ಟ್ಯುನೀಷಿಯಕ್ಕೆ ಹೊರಟ ಕರುನಾಡ ಘಲ್-ಝಲ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 27, Jul 2018, 11:55 AM IST
Karunad old song singers visits Tunisia
Highlights

ಈ ತಂಡದ ಹೆಸರು ಘಲ್-ಝಲ್. ಇದು ಮೂರು ವರ್ಷದ ಹಿಂದೆ ಒಗ್ಗೂಡಿದ ನಮ್ಮ ಸರ್ವ ಮಹಿಳಾ ಜಾನಪದ ತಂಡ. ತಮ್ಮ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದ ಈ ತಂಡ ಈಗ ಮತ್ತೊಂದು ಸಾಹಸಕ್ಕೆ ರೆಡಿಯಾಗಿದೆ.

ಭಾರತ ಸರ್ಕಾರದ ಪ್ರತಿನಿಧಿಯಾಗಿ ಉತ್ತರ ಆಫ್ರಿಕಾದ ಟ್ಯುನೀಷಿಯಾಗೆ ತೆರಳುತ್ತಿದೆ. ಅಲ್ಲಿ ನಡೆಯಲಿರುವ ಭಾರತೀಯ ಉತ್ಸವದಲ್ಲಿ ಜಾನಪದ ಕಲಾ ಪ್ರದರ್ಶನ ನೀಡಲಿದೆ. ಅಂದಹಾಗೆ ಘಲ್-ಝಲ್ ಗಾಯಕಿ ನಾಗಚಂದ್ರಿಕಾ ಭಟ್ ಅವರ ಕನಸು.

ಜುಲೈ 27 ರಿಂದ ಜುಲೈ 31 ರವರೆಗೆ ಟ್ಯುನೀಷಿಯಾದ ನಾಲ್ಕು ನಗರಗಳಲ್ಲಿ ಘಲ್-ಝಲ್ ತಂಡ ಪ್ರದರ್ಶನಗಳನ್ನು ನೀಡಲಿದೆ. ಕುತೂಹಲಕಾರಿ ಅಂದ್ರೆ ತಂಡದ ಈ ಪಯಣ ಖಚಿತಗೊಂಡಿದ್ದು ಜುಲೈ ೨೪ರಂದು. ಎರಡು ದಿನಗಳ ಹಿಂದೆಯೇ ಭಾರತ ಸರ್ಕಾರ ಈ ತಂಡಕ್ಕೆ ಆಹ್ವಾನ ನೀಡಿತ್ತಾದರೂ ಪಯಣ ಖಚಿತವಾಗಲು ತಡವಾಯಿತು. ಒಂದೇ ದಿನದಲ್ಲಿ ತಂಡದ ಎಂಟೂ ಸದಸ್ಯರು ಸಿದ್ಧರಾಗಿ, ರಾತ್ರೋರಾತ್ರಿ ದೆಹಲಿಗೆ ವಿಮಾನ ಕಾದಿರಿಸಿದರು.

ಅಷ್ಟೇ ಅಲ್ಲ, ದೆಹಲಿಗೆ ಬಂದು, ಟ್ಯುನೀಷಿಯಾ ದೂತಾವಾಸಕ್ಕೆ ಭೇಟಿ ನೀಡಿ, ಕೇವಲ ಒಂದೇ ತಾಸಿನಲ್ಲಿ ಅಷ್ಟೂ ಸದಸ್ಯರ ವೀಸಾ ಪ್ರಕ್ರಿಯೆ ಮುಗಿದಿದ್ದೇ ಒಂದು ಅಚ್ಚರಿ. ಜುಲೈ 24ರ ತಡರಾತ್ರಿ ಈ ತಂಡ ಟ್ಯುನೀಷಿಯಾಕ್ಕೆ ಪಯಣಿಸಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಘಲ್-ಝಲ್ ತಂಡದ ಈ ಸಾಧನೆ ನಿಜಕ್ಕೂ ಅದ್ಭುತ.

ಘಲ್ ಝಲ್ ತಂಡದ ವಿಶೇಷತೆಗಳು

1. ಯಾರಿಗೇ ಆದರೂ ಸ್ಪೂರ್ತಿಯಾಗಬಹುದಾದ ಈ ತಂಡ ಅನ್ಯ ರಾಜ್ಯ, ಹೊರ ದೇಶಗಳಲ್ಲಿ ಕಲಾ ಪ್ರದರ್ಶನ ನೀಡುತ್ತಿರುವ ಮೊದಲ ಸರ್ವ ಮಹಿಳಾ ಜಾನಪದ ತಂಡ.

2. ಈ ತಂಡದ ಶ್ರೇಷ್ಠತೆ ಏನೆಂದರೆ ದೇಶದ ೧೦ ಭಾಷೆಗಳ(ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಗುಜರಾತಿ, ರಾಜಸ್ಥಾನಿ, ಭೋಜಪುರಿ, ಪಂಜಾಬಿ ಮತ್ತು ತುಳು) ಅಥೆಂಟಿಕ್ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸುವ ದೇಶದ ಏಕೈಕ ಸಂಗೀತ ತಂಡ ಇದು.

3. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಸರ್ಕಾರ ಹಾಗೂ ದೇಶವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಮೊದಲ ಮಹಿಳಾ ಸಂಗೀತ ತಂಡ ಎಂಬ ಹೆಗ್ಗಳಿಕೆ ಈಗ ಈ ತಂಡಕ್ಕೆ ಸಿಕ್ಕ ಗರಿ.

4. ಜಾನಪದ ಸಂಗೀತಕ್ಕೆಂದೇ ಮೀಸಲಾದ ಕರ್ನಾಟಕದ ಈ ಏಕೈಕ ಮಹಿಳಾ ಸಂಗೀತ ತಂಡ ನಮ್ಮ ನಿಮ್ಮೆಲ್ಲರ ಹೆಮ್ಮೆ

loader