ಇತ್ತೀಚಿನ ದಿನದಲ್ಲಿ ಎಲ್ಲರೂ ಒತ್ತಡಕ್ಕೆ ಸಿಲುಕಿದವರೇ. ಒಂದು ಸಮೀಕ್ಷೆಯ ಪ್ರಕಾರ ಶೇ.99ರಷ್ಟು ಜನ ಒಂದಿಲ್ಲೊಂದು ಒತ್ತಡದಿಂದ ಒದ್ದಾಡುತ್ತಿರುತ್ತಾರೆ. ಆದರೆ ಮನುಷ್ಯನಿಗೆ ಒತ್ತಡವಿಲ್ಲದಿದ್ದರೆ ಆತನ ಏಳಿಗೆಯಾಗಲು ಅಥವಾ ಅವನಲ್ಲಿ ಹುದುಗಿರುವ ಪ್ರತಿಭೆ ಹೊರಬರಲು ಸಾಧ್ಯ ಇಲ್ಲ. ಈ ರೀತಿ ಒತ್ತಡದಲ್ಲಿ ಎರಡು ವಿಧವಿದೆ. ಒಂದು ಧನಾತ್ಮಕ ಒತ್ತಡ, ಇನ್ನೊಂದು ಋಣಾತ್ಮಕ ಒತ್ತಡ. ಧನಾತ್ಮಕ ಒತ್ತಡ ವ್ಯಕ್ತಿಯ ಸಾಧನೆಗೆ ಸಹಾಯವಾದರೆ ಋಣಾತ್ಮಕ ಒತ್ತಡ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ. ಮುನ್ಸೂಚನೆಯಿಲ್ಲದೇ ಬರುವ ತೊಂದರೆ, ಪ್ರೀತಿಪಾತ್ರರ ಸಾವು, ಅತಿಯಾದ ಹಣದ ಮುಗ್ಗಟ್ಟು, ದೀರ್ಘಕಾಲ ವಾಸಿಯಾಗದ ಖಾಯಿಲೆಗಳು ಋಣಾತ್ಮಕ ಒತ್ತಡವನ್ನು ವ್ಯಕ್ತಿಗೆ ನೀಡುತ್ತದೆ. ವೈವಾಹಿಕ ಸಮಸ್ಯೆಗಳು, ವಿಚ್ಛೇದನ, ಅತ್ಯಾಚಾರ ಆಕಸ್ಮಿಕವಾಗಿ ಬರುವ ಸಮಸ್ಯೆಗಳಿಂದಲೂ ದೈಹಿಕ, ಮಾನಸಿಕ ಆಘಾತದಿಂದ ಒತ್ತಡ ಹೆಚ್ಚುತ್ತದೆ.

ಯಾಕೆ ಹೀಗಾಗುತ್ತದೆ?

ನಮ್ಮ ದೇಹದಲ್ಲಿ ಆಗುವ ಹಾರ್ಮೋನ್ಗಳ ಅಸಮತೋಲನದಿಂದ ಅಂದರೆ ಅಡ್ರೆಲೈನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನ್‌ನಲ್ಲಿ ಆಗುವ ಏರುಪೇರಿನಿಂದ ವ್ಯಕ್ತಿಯಲ್ಲಿ ಒತ್ತಡ ಹೆಚ್ಚುತ್ತದೆ. ಇದರಿಂದ ರಕ್ತದ ಒತ್ತಡ ಹೆಚ್ಚುವುದು, ಹೃದಯ ಸಂಬಂಧಿ ಕಾಯಿಲೆ, ಹೊಟ್ಟೆಯಲ್ಲಿ ಹುಣ್ಣು, ಪದೇ ಪದೇ ಮಲಮೂತ್ರ ವಿಸರ್ಜನೆ ಮಾಡಬೇಕಿರುವುದು, ನಿದ್ರಾಹೀನತೆ, ತೂಕ ಕಡಿಮೆಯಾಗುವುದು, ಅತಿಯಾದ ತಲೆನೋವು, ಚರ್ಮದ ತೊಂದರೆ, ಹಾರ್ಮೋನ್‌ಗಳ ಅಸಮತೋಲನ ಇತ್ಯಾದಿಗಳುಂಟಾಗುತ್ತವೆ.

ಆತ್ಮಹತ್ಯೆ ಒತ್ತಡ: ಅತಿಯಾದ ಒತ್ತಡದಿಂದ ವ್ಯಕ್ತಿಯಲ್ಲಿ ಖಿನ್ನತೆ ಪ್ರಾರಂಭವಾಗುತ್ತದೆ. ಖಿನ್ನತೆ ಹೆಚ್ಚಿದಂತೆ ಆತ್ಮಹತ್ಯೆ ಮನೋಭಾವ ಹೆಚ್ಚುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಅತಿಯಾದ ಇಂಟರ್‌ನೆಟ್ ಹಾಗೂ ಮೊಬೈಲ್ ಬಳಕೆಯಿಂದಲೂ ಹಲವಾರು ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದೆ. 

ಏನು ಪರಿಹಾರ?

ನಮ್ಮ ಜೀವನ ಶೈಲಿಯನ್ನು ಸ್ವಲ್ಪ ಬದಲಿಸಿಕೊಂಡು ನಮ್ಮ ಇತಿಮಿತಿ ನೋಡಿಕೊಂಡು ಇರುವುದರಲ್ಲೇ ಸಂತೋಷಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬೇರೆಯವರಿಂದ ನಾವು ನಿರೀಕ್ಷೆ ಮಾಡುವುದು ಕಡಿಮೆ ಮಾಡಬೇಕು. ಋಣಾತ್ಮಕ ಆಲೋಚನೆ ಬಿಡಬೇಕು. ಇವತ್ತಿನ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಮುಂದಿನದು ಅಥವಾ ಹಿಂದಿನ ಘಟನೆಗಳ ಬಗ್ಗೆ ಗಮನ ನೀಡಬಾರದು. ಯಾವಾಗಲೂ ಚುರುಕಾಗಿರಬೇಕು, ಸೋಮಾರಿತನ ಬಿಡಬೇಕು. ನಾವು ಯಾವುದಾದರೂ ನಮ್ಮ ಮನಸ್ಸಿಗೆ ಸಂತೋಷ ನೀಡುವ ಕಲೆಯನ್ನು ಕಲಿಯಬೇಕು. ಯೋಗ, ಧ್ಯಾನ, ಸಂಗೀತ, ಕಲೆ ಇವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮುಖ್ಯವಾಗಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿನಗಾಗಿ ನೀನು ಬದುಕಿದರೆ ನಿಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಎರಡೂ ಚೆನ್ನಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಬರುವ ಹಲವಾರು ಒತ್ತಡಗಳನ್ನು ಎದುರಿಸಲೇಬೇಕು. ಅದನ್ನು ಎದುರಿಸಿ ಬಾಳುವುದೇ ಜೀವನ ಹಾಗೂ ವ್ಯಕ್ತಿಯ ಬುದ್ಧಿವಂತಿಕೆ.

ಡಾ. ಸದಾನಂದ್ ರಾವ್ ಕೆ.ಸಿ. ಮನಃಶಾಸ್ತ್ರಜ್ಞ
ಸಂಪರ್ಕ ಸಂಖ್ಯೆ: 9880441703