ಈ ಊರಲ್ಲಿ ಚಪ್ಪಲಿಗಳು

Hand made slippers in Gokak taluk
Highlights

ಅಲ್ಲಿರುವ ಸುಮಾರು ಇಪ್ಪತ್ತೈದು ಮನೆಗಳಲ್ಲೂ ಬೆಳಿಗ್ಗೆಯಾಗುತ್ತಿದ್ದಂತೆ ಕತ್ತರಿಸುವ, ಹೊಲಿಯುವ, ಬಡಿಯುವ ಶಬ್ದಗಳು. ಹೆಂಗಸರು ಚರ್ಮ ಹದಮಾಡುತ್ತಿದ್ದರೆ, ಗಂಡಸರದು ಚರ್ಮ ತರುವ, ಮಾರುವ ಕೆಲಸ. ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಸಮಗಾರಹಳ್ಳಿಯಲ್ಲಿ ಇದು ನಿತ್ಯದ ದೃಶ್ಯ. ಚರ್ಮದ ಚಪ್ಪಲಿ ತಯಾರಿ ಇವರು ಹೊಟ್ಟೆಪಾಡಿಗಾಗಿ ನೆಚ್ಚಿಕೊಂಡ ಕಸುಬು.

ಮಹಿಳೆಯರು, ಪುರುಷರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬ್ಯಾಂಕ್‌ನಿಂದ ಸಾಲ ಪಡೆದು ತಮ್ಮ ಕಾಯಕಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಇಲ್ಲಿ ಪಾದರಕ್ಷೆ ತಯಾರಿಗೆ ಯಂತ್ರಗಳ ಬಳಕೆಯಾಗುವುದಿಲ್ಲ. ಎಲ್ಲವನ್ನು ರಟ್ಟೆ ಬಲದಿಂದಲೆ ಮಾಡಿ ಮುಗಿಸಬೇಕು. ವಿಶಿಷ್ಟ ಚಪ್ಪಲಿಗಳು ಇಲ್ಲಿ ತಯಾರಾಗುತ್ತವೆ.

ಕುರುಬರ ಚಪ್ಪಲಿಗಳು :

ಕುರುಬರು ಸದಾ ಕಾಡು, ಮುಳ್ಳಿನ ನಡುವೆ ತಿರುಗಾಡುವುದರಿಂದ ಇಂದಿಗೂ ಚರ್ಮದ ಚಪ್ಪಲಿಯನ್ನೇ ಧರಿಸುವುದು. ಇವನ್ನು ತೊಡುವುದರಿಂದ ದೇಹ ತಂಪಾಗಿ, ಕಾಲು ಒಡೆಯುವುದಿಲ್ಲವಂತೆ. ಇವರು ಮೊದಲಾಗಿ ತಿಳಿಸಿ ಬೇಕಾದ ರೀತಿಯಲ್ಲಿ ಚಪ್ಪಲಿಗಳನ್ನು ಮಾಡಿಸುತ್ತಾರೆ. ಎಮ್ಮೆ ಚರ್ಮದಿಂದ ತಯಾರಿಸುವ ಈ ಪಾದರಕ್ಷೆ ದಪ್ಪವಾಗಿದ್ದು ಎರಡರಿಂದ ಮೂರು ಕೆಜಿ ತೂಗುತ್ತದೆ. ನಾಲ್ಕೈದು ವರ್ಷಗಳ ಕಾಲ ಬಾಳಿಕೆ ಬರುವುದು ಇದರ ವಿಶೇಷತೆ. ಒಂದು ದಿನ ಮೂರು ಜನ ಕೆಲಸದಲ್ಲಿ ತೊಡಗಿದರೆ ಹತ್ತು ಜೊತೆ ಚಪ್ಪಲಿಗಳನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಒಂದು ಜೊತೆ ರೂ. ೪೦೦ ದರವಿರುತ್ತದೆ. ಹತ್ತು ಜೊತೆಯಿಂದ ಕಚ್ಚಾವಸ್ತು ಖರ್ಚು ಬಿಟ್ಟು ಒಂದುವರೆ ಸಾವಿರ ರೂಪಾಯಿ ಕೈ ಸೇರುತ್ತದೆ. ಗಂಗಾವತಿ, ಬಾಗಲಕೋಟೆಗೆ ಇಲ್ಲಿಂದ ಪೂರೈಕೆಯಾಗುತ್ತದೆ. ಚರ್ಮದ ಚಪ್ಪಲಿಗಳನ್ನು ಹೆಚ್ಚಾಗಿ ನೀರಿಗೆ ಉಪಯೋಗಿಸಬಾರದು ಎಂಬುವುದು ಇವರ ಕಿವಿಮಾತು. ಕೆಲವೊಮ್ಮೆ ದೇವರಿಗೆ ಹರಕೆ ಹೊತ್ತು ಚಪ್ಪಲಿ ಒಪ್ಪಿಸುವವರು ತಯಾರಿಸಿಕೊಡುವಂತೆ ಹೇಳುತ್ತಾರೆ. ಅದರ ಬೆಲೆ ರೂ. ೧೦ ಸಾವಿರದಿಂದ ೨೦ ಸಾವಿರದವರೆಗೆ ಇರುತ್ತದೆ.

ಸಾಮಾನ್ಯರು ಧರಿಸುವ ಚರ್ಮದ ಚಪ್ಪಲಿಗಳು:

ಕೆಲವು ಮಂದಿ ಸಾಮಾನ್ಯರು ಧರಿಸಬಹುದಾದಂತಹ ಚರ್ಮದ ಚಪ್ಪಲಿಗಳನ್ನಷ್ಟೇ ತಯಾರಿಸುತ್ತಾರೆ. ಇಲ್ಲಿನ ಹೊಳ್ಳಿಯಪ್ಪರವರದು ಸಣ್ಣಂದಿನಿಂದ ಇದೇ ಕಾಯಕ. ಒಂದು ದಿನಕ್ಕೆ ಎರಡು ಜೊತೆ ಪುರುಷರ ಚಪ್ಪಲಿಗಳನ್ನು ತಯಾರಿಸುತ್ತಾರೆ. ಇದಕ್ಕೆ ರೂ. ೯೦೦ ಖರ್ಚು ತಗಲುತ್ತದೆಯಂತೆ. ಗೋಕಾಕ್ ಸಂತೆಗೆ ಇವರು ಮಾರಾಟ ಮಾಡುತ್ತಿದ್ದು ಒಂದು ಜೊತೆ ತಯಾರಿಸಿದರೆ ರೂ. ೧೫೦ ಲಾಭ ಕೈ ಸೇರುತ್ತದೆ. ಸಂಪೂರ್ಣವಾಗಿ ಕೈ ಹೊಲಿಗೆಯ ಮೂಲಕ ತಯಾರಿಸುವ ಚರ್ಮದ ಚಪ್ಪಲಿಗಳು ಎರಡು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಇದನ್ನು ಧರಿಸುವುದರಿಂದ ಅರೋಗ್ಯಕ್ಕೂ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಕೂಡಾ ಹೌದು. ಆದ್ದರಿಂದ ಸಾಕಷ್ಟು ಬೇಡಿಕೆಯಿದೆ ಎನ್ನುವುದು ಹೊಳ್ಳಿಯಪ್ಪರವರ ಅನುಭವದ ಮಾತು 

loader