Asianet Suvarna News Asianet Suvarna News

ಚೌತಿ ಚಂದ್ರನ ಕಂಡರೆ ಕಳ್ಳತನದ ಆರೋಪ ಯಾಕೆ ಬರುತ್ತದೆ?

ಚೌತಿ ಚಂದ್ರನನ್ನು ನೋಡಿದರೆ ಕಳ್ಳತನದ ಆರೋಪ ಬರುತ್ತದೆ ಎಂಬ ಮಾತು ಹಿಂದಿನಿಂದಲೂ ಪ್ರಚಲಿತ. ಇದಕ್ಕೆ ಮೂಲ ಮತ್ತು ಆಧಾರ ಹುಡುಕಲು  ಹೋದಾಗ ಅನೇಕ ಉಪಕತೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ನಿಜಕ್ಕೂ ಸತ್ಯ ಏನು? ಇಲ್ಲಿದೆ ಒಂದು ವಿವರ..

Ganesh Chaturthi 2018 why we should not see the moon on Vinayaka Chavithi
Author
Bengaluru, First Published Sep 13, 2018, 10:33 PM IST

ಗಣಪನಿಗೆ ಕಡುಬು ಎಂದರೆ ಬಲು ಪ್ರೀತಿ. ಒಮ್ಮೆ ಭೂಲೋಕದಲ್ಲಿ ಭಕ್ತರ ಮನೆಗೆಲ್ಲಾ ಭೇಟಿಕೊಟ್ಟ ಗಣಪ ಎಲ್ಲರ ಮನೆಯಲ್ಲೂ ಕಡುಬು, ಕಜ್ಜಾಯ, ಭಕ್ಷಿಸಿ ಭಾರವಾದ ಹೊಟ್ಟೆಯೊಂದಿಗೆ ತನ್ನ ವಾಹನ ಇಲಿಯ ಮೇಲೇರಿ ಕೈಲಾಸದತ್ತ ಹೊರಟಿದ್ದ.  ಕಡುಬು ತಿಂದು ಸುಸ್ತಾಗಿದ್ದ ಗಣಪ ಇಲಿಯ ಮೇಲೆ ಕುಳಿತು ಕೈಲಾಸದತ್ತ ಹೊರಟಿದ್ದನ್ನು ಮೇಲಿದ್ದ ಚಂದ್ರ ನೋಡುತ್ತಲೇ ಇದ್ದ.

ಗಣಪನ ಹೊತ್ತ ಇಲಿ ಪಕ್ಕದಲ್ಲಿ ಹರಿದು ಬಂದ ಹಾವನ್ನು ಕಂಡು ಹೆದರಿ ಓಡತೊಡಗಿತು. ಗಣಪ ಕೆಳಗೆ ಬಿದ್ದ. ಪರಿಣಾಮ ಡೊಳ್ಳು ಹೊಟ್ಟೆ ಒಡೆಯಿತು. ತಿಂದಿದ್ದ ಕಡುಬೆಲ್ಲಾ ಹೊರಕ್ಕೆ ಚೆಲ್ಲಿತು. ಗಣಪ ಸ್ವಲ್ಪ ಅಪಮಾನವಾದವನಂತೆ ಕಂಡುಬಂದ. ಅತ್ತಿತ್ತ ನೋಡಿ ಯಾರೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು, ಕೆಳಗೆ ಚೆಲ್ಲಿದ ಎಲ್ಲವನ್ನೂ ಹೊಟ್ಟೆಗೆ ಮತ್ತೆ ಒಳಕ್ಕೆ ಸೇರಿಸಿಕೊಂಡ.

ತನ್ನ ಇಲಿಯನ್ನು ಹೆದರಿಸಿ ಹತ್ತಿರದಲ್ಲೇ ಹರಿಯುತ್ತಿದ್ದ ಹಾವನ್ನು ಹಿಡಿದು ಸೊಂಟಕ್ಕೆ ಬಿಗಿದ. ಇದನ್ನೆಲ್ಲಾ ನೋಡುತ್ತಿದ್ದ ಚೆಲುವ ಚಂದಿರ ಗಹಗಹಿಸಿ ನಕ್ಕ. ಗಣಪನಿಗೆ ಕೋಪ ಬಂತು. ನೀನು ಅಂದವಾಗಿರುವೆ ಎಂದು ನಿನಗೆ ದುರಹಂಕಾರ ಇನ್ನು ಮುಂದೆ ಯಾರೂ ನಿನ್ನನ್ನು ನೋಡದಿರಲಿ ಎಂದು ಶಾಪ ಕೊಟ್ಟ. ಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಭೂಮಿಗಿಳಿದು ಬಂದು ಗಣಪನ ಕಾಲಿಗೆ ಬಿದ್ದು, ಕ್ಷಮೆ ಕೋರಿದ. ಪ್ರಸನ್ನನಾದ ಗಣಪ ತನ್ನ ಶಾಪವನ್ನು ಹಿಂದಕ್ಕೆ ಪಡೆದನಾದರೂ, ಭಾದ್ರಪದ ಶುಕ್ಲ ಚೌತಿಯ ದಿನ ನಿನ್ನ ದರ್ಶನ ಮಾಡಿದವರಿಗೆ ಕಳ್ಳತನದ ಆರೋಪ ಬರುತ್ತದೆ ಎಂದು ಶಾಪದಲ್ಲಿ ಮಾರ್ಪಾಟು ಮಾಡಿದ. ಇದು ಕಳ್ಳತನದ ಆರೋಪ ಬರುತ್ತದೆ ಎಂಬ ಕತೆಗೆ ಮೂಲಾಧಾರ.

ಈ ಶಾಪವೇ ಮುಂದೆ ದ್ವಾಪರದ ಶ್ರೀ ಕೃಷ್ಣನನ್ನು ಕಾಡಿತು ಎನ್ನಲಾಗುತ್ತದೆ. ಶ್ರೀಕೃಷ್ಣ ಚೌತಿಯ ದಿನ ಅರಮನೆಯ ಉಪ್ಪರಿಗೆಯಲ್ಲಿ ಕುಳಿತಿದ್ದ. ರುಕ್ಮಿಣಿ ಆತನಿಗೆ ಹಾಲು ತಂದುಕೊಟ್ಟಳು. ಹಾಲು ಕುಡಿಯಲು ಲೋಟ ಎತ್ತಿದಾಗ ಹಾಲಿನಲ್ಲಿ ಕೃಷ್ಣನಿಗೆ ಚೌತಿಯ ಚಂದ್ರನ ದರ್ಶನವಾಯಿತು. ಇದಾದ ಮೇಲೆ ಶ್ರೀ ಕೃಷ್ಣನ ಮೇಲೆ ಶಮಂತಕ ಮಣಿ ಕದ್ದ ಆರೋಪ ಬರುತ್ತದೆ. ಯಕ್ಷಗಾನದಲ್ಲಿ ಈ ಕತೆಯನ್ನು ಬಹಳ ಸುಂದರವಾಗಿ ನಿರೂಪಿಸುತ್ತಾರೆ.

 

Follow Us:
Download App:
  • android
  • ios