ಕೂದಲಿನ ಸಮಸ್ಯೆಗಳಿಗೆ ಇಲ್ಲಿವೆ ಆಯುರ್ವೇದಿಕ್ ಟಿಪ್ಸ್
ಕೂದಲುದುರುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಹಣ ವ್ಯಯಿಸದೇ ನೀವೇ ಮನೆಯಲ್ಲಿ ತಯಾರಿಸಬಹುದಾದ ಸರಳವಾದ ಆಯುರ್ವೇದಿಕ್ ಟಿಪ್ಸ್'ಗಳಿವೆ. ಇದು ಆರೋಗ್ಯದ ಮೇಲೂ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಪ್ರತಿ ಮಹಿಳೆ ತನ್ನ ಕೂದಲು ನೀಳವಾಗಿರಬೇಕೆಂದು ಬಯಸುತ್ತಾಳೆ. ಆದರೆ ಇಂದಿನ ಫ್ಯಾಶನ್'ಗಳಿಂದಾಗಿ ಕೂದಲುದುರುವಿಕೆಯು ಹಲವರ ಸಮಸ್ಯೆಯಾಗಿದೆ. ಪುರುಷರೂ ಇದರಿಂದ ಹೊರತಾಗಿಲ್ಲ. ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟುವುದು? ಬೋಳಾಗಿ ಕಾಣುವ ತಲೆಯಲ್ಲಿ ಹೇಗೆ ಕೂದಲು ಕಾಣಿಸುವಂತೆ ಮಾಡುವುದು? ಎಂಬುದೇ ಹಲವರ ಮುಂದಿರುವ ಯಕ್ಷ ಪ್ರಶ್ನೆ. ಇನ್ನು ಇದರ ಪರಿಹಾರಕ್ಕಾಗಿ ಹಲವರು ಮಾರುಕಟ್ಟೆಯಲ್ಲಿ ಲಭ್ಯವಾಗುವ ಔಷಧಿಗಳ ಮೊರೆ ಹೋಗುತ್ತಾರೆ. ಇದರಿಂದ ಹಣ ವ್ಯಯಿಸುವುದಲ್ಲದೇ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಕೂದಲುದುರುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಹಣ ವ್ಯಯಿಸದೇ ನೀವೇ ಮನೆಯಲ್ಲಿ ತಯಾರಿಸಬಹುದಾದ ಸರಳವಾದ ಆಯುರ್ವೇದಿಕ್ ಟಿಪ್ಸ್'ಗಳಿವೆ. ಇದು ಆರೋಗ್ಯದ ಮೇಲೂ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಅಲೂವೆರಾ: ಅಲೋವೆರಾ ಕೂದಲುದುರುವಿಕೆಯನ್ನು ತಡೆಗಟ್ಟುವುದರೊಂದಿಗೆ, ಹೊಸ ಕೂದಲು ಬೆಳೆಯಲು ಉತ್ತಮ.
ಕಪ್'ನಲ್ಲಿ ಮೂರನೇ ಒಂದು ಭಾಗದಷ್ಟು ಅಲೋವೆರಾ ದ್ರಾವಣಕ್ಕೆ ಸ್ವಲ್ಪ ಜೇರಿಗೆಯನ್ನು ಬೆರೆಸಿ ಒಂದು ತಾಸಿನ ಬಳಿಕ ತಲೆಗೆ ಹಚ್ಚಿಕೊಳ್ಳಿ. ಈ ದ್ರಾವಣವನ್ನು ದಿನಕ್ಕೆ ಮೂರು ಬಾರಿಯಂತೆ ಮೂರು ತಿಂಗಳು ಹಚ್ಚಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ಉತ್ಕರ್ಷಣ(Anti-oxidants), ಖನಿಜಾಂಶ, ಜೀವಸತ್ವಗಳು ಹಾಗೂ ವಿಟಮಿನ್ ಸಿ ಅಂಶ ಅಧಿಕವಾಗಿರುವುದರಿಂದ ಇದು ಕೂದಲಿಗೆ ಉತ್ತಮ ಪೋಷಕಾಂಶವಾಗಿದೆ. ಇದು ಕೂದಲನ್ನು ಆರೋಗ್ಯಯುತ ಹಾಗೂ ಬಲಶಾಲಿಯಾಗಿಸುವುದರೊಂದಿಗೆ ಕೂದಲುದುರುವಿಕೆಯನ್ನು ತಡೆಗಟ್ಟಿ ಹೊಸ ಕೂದಲು ಬೆಳೆಯುವಂತೆ ಮಾಡುತ್ತದೆ. ಪ್ರತಿದಿನ ನೆಲ್ಲಿಕಾಯಿ ರಸ ಸೇವಿಸುವುದರಿಂದ ತಲೆಹೊಟ್ಟಿನ ಸಮಸ್ಯೆಯನ್ನೂ ನಿವಾರಿಸಬಹುದಾಗಿದೆ.
ನೆಲ್ಲಿಕಾಯಿ ಪುಡಿ, ಗೋರಂಟಿ ಪುಡಿ, ಬ್ರಾಹ್ಮಿ ಪುಡಿ ಇವು ಮೂರನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮೊಸರಿನೊಂದಿಗೆ ಬೆರೆಸಿ ಗಟ್ಟಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿ. 2 ತಾಸು ಒಣಗಲು ಬಿಟ್ಟ ಬಳಿಕ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ. ಬೇಕಾದಲ್ಲಿ 20 ನಿಮಿಷಗಳ ಬಳಿಕ ನಿಂಬೆ ಹಣ್ಣು ಹಾಗೂ ನೆಲ್ಲಿ ಕಾಯಿಯ ರಸವನ್ನು ನೆತ್ತಿಗೆ ಹಚ್ಚಬಹುದು. ಇದು ಕೂದಲಿನ ಬುಡವನ್ನು ಶಕ್ತಿಶಾಲಿಯಾಗಿಸುತ್ತದೆ.
ಮೆಂತ್ಯ: ಎರಡು ಚಮಚ ಮೆಂತೆ, ಎರಡು ಚಮಚ ಹೆಸರುಕಾಳು, ಮೂರು ಚಮಚ ಸೀಗೆ ಕಾಯಿ, ಒಂದು ನಿಂಬೆ ಹಣ್ಣಿನ ರಸ ಹಾಗೂ 15 ಕರಿ ಬೇವಿನ ಸೊಪ್ಪು, ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಸ್ನಾನ ಮಾಡುವಾಗ ಶ್ಯಾಂಪೂವಿನಂತೆ ಬಳಸಿ ಇದರಿಂದ ಕೂದಲುದುರುವಿಕೆಯನ್ನು ತಡೆಗಟ್ಟಬಹುದು.
ಕಹಿಬೇವು: ನಾಲ್ಕು ಕಪ್ ನೀರಿಗೆ ಒಂದು ಕಪ್'ನಷ್ಟು ಬೇವಿನ ಎಲೆ ಹಾಕಿ 10 ನಿಮಿಷ ಚೆನ್ನಾಗಿ ಕುದಿಸಿ. ನಂತರ ಕುದಿಸಿದ ಬೇವಿನ ನೀರು ತಣ್ಣಗಾದ ಮೇಲೆ ತಲೆಗೆ ಹಚ್ಚಿ ಒಣಗಲು ಬಿಡಿ.
ರಾತ್ರಿ ಮಲಗುವಾಗ ತಲೆಗೆ ಬೇವಿನ ಎಣ್ಣೆ ಹಚ್ಚಿ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇವೆರಡೂ ವಿಧಾನಗಳನ್ನು ಅನುಸರಿಸುವುದರಿಂದ ಕೂದಲುದುರುವಿಕೆಯನ್ನು ತಡೆಗಟ್ಟುವುದರೊಂದಿಗೆ, ಕೂದಲನ್ನು ರೇಷ್ಮೆಯುತವನ್ನಾಗಿಸುತ್ತದೆ.
ಎಳ್ಳು: ಎಳ್ಳು ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ದಿನಸು ಪದಾರ್ಥವಾಗಿದೆ. ಈ ಅಂಶಗಳು ಕೂದಲಿನ ಬೆಳವಣಿಗೆಗೆ ಅಗತ್ಯವಾಗಿರುವುದರಿಂದ ನಾವು ನಿತ್ಯ ಸೇವಿಸುವ ಆಹಾರದಲ್ಲಿ ಎಳ್ಳಿನ ಬಳಕೆ ಉತ್ತಮ.
ಆಲದ ಮರದ ಬೇರು: ಆಲದ ಮರದ ಬೇರಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಮಾಡಿದ ಪೇಸ್ಟ್'ನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.
ಮತ್ಯಾಕೆ ತಡ, ಮೇಲೆ ಸೂಚಿಸಿರುವ ವಿಧಾನಗಳನ್ನು ಆಧರಿಸಿ ನೀಳ ಕೂದಲನ್ನು ನಿಮ್ಮದಾಗಿಸಿ