Asianet Suvarna News Asianet Suvarna News

ಮೊಗೆದಷ್ಟು ಮತ್ತೆ ಮತ್ತೆ ಸಿಗುವ ತೇಜಸ್ವಿ ನೆನಪು

ಎಷ್ಟು ಹೇಳಿದರೂ ಮುಗಿಯದ ಕತೆಗಳನ್ನು ತಮ್ಮ ಆಪ್ತರ ನಡುವೆ ಬಿಟ್ಟು ಹೋದವರು ಪೂರ್ಣಚಂದ್ರ ತೇಜಸ್ವಿ. ಅವರ ತುಂಟತನ, ಪ್ರಯೋಗಶೀಲತೆ, ಜೀವನಪ್ರೀತಿ, ಅಕ್ಕರೆಗಳನ್ನು ನೆನಪಿಸುವ ಕೆಲವು ಪ್ರಸಂಗಗಳು ಇಲ್ಲಿವೆ. ಅದರಲ್ಲಿ ಅವರು ಕ್ಯಾಮೆರಾ ಕೊಂಡ ಮಜವಾದ ಕಥೆ ಇಲ್ಲಿದೆ. 

Interesting story of Purnachandra Tejaswi
Author
Bengaluru, First Published Sep 9, 2018, 10:55 AM IST

ಬೆಂಗಳೂರು (ಸೆ. 09): ಎಷ್ಟು ಹೇಳಿದರೂ ಮುಗಿಯದ ಕತೆಗಳನ್ನು ತಮ್ಮ ಆಪ್ತರ ನಡುವೆ ಬಿಟ್ಟು ಹೋದವರು ಪೂರ್ಣಚಂದ್ರ ತೇಜಸ್ವಿ. ಅವರ ತುಂಟತನ, ಪ್ರಯೋಗಶೀಲತೆ, ಜೀವನಪ್ರೀತಿ, ಅಕ್ಕರೆಗಳನ್ನು ನೆನಪಿಸುವ ಕೆಲವು ಪ್ರಸಂಗಗಳು ಇಲ್ಲಿವೆ. ಅದರಲ್ಲಿ ಅವರು ಕ್ಯಾಮೆರಾ ಕೊಂಡ ಮಜವಾದ ಕಥೆ ಇಲ್ಲಿದೆ. 

ತೇಜಸ್ವಿ ಕ್ಯಾಮೆರಾ ಕೊಂಡ ಮಜವಾದ ಕಥೆ!

ಆಗಿನ ಕಾಲದಲ್ಲಿ ಕ್ಯಾಮೆರಾ ತಗೊಳ್ಳೋದು ಬಹಳ ಕಷ್ಟ ಇತ್ತು. ಆದರೆ ತೇಜಸ್ವಿಗೆ ಕ್ಯಾಮೆರಾ ಕೊಂಡುಕೋಬೇಕು, ಫೋಟೋ ತೆಗಿಬೇಕು ಅನ್ನೋ ಆಸೆ ಮಾತ್ರ ಬೆಟ್ಟದಷ್ಟಿತ್ತು. ಆದರೆ ಅಪ್ಪ, ಅಮ್ಮನ ಹತ್ತಿರ ದುಡ್ಡು ಕೇಳೋಕೆ ಅವನಿಗೆ ಇಷ್ಟ ಇರಲಿಲ್ಲ. ಹಾಗಾಗಿ ಅವನು ದುಡ್ಡು ಕೂಡಿಸ್ತಿದ್ದ. 

ಒಂದ್ಸಲ ರಾಮಕೃಷ್ಣಾಶ್ರಮದಲ್ಲಿ ಒಂದು ಪ್ರಬಂಧ ಸ್ಪರ್ಧೆ ಮಾಡಿದ್ರು. ಇವನೂ ಒಂದು ಬರೆದು ಕಳಿಸಿದ. ಅದೇನು ಬರೆದನೋ, ಏನೋ ಅಂತೂ ಇವನಿಗೆ ಆ ಸ್ಪರ್ಧೆನಲ್ಲಿ ಬಹುಮಾನ ಬಂತು. ಮೂರನೇ ಬಹುಮಾನ. ಅದು ನನಗೂ ಗೊತ್ತಿರಲಿಲ್ಲ, ತಂದೆಯವರಿಗೂ ಗೊತ್ತಿರಲಿಲ್ಲ. ಅ ಬಹುಮಾನದ ದುಡ್ಡಿನಲ್ಲಿ ತೇಜಸ್ವಿ ಚಿಕ್ಕದೊಂದು ಬಾಕ್ಸ್ ಕ್ಯಾಮೆರ ತಗೊಂಡಿದ್ದ. ಆ ಬಾಕ್ಸ್ ಕ್ಯಾಮೆರಾದಲ್ಲೇ ನಮ್ಮನ್ನೆಲ್ಲಾ ನಿಲ್ಲಿಸಿ ಫೋಟೋ ತೆಗೆದ. ಅದು ಅಂತ ಒಳ್ಳೆ ಕ್ಯಾಮೆರಾ ಅಲ್ಲ. ಫೋಟೋಗಳು ಚೆನ್ನಾಗಿ ಬರ್ತಿರ್ಲಿಲ್ಲ.

ಕೂದಲೆಲ್ಲಾ ಕಪ್ಪು ಅಂದರೆ ಕಪ್ಪಗೆ, ಮುಖ ಎಲ್ಲಾ ತುಂಬಾ ಬೆಳ್ಳಗೆ ಬೂದಿಬೂದಿ ಥರ ಬರ್ತಿತ್ತು. ನಾವೆಲ್ಲ ದೆವ್ವಗಳ ಥರ ಕಾಣ್ತಿದ್ವಿ ಅದರಲ್ಲಿ. ಆ ಥರದ ಕ್ಯಾಮೆರದಲ್ಲೇ ಅವನು ಫೋಟೋಗ್ರಫಿ ಶುರು ಮಾಡಿದ್ದು. ಆಗ ತೆಗೆದ ಫೋಟೋ ಕೆಲವು ನನ್ನತ್ರ ಈಗ್ಲೂ ಇದಾವೆ. ಅಮೇಲೆ ಹಂಗೆ ದುಡ್ಡು ಒಟ್ಟು ಹಾಕಿ ಹಳೆ ಕ್ಯಾಮೆರಾ ಮಾರೋದು ಹೊಸ ಕ್ಯಾಮೆರಾ ತಗೊಳ್ಳೋದು ಹೀಗೆ ಮಾಡ್ತಿದ್ದ. ಬಹುಶಃ ಇಂಟರ್ಮೀಡಿಯಟ್ ನಲ್ಲಿರಬೇಕು ಆಗ ಅವನು ಶಿವಮೊಗ್ಗದಲ್ಲಿ ನಮ್ಮಜ್ಜಿ ಮನೇಲಿ ಓದ್ತಿದ್ದ.

ಅಲ್ಲಿ ತೇಜಸ್ವಿ ಅವನಿದ್ದ ರೂಮನ್ನೇ ಡಾರ್ಕ್ ರೂಂ ಮಾಡ್ಕೊಂಡು, ಕಿಟಕಿ ಬಾಗಿಲಿಗೆಲ್ಲ ಪ್ಲಾಸ್ಟರ್ ಅಂಟಿಸಿ, ಒಂಚೂರೂ ಬೆಳಕು ಬರದ ಹಾಗೆ ಮಾಡಿ ಅಲ್ಲೇ ಡೆವಲಪಿಂಗು, ಪ್ರಿಂಟಿಂಗು ಸ್ವತಃ ಮಾಡಿ ಸ್ಟಡಿ ಮಾಡ್ತಿದ್ದ. ಒಂದ್ಸಾರಿ ಇಲ್ಲಿ ಉದಯರವಿ ಮನೇಲಿದ್ದಾಗ ನನ್ನನ್ನ ಏನೋ ಡೆವಲಪ್ ಮಾಡೋಕೆ ಅಂತ ನಿಲ್ಲಿಸಿ ಅದೆಷ್ಟೋ ಹೊತ್ತು ಅದೇನೋ ತಿರುಗಿಸ್ತಾ ಇರು ಅಂತ ಹೇಳಿದ್ದ. ನಾನು ಅವನು ಹೇಳಿದ ಹಾಗೆ ತಿರುಗಿಸ್ತಾ ಇದ್ದೆ. ಆದರೆ ಸಮಯ ಹೆಚ್ಚುಕಮ್ಮಿ ಆಗ್ಬಿಟ್ಟು ಫೋಟೋಗಳೆಲ್ಲಾ ಹಾಳಾಯ್ತು, ಇಡೀ ರೀಲು ವೇಸ್ಟ್ ಆಯ್ತು ಅಂತ ಗೊಣಗ್ತಿದ್ದ.

-ತಾರಿಣಿ, ತೇಜಸ್ವಿ ಸಹೋದರಿ  

Follow Us:
Download App:
  • android
  • ios