ಮೋಶನ್ ಸಿಕ್‌ನೆಸ್‌ನಿಂದ ಹೊರಬರೋಕೆ ಇಲ್ಲಿವೆ ಮನೆಮದ್ದು!
ಕೆಲ ಜನರು ವಿಮಾನ ಹತ್ತುವುದು, ಬಸ್ಸು, ಕಾರುಗಳಲ್ಲಿ ಕೂರುವುದು, ಘಾಟಿ ರೋಡಿನಲ್ಲಿ ಸಾಗುವುದು- ಮುಂತಾದ ವಿಷಯ ಕೇಳಿದರೇ ಬೆಚ್ಚುತ್ತಾರೆ. ಚಲನೆ ಎಂದರೆ ಸಾಕು, ಅವರಿಗೆ ಸಂಕಟ, ತಲೆನೋವು, ವಾಂತಿ, ಹೊಟ್ಟೆ ತೊಳಸುವುದು ಮುಂತಾದ ಕಿರಿಕಿರಿಗಳು ಒಕ್ಕರಿಸಿ ಹಿಂಸೆ ಮಾಡುತ್ತವೆ. ಈ ಮೋಶನ್ ಸಿಕ್‌ನೆಸ್‌ಗೆ ಇಲ್ಲಿದೆ ಸುಲಭ ಮನೆಮದ್ದು.
ಕಾರ್ ಅಥವಾ ಬಸ್‌ನಲ್ಲಿ ಪ್ರಯಾಣ ಹೊರಟ ಅರ್ಧ ಗಂಟೆಗೆಲ್ಲ ವಾಂತಿ ಬರುವಂತಾಗುತ್ತದೆಯೇ? ಅಂಕುಡೊಂಕು ಹಾದಿಯ ಜಂಪ್‌ಗೆ ಹೊಟ್ಟೆ ತೊಳಸಿ ಬಂದಂತಾಗುತ್ತಾ? ಹಲವರ ಸಮಸ್ಯೆ ಇದು. ಟ್ರಾವೆಲನ್ನು ಎಂಜಾಯ್ ಮಾಡೋಕೆ ಇದೇ ದೊಡ್ಡ ತಡೆಯಾಗಿಬಿಟ್ಟಿರುತ್ತದೆ. ಆದರೆ, ಇದಕ್ಕಾಗಿ ಹೆದರಿ ಎಲ್ಲಿಯೂ ಟ್ರಾವೆಲ್ ಮಾಡದೆ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಈ ಮೋಶನ್ ಸಿಕ್‌ನೆಸ್ ತಡೆಯಲು ಉತ್ತಮವಾದ ಸರಳ ಮದ್ದುಗಳು ಮನೆಯಲ್ಲೇ ಇರುವಾಗ ಯಾವುದೂ ನಿಮಗೆ ತಡೆಯಾಗಬೇಕಿಲ್ಲ. ಜೊತೆಗೆ, ತಿರುಗಾಟ ಆರಂಭಿಸುವ ಮುನ್ನ ಮದ್ಯ, ಸಿಗರೇಟ್ ಸೇವನೆ, ಅತಿ ಮಸಾಲೆಯ ಆಹಾರಗಳು, ಕರಿದ ತಿಂಡಿಗಳು, ನಿಮ್ಮ ದೇಹಕ್ಕೆ ಆಗಿ ಬರದ ಆಹಾರಗಳನ್ನು ದೂರವಿಡಿ. ಹಾಗಂತ ಅತಿಯಾಗಿ ತಿನ್ನುವುದೂ ಬೇಡ, ವಾಂತಿಯಾಗುತ್ತದೆ ಎಂದು ಏನೂ ತಿನ್ನದಿರುವುದೂ ಬೇಡ. ಲೈಟ್ ಆಗಿ ಏನನ್ನಾದರೂ ಸೇವಿಸಿ ಹೊರಡಿ.
ಶುಂಠಿ
ಸಂಕಟವನ್ನು ತಡೆಯುವ ಗುಣಗಳು ಶುಂಠಿಯಲ್ಲಿವೆ. ಇದು ಹೊಟ್ಟೆಯೊಳಗಿನ ಕಿರಿಕಿರಿಯನ್ನು ತಕ್ಷಣವೇ ತಡೆದು ರಿಲೀಫ್ ನೀಡಬಲ್ಲದು. ಜಿಂಜರ್ ಟೀ, ಶುಂಠಿ ಕಷಾಯ ಕುಡಿದು ಹೊರಡಿ. ಅಥವಾ ಶುಂಠಿಯ ಚಾಕೋಲೇಟ್, ಲೇಹ ಯಾವುದನ್ನಾದರೂ ಜೊತೆಯಲ್ಲೇ ಇಟ್ಟುಕೊಂಡರೆ ಸಂಕಟವಾಗುತ್ತಲೇ ಸೇವಿಸಿಬಿಡಬಹುದು. ಇಲ್ಲದಿದ್ದರೆ ಸಣ್ಣ ಶುಂಠಿಯ ತುಂಡನ್ನೇ ಬೇಕೆಂದಾಗ ನುರಿದು ನೀರಿಗೆ ಹಾಕಿಕೊಂಡು ಕುಡಿಯಬಹುದು.
ಪುದೀನಾ
ಪುದೀನಾವನ್ನು ಪ್ರಯಾಣದ ಸಂಕಟ ತಡೆಯಲು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಅಜೀರ್ಣ, ಇರಿಟೇಬಲ್ ಬೊವೆಲ್ ಸಿಂಡ್ರೋಮ್ ವಿರುದ್ಧ ಹೋರಾಡುವಲ್ಲಿ ಕೂಡಾ ಪುದೀನಾ ಎತ್ತಿದ ಕೈ ಎಂದು ಎನ್‌ಸಿಸಿಐಎಚ್ ದೃಢಪಡಿಸಿದೆ. 2014ರಲ್ಲಿ ಪೆರಿ ಅನಸ್ತೇಶಿಯಾ ನರ್ಸಿಂಗ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು ಪುದೀನಾಕ್ಕೆ ಸಂಕಟವನ್ನು ಹತ್ತಿಕ್ಕುವ ಗುಣವಿದೆ ಎಂದು ಹೇಳಿದೆ. ಟ್ರಾವೆಲ್ ಮಾಡುವಾಗ ಇದರ ಎಲೆಗಳನ್ನೇ ಇಟ್ಟುಕೊಂಡು ಆಗಾಗ ಬಾಯಿಗೆ ಹಾಕಿಕೊಳ್ಳುತ್ತಿದ್ದರೂ ಆಯಿತು, ಇಲ್ಲವೇ ಮನೆಯಿಂದ ಹೊರಡುವಾಗ ಪುದೀನಾ ಟೀ ಮಾಡಿ ಕುಡಿಯುವುದು ಕೂಡಾ ಉತ್ತಮ ಅಭ್ಯಾಸ. ಪುದೀನಾ ಎಣ್ಣೆ ಹಚ್ಚಿಕೊಂಡರೂ ಆ ಪರಿಮಳ ಸಂಕಟದ ವಿರುದ್ಧ ಕೆಲಸ ಮಾಡಬಲ್ಲದು.
ಏಲಕ್ಕಿ
ನಿಂಬೂ ಪಾನಿ ಸೇವನೆಯಿಂದ ಏನೆಲ್ಲಾ ಲಾಭ?
ಮೋಶನ್ ಸಿಕ್‌ನೆಸ್ ತಡೆಯಲು ಏಲಕ್ಕಿ ಮ್ಯಾಜಿಕ್‌ನಂತೆ ಕೆಲಸ ಮಾಡಬಲ್ಲದು. ಏಲಕ್ಕಿಯ ಕಪ್ಪು ಬೀಜಗಳು ಕಫ, ಪಿತ್ತ, ವಾತಾ ಮೂರರ ವಿರುದ್ಧವೂ ಹೋರಾಡುತ್ತದೆ. ಜೊತೆಗೆ, ಇದರ ಅನನ್ಯ ಪರಿಮಳ ಹಾಗೂ ರುಚಿ ವಾಂತಿ ಬರುವಂತಾಗುವುದರಿಂದ ಮುಕ್ತಿ ಕೊಡುತ್ತದೆ. ವಾಹನದಲ್ಲಿರುವಾಗ ಒಂದೆರಡು ಏಲಕ್ಕಿ ಬೀಜಗಳನ್ನು ಬಾಯಿಗೆ ಹಾಕಿಕೊಂಡು ರಸ ಒಳಗೆ ತೆಗೆದುಕೊಳ್ಳುತ್ತಿರಿ.
ನಟ್ಸ್
ಬಾದಾಮಿ, ವಾಲ್‌ನಟ್ ಮುಂತಾದ ನಟ್ಸ್, ನಿಮ್ಮ ಕುಂದಿದ ಎನರ್ಜಿಯನ್ನು ತಕ್ಷಣ ಮರಳಿಸುವುದರ ಜೊತೆಗೆ, ಸಂಕಟವನ್ನು ದೂರವಿಡುತ್ತದೆ. ಕಡಿಮೆ ಫ್ಯಾಟ್, ಕಡಿಮೆ ಪ್ರೋಟೀನ್, ಹೆಚ್ಚು ಸ್ಟಾರ್ಚ್ ಇರುವ ಆಹಾರವು ಸಂಕಟವನ್ನು ದೂರವಿಡಲು ಉತ್ತಮ ಪರಿಹಾರ.
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಬಾಳೆಹಣ್ಣು
ಟ್ರಾವೆಲಿಂಗ್‌ನಲ್ಲಿ ಸಂಕಟವಾದಾಗ, ನೀರು ಕುಡಿಯಬೇಕೆನಿಸಿದಾಗ ಬಾಳೆಹಣ್ಣು ತಿನ್ನಿ. ಬಾಳೆಹಣ್ಣಿನಲ್ಲಿ ಸ್ಟಾರ್ಚ್ ಚೆನ್ನಾಗಿದೆ. ಜೊತೆಗೆ, ವಾಂತಿ ಅಥವಾ ಬೇಧಿಯಾದಾಗ ಕಳೆದುಕೊಂಡ ಪೊಟ್ಯಾಶಿಯಂನ್ನು ಬಾಳೆಹಣ್ಣು ದೇಹಕ್ಕೆ ನೀಡುತ್ತದೆ.
ನೀರು
ನೀರು ದೇಹಕ್ಕೆ ಬೇಕಾದ ನೀರಿನಂಶ ಒದಗಿಸುವ ಜೊತೆಗೆ, ಸಂಕಟದೊಂದಿಗೆ ಬರುವ ತಲೆನೋವನ್ನು ದೂರವಿಡುತ್ತದೆ. ಹಾಗಂತ ಜಾಸ್ತಿ ಕುಡಿದರೆ ಕಂಡಿಶನ್ ಇನ್ನಷ್ಟು ಹದಗೆಡಬಹುದು. ಬದಲಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಆಗಾಗ ಕುಡಿಯಿರಿ.
ಇವಿಷ್ಟೇ ಅಲ್ಲದೆ, ಮುಂದಿನ ಸೀಟ್‌ನಲ್ಲಿ ಕೂರುವುದು, ಸ್ಥಬ್ಧ ವಸ್ತುವನ್ನೇ ನೋಡುವುದು, ಹಾಡು ಕೇಳುವುದು, ನಿಮಗೆ ನೀವೇ ಏನೂ ಆಗಲ್ಲ ಎಂದು ಹೇಳಿಕೊಳ್ಳುವುದು ಮುಂತಾದ ಸಣ್ಣ ಪುಟ್ಟ ಟೆಕ್ನಿಕ್‌ಗಳು ಕೂಡಾ ಕೆಲಸ ಮಾಡುತ್ತವೆ.