ಶಾಲೆಯ ಮೊದಲ ಹಂತದಲ್ಲಿ ಗಂಡುಮಕ್ಕಳೇ ಹೆಚ್ಚು ಕ್ರಿಯಾಶೀಲರು ಮತ್ತು ಪ್ರತಿಭಾವಂತರು ಎಂಬ ಭ್ರಮೆ ಬೇರೂರುವುದ­ರಿಂದಲೇ ಹೆಣ್ಣುಮಕ್ಕಳು ತಮಗೆ ಎರಡನೇ ದರ್ಜೆಯ ಸ್ಥಾನ ಕೊಟ್ಟುಕೊಂಡು ಕೀಳರಿಮೆಗೆ ಸಿಲುಕಿ ನರಳುತ್ತಾರೆ.
ಸಮೀಕ್ಷೆ ಸಂಗತಿ
ಗಂಡು ಬಲಶಾಲಿ, ಪ್ರತಿಭಾಶಾಲಿ ಮುಂತಾದ ಶೋಷಣೆಯ ತಪ್ಪು ಅಂದಾಜುಗಳು ಹೆಣ್ಣುಮಕ್ಕಳ ಮನದಲ್ಲಿ ಯಾವ ಸಮಯದಲ್ಲಿ ರೂಪುಗೊಳ್ಳುತ್ತದೆ ಎಂಬ ಬಗ್ಗೆ ಇದುವರೆಗೂ ಸರಿಯಾದ ಅಧ್ಯಯನಗಳು ನಡೆದಿರಲಿಲ್ಲ. ಹಾಗಾಗಿಯೇ, ಗಂಡಿನ ಪ್ರತಿಭೆ ತನಗಿಂತ ಯಾವತ್ತಿಗೂ ಹೆಚ್ಚು ಎಂಬ ತಪ್ಪು ಅಂದಾಜು ಹೆಣ್ಣು ಹುಟ್ಟಿದಂದಿನಿಂದಲೇ ಆಕೆಯ ಮನದಲ್ಲಿ ಬೇರೂರಿ ಕ್ರಮೇಣ ಗಟ್ಟಿಯಾಗುತ್ತ ಹೋಗುತ್ತದೆ ಎಂದೇ ಸಮಾಜವಿಜ್ಞಾನಿಗಳು ಭಾವಿಸಿದ್ದರು. ಆದರೆ ಅಧಿಕೃತವಾಗಿ ಯಾವ ಹಂತದಲ್ಲಿ ಈ ತಪ್ಪು ಅಂದಾಜು ಹೆಣ್ಣುಮಕ್ಕಳ ಮನದಲ್ಲಿ ಗಾಢ ಪರಿಣಾಮ ಬೀರಲು ಶುರುಮಾಡುತ್ತದೆ ಎಂಬ, ಇದುವರೆಗೂ ಬೆಳಕಿಗೆ ಬಾರದ ಸಂಗತಿಯನ್ನು ಹಲವು ಸಮೀಕ್ಷೆ ಮತ್ತು ಸರಣಿ ಅಧ್ಯಯನದ ಮೂಲಕ ಅಮೆರಿಕದ ಸಂಶೋಧಕರ ತಂಡವೊಂದು ಬಯಲು ಮಾಡಿದೆ. ಆ ಪ್ರಕಾರ, ಶಾಲೆಗೆ ಸೇರಿಕೊಂಡ ಹೊಸತರಲ್ಲಿ, ಅಂದರೆ, ಐದರಿಂದ ಏಳನೇ ವಯಸ್ಸಿನಲ್ಲಿ ಇಂಥದ್ದೊಂದು ನಂಬಿಕೆ ಹೆಣ್ಣುಮಕ್ಕಳ ಮನದಲ್ಲಿ ಗಟ್ಟಿಯಾಗತೊಡಗಿ, ತಾನು ದುರ್ಬಲಳು ಎಂಬ ಭ್ರಮೆಗೆ ಜಾರುವಂತೆ ಮಾಡುತ್ತದೆ ಎಂದಿದೆ ಅಧ್ಯಯನ.
ನ್ಯೂಯಾರ್ಕ್ ವಿಶ್ವವಿದ್ಯಾಲಯ, ಇಲಿನಾಯ್ಸ್ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್'ಟನ್ ವಿಶ್ವವಿದ್ಯಾಲಯಗಳ ಸಂಶೋಧಕರನ್ನು ಒಳಗೊಂಡ ತಂಡ ಇಂಥದ್ದೊಂದು ಮಹತ್ವದ ಸಂಗತಿಯನ್ನು ಬೆಳಕಿಗೆ ತಂದಿದೆ. ಶಾಲೆಯ ಮೊದಲ ಹಂತದಲ್ಲಿ ಗಂಡುಮಕ್ಕಳೇ ಹೆಚ್ಚು ಕ್ರಿಯಾಶೀಲರು ಮತ್ತು ಪ್ರತಿಭಾವಂತರು ಎಂಬ ಭ್ರಮೆ ಬೇರೂರುವುದರಿಂದಲೇ ಹೆಣ್ಣುಮಕ್ಕಳು ತಮಗೆ ಎರಡನೇ ದರ್ಜೆಯ ಸ್ಥಾನ ಕೊಟ್ಟುಕೊಂಡು ಕೀಳರಿಮೆಗೆ ಸಿಲುಕಿ ನರಳುತ್ತಾರೆ ಎಂದು ಷರಾ ಬರೆದಿದೆ ಅಧ್ಯಯನ ವರದಿ.
(epaper.kannadaprabha.in)
