ಬೆಂಗಳೂರು (ಸೆ. 12): ಸ್ಮಾರ್ಟ್‌ಫೋನ್ ಸರಿಯಾಗಿ ಕೆಲಸ ಮಾಡಬೇಕಾದರೆ ಕಾಲಕಾಲಕ್ಕೆ ಸಾಫ್ಟ್ವೇರ್ ಅಪ್‌ಡೇಟ್ ಮಾಡಬೇಕು. ಆ್ಯಪ್‌ಗಳನ್ನು ಅಪ್‌ಡೇಟ್ ಮಾಡಬೇಕು. ಕಂಪ್ಯೂಟರ್ ಸ್ಪೀಡಾಗಿ ವರ್ಕ್ ಆಗಬೇಕಾದರೆ ಜಂಕ್ ಗಳನ್ನೆಲ್ಲಾ ಡಿಲೀಟ್ ಮಾಡಬೇಕು.

ಕೈಯಲ್ಲಿರೋ ಜುಜುಬಿ ಗ್ಯಾಜೆಟ್‌ಗಳೇ ಅಪ್ ಡೇಟ್ ಮಾಡದಿದ್ದರೆ ಕೆಲಸ ಮಾಡುವುದಿಲ್ಲ. ಇನ್ನು ಸಂಬಂಧಗಳನ್ನು ಅಪ್‌ಡೇಟ್ ಮಾಡಿಕೊಳ್ಳದೇ ಇದ್ದರೆ ಜೀವನ ನಡೆಯುವುದಾದರೂ ಹೇಗೆ.. ಆಧುನಿಕ ಕಾಲ ಇದು. ಎರಡು ಕೈಯಲ್ಲೂ ಎರಡೆರಡು ಗ್ಯಾಜೆಟ್‌ಗಳಿರುತ್ತವೆ. ಆ ಕಡೆ ಕಿಂಡಲ್, ಈ ಕಡೆ ಮೊಬೈಲ್. ಒಂದರಲ್ಲಿ ಬುಕ್ಕು. ಇನ್ನೊಂದರಲ್ಲಿ ಫೇಸ್‌ಬುಕ್ಕು. ತಪ್ಪಿದರೆ ವಾಟ್ಸಪ್ಪು. ಕಾಲಘಟ್ಟ ಹೀಗಿರುವಾಗ ಚೆನ್ನಾಗಿದ್ದ ಸಂಬಂಧಗಳು ಇದ್ದಕ್ಕಿದ್ದಂತೆ ಮುರಿದುಬೀಳುತ್ತವೆ.

ಶುರುವೇ ಆಗದ ಸಂಬಂಧ ಸತ್ತು ಹೋಗುತ್ತದೆ. ಇಪ್ಪತ್ತೈದು ವರ್ಷ ಜೊತೆಗಿದ್ದ ಜೀವಗಳು ವಾಟ್ಸಪ್ ಚಾಟ್‌ಗನ್ನು ನೋಡಿಕೊಂಡು ಪರಸ್ಪರ ದೂರವಾಗುತ್ತವೆ. ಅಜ್ಜಿಯಂದಿರು ಹೇಳುವ ಹಾಗೆ, ಈ ಕಾಲ ಸರಿ ಇಲ್ಲ ಅನ್ನುವುದಲ್ಲ. ನಾವು ಸರಿ ಇಲ್ಲ. ಮತ್ತೆ ಸರಿಯಾಗುವುದು ಹೇಗೆ? ಅದಕ್ಕೆ ಮನಃಶಾಸ್ತ್ರಜ್ಞರು ಒಂದು ಐಡಿಯಾ ಕಂಡುಹಿಡಿದಿದ್ದಾರೆ. ಅದರ ಹೆಸರು 20 ಮಿನಿಟ್ ಥೆರಪಿ. ಆ ಇಪ್ಪತ್ತು ನಿಮಿಷಗಳು

ಸಂಬಂಧಗಳಲ್ಲಿ ಪ್ರೀತಿ ಮತ್ತು ಸಂಬಂಧವನ್ನು ಉಳಿಸುವ ಕಡೆಗೆ ಸ್ವಲ್ಪವಾದರೂ ಪರಿಶ್ರಮ ಇರದೇ ಹೋದರೆ ಸಂಬಂಧ ಉಳಿಯುವುದಿಲ್ಲ. ಇದು ನಾನಾ ಬಗೆಯ ಸಂಬಂಧಗಳನ್ನು ಕಣ್ಣಾರೆ ಕಂಡ ಮನಃಶಾಸ್ತ್ರಜ್ಞರು ಕಂಡುಕೊಂಡ ಸತ್ಯ. ಸಂಬಂಧ ಯಾವುದೇ ಆಗಿರಲಿ. ದಿನಕ್ಕೆ ಇಪ್ಪತ್ತು ನಿಮಿಷ ಅವರ ಜೊತೆ ಇರುವುದು. ಜೊತೆಗೇ ಇರುವುದಾದರೆ ಮೊಬೈಲ್‌ಗಳನ್ನು, ಗ್ಯಾಜೆಟ್‌ಗಳನ್ನು ಆಫ್ ಮಾಡಿ ಸಂಗಾತಿ ಜೊತೆ ಇಪ್ಪತ್ತು ನಿಮಿಷ ಇರಬೇಕು.

ಫೋಕಸ್ ಒಂದೇ. ಅದು ಜೊತೆಗಿರುವ ಜೀವ. ಇತ್ತೀಚೆಗೊಬ್ಬ ಹುಡುಗ ಕೆಲಸ ಸಿಕ್ಕಿತು ಅಂತ ದಕ್ಷಿಣ ಆಫ್ರಿಕಾಗೆ ಹೋದ. ಒಳ್ಳೆ ಕೆಲಸ, ಕೈತುಂಬಾ ಸಂಬಳ. ಆರಾಮಾಗಿ ಮಾತನಾಡುತ್ತಿದ್ದವನು ಕೆಲವು ವಾರಗಳ ನಂತರ ವಿಚಿತ್ರವಾಗಿ ವರ್ತಿಸತೊಡಗಿದ. ಅಪ್ಪ ಅಮ್ಮನಿಗೆ ಆತಂಕವಾಗತೊಡಗಿತು. ಯಾಕೋ ಹೀಗಿದ್ದೀಯಾ ಅಂತ ಕೇಳಿದರೆ ಅವನು ನೀವು ನನ್ನನ್ನು ನೆಗ್ಲೆಕ್ಟ್ ಮಾಡುತ್ತಿದ್ದೀರಿ ಅಂತ ಕಣ್ಣೀರು ಹಾಕಿದ.

ವಿಷಯ ಏನಾಗಿತ್ತು ಅಂದ್ರೆ ಅವನು ಕೆಲಸಕ್ಕೆ ಹೋಗಿದ್ದಾನೆ, ಅಲ್ಲಿ ಬ್ಯುಸಿ ಇರುತ್ತಾನೆ ಅನ್ನುವ ಕಾರಣದಿಂದ ಅಪ್ಪ, ಅಮ್ಮ ದಿನಾ ಫೋನ್ ಮಾಡುವುದನ್ನು ನಿಲ್ಲಿಸಿದ್ದರು. ವಾರಕ್ಕೆರಡು ಸಲ ಫೋನ್ ಮಾಡುತ್ತಿದ್ದರು. ಇದರಿಂದ ಅವನು ಬೇಜಾರಾಗಿದ್ದ. ಅವನಿಗೆ ಮತ್ತು ಅವನ ಕುಟುಂಬಕ್ಕೆ 20 ಮಿನಿಟ್ ಥೆರಪಿ ಬೇಕಿತ್ತು. ಅದನ್ನು ನಿಧಾನಕ್ಕೆ 10 ಮಿನಿಟ್‌ಗೆ ಇಳಿಸಿದರೂ ಎಲ್ಲವೂ ಸರಿ ಇರುತ್ತದೆ. ಪ್ರೀತಿ ಶೆಣೈ ಐಡಿಯಾ ತನ್ನ ಸಂಗಾತಿ ತನ್ನನ್ನು ಗಮನಿಸುವುದಿಲ್ಲ ಅನ್ನುವುದು ಬಹುತೇಕರ ದೂರು. ತಾನು ಮನೆಗೆ ಬಂದರೂ ವಾಟ್ಸಪ್ಪಲ್ಲೇ ಮುಳುಗಿರುತ್ತಾಳೆ ಅಂತ ಗಂಡ ಎಂದರೆ ಅವರಿಗೆ ಕೆಲಸವೇ ಮುಖ್ಯ ಅಂತ ಪತ್ನಿ ಹೇಳುತ್ತಾಳೆ. ಯಾವತ್ತಿನಿಂದಲೂ ಇರುವ ಈ ಸಮಸ್ಯೆ ಈಗ ದೊಡ್ಡದಾಗಿದೆ.

ಲೇಖಕಿ ಪ್ರೀತಿ ಶೆಣೈ ಅದಕ್ಕೊಂದು ಪರಿಹಾರ ಸೂಚಿಸುತ್ತಾರೆ. ಅವರ ಪತಿ ಆಹಾರ ಪ್ರಿಯ. ಈಕೆಯೋ ಫಿಟ್‌ನೆಸ್ ಆಸಕ್ತಿ ಇರುವವರು. ಇವರಿಗೆ ನಾಯಿ, ಬೆಕ್ಕು ಅಂದ್ರೆ ಪ್ರಾಣ. ಅವನು ಅವುಗಳು ಹತ್ತಿರ ಬಂದರೆ ಎದ್ದು ಹೋಗುವ ಮನಸ್ಸಿನವ. ಈಕೆ ಉತ್ತರ ಧ್ರುವ, ಆಕೆ ದಕ್ಷಿಣ ಧ್ರುವ. ಒಬ್ಬರಿಗೊಬ್ಬರು ಆಗಿ ಬರುವುದಿಲ್ಲ ಅಂತ ದೂರಾದರೆ ಪ್ರಪಂಚದಲ್ಲಿ ಅದೆಷ್ಟೋ ಜೋಡಿಗಳು ದೂರಾಗಬೇಕಿತ್ತು. ಅವರೊಂದು ಐಡಿಯಾ ಮಾಡುತ್ತಾರೆ. ತಮ್ಮಿಬ್ಬರಿಗೂ ಇರುವ ಸಮಾನ ಆಸಕ್ತಿ ಯಾವುದು ಅಂತ ಕಂಡು ಹಿಡಿಯುತ್ತಾರೆ. ಅದರ ನಂತರ ಅವರಿಬ್ಬರು ಹ್ಯಾಪಿ.

ಅವರಿಬ್ಬರಿಗೂ ಟೆರೇಸ್ ಗಾರ್ಡನಿಂಗ್ ಅಂದ್ರೆ ಇಷ್ಟ. ಸಮಯ ಸಿಕ್ಕಾಗೆಲ್ಲಾ ಇಬ್ಬರೂ ಟೆರೇಸ್‌ಗೆ ಹೋಗಿ ಗಾರ್ಡನಿಂಗ್ ಕೆಲಸದಲ್ಲಿ ಮುಳುಗಿಹೋಗುತ್ತಾರೆ. ಪುಸ್ತಕ ಓದುವುದು ಅಂದ್ರೂ ಇಬ್ಬರಿಗೂ ಭಾರಿ ಪ್ರೀತಿ. ಹಾಗಾಗಿ ಜೊತೆಗೇ ಓದುತ್ತಾರೆ. ಸಂಬಂಧಗಳಿಗೆ ಹೀಗೆ ಆಗಾಗ ಸಾಣೆ ಹಿಡಿಯಬೇಕು.

ಸ್ವಲ್ಪ ಕಷ್ಟ ಪಡಿ ಪ್ಲೀಸ್

ಬಹುತೇಕರ ಸಮಸ್ಯೆ ಎಂದರೆ ಸಂಬಂಧಗಳನ್ನು ಟೇಕನ್ ಫಾರ್ ಗ್ರಾಂಟೆಡ್ ಆಗಿ ತೆಗೆದುಕೊಳ್ಳುವುದು. ಇರ್ತಾರೆ ಬಿಡು ಅನ್ನೋ ಮನೋಭಾವ. ಜಗಳ ಆದರೆ ಅವರು ತಿದ್ದಿಕೊಳ್ಳಬೇಕು ಎಂಬ ಹಠ. ಒಮ್ಮೊಮ್ಮೆ ನೀವು ಬದಲಾಗುವ ಬದಲು ನಾವು ಬದಲಾದರೆ ಹೇಗೆ ಅಂತ ಯೋಚಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಾವು ಬದಲಾವುಗುವುದು ಕಷ್ಟ. ನಮ್ಮನ್ನು ನಾವು ತಿದ್ದಿಕೊಂಡರೆ ಇನ್ನೊಬ್ಬರು ತಾನೇ ತಾನಾಗಿ ತಿದ್ದಿಕೊಳ್ಳಬಹುದು. ಅಲ್ಲದೇ ಟೇಕನ್ ಫಾರ್ ಗ್ರಾಂಟೆಡ್ ಥರ ತೆಗೆದುಕೊಂಡಾಗ ಸಂಬಂಧ ಅಪ್‌ಡೇಟ್ ಆಗುವುದಿಲ್ಲ. ಅಪ್‌ಡೇಟ್ ಮಾಡುವುದಕ್ಕೆ ಸಮಯ ನೀಡಬೇಕು.

ಕಾಳಜಿಯಿಂದ ಸಂಬಂಧಗಳನ್ನು ಸೇರಿಕೊಂಡಿರುವ ಜಂಕ್‌ಗಳನ್ನು ಡಿಲೀಟ್ ಮಾಡಬೇಕು. ಮಾತಾಡುತ್ತಾ ಮಾತಾಡುತ್ತಾ ಪರಸ್ಪರ ಆದ ತಪ್ಪುಗಳನ್ನು ತಿದ್ದಿಕೊಂಡು ಹೊಸ ಫೀಚರ್‌ಗಳನ್ನು, ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸ್ವಲ್ಪ ಕಷ್ಟವಾಗಬಹುದು. ಆದರೆ ಕಷ್ಟ ಪಡಬೇಕು. ಏನೇನಕ್ಕೋ ಕಷ್ಟ ಪಡ್ತೀವಿ. ಮನೆಯಿಂದ ಆಫೀಸಿಗೆ ಟ್ರಾಫಿಕ್ಕಲ್ಲಿ ಒದ್ದಾಡಿಕೊಂಡು ಹೋಗುತ್ತೇವೆ. ಇಷ್ಟವಿಲ್ಲದಿದ್ದರೂ ಕೆಲವು ಕಷ್ಟಗಳನ್ನು ಆಫೀಸಿನ ಕಾರಣಕ್ಕೆ ಕಷ್ಟ ಪಟ್ಟು ಮಾಡುತ್ತೇವೆ. ಅಂಥದ್ದರಲ್ಲಿ ಜೀವನಪೂರ್ತಿ ಜೊತೆಗಿರುವವರ ಖುಷಿಗೆ, ನಗುವಿಗೆ, ಪ್ರೀತಿಗೆ, ನಿಮ್ಮ ಸಮಾಧಾನಕ್ಕೆ ಸ್ವಲ್ಪ ಕಷ್ಟ ಪಟ್ಟರೆ ತಪ್ಪೇ ಇಲ್ಲ.

ಇವತ್ತಿನಿಂದ 20 ಮಿನಿಟ್ ಥೆರಪಿ ಅಭ್ಯಾಸ ಆಗಲಿ. ಬೀ ಹ್ಯಾಪಿ ಆಲ್ವೇಸ್. 

-ಡಾ. ಸುಮಲತಾ ಜೋಶಿ