ಕಚಗುಳಿ ಮಾಡಿ ಮಗುವಿಗೆ ಟಾರ್ಚರ್ ಕೊಡಬೇಡಿ...
ಮಗುವಿನ ನಗುವಿಗಿಂತ ಮುದ್ದಾದ ಇನ್ನೊಂದು ಸಂಗತಿ ಇರಲಿಕ್ಕಿಲ್ಲ. ಅದರಲ್ಲೂ ಅವು ಸದ್ದು ಮಾಡಿಕೊಂಡು ಕಿಲ ಕಿಲ ಅಂತ ಜೋರಾಗಿ ನಗುವುದು ಎಂಥವರಿಗೂ ಕಚಗುಳಿ ಇಡುತ್ತದೆ. ಹಾಗಂತ ಹೀಗೆ ನಗಿಸಲು ಮಗುವಿಗೆ ಕಚಗುಳಿ ಇಡಬೇಡಿ. ಯಾಕೆ ಅಂತ ಹೇಳ್ತೀವಿ ಕೇಳಿ.
ಮಗುವೊಂದು ಕಿಲಕಿಲ ಎಂದು ಹೊಟ್ಟೆ ಕುಲುಕಿಸಿಕೊಂಡು ನಗುವುದಕ್ಕಿಂತ ಚೆಂದದ ಚಿತ್ರಣ ಮತ್ತೊಂದು ಸಿಗಲಿಕ್ಕಿಲ್ಲ. ಹೀಗೆ ಮಗುವನ್ನು ನಗಿಸಲು ಅವುಗಳಿಗೆ ಕಚಗುಳಿ ಇಡುವುದು ತಲೆತಲಾಂತರದಿಂದ ನಡೆದು ಬಂದಿರುವ ಒಂದು ರೀತಿಯ ಆಟ. ಆದರೆ, ಈ ಆಟವೇ ಅನಾಹುತಕ್ಕೆ ಕಾರಣವಾಗಬಹುದು. ಹೌದು, ಮಕ್ಕಳಿಗೆ ಕಚಗುಳಿ ಇಡುವುದು ಸುರಕ್ಷಿತವಲ್ಲ ಎನ್ನುತ್ತವೆ ಹಲವು ಅಧ್ಯಯನಗಳು ಹಾಗೂ ಮನಃಶಾಸ್ತ್ರ. ಕಚಗುಳಿ ಇಟ್ಟಾಗ ಮಗು ದೊಡ್ಡದಾಗಿ ಸದ್ದು ಮಾಡಿಕೊಂಡು ನಿಯಂತ್ರಣವಿಲ್ಲದೆ ನಗುವುದರ ಹಿಂದೆ ಅಡಗಿರುವ ಕಾರಣಗಳನ್ನು ಹುಡುಕಲು ಸಮಯ ಬಂದಿದೆ.
ನಿಮಗೆ ಗೊತ್ತಾಗದೆ ಮಕ್ಕಳು ಹೇಳಿಕೊಡುವ ತಿನ್ನೋ ಪಾಠ!
ಸಡನ್ ಆಗಿ ಸೀನು ಬರುವಂತೆ, ಕಚಗುಳಿಗೆ ಕೂಡಾ ಮೆದುಳು ಯೋಚಿಸದೆ ಸ್ಪಂದಿಸುತ್ತದೆ. ಇದೊಂದು ಡಿಫೆನ್ಸಿವ್ ಮೆಕ್ಯಾನಿಸಂ ಆಗಿದ್ದು, ನೋವಿನಿಂದ ತಪ್ಪಿಸಿಕೊಂಡು, ಟೆನ್ಷನ್ ಸಿಚುಯೇಶನ್ ತಪ್ಪಿಸಿಕೊಳ್ಳಲು ಹೀಗೆ ನಕ್ಕು ಪ್ರತಿಕ್ರಿಯಿಸುತ್ತೇವೆ ಎಂದು ಸಂಶೋಧನೆಗಳು ಹೇಳುತ್ತವೆ. ಅಂದರೆ, ಆ ಕ್ಷಣದಲ್ಲಿ ಇನ್ನೇನು ಮಾಡಬೇಕು ಎಂದು ಯೋಚಿಸುವಷ್ಟು ಸಮಯ ನಮ್ಮಲ್ಲಿರುವುದಿಲ್ಲ. ಹೀಗಾಗಿ, ಮಗು ನಕ್ಕಿತೆಂದ ಮಾತ್ರಕ್ಕೆ ಅದು ಕಚಗುಳಿಯನ್ನು ಎಂಜಾಯ್ ಮಾಡುತ್ತಿದೆ ಎಂದಲ್ಲ.
ಹಾಗಾದ್ರೆ ಪುಟ್ಟ ಮಗುವಿಗೆ ಕಚಗುಳಿ ಮಾಡುವುದು ತಪ್ಪೇ?
- ತಪ್ಪಷ್ಟೇ ಅಲ್ಲ. ಇದು ಕ್ರೂರತನ ಕೂಡಾ. ಹೌದು, ಕಚಗುಳಿಯಿಂದ ತನಗೆ ಖುಷಿಯಾಗುವುದೋ ಇಲ್ಲವೋ ಎಂದು ಹೇಳಲಾಗದ ವಯಸ್ಸಿನ ಅಸಹಾಯಕ ಮಕ್ಕಳಿಗೆ ಕಚಗುಳಿ ಇಡುವುದು ಕ್ರೂರ ಎನಿಸಿಕೊಳ್ಳುತ್ತದೆ. - ಮಗುವಿಗೆ ಇನ್ನೂ ಎಲ್ಲ ವಿಷಯಗಳನ್ನು ಹೇಳಲು, ಯೋಚಿಸಲು ಬರುವುದಿಲ್ಲ. ಅದಕ್ಕೆ ಕಚಗುಳಿ ಇಷ್ಟವಾಗಲಿಲ್ಲವೆಂದರೂ ನಿಮಗೆ ಹೇಳಲು ಬರದೆ ಯಾತನೆ ಅನುಭವಿಸಬಹುದು. ಅಲ್ಲದೆ, ಕಚಗುಳಿಯಿಂದಾಗಿ ನಗುವಾಗ ಮಕ್ಕಳು ಉಸಿರು ತೆಗೆದುಕೊಳ್ಳಲು ಕಷ್ಟವಾಗಬಹುದು. ಮಗುವಿನ ನಗುವಿನಲ್ಲಿ ಮೈ ಮರೆತ ನಿಮಗೆ ಅವುಗಳು ಉಸಿರಾಡಲು ಒದ್ದಾಡುತ್ತಿರುವುದು ಅನುಭವಕ್ಕೆ ಬಾರದೇ ಹೋಗಬಹುದು. ಹಾಗಾಗಿ ಮಕ್ಕಳು ತಮಗೆ ಕಚಗುಳಿಯಿಂದ ಖುಷಿಯಾಗುತ್ತದೆಯೇ ಇಲ್ಲವೇ ಎಂದು ಹೇಳುವಷ್ಟು ದೊಡ್ಡವರಾಗುವವರೆಗೆ ಕಚಗುಳಿ ಮಾಡಲು ಹೋಗಲೇಬೇಡಿ.
ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?
- ಕಚಗುಳಿ ನೋವುಂಟು ಮಾಡಬಹುದು
ಬಹಳಷ್ಟು ದೊಡ್ಡವರಿಗೆ ಕಚಗುಳಿ ಮಾಡುವುದು ಇಷ್ಟವಾಗುವುದಿಲ್ಲ. ಅಲ್ಲದೇ ಅವರಿದರ ಬಗ್ಗೆ ಬಾಯಿ ಬಿಟ್ಟು ಹೇಳುತ್ತಾರೆ ಕೂಡಾ. ಅಂದ ಮೇಲೆ ಕಚಗುಳಿ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ಹೇಗೆ ನಂಬುತ್ತೀರಿ? ಬೇಡದ ಕಚಗುಳಿಯು ಮಕ್ಕಳಲ್ಲಿ ದೊಡ್ಡವರು ಅವರ ದೇಹದ ಮೇಲೆ ಏನು ಬೇಕಾದರೂ ಮಾಡಬಹುದು ಎಂಬ ಅಭಿಪ್ರಾಯ ಹುಟ್ಟಿಸುತ್ತದೆ. ತಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸುವ ಈ ಹೋರಾಟವು ದೊಡ್ಡವರಾದ ಮೇಲೆ ಕೆಟ್ಟ ನೆನಪಾಗಿ ಉಳಿಯಬಹುದು.
- ಕಚಗುಳಿಯನ್ನು ಜನರಿಗೆ ಟಾರ್ಚರ್ ಮಾಡಲು ಬಳಸಲಾಗುತ್ತಿತ್ತು!
ಇತಿಹಾಸದ ಪುಟಗಳನ್ನು ನೋಡಿದರೆ ಕಚಗುಳಿಯನ್ನು ಜನರಿಗೆ ಟಾರ್ಚರ್ ನೀಡಲು ಬಳಸಲಾಗುತ್ತಿತ್ತು. ಚೀನಾದಲ್ಲಿ ಹ್ಯಾನ್ ಆಡಳಿತದ ಸಂದರ್ಭದಲ್ಲಿ ಕಚಗುಳಿಯನ್ನು ಅಪರಾಧಿಗಳಿಗೆ ಶಿಕ್ಷಿಸಲು ಬಳಸಲಾಗುತ್ತಿತ್ತು. ಇದು ದೇಹದ ಮೇಲೆ ಯಾವುದೇ ಕಲೆ ಉಳಿಸದೆ ನೋವು ನೀಡುವುದರಿಂದ ಇದೊಂದು ಖ್ಯಾತ ಶಿಕ್ಷೆಯೇ ಆಗಿತ್ತು.
ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!
ಹಾಗಾದರೆ ನೀವೇನು ಮಾಡಬೇಕು?
ಮಗು ಕಚಗುಳಿಯ ಬಗ್ಗೆ ತನ್ನ ಭಾವನೆಗಳನ್ನು ಬಾಯಿ ಬಿಟ್ಟು ಹೇಳುವಷ್ಟು ದೊಡ್ಡವಾಗುವವರೆಗೂ ಅದಕ್ಕೆ ಕಚಗುಳಿ ಮಾಡಲು ಹೋಗಬೇಡಿ. ಮಗುವನ್ನು ನಗಿಸಲು ಸಾಕಷ್ಟು ಇತರೆ ದಾರಿಗಳಿವೆ. ಕಚಗುಳಿಯಿಂದ ಮಗು ಉಸಿರಾಡಲು ಕಷ್ಟ ಪಡುತ್ತಿದೆಯೇ ಎಂಬುದನ್ನೂ ನೋಡಬೇಕು.