ಬಂಗಾರದ ಸೀತೆಯ ಕಣ್ಣೀರು!

First Published 16, Jul 2018, 3:42 PM IST
Golden Seetha idol from Ramayana
Highlights

ರಾಮಾಯಣದಲ್ಲಿ ಸೀತೆಯ ಯುಗಾಂತ್ಯ ಮನ ಮಿಡಿಯುವಂಥಾದ್ದು. ರಾಮನ ಬಂಗಾರದ ಸೀತೆಯ ಭಾಗವೂ ಅಚ್ಚರಿ ಮೂಡಿಸುವಂತಾದ್ದು.

 

ಸೀತೆಯ ಅನುಪಸ್ಥಿತಿಯಲ್ಲಿ ಬಂಗಾರದ ಸೀತೆಯ ಮೂರ್ತಿ ಮಾಡಿ, ರಾಮ ಅಶ್ವಮೇಧ ಯಾಗ ಮಾಡಲು ಮುಂದಾದ. ಅಶ್ವಮೇಧ ಯಾಗದ ಕುದುರೆ ಲೋಕ ಸಂಚಾರಕ್ಕೆ ಹೊರಟಿತು. ಯಾಗದ ಕುದುರೆಗಳನ್ನು ಕಟ್ಟಿ ಹಾಕಿದ ಲವಕುಶರನ್ನು ಸೋಲಿಸಲು ಸಾಕ್ಷಾತ್ ಶ್ರೀರಾಮನೇ ಬರಬೇಕಾಯ್ತು. ವಾಲ್ಮೀಕಿ ಮಹರ್ಷಿಗಳ ಸಮ್ಮುಖದಲ್ಲಿ ಸೀತೆ ರಾಮ ಲವಕುಶರು ಮತ್ತೆ ಒಂದಾದರೂ ರಾಮ ಮತ್ತೆ ತಾನು ಶುದ್ಧಳೆಂದು ಲೋಕದೆದುರು ಶಪಥ ಮಾಡಲು ಸೂಚಿಸಿದ. ಇದರಿಂದ ಮನನೊಂದು ಸೀತೆ ತನ್ನ ತಾಯಿ ಭೂದೇವಿಯನ್ನು ಆಹ್ವಾನಿಸಿ ಆಕೆಯೊಂದಿಗೆ ಸೇರಿ ಹೋಗುತ್ತಾಳೆ.

ಇದು ರಾಮನಿಗೂ ಅನಿರೀಕ್ಷಿತ ಆಘಾತ. ಆಕೆ ಮತ್ತೆ ತನ್ನೊಂದಿಗಿರುತ್ತಾಳೆ ಅಂದುಕೊಂಡಿದ್ದ ರಾಮ ಈ ಘಟನೆಯಿಂದ ತತ್ತರಿಸಿ ಹೋದ. ಹಗಲಿರುಳೂ ಸೀತೆಯನ್ನೇ ಕನವರಿಸಿದ. ಆಗ ರಾಮನಿಗೆ ತನ್ನ ಪಾದುಕೆಯಲ್ಲಿದ್ದ ಮಣಿಯಲ್ಲಿ ಸೀತೆಯ ಪ್ರತಿಬಿಂಬ ಕಂಡಂತಾಯಿತು. ಆಕೆ ರಾಮನೊಂದಿಗೆ ಸಂಭಾಷಣೆಗಿಳಿದಳು. ಮತ್ತೆ ಶಪಥ ಮಾಡುವಂತೆ ಹೇಳಿ ತನ್ನನ್ನು ಅಪಮಾನಿಸಿದ್ದನ್ನು ಕಟು ನುಡಿಗಳಿಂದ ಟೀಕಿಸಿದಳು. ತಾನ್ಯಾಕೆ ಹಾಗೆ ಮಾಡಿದೆ ಅಂತ ವಿವರಿಸುತ್ತಾ ಗದ್ಗದಿತನಾಗುವ, ತನ್ನ ಪ್ರಿಯ ಸತಿಗಾಗಿ ಹಂಬಲಿಸುವುದನ್ನು ಕಂಡು ಸೀತೆ, ನಾನಿಲ್ಲದಿದ್ದರೇನಾಯ್ತು, ಅಶ್ವಮೇಧ ಯಾಗದ ವೇಳೆ ನನ್ನ ಬದಲಿಗೆ ಕೂರಿಸಿಕೊಂಡಿದ್ದ ಚಿನ್ನದ ಪುತ್ಥಳಿ ಸೀತೆ ಇದೆಯಲ್ಲಾ..’ ಎನ್ನುತ್ತಾಳೆ.

‘ಆ ನಿರ್ಜೀವ ಬೊಂಬೆ ನೀನಾಗುವುದು ಸಾಧ್ಯವೇ’ ರಾಮ ನಿರಾಸೆಯಿಂದ ನುಡಿದು ಕಣ್ಣಿಂದ ಬರುವ ನೀರು ಪಾದುಕೆಯನ್ನು ತೋಯಿಸುತ್ತದೆ. ರಾಮ ತಲೆ ಎತ್ತಿ ಸೀತೆಯ ಪುತ್ಥಳಿಯನ್ನು ನೋಡುತ್ತಾನೆ, ಏನಾಶ್ಚರ್ಯ! ಸೀತೆಯ ಪುತ್ಥಳಿ ಕಣ್ಣೀರು ಸುರಿಸುತ್ತಿದೆ. ಕಣ್ಣೀರು ಒರೆಸಲೆತ್ನಿಸಿದ ರಾಮನನ್ನು ತಡೆಯುತ್ತಾ ಆ ಪುತ್ಥಳಿ, ‘ರಾಮ ಕೋಪಿಸಬೇಡ, ನೀನು ನನ್ನನ್ನು ಸ್ಪರ್ಶಿಸುವಂತಿಲ್ಲ. ನನ್ನ ದೇಹ ಲೋಕಾಂತರ ಹೊಂದಿಯಾಗಿದೆ. ಈಗ ನಾನು ಕೇವಲ ಧ್ವನಿಯಷ್ಟೇ. ನೀನು ಅವತಾರ ಮುಗಿಸುವನಕ ಇದೇ ಸ್ಥಿತಿಯಲ್ಲಿ ನಿನ್ನ ಜೊತೆಗಿರುತ್ತೇನೆ’ ಎನ್ನುತ್ತಾಳೆ.

loader