Asianet Suvarna News Asianet Suvarna News

ಸಾಮಾಜಿಕ ಸಮಸ್ಯೆ ದುರ್ವಾಸನೆ ತೊಲಗಿಸುವುದು ಹೇಗೆ?

ಬಾಯಿ ದುರ್ವಾಸನೆಯಿಂದ ಬಳಲುವ ಮನುಷ್ಯ ಕೀಳಿರಿಮೆಯಿಂದ  ಬಳಲುತ್ತಾನೆ. ಇದೇ ಸಮಸ್ಯೆ ಅವನನ್ನೂ ಖಿನ್ನತೆಗೂ ತಳ್ಳಬಹುದಾದ ಸಾಧ್ಯತೆ ಇದ್ದು, ಬಾಯಿ ದುರ್ವಾಸನೆ ಸಮಸ್ಯೆಯನ್ನೇ ಹೋಗಲಾಡಿಸಿಕೊಳ್ಳುವುದು ಒಳಿತು. ಇದಕ್ಕೆ ಇಲ್ಲಿದೆ ಪರಿಹಾರ.

How to come out of bad breath

- ಡಾ.ಮುರಲೀ ಮೋಹನ್ ಚಿಂತಾರು
ಶೇ.80 ಮಂದಿಯಲ್ಲಿ ಬಾಯಿಯ ದುರ್ವಾಸನೆ ಕಂಡು ಬಂದರೂ, ಅದರ ಅರಿವು ಅವರಿಗಿರುವುದಿಲ್ಲ. ಇದು ಬಾಯಿ ಮೂಲಕ ಉಸಿರಾಡುವವರಲ್ಲಿ ಹೆಚ್ಚು. ಅನೇಕ ಮಂದಿಯಲ್ಲಿ ಈ ವಾಸನೆಗೆ ಕಾರಣ ಬಾಯಿಯ ಶುಚಿತ್ವ ಇಲ್ಲದಿರುವುದು.

ಶೇ.15 ರಿಂದ 20ರಷ್ಟು ರೋಗಿಗಳಲ್ಲಿ ಬಾಯಿ ದುರ್ವಾಸನೆ ಇರುತ್ತದೆ. ನಾವು ತಿಂದ ಬಳಿಕ ಬಾಯಿಯನ್ನು ಸ್ವಚ್ಛಗೊಳಿಸದಿದ್ದಲ್ಲಿ ಹಲ್ಲಿಗಂಟಿರುವ ಆಹಾರದ ಮೇಲೆ ಬ್ಯಾಕ್ಟೀರಿಯಾಗಳಾಗುತ್ತವೆ. ಆವಿಯಾಗುವ ಗಂಧಕ ಮತು ಜಲಜನಕದ ಸೆಲ್ಫೈಡ್ ಮುಂತಾದ ಅನಿಲಯುಕ್ತ ವಸ್ತುಗಳು ಉತ್ಪತ್ತಿಯಾಗಿ ಬಾಯಿಯ ವಾಸನೆಯನ್ನು ಹೆಚ್ಚು ಮಾಡಬಹುದು. ಕೆಲವು ಸೂಕ್ಷ್ಮಾಣುಗಳು ವಸಡಿನ ಎಡೆಗಳಲ್ಲಿ ಕಂಡು ಬರಬಹುದು.ಅಲ್ಲದೆ ಹಲ್ಲಿನ ಸುತ್ತ ಇರುವ ದಂತಪಾಚಿ ಅಥವಾ ದಂತಗಾರೆಗಳಿಂದ ಬಾಯಿಯ ವಾಸನೆ ಹೆಚ್ಚಾಗುವುದು. ಕೆಲವೊಬ್ಬರಿಗೆ ಎಷ್ಟು ಬಾರಿ ಹಲ್ಲು ಶುಚಿಗೊಳಿಸಿದರೂ ಬಾಯಿಯಿಂದ  ದುರ್ವಾಸನೆ ಬರುತ್ತಿರುತ್ತದೆ. ಇದರ ಯಾತನೆ ಅನುಭವಿಸಿದವರಿಗೆ ಮಾತ್ರಗೊತ್ತು. ಜೊತೆಗೆ ಇಂತಹ ವ್ಯಕ್ತಿಗಳ ಜೊತೆ ವ್ಯವಹರಿಸುವ ಅಥವಾ ಜೀವನ ನಡೆಸುವ ವ್ಯಕ್ತಿಗೂ ಅದು ಹಿಂಸೆ. ಬಾಯಿ ದುರ್ವಾಸನೆ ಕೆಲವೊಮ್ಮೆ ಮುಜುಗರಕ್ಕೀಡುಮಾಡುವುದೂ ಇದೆ.

ಬಾಯಿಯ ವಾಸನೆಗೆ ಕಾರಣಗಳು
- ಬಾಯಿಯನ್ನು ಶುಚಿಗೊಳಿಸದೇ ಇರುವುದು
- ಉಪವಾಸ ಮಾಡುವುದು.
- ಧೂಮಪಾನ, ಮದ್ಯಪಾನ ಮತ್ತು ತಂಬಾಕು ಸೇವನೆ.
- ಹುಳುಕು ಹಲ್ಲುಗಳಲ್ಲಿ ಆಹಾರ ಪದಾರ್ಥ ಸೇರಿಕೊಂಡು ವಾಸನೆ ಬರಬಹುದು.
- ಶ್ವಾಸಕೋಶದ ಸೋಂಕುರೋಗ, ಕರುಳಿನ ಸೋಂಕುರೋಗ, ಜಠರದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ, ಸತತ ಔಷಧ ಸೇವನೆ, ಮಧುಮೇಹ, ವಸಡಿನ ಸುತ್ತ ಬೆಳೆದಿರುವ ದಂತ ಪಾಚಿ, ಬಾಯಿಯ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದಲೂ
ಬಾಯಿ ವಾಸನೆ ಬರಬಹುದು.

ತಡೆಗಟ್ಟುವುದು ಹೇಗೆ
-  ಬಾಯಿಯನ್ನು ದಿನಕ್ಕೆರಡು ಬಾರಿ ಶುಚಿಗೊಳಿಸಿ.
- ಹೆಚ್ಚು ದ್ರವಾಹಾರ ಸೇವಿಸಿ. ಧೂಮಪಾನ, ಮದ್ಯಪಾನ ತಂಬಾಕು ಸೇವನೆ ಮುಂತಾದ ಚಟಗಳಿಂದ ದೂರವಿರಿ. 
- ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಬಾಯಿ ವಾಸನೆ ಪರಿಹಾರವಾಗುತ್ತದೆ.
-  ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
 - ಊಟವಾದ ಬಳಿಕ, ಲವಂಗ, ಏಲಕ್ಕಿ, ತುಳಸಿ ಇತ್ಯಾದಿಗಳನ್ನು ಸೇವಿಸಿ, ಬಾಯಿ ಶುಚಿಗೊಳಿಸಿ.
- ದಂತಕುಳಿಗಳಿದ್ದರೆ ಚಿಕಿತ್ಸೆ ಪಡೆಯಿರಿ. ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರಿಂದ ಹಲ್ಲುಗಳನ್ನು ಶುಚಿಗೊಳಿಸಿ. ಜೊಲ್ಲುರಸದ ಪ್ರಮಾಣ ಕಡಿಮೆಯಾಗಿದ್ದಲ್ಲಿ, ವಸಡಿನಲ್ಲಿ ರಕ್ತ ಒಸರುತ್ತಿದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಬಾಯಿ ದುರ್ವಾಸನೆ ಸಂಕೀರ್ಣವಾದ ಸಾಮಾಜಿಕ ಸಮಸ್ಯೆಯೂ ಹೌದು. ಇಂಥವರು ಹೆಚ್ಚಿನ ಸಲ ದಂತವೈದ್ಯರಲ್ಲಿ ಹೋಗಲು ಮುಜುಗರ ಪಡುತ್ತಾರೆ. ಇಂಥವರು ಸ್ನೇಹಿತರು, ಸಹೋದ್ಯೋಗಿಗಳು, ಕೊನೆಗೆ ಮನೆಮಂದಿಯಿಂದಲ್ಲೂ ಮುಕ್ತವಾಗಿ ಮಾತನಾಡಲಾಗದೇ ಡಿಪ್ರೆಶನ್‌ಗೆ ತುತ್ತಾಗಬಹುದು. ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುವ ಈ ತೊಂದರೆಯಿಂದ ಆದಷ್ಟು ಬೇಗ ಮುಕ್ತವಾದಲ್ಲಿ ಒಳಿತು.
 

Follow Us:
Download App:
  • android
  • ios