ಓಶೋ ಹೇಳ್ತಾರೆ ನಮ್ಮ ಸೋಲಿಗೆ ನಾವೇ ಕಾರಣ ಆಗಿರುತ್ತೇವೆ, ಏಕೆಂದರೆ ನಾವು ಒಂದು ಗುರಿ ಫಿಕ್ಸ್ ಮಾಡುತ್ತೇವೆ. ಆ ಗುರಿ ತಲುಪಲಿಲ್ಲ ಅಂದರೆ ಸೋತೆವು ಅಂದುಕೊಳ್ಳುತ್ತೇವೆ- ಓಶೋ

ಸೋಲಿನ ಭೀತಿ ನಿವಾರಿಸುವ ಉಪಾಯಗಳು
ಯಾವುದೇ ಕೆಲಸಕ್ಕೆ ಹೊರಟರೂ ಸಣ್ಣ ಅಧೈರ್ಯ ಕಾಡೋದು ಮಾಮೂಲಿ. ಅದು ಮತ್ತೇನಲ್ಲ, ತನ್ನ ಪ್ರಯತ್ನ ವಿಫಲವಾದರೆ ತಾನು ಸೋತು ಹೋದರೆ ಎಂಬ ಭಯ. ಸೋಲು ಬಹಳ ಕೆಟ್ಟದ್ದು, ಅದೊಂದು ಅವಮಾನ, ಯಾತನೆ. ಸೋತರೆ ನಾವು ಹಿಂದುಳಿದು ಬಿಡುತ್ತೇವೆ, ನಮ್ಮ ಬಗ್ಗೆ ಗೌರವ ಕಡಿಮೆಯಾಗುತ್ತೆ, ಗೆಳೆಯರೂ ನಿಧಾನವಾಗಿ ದೂರ ಸರಿಯುತ್ತಾರೆ. ನಾವು ಒಂಟಿಯಾಗಿ ಬಿಡುತ್ತೇವೆ..

ಈ ತರ ಅನಿಸಿಬಿಡುತ್ತೆ. ಸೋಲಿನ ಬಗ್ಗೆ ಭಯ ಬೀಳಿಸುವ ಪ್ರಯತ್ನ ಬಾಲ್ಯದಿಂದಲೂ ನಡೆಯುತ್ತದೆ. ಕಾಂಪಿಟೀಶನ್‌ನಲ್ಲಿ ಸೋಲೋದು ದೊಡ್ಡ ಅವಮಾನ ಅನ್ನುವ ಹಾಗೇ ಬೆಳೆದಿರುತ್ತೇವೆ. ದೊಡ್ಡವರಾದ ಹಾಗೇ ಈ ಮನಃಸ್ಥಿತಿಯೂ ಬೆಳೆಯುತ್ತದೆ. ಓಶೋ ಹೇಳ್ತಾರೆ- ನಮ್ಮ ಸೋಲಿಗೆ ನಾವೇ ಕಾರಣ ಆಗಿರುತ್ತೇವೆ, ಏಕೆಂದರೆ ನಾವು ಒಂದು ಗುರಿ ಫಿಕ್ಸ್ ಮಾಡುತ್ತೇವೆ. ಆ ಗುರಿ ತಲುಪಲಿಲ್ಲ ಅಂದರೆ ಸೋತೆವು ಅಂದುಕೊಳ್ಳುತ್ತೇವೆ. ಒಬ್ಬ ವ್ಯಕ್ತಿ ಓಶೋ ಬಳಿ ಬಂದು
ಕೇಳಿದರು,‘ನಾನು ಮೂರು ತಿಂಗಳಿಂದ ಧ್ಯಾನ ಮಾಡುತ್ತಿದ್ದೇನೆ. ಸಣ್ಣದೊಂದು ಪ್ರಯೋಜನವೂ ಆಗಿಲ್ಲ’ ಅಂತ.

‘ಖಂಡಿತಾ ಏನೂ ಪರಿಣಾಮ ಆಗುವುದಿಲ್ಲ. ಏಕೆಂದರೆ ನಿಮ್ಮ ಗಮನವೆಲ್ಲ ಪರಿಣಾಮದ ಮೇಲೇ ಇರುತ್ತದೆ. ಧ್ಯಾನದ ಮೇಲಿರುವುದಿಲ್ಲವಲ್ಲ’ ಸೋಲನ್ನು ಸಾಮಾನ್ಯ, ಅದು ವಾಸ್ತವ ಎಂದು ಒಪ್ಪಿಕೊಂಡರೆ ಸಮಸ್ಯೆ ಇರುವುದಿಲ್ಲ. ಪರಿಣಾಮದ ಬಗ್ಗೆ ಚಿಂತಿಸಿದರೆ ಮಾತ್ರ ಪರಿಸ್ಥಿತಿ ದಾರುಣವಾಗುತ್ತದೆ. ಸೋಲನ್ನು ಸಾಮಾನ್ಯ ಅಂತ ಒಪ್ಪಿಕೊಳ್ಳೋದು ಹಳೆಯ ಸೋಲನ್ನು ನೆನಪಿಸಿಕೊಳ್ಳೋಣ ಬದುಕಿನಲ್ಲಿ ಲೇಟೆಸ್ಟ್ ಆಗಿ ಸೋತದ್ದು ಯಾವಾಗ, ಮತ್ತು ಅದರಿಂದ ಹೊರಬರಲು ಸಾಧ್ಯವಾದದ್ದು ಹೇಗೆ ಅಂತ ನೆನಪಿಸಿಕೊಳ್ಳೋಣ.ಸೋಲಿಗಿಂತ ಸೋಲಿನಭಯ ಹೆಚ್ಚು ಕಂಗೆಡಿಸುತ್ತದೆ.ಸೋತ ಕೂಡಲೇ ನಮ್ಮನ್ನು ಯಾರೂ ದೂರ ಮಾಡಿಲ್ಲ ಅನ್ನೋದು ಮನದಟ್ಟಾದರೆ ಸ್ವಲ್ಪ ನೆಮ್ಮದಿ. ಸೋಲಿಂದ
ಮೇಲೇಳುವ ಕ್ಲೂ ಹಿಂದಿನ ಅನುಭವದಲ್ಲಿ ಸಿಗುತ್ತೆ.

ಹಳೆಯ ಸೋಲನ್ನು ನೆನಪಿಸಿಕೊಳ್ಳೋಣ 

ಬದುಕಿನಲ್ಲಿ ಲೇಟೆಸ್ಟ್ ಆಗಿ ಸೋತದ್ದು ಯಾವಾಗ, ಮತ್ತು ಅದರಿಂದ ಹೊರಬರಲು ಸಾಧ್ಯವಾದದ್ದು ಹೇಗೆ ಅಂತ ನೆನಪಿಸಿಕೊಳ್ಳೋಣ.ಸೋಲಿಗಿಂತ ಸೋಲಿನಭಯ ಹೆಚ್ಚು ಕಂಗೆಡಿಸುತ್ತದೆ.ಸೋತ ಕೂಡಲೇ ನಮ್ಮನ್ನು ಯಾರೂ ದೂರ ಮಾಡಿಲ್ಲ ಅನ್ನೋದು ಮನದಟ್ಟಾದರೆ ಸ್ವಲ್ಪ ನೆಮ್ಮದಿ. ಸೋಲಿಂದ ಮೇಲೇಳುವ ಕ್ಲೂ ಹಿಂದಿನ ಅನುಭವದಲ್ಲಿ ಸಿಗುತ್ತೆ. 

ಸೋತು ಗೆದ್ದವರ ಕಥೆಯಿಂದ ಸ್ಪೂರ್ತಿ 

ಸಕ್ಸಸ್‌ಫುಲ್ ವ್ಯಕ್ತಿಗಳ ಆತ್ಮಕಥೆಯನ್ನೊಮ್ಮೆ ತಿರುವಿ ಹಾಕೋಣ. ಸೋಲಿಲ್ಲದೇ ಮೇಲೇರಿದ ಒಬ್ಬನೇ ಒಬ್ಬ ವ್ಯಕ್ತಿ ಕಾಣಸಿಗುವುದಿಲ್ಲ. ಎಲ್ಲ ಸಾಧಕರೂ ಮೇಲೇರಿದ್ದು ಸೋಲಿನ ಏಣಿಯ ಮೂಲಕವೇ. ಸತತ ಸೋಲು, ಅವಮಾನ, ನೋವು ಅವರನ್ನು ಪುಟಿದೇಳಿಸಿತು, ಮೇಲೆಕ್ಕೇರಲು ಸ್ಪೂರ್ತಿ ನೀಡಿತು.

ಒಬ್ಬ ಯಶಸ್ವಿ ಬ್ಯುಸಿನೆಸ್‌ಮೆನ್‌ಗೆ ಒಂದು ಖಯಾಲಿ. ಆತ ಯಶಸ್ವಿ ಉದ್ಯಮಿಗಳನ್ನು ಎಂದೂ ಭೇಟಿಯಾಗುತ್ತಿರಲಿಲ್ಲ. ಬದಲಾಗಿ ಸೋತು ಕಂಗಾಲಾದ ಉದ್ಯಮಿಗಳ ಬಳಿ ಹೋಗುತ್ತಿದ್ದ. ಅವರ ಕಥೆಗೆ ಕಿವಿಯಾಗುತ್ತಿದ್ದ. ತನ್ನಿಂದ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡುತ್ತಿದ್ದ. ಅವನ ಮ್ಯಾನೇಜರ್ ಸಣ್ಣ ಅಚ್ಚರಿಯಲ್ಲಿ ಅವನ ಬಳಿ ಕೇಳುತ್ತಾನೆ, ‘ಸಾರ್, ನೀವ್ಯಾಕೆ ಪದೇ ಪದೇ ಸೋತ ಉದ್ಯಮಿಗಳನ್ನು ಭೇಟಿಯಾಗುತ್ತೀರಿ?’, ‘ಸೋಲಿನ ಬಗ್ಗೆ ತಿಳಿಯಲು, ಯಾವೆಲ್ಲ ಕಾರಣಕ್ಕೆ ಸೋಲುತ್ತಾರೆ ಅಂತ ಗೊತ್ತಿದ್ದರೆ ಗೆಲವು ಸುಲಭ’ ಅಂದರು. ಹಾಗೆಂದು ಅವರಿಗೂ ಆಗಾಗ ಸೋಲು ಸರ್ಪೈಸ್ ಕೊಡ್ತಿತ್ತು.

ಹೊಸ ಪಾಠ ಕಲಿಯಿರಿ

ಸೋಲು ಬದುಕಿನ ಭಾಗ. ನೀವದನ್ನು ಹೇಗೆ ಸ್ವೀಕರಿಸುತ್ತೀರಿ ಅನ್ನೋದರಲ್ಲೇ ಸೋಲಿನಿಂದ ಹೊರಬರುವ ಕೀಲಿಗೈಯೂ ಇದೆ. ಒಂದು ಸೋಲು ನಮ್ಮ ವ್ಯಕ್ತಿತ್ವಕ್ಕೆ ಅಂಟಿದ ಕೊಳೆಯನ್ನು ಕಳೆಯುತ್ತದೆ. ಆತ್ಮವಿಮರ್ಶೆಯ
ಪಾಠ ಹೇಳುತ್ತದೆ. ಕುಂತಿ ಕೃಷ್ಣನಲ್ಲಿ ಹೇಳುತ್ತಾಳೆ, ‘ಕೃಷ್ಣಾ, ನನಗೆ ನಿರಂತರ ದುಃಖ ಸೋಲನ್ನು ಕೊಡು, ಆ ಮೂಲಕ ನಿನಗೆಇನ್ನಷ್ಟು ಹತ್ತಿರವಾಗುವಂತೆ ಮಾಡು’

ನಿಜ. ಸೋಲು, ದುಃಖ ಬಂದಾಗ ನಮಗೆ ದೇವರ ನೆನಪಾಗುತ್ತದೆ. ಪದೇ ಪದೇ ಬರುವ ಸೋಲು ನಮಗೆ ದೇವರನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ. ಸ್ವಾರ್ಥಿ ಗೆಲುವಿಗೆ ಅಂಥ ತಾಕತ್ತಿಲ್ಲ!