯೇ ಇಂದು ನಮ್ಮ ಯುವಶಕ್ತಿಯನ್ನು ಮಾನಸಿಕ ಒತ್ತಡ ಹಾಗೂ ಹಲವು ರೋಗಗಳ ಕಪಿಮುಷ್ಟಿಗೆ ಸಿಲುಕಿಸಿದೆ. ನೆಮ್ಮದಿ ಅನ್ನುವುದು ಮರೀಚಿಕೆಯಾಗಿದೆ. ಯಾಂತ್ರಿಕ ಬದುಕು ನಮಗರಿವಿಲ್ಲದಂತೆ ನಮ್ಮನ್ನು ಆವರಿಸಿದೆ. ಬಹುತೇಕ ಯುವಕರು ದಿಢೀರನೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲಾಗದೇ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಬರುತ್ತಿದ್ದಾರೆ.
 

loader