ಸಂಬಂಧದಲ್ಲಿ ಜಗಳ, ವಾದ, ವಿರೋಧ ಎಲ್ಲವೂ ಆಗಾಗ ನಡೆಯುತ್ತಲೇ ಇರುತ್ತವೆ. ಹಲವರು ಅದನ್ನು ಸಂಬಂಧಕ್ಕೆ ರುಚಿ ನೀಡುವ ಮಸಾಲೆ ಎನ್ನುವುದುಂಟು. ಮತ್ತೆ ಕೆಲವರು ಇದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಿಗುವ ಅವಕಾಶ ಎನ್ನುವುದೂ ಉಂಟು. ಆದರೆ, ಕೆಲವರು ಅದನ್ನೇ ಎಳೆದೆಳೆದು ಧಾರವಾಹಿಗಿಂತಾ ಹಿಗ್ಗಿಸಿ ಬದುಕಲ್ಲಿ ಎಡವುವವರೂ ಇದ್ದಾರೆ. 
ನಿಜವಾಗಿ ನಿಮ್ಮಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳು ಸಮಸ್ಯೆಯೇ ಅಲ್ಲ. ಸಮಸ್ಯೆ ಇರುವುದು ಅದನ್ನು ಬೆಳೆಸಿಕೊಂಡು ಹೋಗುವ ರೀತಿಯಲ್ಲಿ. ಇದೊಂದು ಸಮಸ್ಯೆಯೇ  ಅಲ್ಲ ಎಂದು ಬದುಕುವುದು ಹೇಗೆ?  

'ಆ' ಸಮಯದಲ್ಲಿ ನೋವಾಗುತ್ತಾ? ಈ ನಂಬಿಕೆಗಳಿಗೆ ಹೇಳಿ ಗುಡ್‌ ಬೈ!

ಜಾಸ್ತಿ ಎಳೆಯಬೇಡಿ

ಜಗಳವಾದ ಬಳಿಕ ಎಲ್ಲವೂ ತಣ್ಣಗಾಗಿದ್ದರೂ ನೀವಿನ್ನೂ ಭಾವನಾತ್ಮಕವಾಗಿ ಸ್ವಲ್ಪ ಉದ್ರೇಕಗೊಂಡಿರಬಹುದು. ಮತ್ತೆ ಕೆಲವೊಂದು ಮಾತುಗಳನ್ನಾಡಿ ಚುಚ್ಚೋಣ ಎಂದು ಮನಸ್ಸಾಗುತ್ತಿರಬಹುದು, ಜಗಳದ ಸಮಯದಲ್ಲಿ ನೆನಪಾಗದ ವಿಷಯ ಈಗ ನೆನಪಾಗಿ ಅದನ್ನು ಎತ್ತಿ ಆಡೋಣ ಎನಿಸುತ್ತಿರಬಹುದು- ಆದರೆ ಇದರಿಂದ ಮತ್ತಷ್ಟು ಮಾತಿಗೆ ಮಾತು ಬೆಳೆದು ಮನಸ್ಸು ಇನ್ನಷ್ಟು ಕೆಟ್ಟು ಹೋಗುತ್ತದೆ ಹೊರತು ಬೇರೇನೂ ಸಾಧ್ಯವಿಲ್ಲ. ಅದಕ್ಕಿಂತ ಜಗಳವಾಗಿ ಎಲ್ಲ ತಣ್ಣಗಾದ ಮೇಲೆ ಅದನ್ನು ಅಲ್ಲಿಯೇ ಬಿಟ್ಟುಬಿಡಿ. 

ಅವರಿಗೆ ಸ್ವಲ್ಪ ಸಮಯ ಕೊಡಿ

ಜಗಳವಾದ ಬಳಿಕ ಪಾರ್ಟ್ನರ್‌ಗೆ ಸ್ವಲ್ಪ ಸಮಯ ನೀಡಿ, ನೀವೂ ಸ್ವಲ್ಪ ಸಮಯ ತೆಗೆದುಕೊಳ್ಳಿ. ಇಬ್ಬರಿಗೂ ಏನು ನಡೆಯಿತು, ಯಾಕಾಯಿತು, ಏನು ಮಾತನಾಡಬಾರದಿತ್ತು, ಇದರಿಂದ ಸಂಗಾತಿಗೆ ಎಷ್ಟು ಬೇಜಾರಾಗಿರಬಹುದು ಎಂದೆಲ್ಲ ಯೋಚಿಸಲು ಸ್ವಲ್ಪ ಏಕಾಂತ ಬೇಕು. ಮನಸ್ಸಿಗಾದ ಗಾಯ ಗುಣವಾಗಲು ಸಮಯಾವಕಾಶ ಬೇಕು. ನಿಮ್ಮ ನೆಗೆಟಿವ್ ಎಮೋಶನ್ಸ್ ದೂರ ಹೋಗುವವರೆಗೆ ಸಂಗಾತಿಯಿಂದ ಸ್ವಲ್ಪ ದೂರ ಉಳಿಯಿರಿ. ನಿಮ್ಮ ಸಂಗಾತಿ ಒಬ್ಬರೇ ಇರಬೇಕೆನಿಸುತ್ತಿದೆ ಎಂದರೆ ಅದನ್ನೇ ದೊಡ್ಡದು ಮಾಡಬೇಡಿ. ಅವರ ಭಾವನೆಯನ್ನು ಗೌರವಿಸಿ. ನೀವು ಅವರನ್ನು ಪ್ರೀತಿಸುತ್ತಿರುವುದಾಗಿ, ಎಲ್ಲವೂ ಸರಿಯಾಗುವುದಾಗಿ ಹೇಳಿ. ಈ ಒಂದು ಮಾತು ಬಹುಬೇಗ ಆದ ಗಾಯವನ್ನು ಗುಣಪಡಿಸುತ್ತದೆ. 

ಮದುವೆಯಾಗ್ತಿದೀರಾ? ಹಾಗಾದ್ರೆ ಈ 7 ವಿಷಯಗಳನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡ್ಕೋಬೇಡಿ!

ಉತ್ತಮ ಸಂವಹನ

ಯಾವುದೇ ಸಂಬಂಧದ ಆರೋಗ್ಯವನ್ನು ಉತ್ತಮ ಸಂವಹನ ಕಾಪಾಡುತ್ತಿರುತ್ತದೆ. ಜಗಳದ ಬಳಿಕ ನೀವಿಬ್ಬರೂ ಒಬ್ಬರಿಂದೊಬ್ಬರು ಏನು ನಿರೀಕ್ಷಿಸುತ್ತಿದ್ದೀರಿ, ಇಬ್ಬರಿಗೂ ಹೇಗನಿಸುತ್ತಿದೆ ಎಂಬುದನ್ನೆಲ್ಲ ಮಾತನಾಡದಿದ್ದರೆ, ಮೌನಕ್ಕೆ, ಮಾತಿಗೆ ಎಲ್ಲಕ್ಕೂ ತಪ್ಪು ಅರ್ಥಗಳು ಹುಟ್ಟಿಕೊಂಡು ಇಬ್ಬರ ನಡುವಿನ ಕಂದರ ದೊಡ್ಡದು ಮಾಡುತ್ತವೆ. ಬದಲಿಗೆ ನನಗಿಷ್ಟು ಕೆಟ್ಟದೆನಿಸುತ್ತಿದೆ,

ಒಬ್ಬಳೇ ಇರಬೇಕಿನಿಸುತ್ತಿದೆ, ನೀನು ಹೀಗೆ ಮಾಡಿದರೆ ನನಗೆ ಬೇಜಾರಾಗುತ್ತದೆ - ಈ ರೀತಿಯಲ್ಲಿ ನಿಮ್ಮ ಭಾವನೆಗಳನ್ನು ಹೊರಹಾಕಿ. ನಿಮ್ಮ ಸಂಗಾತಿಗೆ ನೋವುಂಟು ಮಾಡಿದ್ದರ ಜವಾಬ್ದಾರಿ ಹೊರುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರನ್ನು ದೂರುವ ಬದಲು ಒಂದು ಸಾರಿ ಹೇಳಿದರೆ ಅದು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಇನ್ನು ಕಂಪ್ಲೆಂಟ್‌ಗಳ ಸುರಿಮಳೆಯೇ ಆಗಿದ್ದರೆ ಒಂದು ಸಮಯದಲ್ಲಿ ಒಂದು ದೂರಿನ ಕುರಿತು ಕೂಲಂಕುಶವಾಗಿ ವಿಚಾರಿಸಿ, ಚರ್ಚಿಸಿ, ವಿವರಿಸಿ. ಪರಿಹಾರ ಹುಡುಕಿ. ಒಂದಾದ ಮೇಲೆ ಮತ್ತೊಂದು ವಿಷಯಕ್ಕೆ ಬನ್ನಿ. ಆರೋಪಗಳನ್ನು ಆದಷ್ಟು ಅವಾಯ್ಡ್ ಮಾಡಿ. ಆರೋಪ ಮಾಡುತ್ತಿದ್ದರೆ ಮತ್ತೊಬ್ಬರು ಅದನ್ನು ಸಮರ್ಥಿಸಿಕೊಳ್ಳುವುದರಲ್ಲೇ ತೊಡಗುತ್ತಾರೆ. ಬದಲಿಗೆ ನಿನ್ನ ಇಂಥ ಕೆಲಸದಿಂದ/ನಡೆಯಿಂದ/ಮಾತಿನಿಂದ ನನಗೆ ಹೀಗೆನಿಸಿತು ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕಾಳಜಿ

ಜಗಳದ ಬಳಿಕ, ಏಕಾಂತದ ಬಳಿಕ ಬೇಜಾರಿನಲ್ಲಿ ಕುಳಿತ ಸಂಗಾತಿಯ ಭುಜ ತಟ್ಟುವುದೋ, ಪ್ರೀತಿಗೆ ಸಂಬಂಧಿಸಿದ ಸಂದೇಶ ಕಳುಹಿಸುವುದೋ ಅಥವಾ ಅಪ್ಪಿಕೊಳ್ಳುವುದೋ ಮಾಡಿದರೆ ಸಿಟ್ಟೆಲ್ಲ ಮಟಾಮಾಯವಾಗುತ್ತದೆ. ಅಲ್ಲದೆ, ನೀವು ಸಂಗಾತಿಯನ್ನು ಹಾಗೂ ಸಂಬಂಧವನ್ನು ಕೇರ್ ಮಾಡುತ್ತೀರೆಂಬ ಸಂದೇಶ ರವಾನೆಯಾಗುತ್ತದೆ. ಏನೂ ಆಗೇ ಇಲ್ಲವೆಂಬಂತೆ ನಟಿಸುವುದು ಬೇಡ, ಬದಲಿಗೆ ಸರಿ ಮಾಡಿಕೊಳ್ಳುತ್ತಿದ್ದೀರಿ ಎಂಬಂತೆ ವರ್ತಿಸಿದರೂ ಸಾಕು. 

ಕೌನ್ಸೆಲಿಂಗ್

ಜಗಳದ ಬಳಿಕ ಏನೇ ಮಾಡಿದರೂ ಒಬ್ಬರೊಬ್ಬರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲವೆಂದರೆ, ಯಾವುದೂ ಸರಿಯಾಗುತ್ತಿಲ್ಲವೆಂದರೆ ಕೌನ್ಸೆಲರ್ ಸಹಾಯ ಪಡೆದುಕೊಳ್ಳಿ. ಥೆರಪಿಸ್ಟ್ ನಿಮ್ಮ ಫೀಲಿಂಗ್ಸನ್ನು ನೀವು ಚೆನ್ನಾಗಿ ಅರ್ಥೈಸಿಕೊಂಡು ಅದನ್ನು ಹೇಗೆ ಚಾನೆಲೈಸ್ ಮಾಡಬೇಕು, ಇಬ್ಬರ ಮುನಿಸನ್ನು ಹೇಗೆ ಶಮನ ಮಾಡಿಕೊಳ್ಳಬೇಕೆಂಬುದಕ್ಕೆ ದಾರಿ ಹುಡುಕುತ್ತಾರೆ.