Asianet Suvarna News Asianet Suvarna News

ಯುಟ್ಯೂಬ್ ನೋಡಿ ಡ್ರಾಗನ್ ಫ್ರೂಟ್ ಬೆಳೆದ ರೈತ

ಅಮೆರಿಕಾ ಮೂಲದ ಡ್ರ್ಯಾಗನ್ ಫ್ರೂಟ್ ರಷ್ಯಾ, ಜಪಾನ್ ದೇಶಗಳಲ್ಲಿ ಬೆಳೆಯಲಾಗುತ್ತಿದೆ. ಕಿವಿ ಹಣ್ಣಿನ ಮಾದರಿಯಲ್ಲೇ ಬಹುಪಯೋಗಿಯಾಗಿರುವ ಈ ಡ್ರ್ಯಾಗನ್ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. 

farmer succeed in growing  Dragon fruit

ಡ್ಯ್ರಾಗನ್ ಫ್ರೂಟ್ ಇತ್ತೀಚೆಗೆ ಬೆಂಗಳೂರಿನಂಥ ಮಹಾನಗರಗಳಲ್ಲಿ ಕಾಣಸಿಗುತ್ತದೆ ಅನ್ನೋದು ಬಿಟ್ಟರೆ ಗ್ರಾಮೀಣ ಭಾಗದ ಜನರಿಗೆ ಬಹುತೇಕ ಅಪರಿಚಿತವೇ. ಇನ್ನು ಇವುಗಳನ್ನು ಬೆಳೆಯುವ ಮಾತೆಲ್ಲಿಂದ ಬಂತು? ಆದರೆ ಕೆಲವರು ಎಷ್ಟರಮಟ್ಟಿಗೆ ಅಪ್ ಟು ಡೇಟ್ ಆಗಿರುತ್ತಾರೆ ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ಹಣ್ಣಿಗೆ ಬೇಡಿಕೆ ಇದೆ, ಅದನ್ನು ನಮ್ಮೂರಿನಲ್ಲೂ ಬೆಳೆದು ಜಯಿಸಬಹುದಾ ಅನ್ನೋದನ್ನೆಲ್ಲ ತಿಳಿದುಕೊಂಡು ಆ ದಿಕ್ಕಿನಲ್ಲಿ ಮುಂದುವರಿಯುತ್ತಾರೆ. ಚಿಕ್ಕಬಳ್ಳಾಪುರದ ಮರಳುಕುಂಟೆ ನಾರಾಯಣ ಸ್ವಾಮಿ ಅಂಥವರಲ್ಲೊಬ್ಬರು.

ಇತ್ತೀಚೆಗೆ ಅಮೆರಿಕ ಮೂಲದ ಡ್ರ್ಯಾಗನ್ ಫ್ರೂಟ್'ಗೆ ಎಲ್ಲಿಲ್ಲದ ಬೇಡಿಕೆ ಬಂದಿರುವುದನ್ನು ಗಮನಿಸಿ ಆ ಬಗೆಗೆ ಒಂದಿಷ್ಟು  ಅಧ್ಯಯನ ನಡೆಸಿದರು. ಅದನ್ನು ಬೆಳೆಯುವ ಬಗೆಯನ್ನು ಇಂಟರ್‌ನೆಟ್ ಮೂಲಕ ತಿಳಿದುಕೊಂಡರು. ಈ ಹಣ್ಣನ್ನು ಚಿಕ್ಕಬಳ್ಳಾಪುರದ ತನ್ನ ಜಮೀನಿನಲ್ಯಾಕೆ ಬೆಳೆಯಬಾರದು ಎಂಬ ಯೋಚನೆ ಬಂತು. ಒಂದು ವೇಳೆ ಬೆಳೆದರೆ ಅದಕ್ಕೆ ಮಾರ್ಕೆಟಿಂಗ್ ಹೇಗೆ ಮಾಡಬಹುದು ಎಂಬ ಬಗ್ಗೆಯೂ ಚಿಂತಿಸಿದರು. ಅಂತಿಮವಾಗಿ ಬೆಳೆದೇ ಸಿದ್ಧ ಎಂಬ ತೀರ್ಮಾನಕ್ಕೆ ಬಂದರು.

ಮಹಾರಾಷ್ಟ್ರ, ಪಂಜಾಬ್‌ಗಳಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮಾಹಿತಿ ಸಿಕ್ಕಿತು. ಮಹಾರಾಷ್ಟ್ರದಿಂದ ಗಿಡಗಳನ್ನು ತರಿಸಿದರು. ತಮ್ಮ 9 ಎಕರೆ ಜಮೀನಿನಲ್ಲಿ 18 ಸಾವಿರ ಗಿಡ ಹಾಕಿದರು. ಇಂಟರ್‌ನೆಟ್ಟೇ ಗೆಳೆಯ: ಅನುಭವವಿಲ್ಲದೇ ಇಂಥ ಪ್ರಯತ್ನಕ್ಕೆ ಕೈ ಹಾಕಲೂ ಧೈರ್ಯ ಬೇಕು. ನಾರಾಯಣ ಸ್ವಾಮಿ ಅವರು ಹೊಸ ಹೊಸ ಪ್ರಯೋಗಗಳಲ್ಲಿ ಸಿದ್ಧಹಸ್ತರು. ಅಂತರ್ಜಾಲದಿಂದ ಈ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.

ಅದರಂತೆ ಭೂಮಿ ಹದಗೊಳಿಸಿ, ಹನಿ ನೀರಾವರಿ ಮೂಲಕ ಸತತ 2 ವರ್ಷಗಳ ಕಾಲ ಸಲಹಿದರು. ಅವರ ನಿರಂತರ ಶ್ರಮದಿಂದಾಗಿ ಡ್ರ್ಯಾಗನ್ ಫ್ರೂಟ್ ಗಿಡಗಳು ಬಹಳ ಚೆನ್ನಾಗಿ ಬೆಳೆದವು. ಇವರು ಕಂಬದಲ್ಲಿ 4 ಗಿಡಗಳ ಬಳ್ಳಿ ಹಬ್ಬಿಸಿದ್ದಾರೆ. ಈ ಕೃಷಿಗೆ ಈವರೆಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಉತ್ತಮ ಫಸಲು ಕೈ ಸೇರುವ ಹಂತದಲ್ಲಿದೆ.

ಸೋಲಾರ್‌ನಲ್ಲೂ ಪ್ರಯೋಗ:

ಇವರು ಹಿಂದೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೇ ಮಾರಾಟ ಮಾಡಿ ಆದಾಯ ಗಳಿಸಿದ್ದರು. ಜೊತೆಗೆ ಕೋಳಿ ಫಾರಂ ಮೂಲಕ ಮಾದರಿ ರೈತನಾಗಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆದಿದ್ದರು. ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಡ್ರ್ಯಾಗನ್ ಫ್ರೂಟ್ ಬೆಳೆದು ಗೆದ್ದಿದ್ದಾರೆ. ರಷ್ಯಾ ಮತ್ತು ಜಪಾನ್ ದೇಶಗಳಲ್ಲಿ ಮಾತ್ರ ಬೆಳೆಯುತ್ತಿರುವ ಡ್ರ್ಯಾಗನ್ ಫ್ರೂಟ್ ಅಮೆರಿಕಾ ಮೂಲದ ಹಣ್ಣಾಗಿದ್ದು, ನೀರೇ ಇಲ್ಲದ ಬಯಲು ಸೀಮೆಯಲ್ಲಿ ಬೆಳೆದು ನಿಂತಿರುವುದು ವಿಶೇಷ.

ರಾಜ್ಯದಲ್ಲಿಯೇ ಮೊದಲ ಬೆಳೆ:

ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಡ್ರ್ಯಾಗನ್ ಹಣ್ಣು ಇದೀಗ ಮಾರಾಟಕ್ಕೆ ಸಿದ್ಧವಾಗಿದೆ. ಚಿಕ್ಕಬಳ್ಳಾಪುರ ಬರದ ನಾಡು. ನೀರಿನ ಕೊರತೆಯಲ್ಲೂ ಈಗಾಗಲೇ ದ್ರಾಕ್ಷಿ, ಮಾವು, ತರಕಾರಿ, ಹೂ ಬೆಳೆದು ಉತ್ತಮ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಇದೀಗ ಡ್ರ್ಯಾಗನ್ ಹಣ್ಣಿನ ತಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಲು ಸಿದ್ಧವಾಗಿದೆ. ಮೆಟ್ರೋ, ರಿಲಾಯನ್ಸ್ ನಂತಹ ಕಂಪನಿಗಳಿಗೆ ಹಣ್ಣಿನ ಮಾದರಿ ನೀಡಲಾಗಿದ್ದು, ಚಿಕ್ಕಬಳ್ಳಾಪುರದಲ್ಲಿಯೂ 2 ಮಳಿಗೆ ತೆರೆದು, ಮಾರುಕಟ್ಟೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಒಂದು ಕೆಜಿಗೆ (3 ಹಣ್ಣು) 150 ರಂತೆ
ಮಾರಾಟ ಮಾಡಲು ಸಿದ್ಧಗೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ನಾರಾಯಣ ಸ್ವಾಮಿ ಅವರ ಮೊಬೈಲ್ ಸಂಖ್ಯೆ 9449652720

Follow Us:
Download App:
  • android
  • ios