Asianet Suvarna News Asianet Suvarna News

ನೀರಿನ ಹಾಹಾಕಾರಕ್ಕೆ ಇಸ್ರೇಲ್ ಕೊಟ್ಟ ಉತ್ತರವಿದು!

ಇಸ್ರೇಲ್ ಸ್ವತಂತ್ರಗೊಂಡ ಎರಡು ವರ್ಷದಲ್ಲೇ ಚರಂಡಿ ನೀರನ್ನು ಬಳಸಿ ಕೃಷಿ ಮಾಡುವ ವಿಚಾರವಾಗಿ ಚರ್ಚೆ ಆರಂಭವಾಯಿತಾದರೂ ಸಂಸ್ಕರಿಸಿದ ಚರಂಡಿ ನೀರು ಆರೋಗ್ಯಕರವಲ್ಲ ಎಂಬ ನಂಬಿಕೆಯಿಂದಾಗಿ ಈ ವಿಚಾರವನ್ನು ಕೈಬಿಡಲಾಗಿತ್ತು. ಎಡೆಬಿಡದ ನೀರಿನ ಅಭಾವ, ಇಸ್ರೇಲಿನ ಸರ್ಕಾರೀ ಅಧಿಕಾರಿಗಳು ಮತ್ತು ರೈತರು ಕಾಲಕ್ರಮೇಣ  ಈ ಕುರಿತು ಮರುಚಿಂತನೆ ಮಾಡುವಂತೆ ಮಾಡಿತು.

Israel has solution for water crisis

ಇಸ್ರೇಲ್ ಸ್ವತಂತ್ರಗೊಂಡ ಎರಡು ವರ್ಷದಲ್ಲೇ ಚರಂಡಿ ನೀರನ್ನು ಬಳಸಿ ಕೃಷಿ ಮಾಡುವ ವಿಚಾರವಾಗಿ ಚರ್ಚೆ ಆರಂಭವಾಯಿತಾದರೂ ಸಂಸ್ಕರಿಸಿದ ಚರಂಡಿ ನೀರು ಆರೋಗ್ಯಕರವಲ್ಲ ಎಂಬ ನಂಬಿಕೆಯಿಂದಾಗಿ ಈ ವಿಚಾರವನ್ನು ಕೈಬಿಡಲಾಗಿತ್ತು. ಎಡೆಬಿಡದ ನೀರಿನ ಅಭಾವ, ಇಸ್ರೇಲಿನ ಸರ್ಕಾರೀ ಅಧಿಕಾರಿಗಳು ಮತ್ತು ರೈತರು ಕಾಲಕ್ರಮೇಣ ಈ ಕುರಿತು ಮರುಚಿಂತನೆ ಮಾಡುವಂತೆ ಮಾಡಿತು.

ನಂತರದ ಕೆಲ ದಶಮಾನದಲ್ಲಿ ಇಸ್ರೇಲ್ ಒಂದು ಕೃಷಿ ಪ್ರಧಾನ  ದೇಶವಾಗಿ ರೂಪುಗೊಳ್ಳುವಲ್ಲಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳುವ ವ್ಯವಸ್ಥೆ ಯಶಸ್ವಿಯಾಗಿ ಸ್ಥಾಪನೆಗೊಂಡಿದ್ದು ಪ್ರಮುಖ ಕಾರಣ. ಪ್ರಪಂಚದ ಬೇರೆ ಯಾವುದೇ ದೇಶ ಇಸ್ರೇಲಿನಂತೆ ತ್ಯಾಜ್ಯ ನೀರಿನ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿಲ್ಲ.

ಇಂದು ಇಸ್ರೇಲಿನಲ್ಲಿ ಶೇಕಡಾ 85 ರಷ್ಟು ತ್ಯಾಜ್ಯ ನೀರಿನ ಮರುಬಳಕೆಯಾಗುತ್ತಿದೆ. ಬೇರೆಲ್ಲ ದೇಶಗಳಲ್ಲಿ ತ್ಯಾಜ್ಯ ನೀರಿನ ಮರುಬಳಕೆ ನಗಣ್ಯ. ಆದರೆ ನೀರಿನ ಅಭಾವ ಎಲ್ಲ ದೇಶಗಳನ್ನು ತ್ಯಾಜ್ಯ ನೀರಿನ ಮರುಬಳಕೆ ಮಾಡುವಂತೆ ಪ್ರೇರಣೆ ಮಾಡುವ ಕಾಲ ದೂರದಲ್ಲಿಲ್ಲ. ಚರಂಡಿ ನೀರು ಪರಿಸರಕ್ಕೆ ಮಾಲಿನ್ಯಕಾರಕ. ಆದರೆ ಇಸ್ರೇಲಿನಲ್ಲಿ ಇದು ಸಮಾನಾಂತರ ನೀರಿನ ವ್ಯವಸ್ಥೆಯಾಗಿ ರಾಷ್ಟ್ರೀಯ ಸಂಪನ್ಮೂಲವಾಗಿ ರೂಪುಗೊಂಡಿದೆ.

ಇಸ್ರೇಲಿನ ಕೃಷಿಕರ ಪಾಲಿಗೆ ಇದೊಂದು ಅತ್ಯಮೂಲ್ಯ ವರದಾನವಾಗಿದೆ. ತ್ಯಾಜ್ಯ ನೀರೆಂದರೆ ಸ್ನಾನಗೃಹದಿಂದ ಹೊರಹೋಗುವ ನೀರು, ಬಟ್ಟೆ ಮತ್ತು ಪಾತ್ರೆ ತೊಳೆದ ನೀರು, ಶೌಚಾಲಯದ ನೀರು ಮತ್ತಿತರ ದಿನಬಳಕೆ ನೀರು ಹಾಗೂ ಚರಂಡಿಯಲ್ಲಿ ಹರಿಯುವ ಮಳೆನೀರು. ಆದ್ದರಿಂದ ಯಾವಾಗಲೂ ತ್ಯಾಜ್ಯ ನೀರು ಕುಡಿಯುವ ನೀರಿನ ವ್ಯವಸ್ಥೆಯಿಂದ ದೂರವಿರಬೇಕಾಗುತ್ತದೆ. ತ್ಯಾಜ್ಯ ನೀರನ್ನು ನದಿಗಳಿಗೆ ಬಿಡುವ ಮೊದಲು ಅದನ್ನು ಸಂಸ್ಕರಿಸಬೇಕು ಆದರೆ ಜಗತ್ತಿನ ಬಹಳಷ್ಟು ದೇಶಗಳಲ್ಲಿ ಅದನ್ನು ಹಾಗೆಯೆ ನದಿಗಳಿಗೆ ಹರಿಯ ಬಿಡುತ್ತಿರುವುದು ವಿಷಾದನೀಯ ಸಂಗತಿ. ಇದು ರೋಗ ರುಜಿನಗಳನ್ನು ಉಂಟುಮಾಡುತ್ತದೆ ಹಾಗೂ ಅದರಿಂದ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇತಿಹಾಸ ಕಾಲದಿಂದಲೂ ಮಾನವ ತ್ಯಾಜ್ಯದೊಂದಿಗೆ ಬದುಕಿದ್ದಾನೆ; ಅದರಿಂದಾಗಿ ಅನೇಕ ವ್ಯಾಧಿಗಳನ್ನೂ ಕಾಯಿಲೆಗಳನ್ನೂ ಪಡೆದಿದ್ದಾನೆ. 1854 ರಲ್ಲಿ ಬ್ರಿಟಿಷ್ ಅರಿವಳಿಕೆ ತಜ್ಞ ಡಾ. ಜಾನ್ ಸ್ನೋ ಮೊದಲ ಬಾರಿಗೆ ಕಾಲರಾ ರೋಗವನ್ನು ತಡೆಗಟ್ಟಲು ಕಲುಷಿತ ನೀರನ್ನು ಕುಡಿಯುವ ನೀರಿನ ಮೂಲದಿಂದ ಬೇರೆಯಾಗಿರಿಸುವ ವಿಚಾರ ವಾದವನ್ನು ಮಂಡಿಸಿದನು. ಅದಾದನಂತರ 1858 ರಿಂದ ಲಂಡನ್ನಿನಲ್ಲಿ ತ್ಯಾಜ್ಯ ನೀರನ್ನು ಥೇಮ್ಸ್ ನದಿಯ ಕೆಳಭಾಗಕ್ಕೆ ಬಿಡುವ ಪದ್ಧತಿ ಜಾರಿಗೆ ಬಂತು.

ಆಮೇಲಿನ ದಶಕದಲ್ಲಿ ಯುರೋಪಿನ ಎಲ್ಲೆಡೆ ಕಾಲರಾ ಭೀತಿ ಹರಡಿದಾಗ ಡಾ. ಜಾನ್ ಸ್ನೋ ವಿಚಾರವಾದ ಸರಿಯಾದದ್ದೆಂದು ಸಾಬೀತಾಯಿತು. ಮಲಿನ ನೀರನ್ನು ಕುಡಿಯುವ ನೀರಿನಿಂದ ಬೇರ್ಪಡಿಸುವ ವ್ಯವಸ್ಥೆ ಸಾಮೂಹಿಕ ಸಾವನ್ನು ತಡೆಗಟ್ಟಲು ಮತ್ತು ಜನರಿಗೆ ಆರೋಗ್ಯಕರ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿತು.

ನಗರಗಳಲ್ಲಿ ಕೊಳಚೆ ನೀರನ್ನು ಕುಡಿಯುವ ನೀರಿನ ಮೂಲದಿಂದ ಬೇರೆಯಾಗಿಸಿ ಅಥವಾ ಸಮುದ್ರಕ್ಕೆ ಬಿಡುವ ವ್ಯವಸ್ಥೆ ಜಾರಿಗೊಂಡಿತು ಆದರೆ ಚರಂಡಿ ನೀರಿನ ಶುದ್ಧೀಕರಣ ಮತ್ತು ಮರುಬಳಕೆಯ ಬಗೆಗಿನ ಚಿಂತನೆ ಶತಮಾನದವರೆಗೂ ನಡೆಯಲೇ ಇಲ್ಲ. ಎರಡನೇ ಜಾಗತಿಕ ಯುದ್ಧದ ನಂತರ ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ಕೊಳಚೆ ನೀರಿನ ಶುದ್ಧೀಕರಣ ಬಗ್ಗೆ ಯೋಜನೆ ಮಾಡಿದವು. ಆದರೆ ಅದರ ಉದ್ದೇಶ ಪರಿಸರ ಮಾಲಿನ್ಯ ತಡೆಗಟ್ಟುವುದಾಗಲಿ ಅಥವಾ ಪರಿಸರದ ಬಗ್ಗೆ ಕಾಳಜಿಯಾಗಲಿ ಆಗಿರಲಿಲ್ಲ. ಬದಲಾಗಿ ಕೊಳಚೆ ನೀರಿನಿಂದ ಪೋಲಿಯೋ ಕಾಯಿಲೆ ಬರುತ್ತದೆಂಬ ತಪ್ಪು ತಿಳುವಳಿಕೆಯಾಗಿತ್ತು.

ಇದಾದ ನಂತರ ಪೋಲಿಯೋ ರೋಗಕ್ಕೆ ಕೊಳಚೆ ನೀರು ಕಾರಣವೆಂಬ ಬಗ್ಗೆ ಯಾವ ಪುರಾವೆ ಸಿಗದೇ ಇದ್ದರೂ 1950 ರ ವೇಳೆಗೆ ಕೊಳಚೆ ನೀರಿನ ಸಂಸ್ಕರಣೆ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ನಗರಗಳಲ್ಲಿ ಸಾಮಾನ್ಯವಾಗಿತ್ತು. ಈ ವ್ಯವಸ್ಥೆ ಸರ್ಕಾರದ ಪ್ರೋತ್ಸಾಹದಿಂದಾಗಿ ಪ್ರಪಂಚದ ಎಲ್ಲ ಕಡೆಗಳಲ್ಲೂ ವ್ಯಾಪಕವಾಗಿ ಪ್ರಚಾರ ಗೊಂಡಿತು. ಈಗ ಪ್ರಪಂಚದೆಲ್ಲೆಡೆ ಸೇರಿ ಒಂದು ಲಕ್ಷಕ್ಕೂ  ಹೆಚ್ಚು ಕೊಳಚೆ ನೀರಿನ ಸಂಸ್ಕರಣಾ ಕೇಂದ್ರಗಳಿವೆ. ಪ್ರಾರಂಭಿಕ ದಿನಗಳಲ್ಲಿ ತ್ಯಾಜ್ಯ ನೀರಿನ ಶುದ್ಧೀಕರಣ ಪ್ರಕ್ರಿಯೆ ಎರಡು ಹಂತದಲ್ಲಿರುತ್ತಿತ್ತು. ಮೊದಲನೆಯದಾಗಿ, ಚರಂಡಿ ನೀರು ಶುದ್ಧೀಕರಣ ಕೇಂದ್ರಕ್ಕೆ ಬಂದಾಕ್ಷಣ ಬೇರೆ ಬೇರೆ ನಾಲೆಗಳಲ್ಲಿ ಪೊರೆಗಳ ಮುಖಾಂತರ ಹರಿಸಿ ಕಸ ಮತ್ತಿತರ ಅವಶೇಷಗಳನ್ನು
ಬೇರ್ಪಡಿಸುವುದು.

ತದನಂತರ ದೊಡ್ಡ ಟ್ಯಾಂಕುಗಳಲ್ಲಿರಿಸಿ ಭಾರೀ ಘನರೂಪದ ಮತ್ತು ಅರೆ ಘನರೂಪದ ವಸ್ತುಗಳನ್ನು ನೀರಿನಡಿಯಲ್ಲಿ ಶೇಖರಣೆಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಸಾವಯವ ಅಥವಾ ಕೆಸರನ್ನು ಟ್ಯಾಂಕಿನಿಂದ ತೆಗೆದು ಬೇರೆಡೆ ಸಾಗಿಸಿ ಭೂಮಿಯೊಳಗೆ ಹೂಳಲಾಗುತ್ತಿತ್ತು. ಟ್ಯಾಂಕಿನಿಂದ ಹೊರಬಂದ, ತಕ್ಕ ಮಟ್ಟಿಗೆ ಸೋಸಿದ ನೀರನ್ನು ನದಿ ಅಥವಾ ಸಮುದ್ರಕ್ಕೆ ಹರಿಯಬಿಡಲಾಗುತ್ತಿತ್ತು. ಆದರೆ ಈ ಪದ್ಧತಿಯಿಂದ ಆಮ್ಲಜನಕ ಬರಿದಾಗುತ್ತದೆ ಎಂಬ ಕಾರಣಕ್ಕೆ ಮತ್ತೊಂದು ಕಾರ್ಯವಿಧಾನವನ್ನು ಸೇರಿಸಲಾಯಿತು. ಆ ಪ್ರಕಾರ ಮೊದಲನೆಯದಾಗಿ ಕಸ ಮತ್ತಿತರ ಅವಶೇಷಗಳನ್ನು ಬೇರ್ಪಡಿಸಿದ ನಂತರ ಆಧುನಿಕ ರೀತಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಆಮ್ಲಜನಕ ಸಂಯೋಜನೆ ಮಾಡಲಾಯಿತು.

ಇದರಿಂದಾಗಿ ಸಾವಯವ ರೂಪದಲ್ಲಿರುವ ಮನುಷ್ಯನ ಮಲ, ಆಹಾರಕಣಗಳು ಇನ್ನಿತರ ತ್ಯಾಜ್ಯಗಳನ್ನು ಹಸಿದ, ಪರಿಸರ ಸ್ನೇಹಿ ಬ್ಯಾಕ್ಟೀರಿಯಾಗಳು ತಿಂದು ಕೊಬ್ಬಿ ಆಮ್ಲಜನಕಯುಕ್ತ ಬೆಚ್ಚನೆಯ ತಾಪಮಾನದಿಂದಾಗಿ ಟ್ಯಾಂಕಿನ ಕೆಳಭಾಗದಲ್ಲಿ ಶೇಖರಣೆಗೊಳ್ಳುತ್ತಿದ್ದವು. ಈ ಕೆಸರುಯುಕ್ತ ಬ್ಯಾಕ್ಟೀರಿಯಾಗಳನ್ನು ಮೊದಲಿನಂತೆ ತೆಗೆದು ಬೇರೆಡೆಗೆ ಸಾಗಿಸಿ ಭೂಮಿಯಲ್ಲಿ ಹೂಳಲಾಗುತ್ತಿತ್ತು. ಬೇರೆಲ್ಲ ದೇಶಗಳಂತೆ ಮೊದಲೆಲ್ಲ ಇಸ್ರೇಲಿನಲ್ಲಿ ಕೂಡ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹರಿಯಬಿಡಲಾಗುತ್ತಿತ್ತು. ಟೆಲ್ ಅವಿವ್ ಇನ್ನಿತರ ಸಮುದ್ರದಂಚಿನ ನಗರಗಳಲ್ಲಿ ಅದಕ್ಕೆಂದೇ ನಿರ್ಮಿಸಲಾದ ಕೊಳವೆ ಮಾರ್ಗದ ಮೂಲಕ ಸಮುದ್ರದಲ್ಲಿ ಒಂದು ಮೈಲು ದೂರದವರೆಗೆ ಸಾಗಿಸಿ ಹದಿನೈದು ಅಡಿ ಆಳದಲ್ಲಿ ಸಮುದ್ರಕ್ಕೆ ಬಿಡಲಾಗುತ್ತಿತ್ತು.

ಇಸ್ರೇಲಿನ ಇತರ ನಗರಗಳ ಮಲಿನ ನೀರನ್ನು ನದಿಗಳ ಮುಖಾಂತರ ಮೆಡಿಟರೇನಿಯನ್ ಸಮುದ್ರಕ್ಕೆ ಬಿಡಲಾಗುತ್ತಿತ್ತು. ಆದರೆ ಸಮುದ್ರದ ಅಲೆಗಳ ಮೂಲಕ ಈ ತ್ಯಾಜ್ಯ ನೀರು ಸಮುದ್ರ ದಡಕ್ಕೆ ವಾಪಸ್ಸು ಬರುತ್ತಿತ್ತು. ತಂತ್ರಜ್ಞರ ಸತತ ಪ್ರಯತ್ನದಿಂದಲೂ ಇದಕ್ಕೆ ಪರಿಹಾರ ಸಿಗಲಿಲ್ಲ. ಇದರಿಂದಾಗಿ ಅರಳುವ ಹಂತದಲ್ಲಿರುವ ಇಸ್ರೇಲಿನ ಪ್ರವಾಸೋದ್ಯಮ ಕಮರುವಂತಾಗಿತ್ತು. 1956 ರಲ್ಲಿ ಟೆಲ್ ಅವಿವ್ ಮಹಾನಗರ ವ್ಯಾಪ್ತಿಯ ಡ್ಯಾನ್ ಪ್ರದೇಶದಲ್ಲಿ ಬರುವ ಏಳು ಪುರಸಭೆಗಳು ಸೇರಿ ಒಂದು ನಿರ್ಧಾರಕ್ಕೆ ಬಂದವು.

ಇಸ್ರೇಲಿನ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಹೊಂದಿದ ಮತ್ತು ದೊಡ್ಡ ಪ್ರಮಾಣದ ತ್ಯಾಜ್ಯ ನೀರಿನ ಮಾರ್ಗವನ್ನು ಹೊಂದಿದ ಈ ಪ್ರದೇಶದಲ್ಲಿ ತ್ಯಾಜ್ಯ ನೀರನ್ನು ಒಂದೆಡೆ ಸೇರಿಸಿ ದೊಡ್ಡ ಕೊಳವೆ ಮಾರ್ಗದ ಮೂಲಕ ಟೆಲ್ ಅವಿವ್ ನಗರದಿಂದ ಎಂಟು ಮೈಲಿಗಳಾಚೆಯ ನಿರ್ಜನ ಪ್ರದೇಶಕ್ಕೆ ಹರಿಸಿ ಅಲ್ಲಿ ಅದನ್ನು ಸಂಸ್ಕರಿಸುವ ಯೋಜನೆ ರೂಪಿಸಲಾಯಿತು. ಈ ಶುದ್ಧೀಕರಣ ಕೇಂದ್ರಕ್ಕೆ ‘ಶಫಧನ್’ ಎಂದು ನಾಮಕರಣ ಮಾಡಲಾಯಿತು. ಹಣಕಾಸು ಮತ್ತು ತಾಂತ್ರಿಕ ಕಾರಣದಿಂದ ಈ ಯೋಜನೆ ತುಂಬಾ ಸಮಯದ ನಂತರ ಅಂದರೆ 1973 ರಲ್ಲಿ ಕಾರ್ಯರೂಪಕ್ಕೆ ಬಂದಿತು.

‘ಶಫಧನ’ ಶುದ್ಧೀಕರಣ ಕೇಂದ್ರದಿಂದ ಹೊರಬರುವ ನೀರಿನಿಂದ ಕೃಷಿ ಕಾರ್ಯ ಗಳು ಪ್ರಾರಂಭವಾದವು. ಈ ಯೋಜನೆ ಯಾರೂ ಊಹಿಸದಷ್ಟು ಪ್ರಮಾಣದಲ್ಲಿ ಯಶಸ್ವಿಯಾಯಿತು. ಇಸ್ರೇಲಿನ ವ್ಯವಸಾಯ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ಅಷ್ಟೇ ಅಲ್ಲ, ಇದು ಇಸ್ರೇಲಿನ ನೀರಾವರಿ ಪದ್ಧತಿಯ ಚಿತ್ರಣವನ್ನೇ ಬದಲಿಸಿತಲ್ಲದೆ ನೆಗೆವ್ ಮರುಭೂಮಿ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಕಾರಣ ವಾಯಿತು.?

Follow Us:
Download App:
  • android
  • ios