ಮರಗಳನ್ನು ಸ್ಥಳಾಂತರಿಸುವುದು ಹೇಗೆ ಗೊತ್ತಾ?

How to replant tree
Highlights

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮರಗಳನ್ನು ಸ್ಥಳಾಂತರಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಆದರೆ, ನಮ್ಮಲ್ಲಿ ಇದು ದುಬಾರಿ ಎಂಬ ಕಾರಣಕ್ಕೆ ನಿರ್ಲಕ್ಷ್ಯಕ್ಕೀಡಾಗಿದೆ. ಇದನ್ನು ಮನಗಂಡ ವಿವಿಧ ಎನ್‌ಜಿಒಗಳು, ಪರಿಸರಾಸಕ್ತರು ಆಸಕ್ತಿ ವಹಿಸಿ ಮರಗಳ ರಕ್ಷಣೆಗೆ ಪಣತೊಟ್ಟಿದ್ದಾರೆ.

ರಾಜ್ಯದ ಯಾವುದೇ ಪ್ರಮುಖ ನಗರದಲ್ಲಿ ರಸ್ತೆ, ರೈಲ್ವೆ ಸೇರಿ ಯಾವೊಂದು ಅಭಿವೃದ್ಧಿ ಕಾರ್ಯ ನಡೆಯಬೇಕಾದರೂ ಮರಗಳ ಮಾರಣ ಹೋಮ ಸಾಮಾನ್ಯ. ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರಿನಲ್ಲಿ ಈಗ ನಗರೀಕರಣದ ಪರಿಣಾಮವಾಗಿ ಮರಗಳ ಹನನ ನಿತ್ಯ ನಡೆಯುತ್ತಲೇ ಇದೆ. ಒಂದಲ್ಲ ಒಂದು ಯೋಜನೆಗೆ ನೂರಾರು ಮರಗಳು ಬಲಿಯಾಗುತ್ತಲೇ ಇವೆ. ಪರಿಸ್ಥಿತಿ ಹೀಗೆ ಸಾಗಿದರೆ ತೀವ್ರವಾದ ಬೆಲೆಯನ್ನು ಮುಂದೆ ನಾವೆಲ್ಲರೂ ತೆರಬೇಕಾಗುತ್ತದೆ ಎಂದು ಅರಿತ ಉತ್ಸಾಹಿ ಪರಿಸರ ತಂಡ ವಿದೇಶಗಳಲ್ಲಿ ಜಾರಿಯಲ್ಲಿರುವ ಮರಗಳ ಸ್ಥಳಾಂತರ ಕಾರ್ಯವನ್ನು ವೈಜ್ಞಾನಿಕವಾಗಿ ಮಾಡುತ್ತಾ ಬರುತ್ತಿದೆ.

ಸ್ಥಳಾಂತರ ಹೇಗೆ?
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮರಗಳನ್ನು ಸ್ಥಳಾಂತರಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಆದರೆ, ನಮ್ಮಲ್ಲಿ ಇದು ದುಬಾರಿ ಎಂಬ ಕಾರಣಕ್ಕೆ ನಿರ್ಲಕ್ಷ್ಯಕ್ಕೀಡಾಗಿದೆ. ಇದನ್ನು ಮನಗಂಡ ವಿವಿಧ ಎನ್‌ಜಿಒಗಳು, ಪರಿಸರಾಸಕ್ತರು ಆಸಕ್ತಿ ವಹಿಸಿ ಮರಗಳ ರಕ್ಷಣೆಗೆ ಪಣತೊಟ್ಟಿದ್ದಾರೆ. ಮರಗಳ ಸ್ಥಳಾಂತರ ಎನ್ನುವುದು ಬಹಳ ಸೂಕ್ಷ್ಮವಾಗಿ, ವೈಜ್ಞಾನಿಕ ರೀತಿಯಲ್ಲಿ ಮಾಡುವ ಕ್ರಮ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮರುಸ್ಥಾಪನೆಗೊಂಡ ಮರ ಒಣಗಿಹೋಗುತ್ತದೆ. ಅದಕ್ಕಾಗಿಯೇ ವಿವಿಧ ಮಜಲುಗಳಲ್ಲಿ ಮರಗಳ ಸ್ಥಳಾಂತರ ಕಾರ್ಯ ನಡೆಯುತ್ತದೆ.

ಸ್ಥಳಾಂತರಿಸುವುದು ಹೇಗೆ? 

ಮೊದಲು ಸ್ಥಳಾಂತರಿಸಬೇಕಾದ ಮರದ ರೂಟ್ ಮ್ಯಾಪ್‌ಹಾಕಲಾಗುತ್ತದೆ.
ಮರದ ಜಾತಿ, ವಯಸ್ಸು, ಆರೋಗ್ಯದ ಪರಿಶೀಲನೆ ಮಾಡಲಾಗುತ್ತದೆ.
ಮರದ ಬುಡ ಮೆದುವಾಗುವಂತೆ ಮೂರ‌್ನಾಲ್ಕು ದಿನಗಳ ಕಾಲ ನೀರು ಹಾಕಲಾಗುತ್ತದೆ.
ನೀರುಣಿಸಿದ ನಂತರ ಮರದ ಬೇರುಗಳು ಹಾಗೂ ಸುತ್ತಲಿನ ಮಣ್ಣು ಸಡಿಲಗೊಳ್ಳುತ್ತದೆ.
ಮರದ ಬಿಳಿಲು, ರೆಂಬೆಗಳನ್ನು ಕತ್ತರಿಸಲಾಗುತ್ತದೆ. 

ಜೆಸಿಬಿ ಸಹಾಯದಿಂದ ಮರದ ಸುತ್ತಲೂ ತಾಯಿ ಬೇರಿಗೆ ತೊಂದರೆಯಾಗದಂತೆ ಮಣ್ಣನ್ನು ತೆಗೆಯಲಾಗುತ್ತದೆ.
ಕ್ರೇನ್ ಮೂಲಕ ಬಡ್ಡು ಸಮೇತ ಮರವನ್ನು ಹೊರತೆಗೆದು ತಾಯಿ ಬೇರಿನ ಸುತ್ತ ಇರುವ ಮಣ್ಣು ಬೀಳದಂತೆ ಬುಡ್ಡನ್ನು ದೊಡ್ಡ ಚೀಲಗಳಲ್ಲಿ ಕಟ್ಟಲಾಗುತ್ತದೆ.  

ಲಾರಿಗಳ ಮೂಲಕ ನೆಡಬೇಕಾದ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ.
ಮರ ನೆಡುವ ಪ್ರದೇಶದಲ್ಲಿ ಮೊದಲೇ ಗುಂಡಿ ತೆಗೆದು ಅದಕ್ಕೆ ನೀರು ಹಾಕಿ ಅಲ್ಲಿನ ಮಣ್ಣನ್ನು ಹದ ಮಾಡಲಾಗಿರುತ್ತದೆ.  ಹೀಗೆ ನೆಟ್ಟ ಮರದ ಬುಡಕ್ಕೆ ಮರಳು ಹಾಗೂ ಕೆಮ್ಮಣ್ಣನ್ನು ಹಾಕಲಾಗುತ್ತದೆ.
ಸೂಕ್ತ ಗೊಬ್ಬರ, ನೀರು, ಸೂಕ್ತ ಔಷಧೋಪಚಾರ ಮಾಡಿ ಆರೈಕೆ ಮಾಡಲಾಗುತ್ತದೆ.

108 ಮರಗಳ ಯಶಸ್ವಿ ಸ್ಥಳಾಂತರ
ಈಗಾಗಲೇ ಈ ತಂಡ ಬೆಂಗಳೂರಿನ ಸತ್ಯಸಾಯಿ ಆಸ್ಪತ್ರೆ ಮುಂಭಾಗದ ಮೆಟ್ರೋ ಕಾಮಗಾರಿ ಸ್ಥಳದಲ್ಲಿದ್ದ ೧೧೫ ಮರಗಳ ಪೈಕಿ ೧೦೮ ಮರಗಳನ್ನು ಸೂಕ್ತ ರೀತಿಯಲ್ಲಿ ಆಸ್ಪತ್ರೆಯ ಹಿಂಭಾಗದ ಖಾಲಿ ಜಾಗಕ್ಕೆ ಸ್ಥಳಾಂತರಿಸಿದೆ. ಸಾಮಾನ್ಯವಾಗಿ ಒಂದು ಮರದ ಸ್ಥಳಾಂತರಕ್ಕೆ ಕನಿಷ್ಠ 5-10 ಸಾವಿರ ರು. ವೆಚ್ಚ ತಗುಲುತ್ತದೆ. ಆದರೆ, ಐಟಿಡಿ ಕಂಪನಿಯವರು ಯಂತ್ರಗಳನ್ನು ಉಚಿತವಾಗಿ ನೀಡಿ ಸಹಾಯ ಮಾಡಿದ್ದರಿಂದ 1.7 ಲಕ್ಷ ರು. ವೆಚ್ಚದಲ್ಲಿ ಮರಗಳ ಸ್ಥಳಾಂತರವಾಗಿದೆ. ಇದರಲ್ಲಿ 1.5 ಲಕ್ಷ ರು. ವನ್ನು ಸತ್ಯಸಾಯಿ ಆಸ್ಪತ್ರೆಯ ಅಲ್ಯುಮಿನಿ ತಂಡ ನೀಡಿದೆ.

ಮರಗಳ ರಕ್ಷಣಾ ತಂಡ
ಈ ತಂಡದಲ್ಲಿ ರಾಮ್‌ಮುನೀಶ್ವರ್, ವಿಜಯ್ ನಿಶಾಂತ್, ಚಿತ್ರನಟ ಸುರೇಶ್ ಹೆಬ್ಳಿಕರ್ ಅವರ ಪುತ್ರ ಅಕ್ಷಯ್ ಹೆಬ್ಳಿಕರ್, ಸಿದ್ಧಾರ್ಥ್ ನಾಗ್, ಉಲ್ಲಾಸ್ ಮತ್ತಿತರರು ಇದ್ದಾರೆ. ಇವರೆಲ್ಲರೂ ವೃತ್ತಿಯಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರೂ ಪರಿಸರ ಕಾಪಾಡುವಲ್ಲಿ ಒಂದಾಗುತ್ತಾರೆ. ಅಭಿವೃದ್ಧಿಗಾಗಿ ಮರಗಳನ್ನು ಲೆಕ್ಕವಿಲ್ಲದಂತೆ ಕಡಿದು ಹಾಕುತ್ತಿರುವ ಇಂದಿನ ದಿನಗಳಲ್ಲಿ ಈ ತಂಡದ ಪರಿಸರ ಕಾಳಜಿ ಅನುಕರಣೀಯ. 

loader