Hotel service charge rules: ಹೋಟೆಲ್ ಅಥವಾ ರೆಸ್ಟೋರೆಂಟ್ನಲ್ಲಿ ಊಟದ ನಂತರ ನೀವು ಬಿಲ್ ಸರಿಯಾಗಿ ನೋಡದೆ ಹಣ ಕಟ್ಟುತ್ತಿದ್ದರೆ ದೊಡ್ಡ ತಪ್ಪು ಮಾಡ್ತಿದ್ದೀರಾ! ಶೇಕಡ 99ರಷ್ಟು ಹೋಟೆಲ್ಗಳು ಬಿಲ್ನಲ್ಲಿ ಸೇರಿಸುವ ಆ ಒಂದು ಸೀಕ್ರೆಟ್ ಅಂಶ ಯಾವುದು? ಕೇವಲ ಒಂದೇ ಮಾತಿನಲ್ಲಿ ನಿಮ್ಮ ಬಿಲ್ ಕಡಿಮೆ ಮಾಡಿಸಿಕೊಳ್ಳುವ ಆ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಹೋಟೆಲ್ ಅಥವಾ ರೆಸ್ಟೋರೆಂಟ್ಗಳಿಗೆ ತೆರಳಿ ಊಟ ಮಾಡಿದ ಬಳಿಕ ಬಿಲ್ ಪರಿಶೀಲಿಸದೆ ಹಣ ಪಾವತಿಸುತ್ತಿದ್ದೀರಾ? ಹಾಗಿದ್ದರೆ ನೀವು ಅತಿ ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದರ್ಥ! ಹೋಟೆಲ್ಗೆ ಹೋದಾಗ ಬಿಲ್ ಪಾವತಿಸುವ ವೇಳೆ ಅದರಲ್ಲಿ ಏನೇನು ಶುಲ್ಕಗಳನ್ನು ಸೇರಿಸಲಾಗಿದೆ ಎಂಬುದನ್ನು ಬಹುತೇಕರು ಗಮನಿಸುವುದೇ ಇಲ್ಲ. ಇದರಿಂದ ಗ್ರಾಹಕರು ತಮಗೆ ಅರಿವಿಲ್ಲದಂತೆಯೇ ಹೆಚ್ಚುವರಿ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಗ್ರಾಹಕರು ಎಕ್ಸ್ಟ್ರಾ ಹಣ ಕಳೆದುಕೊಳ್ಳದಂತೆ ಎಚ್ಚರಿಸುತ್ತಿದೆ.
"ಬಿಲ್ ಕಟ್ಟಿಲ್ಲ ಅಂದ್ರೆ ಹೋಟೆಲ್ನವರು ನಮ್ಮ ಕೈಯಲ್ಲಿ ಪ್ಲೇಟ್ ತೊಳೆಸುತ್ತಾರೆ ಅಲ್ವಾ?" ಎಂದು ಅನೇಕರು ತಮಾಷೆಯಾಗಿ ಕೇಳಬಹುದು. ಆದರೆ, ಇಲ್ಲಿ ಬಿಲ್ ಕಟ್ಟದಿರುವುದಲ್ಲ, ಬಿಲ್ ಪಾವತಿಸುವ ಮುನ್ನ ಸರಿಯಾಗಿ ನೋಡದಿರುವುದೇ ದೊಡ್ಡ ಸಮಸ್ಯೆ. ಶೇಕಡ 99ರಷ್ಟು ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ತಮ್ಮ ಬಿಲ್ನಲ್ಲಿ ಒಂದು ಹೆಚ್ಚುವರಿ ಶುಲ್ಕವನ್ನು ಸೇರಿಸುತ್ತವೆ. ಇದರಿಂದ ಬಿಲ್ ಮೊತ್ತ ಜಾಸ್ತಿಯಾಗಿ ಬರುತ್ತದೆ. ಆದರೆ ಗ್ರಾಹಕರು ಮನಸ್ಸು ಮಾಡಿದರೆ ಆ ಹೆಚ್ಚುವರಿ ಹಣವನ್ನು ಸುಲಭವಾಗಿ ಕಡಿಮೆ ಮಾಡಿಸಿಕೊಳ್ಳಬಹುದು.
ಹೋಟೆಲ್ನಲ್ಲಿ ಊಟ ಮುಗಿಸಿದ ಬಳಿಕ ನಿಮ್ಮ ಕೈಗೆ ಬಿಲ್ ಬಂದಾಗ ಅದನ್ನು ಗಮನವಿಟ್ಟು ಪರಿಶೀಲಿಸಬೇಕು. ಆ ಬಿಲ್ನಲ್ಲಿ 'ಸರ್ವಿಸ್ ಚಾರ್ಜ್' (Service Charge) ಎಂದು ಹೆಚ್ಚುವರಿ ಮೊತ್ತವನ್ನು ಸೇರಿಸಿದ್ದರೆ, ತಕ್ಷಣ ಬಿಲ್ ತೆಗೆದುಕೊಂಡು ಕೌಂಟರ್ ಹತ್ತಿರ ಹೋಗಬೇಕು. ಅಲ್ಲಿ, "ಬಿಲ್ನಲ್ಲಿ ಈ ಸರ್ವಿಸ್ ಚಾರ್ಜ್ ಏನು ತಗೊಂಡಿದ್ದೀರಾ, ಅದನ್ನು ತೆಗೆದುಬಿಡಿ" ಎಂದು ಸ್ಪಷ್ಟವಾಗಿ ಹೇಳಬೇಕು. ಏಕೆಂದರೆ, 2017ರ ಗ್ರಾಹಕ ವ್ಯವಹಾರಗಳ (Consumer Affairs) ಮಾರ್ಗಸೂಚಿಗಳ ಪ್ರಕಾರ, ಯಾವುದೇ ಹೋಟೆಲ್ಗಳು ಗ್ರಾಹಕರಿಂದ ಬಲವಂತವಾಗಿ ಸರ್ವಿಸ್ ಚಾರ್ಜ್ ವಸೂಲಿ ಮಾಡುವಂತಿಲ್ಲ. ಸರ್ವಿಸ್ ಚಾರ್ಜ್ ನೀಡುವುದು ಗ್ರಾಹಕರ ಇಷ್ಟಕ್ಕೆ ಬಿಟ್ಟ ವಿಚಾರವೇ ಹೊರತು ಕಡ್ಡಾಯವಲ್ಲ.
ಒಂದು ವೇಳೆ ಹೋಟೆಲ್ನವರು ಸರ್ವಿಸ್ ಚಾರ್ಜ್ ತೆಗೆಯಲು ಒಪ್ಪದಿದ್ದರೆ, ಅವರಿಗೆ ಈ ಜಾಗೃತಿ ವಿಡಿಯೋ ಹಾಗೂ ನಿಯಮಗಳ ಬಗ್ಗೆ ತೋರಿಸಿ ತಿಳಿಹೇಳಬಹುದು. ಆದರೂ ಅವರು ಒಪ್ಪದೆ ಹಠ ಹಿಡಿದರೆ, ಗ್ರಾಹಕರು ತಕ್ಷಣವೇ ಸಹಾಯವಾಣಿ ಸಂಖ್ಯೆ 1915ಕ್ಕೆ ಕರೆ ಮಾಡಿ ಅವರ ವಿರುದ್ಧ ದೂರು ದಾಖಲಿಸಬಹುದು. ಹೀಗೆ ದೂರು ನೀಡಿದರೆ ಎರಡೇ ದಿನದಲ್ಲಿ ಅಂತಹ ಹೋಟೆಲ್ ಬಂದ್ ಆಗುವ ಮಟ್ಟಿಗೂ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.
ದೂರು ನೀಡಲು 'ಬಿಲ್' ಸಾಕ್ಷ್ಯವಾಗಿ ಇಟ್ಟುಕೊಳ್ಳಿ
ಒಂದು ವೇಳೆ ಹೋಟೆಲ್ನವರು ಸರ್ವಿಸ್ ಚಾರ್ಜ್ ತೆಗೆಯಲು ಒಪ್ಪದೆ ಬಲವಂತವಾಗಿ ವಸೂಲಿ ಮಾಡಿದರೆ, ಆ ಬಿಲ್ನ ಫೋಟೋ ಅಥವಾ ಪ್ರತಿಯನ್ನು ಸಾಕ್ಷ್ಯವಾಗಿ ಇಟ್ಟುಕೊಳ್ಳಬೇಕು. ನಂತರ 1915 ಸಹಾಯವಾಣಿಗೆ ಕರೆ ಮಾಡಿ ಅಥವಾ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) ವೆಬ್ಸೈಟ್/ಆ್ಯಪ್ ಮೂಲಕ ಬಿಲ್ ಸಮೇತ ದೂರು ದಾಖಲಿಸಬಹುದು.
ಪ್ರತಿಯೊಬ್ಬ ಗ್ರಾಹಕನಿಗೂ ತಮ್ಮ ಹಕ್ಕುಗಳ ಬಗ್ಗೆ ಸರಿಯಾದ ಅರಿವಿರಬೇಕು ಎಂಬುದೇ ಈ ಸಂದೇಶದ ಮುಖ್ಯ ಉದ್ದೇಶವಾಗಿದೆ. ಹೋಟೆಲ್ಗಳಲ್ಲಿ ಊಟ ಮಾಡುವಾಗ ಯಾರೂ ಅನಗತ್ಯವಾಗಿ ಹೆಚ್ಚುವರಿ ಹಣ ನೀಡಿ ಮೋಸ ಹೋಗಬಾರದು. ನೀವು ಕಷ್ಟಪಟ್ಟು ದುಡಿದ ಹಣವನ್ನು ಅನಾವಶ್ಯಕವಾಗಿ ಪೋಲು ಮಾಡದೆ, ನಿಮ್ಮ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಜಾಗೃತಿ ಮೂಡಿಸುವಂತೆ ಕೋರಲಾಗಿದೆ. ಇನ್ನು ಮುಂದೆ ಹೋಟೆಲ್ ಬಿಲ್ ಕಟ್ಟುವ ಮುನ್ನ ತಪ್ಪದೇ ಬಿಲ್ ಪರಿಶೀಲಿಸಿ!









