ಉಸಿರಾಡಲೂ ಆಗದೇ, ಬಿಡಲೂ ಆಗದೇ ಎದೆಯಲ್ಲಿ ಸಿಕ್ಕಿದಂತಾಗುವ ಅಸ್ತಮಾ ರೋಗಿಯನ್ನು ಮಾತ್ರವಲ್ಲ, ಮನೆಯವರನ್ನೂ ಕಂಗೆಡಿಸಿ ಬಿಡುತ್ತೆ. ಬೇಗೆ ಪರಿಹಾರವೂ ಸಿಗದ ಈ ಸಮಸ್ಯೆಯನ್ನು ಎಚ್ಚರಿಕೆಯಿಂದಿದ್ದು ಸಂಭಾಳಿಸಬೇಕು. ಅದರಲ್ಲಿಯೂ ಚಳಿಗಾಲದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಕೇವಲ ಔಷಧಿ ಹಾಗೂ ಇನ್‌ಹೇಲರ್ ಮೇಲೆ ಮಾತ್ರ ಅವಲಂಬಿತರಾಗದೇ, ಮನೆಯೌಷಧಿ ಬಳಸಿಯೂ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಅಗತ್ಯ. ಅಷ್ಟಕ್ಕೂ ಇದಕ್ಕೇನು ಮನೆ ಮದ್ದು?

  • ಶುಂಠಿ ರಸ ಮತ್ತು ದಾಳಿಂಬೆ ರಸಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದಿಷ್ಟು ಜೇನು ಸೇರಿಸಿ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸೇವಿಸಿ.
  • ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗ ಇದನ್ನು ಕುಡಿಯಿರಿ. ನೆಮ್ಮದಿಯ ಉಸಿರಾಟ ನಿಮ್ಮದಾಗುತ್ತದೆ.
  • ಒಂದು ಚಮಚ ಶುಂಠಿ ತುರಿಯನ್ನು ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಒಲೆಯಿಂದ ಇಳಿಸಿ ಉಗುರು ಬೆಚ್ಚಾಗಾದಾಗ ಕುಡಿಯಿರಿ. ಈ ರೀತಿ ಮಾಡುವುದರಿಂದ ಶ್ವಾಸಕೋಶಗಳು ಶುದ್ಧವಾಗುತ್ತವೆ. ಕಫ ಗಂಟಲ ಒಳಗೆ ಇಳಿಯದೆ ಹೊರಗೆ ಬರುತ್ತದೆ.
  • ರಾತ್ರಿ ಉಸಿರಾಟದ ಸಮಸ್ಯೆ ಇಲ್ಲದೆ ಚೆನ್ನಾಗಿ ನಿದ್ರಿಸಬೇಕು ಎಂದಾದರೆ ಮೆಂತ್ಯ ಬೀಜಗಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಬಳಿಕ ಅದನ್ನು ಸೋಸಿ ಉಗುರು ಬಿಸಿಯಾದ ಬಳಿಕ ಚಮಚ ಶಂಠಿ ರಸ ಮತ್ತು ಜೇನನ್ನು ಸೇರಿಸಿ ಮಿಶ್ರಣ ಮಾಡಿ, ಬೆಳಗ್ಗೆ ಮತ್ತು ಸಂಜೆ ಸೇವಿಸಿ.