ಬೆಂಗಳೂರು: ಪಾರ್ಟಿ ಮಾಡ್ಕೊಂಡು ಬಂದ ನಾನ್ ವೆಜಿಟೆರಿಯನ್ಸ್ ಗೆಳೆಯರ ಜೊತೆ ಪಾರ್ಟಿ ಹೇಗಿತ್ತು ಎಂದು ಕೇಳಿದಾಗ, ಚಿಕನ್ ಕಬಾಬ್, ಚಿಕನ್ ಚಿಲ್ಲಿ, ಚಿಕನ್ 65, ಶವರ್ಮಾ ರೋಲ್... ಹೀಗೆ ಪಟ್ಟಿ ಉದ್ದಕ್ಕೆ ಬೆಳೆಯುತ್ತಾ ಹೋಗುತ್ತದೆ. ಹಾಗೇನೇ, ಕೇಳಿದವರಿಗೂ ಇದೇನಪ್ಪಾ ಚಿಕನ್‌ನಲ್ಲಿ ಇಷ್ಟೊಂದು ವೆರೖಟಿಗಳಿವೆಯಾ ಎಂಬ ಕುತೂಹಲವೂ ಬೆಳೆಯುತ್ತಲೇ ಹೋಗುತ್ತೆ.

ಕೆಲವೊಮ್ಮೆ ನಾನ್ ವೆಜಿಟೇರಿಯನ್‌ಗಳು ಸಸ್ಯಹಾರಿಗಳಿಗೆ ನೀವು ಚಿಕನ್ ತಿನ್ನಲ್ವಾ?  ನಾನ್ ವೆಜ್ ತಿನ್ನದೇ ಹೇಗೆ ಜೀವನ ಸಾಗಿಸ್ತೀರಾ? ಎಂದು ಕೇಳುವುದಿದೆ.  ಕೆಲವರಿಗೆ ಧಾರ್ಮಿಕ/ ಸಾಂಪ್ರದಾಯಿಕ ಕಾರಣಗಳಿಂದ ಚಿಕನ್ ವರ್ಜ್ಯವಾಗಿದ್ದರೆ, ಇನ್ನು ಕೆಲವರಿಗೆ ಆರೋಗ್ಯದ ಕಾರಣಗಳಿಂದಾಗಿ ತಿನ್ನಬಾರದೆಂದು ತಾಕೀತು ಮಾಡಲಾಗುತ್ತದೆ.  ಹೇಗೂ ಒಂದು ಬಾರಿಯಾದರೂ ಚಿಕನ್ ಟೇಸ್ಟ್ ಮಾಡಬೇಕೆಂದು ಹಲವರು ಹಂಬಲಿಸುವುದೂ ಇದೆ!

ಸೋಯಾ ಉತ್ಪನ್ನಗಳಿಗೆ ಪ್ರಸಿದ್ಧವಾಗಿರುವ  ದೆಹಲಿಯ ಕಂಪನಿಯೊಂದು ಇದೀಗ ‘ವೆಜ್ ಚಿಕನ್’ನ್ನು ಮಾರುಕಟ್ಟೆಗೆ ಬಿಡುಗಡೆ  ಮಾಡಿದೆ. ಇದೇನ್ ಗುರೂ! ‘ವೆಜ್ ಚಿಕನ್’ ಅಂಥಾನೂ ಇರುತ್ತಾ  ಎಂದು ಸಸ್ಯಹಾರಿಗಳು ಕೇಳಬಹುದು. ಹೌದು, ಆದರೆ ಈ ಚಿಕನ್ ನಿಜವಾದ ಕೋಳಿಯದ್ದಲ್ಲ!  ನೋಡಲು ಹಾಗೂ ಸ್ವಾದದಿಂದ ಚಿಕನ್ ತಿನಿಸಿನ ತರಹ ಇರುವ ಈ ಸೋಯಾ ಉತ್ಪನ್ನಗಳು ಪೌಷ್ಟಿಕತೆಯಲ್ಲೂ ಚಿಕನ್‌ಕ್ಕಿಂತ ಕಡಿಮೆಯಿಲ್ಲ ಎಂಬುವುದು ಕಂಪನಿಯ ವಾದ. 

ಚಿಕನ್ ತಿನ್ನಲು ಹಂಬಲಿಸುವವರನ್ನು ಗಮನದಲ್ಲಿಟ್ಟುಕೊಂಡು  ಅವರ‘ಚಿಕನ್’ ಆಸೆಯನ್ನು ಪೂರೈಸಲು ಆ ಕಂಪನಿಯು ‘ವೆಜ್ ಚಿಕನ್’ನ್ನು ಮಾರುಕಟ್ಟೆಗೆ ಬಿಡುಗಡೆ  ಮಾಡಿದೆ ಎಂದು ನೀವು ಭಾವಿಸಿದರೆ ಅದು ತಪ್ಪು!

suvarnanews.com  ಜತೆ ಮಾತನಾಡಿದ ‘ವೆಜ್‌ಲೇ’ ಕಂಪನಿಯ ಪ್ರತಿನಿಧಿ ಪ್ರಮೋದ್ ಕುಮಾರ್ ಪ್ರಕಾರ, ಇಂತಹ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ನಾನ್ ವೆಜಿಟೇರಿಯನ್ಸ್‌ಗಳಿಗಾಗಿಯೇ! ಜಗತ್ತಿನಾದ್ಯಂತ ವೇಗನ್ ಫುಡ್ ಬಗ್ಗೆ ಜಾಗೃತಿ ಹೆಚ್ಚಾಗಿದೆ.  ನಾನ್ ವೆಜ್ ಆಹಾರವನ್ನು ಬಿಟ್ಟು ಸಸ್ಯಹಾರಿಗಳಾಗ ಬಯಸುವವರಿಗೆ ಇಂತಹ ಆಹಾರ ಪದಾರ್ಥಗಳು ಉತ್ತಮ ಅವಕಾಶವನ್ನು ಕಲ್ಪಿಸುತ್ತವೆ ಹಾಗೂ ಬಹಳ ಮಟ್ಟಿಗೆ ಸಹಕಾರಿಯಾಗಿವೆ, ಎಂದು ಅವರ ಅಭಿಪ್ರಾಯ.

ಇದು ಪಕ್ಕಾ ವೆಜಿಟೇಬಲ್ ಆಹಾರ ಪದಾರ್ಥವಾಗಿದ್ದು, ಬಹಳ ರಿಸರ್ಚ್‌ನ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಬೆಂಗಳೂರಿನಲ್ಲೂ ಕೆಲವೂ ಹೋಟೆಲ್‌ಗಳು  ಇದನ್ನು ಸರ್ವ್ ಮಾಡುತ್ತಿವೆ, ಬಹಳ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ, ಎಂದು ಅವರು ಹೇಳಿದ್ದಾರೆ.

ನೋಡಲು ಮಾಂಸದಂತೆಯೇ ಕಾಣುವ ಇದರಲ್ಲಿ ವೈವಿಧ್ಯಮಯ ತಿನಿಸುಗಳು ಲಭ್ಯವಿದೆ. ಸೋಯಾ ಶೀಕ್ ಕಬಾಬ್, ಶಾಮಿ ಕಬಾಬ್, ನಗೆಟ್ಸ್, ಸೋಯಾ ವೆಜ್  ಚಿಕನ್, ಸೋಯಾ ಚಾಪ್ಸ್, ಸೋಯಾ ರೋಘನ್ ಘೋಷ್, ಸೋಯಾ ಕಟ್ಲೇಟ್ ಮುಂತಾದ ವೆರೖಟಿಗಳೂ ಲಭ್ಯ ಇವೆ.