ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಅಪ್ಪುಗೆಯೂ ಒಂದು. ಸ್ನೇಹಿತರು, ಆತ್ಮೀಯರು ಸಿಕ್ಕಾಗ ಅವರನ್ನು ಅಪ್ಪಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ, ಕೆಲವರಿಗೆ ಅಪ್ಪುಗೆ ಎಂದ್ರೆ ಅಲರ್ಜಿ. ಎಲ್ಲರ ಮುಂದೆ ಅಪ್ಪಿಕೊಳ್ಳುವುದು ಎಂದರೆ ಏನು ಎಂಬುದು ಇಂಥವರ ಪ್ರಶ್ನೆ. ನಗು ಬೀರಿದರೆ, ಶೆಕ್ಹ್ಯಾಂಡ್ ನೀಡಿದ್ರೆ, ಯೋಗಕ್ಷೇಮಾದ ನಾಲ್ಕು ಮಾತನಾಡಿದರೆ ಸಾಕು, ಅಪ್ಪುಗೆ ಏಕೆ? ಅದರಿಂದ ಏನು ಪ್ರಯೋಜನವಿದೆ? ಎಂದು ವಾದಿಸುವವರಿಗೆ ಅಪ್ಪುಗೆಯ ಮ್ಯಾಜಿಕಲ್ ಪವರ್ ಬಗ್ಗೆ ತಿಳಿದಿಲ್ಲ. ಹೌದು, ಒಂದು ಅಪ್ಪುಗೆಯಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

1.ಮೂಡ್‍ಗೆ ಬೂಸ್ಟ್: ನಮ್ಮ ಆತ್ಮೀಯರನ್ನು, ಪ್ರೀತಿಪಾತ್ರರನ್ನು ತಬ್ಬಿಕೊಂಡ ತಕ್ಷಣ ಮನಸ್ಸು ಹಗುರವಾಗುತ್ತದೆ. ನೆಮ್ಮದಿಯ ಅನುಭವವಾಗುತ್ತದೆ. ಮನಸ್ಸಿಗೆ ಉಲ್ಲಾಸ, ಉತ್ಸಾಹ ಸಿಗುತ್ತದೆ. ನಿಮ್ಮ ಮನಸ್ಸಿಗೆ ನೋವಾದಾಗ ಆತ್ಮೀಯರನ್ನು ತಬ್ಬಿಕೊಂಡು ಜೋರಾಗಿ ಅತ್ತು ಬಿಡಬೇಕು ಎಂದೆನಿಸುತ್ತದೆ. ಅಷ್ಟೇ ಅಲ್ಲ, ಆತ್ಮೀಯರನ್ನು ಅಪ್ಪಿಕೊಂಡಾಗಲೇ ನಿಮ್ಮೆಲ್ಲ ದುಗುಡ-ದುಮ್ಮಾನಗಳು ಕರಗಿ ನೀರಾಗುತ್ತವೆ. ಇಷ್ಟೊತ್ತು ಮನಸ್ಸಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗುತ್ತದೆ. ಅಪ್ಪುಗೆ ತೆಗೆದುಕೊಂಡ ವ್ಯಕ್ತಿಗಿಂತ ಅಪ್ಪುಗೆ ನೀಡಿದ ವ್ಯಕ್ತಿಗೆ ಹೆಚ್ಚಿನ ಪ್ರಯೋಜನಗಳಾಗುತ್ತವೆ ಎಂಬುದು ತಜ್ಞರ ಅಭಿಮತ. ಆದರೆ, ಈ ಇಬ್ಬರೂ ವ್ಯಕ್ತಿಗಳು ಆತ್ಮೀಯರಾಗಿದ್ದಾಗ ಮಾತ್ರ ಇಂಥ ಅನುಭವವಾಗಲು ಸಾಧ್ಯ. ನಾವು ನಮಗೆ ಇಷ್ಟವಿಲ್ಲದ ವ್ಯಕ್ತಿಯನ್ನು ಪರಿಸ್ಥಿತಿಯ ಅನಿವಾರ್ಯಕ್ಕೆ ಕಟ್ಟುಬಿದ್ದು ಅಪ್ಪಿಕೊಳ್ಳುವುದು ಸೌಜನ್ಯಕ್ಕಾಗಿ ಮಾತ್ರ. ಇಂಥ ಅಪ್ಪುಗೆಯಿಂದ ಪ್ರಯೋಜನ ನಿರೀಕ್ಷಿಸಿದರೆ ತಪ್ಪಾಗುತ್ತದೆ.

ಇದು ಮಕ್ಕಳಾಟವಲ್ಲ, ಕೊಬ್ಬು ಕರಗಿಸುವ ವರ್ಕ್ ಔಟ್

2. ಒತ್ತಡ ಮಂಗಮಾಯ: ನಿಮ್ಮಿಷ್ಟದ ವ್ಯಕ್ತಿಯನ್ನು ಅಪ್ಪಿಕೊಂಡ ತಕ್ಷಣ ನಿಮ್ಮ ನರವ್ಯೂಹಕ್ಕೆ ಹೊಸ ಚೈತನ್ಯ ದೊರಕುತ್ತದೆ. ಅದು ಒತ್ತಡವನ್ನು ತಗ್ಗಿಸಿಕೊಳ್ಳುವಂತೆ ಮಿದುಳಿಗೆ ಸಂಜ್ಞೆ ಕಳುಹಿಸುತ್ತದೆ. ನಿಮ್ಮ ಚರ್ಮ ಮತ್ತು ದೇಹ ಕೂಡ ಇದರಿಂದ ಉತ್ತೇಜನ ಪಡೆಯುತ್ತದೆ. ದೇಹದ ಎಲ್ಲ ಭಾಗಗಳಿಗೂ ಈ ಸಂದೇಶ ರವಾನೆಯಾಗುವ ಮೂಲಕ ದೇಹ-ಮನಸ್ಸಿಗೆ ಉಲ್ಲಾಸ ಮೂಡಿಸುತ್ತದೆ.

3.ಸುಖ ನಿದ್ರೆ ಒಲಿಯುತ್ತದೆ: ಮನಸ್ಸು ಒತ್ತಡದಿಂದ ಮುಕ್ತವಾಗಿದ್ದಾಗ ಕಣ್ರೆಪ್ಪೆಗಳು ನಮಗೇ ತಿಳಿಯದಂತೆ ಭಾರವಾಗಿ ನಿದ್ರೆಗೆ ಜಾರುತ್ತವೆ. ಅಪ್ಪುಗೆ ನಿಮ್ಮೊಳಗಿನ ಒತ್ತಡ ತಗ್ಗಿಸುವ ಮೂಲಕ ಮನಸ್ಸಿಗೆ ನೆಮ್ಮದಿ ಒದಗಿಸುವ ಜೊತೆಗೆ ಸುಖ ನಿದ್ರೆಯನ್ನೂ ತರುತ್ತದೆ. ರಾತ್ರಿ ಮಲಗುವ ಮುನ್ನ 10 ನಿಮಿಷ ನಿಮ್ಮ ಪ್ರೀತಿಪಾತ್ರರನ್ನು ಮುದ್ದಿಸಿದರೆ ಸಾಕಂತೆ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದಂತೆ. ಅಂದರೆ ಪ್ರೀತಿಯ ಸ್ಪರ್ಶ ಮನಸ್ಸಿಗೆ ಹಿತ ನೀಡುವ ಮೂಲಕ ಎಲ್ಲ ನೋವು, ಆತಂಕ ಹಾಗೂ ಒತ್ತಡವನ್ನು ಕಳೆಯುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ನಿದ್ರೆ ಬಾರದಿದ್ದಾಗ ನಿಮ್ಮ ಪ್ರೀತಿಪಾತ್ರರನ್ನು ಒಮ್ಮೆ ಅಪ್ಪಿಕೊಂಡು ಬಿಡಿ ಅಷ್ಟೆ. ನಿಮ್ಮನೆಯಲ್ಲಿ ಮಕ್ಕಳಿದ್ದರೆ ಗಮನಿಸಿ ನೋಡಿ, ಪರೀಕ್ಷೆ ಸಮಯದಲ್ಲಿ ಅಮ್ಮನ ಜೊತೆಗೆ ಮಲಗಲು ಇಚ್ಛಿಸುತ್ತಾರೆ. ಇದಕ್ಕೆ ಕಾರಣ ಅಮ್ಮನನ್ನು ತಬ್ಬಿ ಹಿಡಿದು ಮಲಗುವುದರಿಂದ ಅವರ ಮನಸ್ಸಿನಲ್ಲಿ ಮೂಡಿರುವ ಆತಂಕ, ಒತ್ತಡಗಳೆಲ್ಲವೂ ಮಾಯವಾಗಿ ನೆಮ್ಮದಿಯ ನಿದ್ರೆ ಬರುತ್ತದೆ. ಆದರೆ,
ಮಕ್ಕಳಿಗೆ ಇದನ್ನೆಲ್ಲ ವಿವರಿಸಲು ಬರುವುದಿಲ್ಲವಷ್ಟೆ. 

ಮಾನಸಿಕ ಆರೋಗ್ಯ ಸರಿ ಇದ್ಯಾ?

4.ಸಂತಸದ ಹಾರ್ಮೋನ್ ಸ್ರವಿಕೆಯಲ್ಲಿ ಹೆಚ್ಚಳ: ಖುಷಿ ಹಾಗೂ ಪ್ರೀತಿ ತುಂಬಿದ ಸ್ಪರ್ಶ ಸೆರೊಟೊನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಸಂತಸಕ್ಕೆ ಕಾರಣವಾಗುವ ಹಾರ್ಮೋನ್ ಆಗಿದ್ದು, ಖಿನ್ನತೆಯನ್ನು ಹೊಡೆದೋಡಿಸುವ ನೈಸರ್ಗಿಕ ಮದ್ದಾಗಿದೆ. ಪ್ರೀತಿ ಹಾರ್ಮೋನ್ ಅಕ್ಸಿಟೋಸಿನ್ ಉತ್ಪಾದನೆಯನ್ನು ಕೂಡ ಇದು ಹೆಚ್ಚಿಸುತ್ತದೆ. ಸೈಕಾಲಜಿಕಲ್ ಸೈನ್ಸ್ ಜರ್ನಲ್‍ನಲ್ಲಿ 2017ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಆಕ್ಸಿಟೋಸಿನ್ ಹೆಚ್ಚಿನ ಮಟ್ಟದಲ್ಲಿರುವುದರಿಂದ ಸಂಗಾತಿಯ ಪ್ರತಿಕ್ರಿಯೆ, ಕೃತಜ್ಞತೆ ಹಾಗೂ ಪ್ರೀತಿ ಹೆಚ್ಚುತ್ತದೆ ಅಪ್ಪುಗೆಯಿಂದ ಸ್ಪರ್ಶದ ಜೊತೆಗೆ ಪ್ರೀತಿಯೂ ತುಂಬಿರುವ ಕಾರಣ ಸಂತಸ ಹೆಚ್ಚುತ್ತದೆ.

5.ರೋಗನಿರೋಧಕ ಶಕ್ತಿ ಹೆಚ್ಚಳ: ಅಪ್ಪುಗೆಯಿಂದ ನರವ್ಯೂಹ ಶಾಂತಗೊಳ್ಳುತ್ತದೆ. ಹೃದಯದ ಬಡಿತ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ, ರಕ್ತ ಚೆನ್ನಾಗಿ ಪಂಪ್ ಆಗುತ್ತಿರುತ್ತದೆ. ಇವೆಲ್ಲದರ ಪರಿಣಾಮವಾಗಿ ದೇಹದ ಪ್ರತಿರಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪ್ರಶಾಂತವಾದ ಮಿದುಳು ರೋಗಗಳು ಬಾರದಂತೆ ತಡೆಯುತ್ತದೆ ಹಾಗೂ ಶೀತದ ಪರಿಣಾಮವನ್ನು ಕೂಡ ತಗ್ಗಿಸುತ್ತದೆ ಎನ್ನುತ್ತದೆ ವೈದ್ಯವಿಜ್ಞಾನ. ಹೀಗಾಗಿ ಅಪ್ಪುಗೆಯಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ.