ಜೀವನ ಎಂದ ಮೇಲೆ ಖುಷಿ ಹಾಗೂ ದುಃಖದ ಗಾಲಿ ತಿರುಗುತ್ತಿರುತ್ತದೆ. ಎಲ್ಲವೂ ಸರಿ ಇದೆ ಎಂದು ತೋರುವಾಗಲೇ ಕೆಲವೊಮ್ಮೆ ಕಾರಣವೇ ಇಲ್ಲದೆ ನೀವು ಜೋರಾಗಿ ಅತ್ತುಬಿಡಬಹುದು. ಚಿಂತೆ ಬೇಡ. ಇದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಕಾರಣವಿಲ್ಲ ಎಂದುಕೊಂಡು ನೀವು ಅಳುವುದಕ್ಕೆ ಈ ಕೆಳಗಿನ ಸಂಗತಿಗಳು ನಿಮಗೆ ಗೊತ್ತಿಲ್ಲದೆಯೇ ಕಾರಣವಿರಬಹುದು! 

ನಿದ್ರಾಹೀನತೆ
ಪ್ರತಿಯೊಬ್ಬರಿಗೂ ದಿನಕ್ಕೆ 7ರಿಂದ 9 ಗಂಟೆಗಳ ನಿದ್ದೆ ಬೇಕು. ಸರಿಯಾಗಿ ನಿದ್ದೆ ಬರದಿರುವುದು ನಿಮ್ಮ ಭಾವಲೋಕಕ್ಕೆ ಧಕ್ಕೆ ತರುತ್ತದೆ. ಆಗ ಮೆದುಳು ಯಾವುದು ಮುಖ್ಯ, ಯಾವುದು ಸಣ್ಣ ಸಂಗತಿ ಎಂದು ವ್ಯತ್ಯಾಸ ಅರಿಯುವಲ್ಲಿ ಸೋಲುತ್ತದೆ. ಸಣ್ಣ ಸಣ್ಣ ವಿಷಯವೂ ದೊಡ್ಡದಾಗಿ ಕಾಣತೊಡಗುತ್ತದೆ. 

ಪ್ರೀತಿಯಲ್ಲಿ ಬೀಳುವ ಮುನ್ನ ಪ್ರೇಮದ ಮಂತ್ರವನ್ನು ತಿಳಿಯಿರಿ

ಒತ್ತಡ 
ಬದುಕಿನಲ್ಲಿ ಏನಾಗುತ್ತಿದೆ ಎಂದು ಕುಳಿತು ವಿವೇಚಿಸುವಷ್ಟೂ ಸಮಯವಿಲ್ಲದ ಒತ್ತಡದ ಜೀವನಶೈಲಿ ನಿಮ್ಮದಾಗಿದ್ದರೆ ಇದ್ದಕ್ಕಿದ್ದಂತೆ ಒಮ್ಮೆ ಜೋರಾಗಿ ಅಳು ಬಂದು ಬಿಡಬಹುದು. ಅದು ನಿಮ್ಮೊಳಗೆ ಸ್ಟೋರ್ ಆಗಿ ಕುಳಿತ ಟೆನ್ಷನ್‌ನ್ನು ಈ ರೀತಿ ಹೊರ ಹಾಕಬಹುದು. 

ಪೀರಿಯಡ್ಸ್
ಪೀರಿಯಡ್ಸ್‌ಗೂ ಮುನ್ನಿನ ಕೆಲ ದಿನಗಳು ಹಾರ್ಮೋನ್ ಏರುಪೇರಿನಿಂದಾಗಿ ಕೆಲ ಮಹಿಳೆಯರಿಗೆ ಸುಖಾಸುಮ್ಮನೆ ಅಳು ಬರುವುದು, ಸಿಟ್ಟು ಬರುವುದು, ಖಿನ್ನತೆ, ಆತಂಕ ಆಗುತ್ತದೆ. ಇದನ್ನೇ ಪ್ರಿಮೆನ್ಸ್ಟ್ರುಯಲ್ ಸಿಂಡ್ರೋಮ್ ಎನ್ನುವುದು. ಪೀರಿಯಡ್ಸ್‌ನ ಬಳಿಕ ಈ ಭಾವೋದ್ವೇಗ ಕಡಿಮೆಯಾಗುತ್ತದೆ. 

ಮೆನೋಪಾಸ್
ಋತುಚಕ್ರ ನಿಲ್ಲುವ ಸಂದರ್ಭದಲ್ಲಿ ಕೂಡಾ ಹಾರ್ಮೋನ್‌ಗಳ ತಾಕಲಾಟ ಮಹಿಳೆಯರನ್ನು ಖಿನ್ನತೆಗೆ ದೂಡುತ್ತವೆ. ಅಯ್ಯೋ ವಯಸ್ಸಾಯಿತಲ್ಲಾ ಎಂಬ ದುಃಖವೂ ಇದಕ್ಕೆ ಸೇರಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ವಿಷಯವಿಲ್ಲದೆ ಅಳು ಬರುವುದು ಮಾಮೂಲಿ. 

ಪೋಸ್ಟ್‌ಕಾಯ್ಟಲ್ ಡಿಸ್ಫೋರಿಯಾ
ಸೆಕ್ಸ್‌ನ ಬಳಿಕ ಇದ್ದಕ್ಕಿದ್ದಂತೆ ಅಳು ಬರುತ್ತದೆಯೇ? ಹೆದರಬೇಡಿ, ನೀವೇನು ಒಂಟಿಯಲ್ಲ, ಈ ರೀತಿಯ ವರ್ತನೆಗೆ ಪೋಸ್ಟ್‌ಕಾಯ್ಟಲ್ ಡಿಸ್ಫೋರಿಯಾ ಎನ್ನುತ್ತಾರೆ. ಅಧ್ಯಯನವೊಂದರ ಪ್ರಕಾರ ಶೇ.46ರಷ್ಟು ಮಹಿಳೆಯರು ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಇದನ್ನು ಅನುಭವಿಸಿರುತ್ತಾರೆ. ದೈಹಿಕ ಹಾಗೂ ಭಾವನಾತ್ಮಕವಾಗಿ ಬಹಳ ತೊಡಗಿಸಿಕೊಳ್ಳುವುದರಿಂದ ಹಾರ್ಮೋನ್‌ಗಳ ಏರುಪೇರಾಗಬಹುದು ಎಂದು ಎಕ್ಸ್‌ಪರ್ಟ್‌ಗಳು ಹೇಳುತ್ತಾರೆ. 

ಮಕ್ಕಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಹೇಗೆ?

ಸೂಡೋಬುಲ್ಬರ್ ಎಫೆಕ್ಟ್
ನರ ಸಂಬಂಧಿ ಪೆಟ್ಟುಗಳಾದಾಗ ಮೆದುಳು ಸರಿಯಾಗಿ ಯೋಚಿಸುವ ಲಿಂಕ್ ಕಳೆದುಕೊಳ್ಳುತ್ತದೆ. ಹೀಗೆ ಪೆಟ್ಟಾದಾಗ ಕಾರಣವಿಲ್ಲದೆ ಅಳು,ನಗು ಎರಡೂ ಬರಬಹುದು.

ವಿಟಮಿನ್ ಬಿ12 ಕೊರತೆ
ನಮ್ಮ ರಕ್ತ ಹಾಗೂ ನರಗಳನ್ನು ಆರೋಗ್ಯವಾಗಿಡುವಲ್ಲಿ ವಿಟಮಿನ್ ಬಿ12 ಪಾತ್ರ ದೊಡ್ಡದು. ಈ ಪೋಷಕಸತ್ವದ ಕೊರತೆಯು ಖಿನ್ನತೆ, ಕಿರಿಕಿರಿ, ಭಾವನೆರಹಿತವಾಗಿಸುವುದು, ವೃಥಾ ಅಳುವಂತಾಗುವುದಕ್ಕೆ ಕಾರಣವಾಗುತ್ತದೆ.

ಕಡಿಮೆ ಬ್ಲಡ್ ಶುಗರ್
ಹೈಪೋಗ್ಲೈಸೀಮಿಯಾ ಎಂದು ಕರೆಯುವ ಈ ತೊಂದರೆ ಡಯಾಬಿಟೀಸ್ ಪೇಶೆಂಟ್‌ಗಳಲ್ಲಿ ಕಂಡುಬರುತ್ತಿದೆ. ಇದರ ಕಾರಣವಾಗಿ ಅವರಲ್ಲಿ ಒಮ್ಮೊಮ್ಮೆ ಸುಮ್ಮಸುಮ್ಮನೆ ಅಳು ಬರಬಹುದು.

ಥೈರಾಯ್ಡ್
ಥೈರಾಯ್ಡ್ ಗ್ಲ್ಯಾಂಡ್ ಅಗತ್ಯ ಹಾರ್ಮೋನ್‌ಗಳನ್ನು ಉತ್ಪಾದಿಸಲು ಸೋತಾಗ (ಹೈಪೋಥೈರಾಯ್ಡಿಸಂ) ಅಥವಾ ಥೈರಾಯ್ಡ್ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಥೈರಾಯ್ಡ್ ಗ್ಲ್ಯಾಂಡಿಗೆ ಹಾನಿಯಾಗಬಹುದು. ಇದು ಖಿನ್ನತೆ, ತೂಕ ಹೆಚ್ಚಳ, ಸುಸ್ತಿಗೆ ಕಾರಣವಾಗುತ್ತದೆ. ಆಗ ನಿಮ್ಮ ನಿಯಂತ್ರಣ ತಪ್ಪಿ ಅಳು ಒದ್ದುಕೊಂಡು ಬರಬಹುದು.

ಖಿನ್ನತೆ
ಖಿನ್ನತೆ ಆವರಿಸಿಕೊಂಡಿದ್ದರೆ ಸುಮ್ಮನೆ ಅಳು ಬರುವುದು ಮಾತ್ರವಲ್ಲ, ಜೀವನದ ಬಗ್ಗೆ ಭರವಸೆ ಕಳೆದುಕೊಳ್ಳುವುದು, ನಮ್ಮ ಅಸ್ತಿತ್ವಕ್ಕೆ ಬೆಲೆ ಇಲ್ಲ ಎನಿಸುವುದು, ಬೇಜಾರು ಮುಂತಾದ ನಕಾರಾತ್ಮಕ ಭಾವಗಳು ಆವರಿಸುತ್ತವೆ.