ಈ ಡಿಜಿಟಲ್ ದುನಿಯಾದ ಒಂದು ಪ್ಲಸ್ ಪಾಯಿಂಟ್ ಎಂದರೆ ಒಂದೇ ಕ್ಲಿಕ್‌ನಲ್ಲಿ ಎಷ್ಟು ಜನರನ್ನು ಬೇಕಾದರೂ, ಯಾರನ್ನು ಬೇಕಾದರೂ, ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನಾದರೂ ಗೆಳೆಯರನ್ನಾಗಿಸಿಕೊಳ್ಳಬಹುದು. ಹಾಗಿದ್ದರೆ ಈ ಡಿಜಿಟಲ್ ವರ್ಲ್ಡ್‌ನ ಮೈನಸ್ ಏನು? ಅದಕ್ಕೆ ಕೂಡಾ ಒಂದೇ ಉತ್ತರ. ಒಂದೇ ಕ್ಲಿಕ್‌ನಲ್ಲಿ ಅಪರಿಚಿತರನ್ನು ಪರಿಚಿತರಾಗಿಸಿಕೊಳ್ಳಬಹುದು, ಗೆಳೆಯರಾಗಿಸಿಕೊಳ್ಳಬಹುದು. ಹೌದು, ಈ ಆನ್‌ಲೈನ್ ವರ್ಲ್ಡ್‌ನ ಆಟಗಳೇ ಹಾಗಿವೆ. ಇಲ್ಲಿ ಯಾವ ವಿಷಯ ಪ್ಲಸ್ ಆಗುತ್ತದೋ, ಸರಿಯಾಗಿ ಬಳಸಿಕೊಳ್ಳಲಿಲ್ಲವೆಂದರೆ, ಎಚ್ಚರ ತಪ್ಪಿದರೆ ಅದೇ ವಿಷಯ ಮೈನಸ್ ಆಗಿಬಿಡುತ್ತದೆ. 

'ಕಿವಿ' ಮಾತುಗಳನ್ನು ಕೇಳಿಸಿಕೊಳ್ಳಿ!

ಇಲ್ಲಿ ಯಾರು ಬೇಕಾದರೂ ನಿಮ್ಮನ್ನು ಸಂಪರ್ಕಿಸಬಹುದು. ನೀವು ಬೇಕೆಂದರೆ ಅವರನ್ನು ಗೆಳೆಯರನ್ನಾಗಿಸಿಕೊಳ್ಳಬಹುದು. ಇಷ್ಟವಿಲ್ಲದಿದ್ದರೆ ಇಗ್ನೋರ್ ಮಾಡಬಹುದು. ಆದರೆ, ಅಷ್ಟೇ ಸುಲಭವಾಗಿ ಆ ಕಡೆಯ ಹೊಸತಾಗಿ ಪರಿಚಿತವಾದ  ಅಪರಿಚಿತ ನಿಮ್ಮನ್ನು ಮೋಸಗೊಳಿಸಬಹುದು. ಯಾವ ಮುಖವಾಡ ತೊಟ್ಟು ಬೇಕಾದರೂ ಆತ ನಿಮ್ಮನ್ನು ವಂಚಿಸಬಹುದು. ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನಿನಿಂದ ಕೈ ಹಾಕಿ ಆತನದು ಮುಖವಾಡವೋ, ನಿಜಬಣ್ಣವೋ ನೋಡುವ ಅವಕಾಶ ನಿಮಗಿಲ್ಲ. ಅಪರಿಚಿತರು ಹೇಳಿದ್ದೇ ಸತ್ಯ, ನೀವು ನಂಬಿದ್ದೆಲ್ಲವೂ ಸತ್ಯ. ಏಕೆಂದರೆ, ಯಾರು ಬೇಕಾದರೂ ತಮಗಿಷ್ಟ ಬಂದಂತೆ ಪ್ರೊಫೈಲ್ ಕ್ರಿಯೇಟ್ ಮಾಡಬಹುದು. ಬೇಕೆಂದಂತೆ ತಮ್ಮನ್ನು ಬಿಂಬಿಸಿಕೊಳ್ಳಬಹುದು. ಹುಡುಗ ಹುಡುಗಿಯ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಹನಿಟ್ರ್ಯಾಪ್ ಮಾಡಬಹುದು. ಇವೆಲ್ಲದರ ಸತ್ಯಾಸತ್ಯತೆಗಳು ನೋಡುವವರ, ಕೇಳುವವರ ನಂಬಿಕೆಗೆ ಬಿಟ್ಟವು. 

ಟ್ರೂತ್ ಬಯಾಸ್

ನಾವು ಮನುಷ್ಯರಿರುವುದೇ ಹಾಗೆ, ಜಗತ್ತನ್ನು ನಂಬಲು ಬಯಸುತ್ತೇವೆ. ನಾವು ಕೇಳಿದ್ದು, ನೋಡಿದ್ದು ಎಲ್ಲವೂ ನಿಜವೆಂದು ನಂಬುವುದು ನಮ್ಮ ಮೂಲವರ್ತನೆ. ಇದು ಹೆಚ್ಚು ಜನರೊಂದಿಗೆ ಸಂಪರ್ಕ ಬೆಸೆಯಲು, ಸಾಮಾಜಿಕ ಜೀವನ ಸಮೃದ್ಧವಾಗಿರಲು ಸಾಧ್ಯವಾಗಿಸುತ್ತದೆ.  ಇದೇ ಟ್ರೂತ್ ಬಯಾಸ್. ಆದರೆ, ಸುಳ್ಳುಗಾರರು, ವಂಚಕರು ಮನುಷ್ಯನ ಈ ಮೂಲಗುಣವನ್ನೇ ಅಡ್ವಾಂಟೇಜ್ ಆಗಿ ಬಳಸಿಕೊಳ್ಳುತ್ತಾರೆ. ಎದುರಿನಲ್ಲಿ ಸುಳ್ಳುಗಾರರ ಚರ್ಯೆ, ದೇಹಭಾಷೆ ಮುಂತಾದವು ನೀಡುವ ಸುಳ್ಳಿನ ಸುಳಿವುಗಳಾವುವನ್ನೂ ಆನ್‌ಲೈನ್ ಪ್ರಪಂಚದಲ್ಲಿ ಕಾಣಲು ಸಾಧ್ಯವಿಲ್ಲ. ಇದರಿಂದ ಜಾಲತಾಣಗಳಲ್ಲಿ ಮೋಸ ಹೋಗುವುದು ಸುಲಭ.

ಇಂಟರ್‌ನೆಟ್ ದುನಿಯಾ ಕಂಡಂತಿಲ್ಲ!

ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಡೇಟಿಂಗ್ ಪ್ರೊಫೈಲ್‌ಗಳಲ್ಲಿ ಸಾಮಾನ್ಯವಾಗಿ ಬಹುತೇಕರು ಫೋಟೋಶಾಪ್ ಆದ, ಫಿಲ್ಟರ್ ಆದ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಹೋಗಲಿ, ಇದು ಒಂದು ಮಟ್ಟಿಗೆ ಅಪಾಯಕಾರಿಯಲ್ಲ. ಇನ್ನೂ ಹೆಚ್ಚಿನವರು ತಮ್ಮ ಹವ್ಯಾಸ, ಆಸಕ್ತಿಗಳನ್ನು ಇರುವುದಕ್ಕಿಂತಾ ಹೆಚ್ಚಾಗಿಯೇ ಬಿಂಬಿಸಿಕೊಳ್ಳುತ್ತಾರೆ. ಇದರಿಂದಲೂ ಅಂಥ ತೊಂದರೆಯೇನಿಲ್ಲ. ಏಕೆಂದರೆ ನಾವೆಲ್ಲರೂ ನಮ್ಮನ್ನು ಇತರರೆದುರಿಗೆ ಉತ್ತಮರು ಎಂದು ತೋರಿಸಿಕೊಳ್ಳಲು ಬಯಸುತ್ತೇವೆ. ಆದರೆ, ಇನ್ನೂ ಕೆಲವರಿದ್ದಾರೆ, ಅವರು ಸುಳ್ಳು ಸುಳ್ಳೇ ಹೈಯರ್  ಎಜುಕೇಶನ್, ವೃತ್ತಿ, ತಮ್ಮ ಕೌಶಲ್ಯದ ಬಗ್ಗೆ ಬಿಂಬಿಸಿಕೊಂಡಿರುತ್ತಾರೆ. ಹೆಚ್ಚಾಗಿ ಹುಡುಗಿಯರನ್ನು ಸೆಳೆಯಲೆಂದೇ ಇಂಥ ಸುಳ್ಳುಗಳನ್ನು ಹೆಣೆದು ಹೀರೋ ರೀತಿಯ ಫೋಟೋ ಹಾಕಿಕೊಂಡಿರುತ್ತಾರೆ. ಸಾಮಾನ್ಯವಾಗಿ ನೂರು ಕಡೆ ಕಲ್ಲೆಸೆದರೆ ಒಂದಾದರೂ ಹಕ್ಕಿಗೆ ತಗುಲುತ್ತದೆ ಎಂದು ಬಹಳಷ್ಟು ಹುಡುಗಿಯರಿಗೆ ಸಂದೇಶ ಕಳುಹಿಸುವುದು, ಅವರನ್ನು ನಂಬಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಇಂಥವರ ಬಲೆಗೆ ಬಿದ್ದವರೇ ಮೋಸ ಹೋಗುವುದು. ಹಾಗಿದ್ದರೆ ಈ ಡಿಜಿಟಲ್ ಸುಳ್ಳುಗಾರರನ್ನು ಕಂಡುಹಿಡಿಯುವುದು ಹೇಗೆ?

ಆರೋಗ್ಯೋಕ್ಕೆ ಒಳ್ಳೆಯದಾಗೋ ದುರಾಭ್ಯಾಸಗಳಿವು....

1. ಮೊದಲನೆಯದಾಗಿ ಡಿಜಿಟಲ್ ದುನಿಯಾದಲ್ಲಿ ಪರಿಚಿತರಾದ ಯಾರೇ ಆಗಲಿ, ಅನುಮಾನವಿಟ್ಟುಕೊಂಡೇ ಅವರನ್ನು ನೋಡುವುದು ಕಲಿಯಿರಿ. ಅವರ ಪಾಸಿಟಿವ್ ಹಾಗೂ ನೆಗೆಟಿವ್ ಬದಿಗಳನ್ನು ಮಾತುಗಳಲ್ಲಿ, ಸಂದೇಶಗಳಲ್ಲಿ ಕಂಡು ಹಿಡಿಯಲು ಪ್ರಯತ್ನ ಪಡಿ. ಅವರು ಹೇಳಿದ್ದು, ಅವರ ಬಗ್ಗೆ ಮತ್ತೊಬ್ಬರು ಹೇಳಿದ್ದಕ್ಕಿಂತಾ, ಒಟ್ಟಾರೆಯಾಗಿ ಅವರ ಬಗ್ಗೆ ನಿಮಗೇನೆನಿಸುತ್ತದೆ ಎಂಬುದನ್ನು ನೋಡಿ. 

2. ಇಂಟರ್ನೆಟ್ ಸರ್ಚ್

ಇಂದಿನ ಕಾಲದಲ್ಲಿ ವ್ಯಕ್ತಿಯ ಆನ್‌ಲೈನ್ ಪ್ರೊಫೈಲ್ ಫೇಸ್‌ಬುಕ್ ಅಥವಾ ಇನ್ಯಾವುದೋ ಒಂದೇ ಡಿಜಿಟಲ್ ವೇದಿಕೆಗೆ ಸೀಮಿತವಾಗಿರುವುದಿಲ್ಲ. ಹೀಗಾಗಿ, ಬೇರೆ ಬೇರೆ ವೇದಿಕೆಗಳಲ್ಲಿ ಅಂದರೆ ಲಿಂಕ್ಡ್ ಇನ್, ಗೂಗಲ್ ಸರ್ಚ್, ಫೇಸ್‌ಬುಕ್, ಟ್ವಿಟ್ಟರ್ ಹೀಗೆ ಎಲ್ಲಿಲ್ಲಿ ಸಾಧ್ಯವೋ ಅಲ್ಲೆಲ್ಲಾ ಆ ವ್ಯಕ್ತಿಯ ಪ್ರೊಫೈಲನ್ನು ಗಮನಿಸಿ. ಎಲ್ಲ ಕಡೆ ಒಂದೇ ರೀತಿಯ ಮಾಹಿತಿ ನೀಡಿದ್ದಾರೆಯೇ, ಅವರು ನಿಮ್ಮ ಬಳಿ ಊದಿದ ಪುಂಗಿಗೆ ಈ ಮಾಹಿತಿಗಳು ಮ್ಯಾಚ್ ಆಗುತ್ತಿವೆಯೇ ಎಂಬುದನ್ನು ಗಮನಿಸಿ. 

3. ಮ್ಯೂಚುಯಲ್ ಫ್ರೆಂಡ್ಸ್

ನಿಮಗೂ ಆ ವ್ಯಕ್ತಿಗೂ ಮ್ಯೂಚುಯಲ್ ಫ್ರೆಂಡ್ಸ್ ಇದ್ದಲ್ಲಿ ಅವರ ಬಳಿ ಈ ವ್ಯಕ್ತಿಯ ಬಗ್ಗೆ ವಿಚಾರಿಸಿ. ಅವರಿಗೆ ಹೇಗೆ ಪರಿಚಯ ಎಂಬುದನ್ನು ತಿಳಿದುಕೊಳ್ಳಿ. ವೈಯಕ್ತಿಕವಾಗಿ ಅವರ ಬಗ್ಗೆ ತಿಳಿದಿದೆಯೇ ಅಥವಾ ನಿಮ್ಮಂತೆಯೇ ಆನ್‌ಲೈನ್‌ನಲ್ಲಿ ಗೆಳೆಯರಾಗಿ ಅವರಿಗೂ ಅಂಥಹುದೇ ಸಂದೇಶಗಳನ್ನು ಕಳುಹಿಸುತ್ತಿದ್ದಾರೆಯೇ ಎಂಬುದು ನಿಮ್ಮ ಅರಿವಿಗೆ ಸಿಗಬಹುದು. 

ಬದುಕನ್ನು ಸುಲಭಗೊಳಿಸೋ ಸರಳೋಪಾಯಗಳಿವು!

4. ಲಾಜಿಕಲ್ ಆಗಿ ಯೋಚಿಸಿ.

ಗೆಳೆಯರ ಕುರಿತು ಅನುಮಾನ ಪಡಬಾರದು ಎಂಬೆಲ್ಲ ಆದರ್ಶಗಳು ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಯಾವುದೇ ವ್ಯಕ್ತಿಯ ಸ್ನೇಹ ಮಾಡುವಾಗ ಅವರ ಪ್ರತಿ ಮಾತುಗಳನ್ನೂ ಲಾಜಿಕ್ ಬಳಸಿ ವಿಮರ್ಶಿಸಿ. ಅವರು ನಿಮ್ಮ ಬಳಿ ಹೇಳಿದ್ದಕ್ಕೂ, ಪೋಸ್ಟ್‌ಗಳಿಗೂ ತಾಳೆಯಾಗುತ್ತದೆಯೇ ಗಮನಿಸಿ. 

5. ಕೋರಿಕೆಗಳು ಶುರುವಾದರೆ ಜಾರಿಕೊಳ್ಳಿ

ಡಿಜಿಟಲ್ ವರ್ಲ್ಡ್‌ನಲ್ಲಿ ಗೆಳೆಯರಾದ ಬಳಿಕ ಅವರು ನಿಮ್ಮ ಬಳಿ ಹಣ ಕೇಳುವುದು, ನಿಮ್ಮ ಫೋಟೋ, ಅಡ್ರೆಸ್ ಕೇಳುವುದು, ಅಸಭ್ಯವಾಗಿ ಮಾತನಾಡುವುದು ಆರಂಭಿಸಿದರೆ ಅಲ್ಲಿಯೇ ಅವರನ್ನು ಬ್ಲಾಕ್ ಮಾಡಿ. ಪರಿಚಯ ಆನ್‌ಲೈನ್‌ನಲ್ಲೇ ಆದರೂ, ಮುಖತಃ ಭೇಟಿಯಾಗಿ ಬಳಕೆ ಹತ್ತಿರವಾಗುವವರೆಗೆ ಯಾವುದೇ ಸಹಾಯ ಅಥವಾ ಕೋರಿಕೆಗಳನ್ನು ಈಡೇರಿಸಬೇಡಿ. 

6. ಮೀಟ್ ಆಗಲು ಹೇಳಿದರೆ ಸ್ಥಳ ನೀವು ನಿರ್ಧರಿಸಿ

ಒಂದು ವೇಳೆ ಈ ಅಪರಿಚಿತ ಫ್ರೆಂಡ್ ನಿಮ್ಮನ್ನು ಭೇಟಿಯಾಗಬಯಸಿದರೆ, ಅವರು ಹೇಳಿದ ಸ್ಥಳಕ್ಕೆ ಹೋಗಿಬಿಡಬೇಡಿ. ಎಷ್ಟೇ ನಂಬಿಕೆ ಹುಟ್ಟಿರಲಿ, ಮೊದಲ ಬಾರಿ ಭೇಟಿಯಾಗುವುದೆಂದರೆ ನಿಮ್ಮ ಕಚೇರಿ ಎದುರು, ಯಾವುದಾದರೂ ಹೋಟೆಲ್‌ನಲ್ಲಿ ಹೀಗೆ ಜನನಿಬಿಡ ಪ್ರದೇಶದಲ್ಲಿ ಭೇಟಿಯಾಗಿ.