Asianet Suvarna News Asianet Suvarna News

ಕಾರಿನ ಜೊತೆಯೊಂದು ಆಪ್ತ ಸಂವಾದ

ಜೀವನ ಕಾರು ಪ್ರಯಾಣ ಇದ್ದಂತೆ. ನೀವು ಹಿಮ್ಮುಖವಾಗಿ ಚಲಿಸುತ್ತಿದ್ದರೆ ಎಲ್ಲಿಗೂ ತಲುಪುವುದಿಲ್ಲ. ವೇಗವಾಗಿ ಹೋದರೆ ದಾರಿಯ ಸುಖ ನಿಮ್ಮದಾಗದು. ನಿಂತು ಸೌಂದರ್ಯ ಸವಿಯುತ್ತಾ ಪ್ರಯಾಣಿಸಿದರೆ
ತಡವಾಗಿ ತಲುಪುತ್ತೀರಿ. ಸರಿಯಾದ ಕ್ರಮವೆಂದರೆ ಕಾರಿನಲ್ಲಿ ಹೋಗುವವರಿಗೆ ಕೈ ಬೀಸುತ್ತಾ ಬದುಕಿನ ವೇಗಕ್ಕೆ ತಕ್ಕಂತೆ ನಡೆದುಕೊಂಡು ಹೋಗುವುದು!

Emotional attachment with Car
Author
Bengaluru, First Published Aug 1, 2018, 3:25 PM IST

ಮನುಷ್ಯ ಹುಟ್ಟು ಭಾವನಾ ಜೀವಿ. ಒಂದಲ್ಲಾ ಒಂದು ವಿಷಯಗಳಲ್ಲಿ ಅವನ ಭಾವನೆ ಕೇಂದ್ರೀಕೃತವಾಗಿದ್ದೇ ಇರುತ್ತೆ. ಇದಕ್ಕೆ ಜೀವಾಜೀವದ ಹಂಗಿಲ್ಲ. ಮನೆ, ರೋಡು, ಆಫೀಸು, ಬಟ್ಟೆ, ಕಾರು, ಬೈಕ್ ಹೀಗೆ ಜೀವವಿಲ್ಲದ ವಸ್ತುಗಳೊಂದಿಗೂ ಬಂಧ ಏರ್ಪಟ್ಟಿರುತ್ತದೆ. ಆದರೆ ಅವುಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇದೇ ರೀತಿ ಜೀವವಿಲ್ಲದ ವಸ್ತುಗಳಲ್ಲೂ ಹೇಳಲು ಮಾತಿದ್ದರೆ ಅವು ಹೇಗೆಲ್ಲಾ ತಮ್ಮ ಭಾವನೆ ಹೇಳಿಕೊಳ್ಳುತ್ತಿದ್ದವು ಎನ್ನುವುದೇ ಈ ನಾಲ್ಕು ಕಾರುಗಳ ಕತೆ.

ನಾನು ಪಕ್ಕಾ ಒನ್ ಹ್ಯಾಂಡ್ ಯೂಸ್ 

ಖುಷಿಯಾಗುತ್ತೇ ಹೇಳೊದಕ್ಕೆ. ನನ್ನ ಯಜಮಾನ ನನ್ನನ್ನು ರಾಣಿಯ ಹಾಗೆ ಇರಿಸಿದ್ದಾನೆ. ನನ್ನೊಂದಿಗೆ ಯಾವತ್ತು ಒರಟಾಗಿ ನಡೆದುಕೊಂಡಿಲ್ಲ. ನನ್ನ ಅವಧಿ ಮುಗಿದು ಬಹಳ ದಿನಗಳೇ ಕಳೆದವು. ನಾನೀಗ ಮನೆಯ ಒಂದು ಮೂಲೆ ಸೇರಿದ್ದೇನೆ. ಆದರೂ ಯಜಮಾನನಿಗೆ ನಾನಂದ್ರೆ ಪಂಚಪ್ರಾಣ.

ನನ್ನೊಂದಿಗೆ ಅವನ ಜೀವನದ ರೋಚಕ ಕ್ಷಣಗಳಿವೆ. ಹೆಂಡತಿ ಬಂದ ಹೊಸದರಲ್ಲಿ ನನ್ನನ್ನೇರಿ ಹೊರಟ ನೆನಪಿದೆ ಅವನಿಗೆ. ಮಗಳನ್ನು ಶಾಲೆಗೆ ಬಿಟ್ಟ ಸೊಗಸಿದೆ. ನನ್ನ ದೇಹದ ಒಂದೇ ಒಂದು ಭಾಗ ಕಳಚಿದರೂ ನಮ್ಮನ್ನು ದವಾಖಾನೆಗೆ ಒಯ್ದು ಆ ಕ್ಷಣವೇ ರೀಪೇರಿ ಮಾಡಿಸಿದ್ದಾನೆ. ನನ್ನನ್ನು ಬೇರೆಯವರಿಗೆ ಚಲಾಯಿಸಲು ನೀಡಿದ್ದು ನನ್ನ ೨೦ ವರ್ಷಗಳ ಜೀವನದಲ್ಲಿ ಎಂಟ್ಹತ್ತು ಬಾರಿ ಇರಬೇಕಷ್ಟೇ.

ಕೊಡಬೇಕಾದ್ರೂ ‘ಜಾಗೃತೆ’ ಎಂದು ಹೇಳಿಯೇ ಕೊಡುತ್ತಿದ್ದದು ನನಗೆ ಇನ್ನೂ ನೆನಪಿದೆ. ಅದರಲ್ಲೂ ನಂಬಿಕೆಯಿದ್ದವರಿಗೆ ಮಾತ್ರ ನೀಡಿದ್ದಾನೆ. ಇಲ್ಲದಿದ್ದರೆ ಏನೋ ಹೇಳಿ ಸಾಗ ಹಾಕಿದ್ದೂ ಇದೆ. ಹಾಗಾಗಿ ನಾನು ಪಕ್ಕಾ ‘ಒನ್ ಹ್ಯಾಂಡ್ ಯೂಸ್’. ಅವನಿಗೂ ಈಗ ವಯಸ್ಸಾಗಿದೆ. ನನ್ನ ದೇಹವೂ ಕೃಶಗೊಂಡಿದೆ. ಅರ್ಧದಷ್ಟು ಭಾಗಗಳು ತುಕ್ಕು ಹಿಡಿದಿವೆ. ಈಗ ನಾನು ಸಂಪೂರ್ಣ ನಿಷ್ಪ್ರಯೋಜಕ. ಆದರೂ ನಾನು ಯಜಮಾನನ ಕಣ್ಣೆದುರಿಗೇ ಇರಬೇಕು. ಅವನಿಗೆ ನನ್ನ ಮೇಲೆ ಬಹಳಷ್ಟು ಅಕ್ಕರೆ ಮತ್ತು ಪ್ರೀತಿ.

ನನಗೆ ನಾಲ್ಕೈದು ಯಜಮಾನರು

ಹೊಸದರಲ್ಲಿ ಯಜಮಾನ ನನ್ನನ್ನು ಚೆನ್ನಾಗಿಯೇ ನೋಡಿಕೊಂಡ. ಬಳಿಕ ಏನಾಯಿತೋ, ದಿಢೀರ್ ನಿರ್ಧಾರದೊಂದಿಗೆ ನನ್ನನ್ನು ಇನ್ನೊಬ್ಬನಿಗೆ ಮಾರಿಯೇ ಬಿಟ್ಟ. ಆಮೇಲೆ ಗೊತ್ತಾಯಿತು. ಅವನಿಗೆ ನನಗಿಂತ ದೊಡ್ಡ ಹಾಗೂ ಹೆಚ್ಚು ಮಾಡಿಫೈಡ್ ಆಗಿರುವ ಕಾರಿನ ಮೋಹ ಬೆಳೆದಿತ್ತು ಎಂದು. ಈ ಎರಡನೇ ಯಜಮಾನನಿಗೆ ನನ್ನನ್ನು ಕಂಡರೆ ಅಕ್ಕರೆ. ತುಂಬಾ ನಾಜೂಕಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದ. ಬರುಬರುತ್ತ ಅವನಿಗೂ ನಾನು ಬೇಡವಾದೆ. ಮೂರನೇಯವನಿಗೂ ನನಗೂ ಅಷ್ಟಕ್ಕಷ್ಟೇ. ಅಗತ್ಯವಿದ್ದಾಗ ಮಾತ್ರ ನಾನು ನೆನಪಾಗುತ್ತಿದ್ದೆ. ಬಳಿಕ ನಾಲ್ಕನೇಯವನ ಪಾಲಾದೆ. ಅವನು ಅತ್ಯಂತ ಬೇಜವಾಬ್ದಾರಿಯಿಂದ
ನನ್ನನ್ನು ಚಲಾಯಿಸುತ್ತಿದ್ದ.

ಹೀಗಾಗಿ ಒಂದು ಬಾರಿ ನಾನು ಅಪಘಾತಕ್ಕೊಳಗಾಗಿ ಯಜಮಾನನಿಗೆ ಬೇಡವಾದೆ. ಇದರಲ್ಲಿ ನನ್ನದೇನು ತಪ್ಪಿದೆ ಹೇಳಿ. ಅವನ ಅಜಾಗರೂಕತನಕ್ಕೆ ನಾನು ಬಲಿಪಶುವಾದೆ. ಹೀಗೆ ಅವನೂ ನನ್ನನ್ನು ಸಾಗ ಹಾಕಿದ. ಹೀಗೆ ನನ್ನ ಜೀವನದಲ್ಲಿ ನಾಲ್ಕೈದು ಯಜಮಾನರೂ ಬಂದು ಹೋದರು. ಯಾರೇ ನನ್ನ ಜೀವನದಲ್ಲಿ ಬಂದರೂ ಕೊನೆಗೊಂದು ದಿನ ಮೂಲೆ ಸೇರುವುದು ನಾನೇ. ಹಾಗೇ ಒಂದು ಪೊಲೀಸ್ ಠಾಣೆಯಲ್ಲಿ ರೋಧಿಸುತ್ತಿದ್ದವರಲ್ಲಿ ಒಬ್ಬನಾಗಿ ಅಲ್ಲಿಯೇ ನನ್ನ ಜೀವನ ಅಂತ್ಯಗೊಂಡಿತು.

ನನ್ನದು ಮುಗಿದ ಕಾಲ

ಯಾವುದೋ ಕಾರಣಕ್ಕೆ ಗ್ಯಾರೇಜು ಸೇರಿ ತುಕ್ಕು ಹಿಡಿದಿರುವ ಗಾಡಿ ನಾನು. ಬಹುಶಃ ನನ್ನ ಕಾಲ ಮುಗಿದು ಬಿಟ್ಟಿದೆ. ನಾನೀಗ ಪಕ್ಕಾ ಗುಜರಿ ಐಟಂ. ರಿಪೇರಿ ಮಾಡಿದ್ರೂ ರಿಪೇರಿಯಾಗಲಾರದಷ್ಟೂ ಮುಕ್ಕಾಗಿದ್ದೇನೆ. ನನ್ನನ್ನು ಗ್ಯಾರೇಜಿಗೆ ತಂದು ಬಿಟ್ಟಿರುವ ನನ್ನ ಯಜಮಾನ ಒಂದು ಬಾರಿಯೂ ಸಹ ನನ್ನತ್ತ ತಿರುಗಿ ನೋಡಿಲ್ಲ. ಗ್ಯಾರೇಜಿನವ ಹೇಳಿರುವ ರಿಪೇರಿ ಖರ್ಚಿನ ಮೊತ್ತಕ್ಕೆ ಹೆದರಿ, ನಾಳೆ ಬರುತ್ತೇನೆಂದು ಹೇಳಿ ಹೋದವ ಮತ್ತೆ ನನ್ನತ್ತ ತಲೆಹಾಕಿಲ್ಲ.

ನನ್ನ ಯಜಮಾನನಿಗಾಗಿ ಎರಡು, ಮೂರೂ ವರ್ಷಗಳೇ ಕಾದೆ. ಕೊನೆಗೂ ಬರಲೇ ಇಲ್ಲ. ಅಗತ್ಯ ಬಿದ್ದಾಗಲೆಲ್ಲ ನನ್ನ ದೇಹದ ಒಂದೊಂದು ಭಾಗವನ್ನು ಬಿಚ್ಚಿಕೊಂಡು ಬೇರೆ ಗಾಡಿಗಳಿಗೆ ಜೋಡಿಸಿ ರಿಪೇರಿ ಮಾಡಿದ್ದಾನೆ ಗ್ಯಾರೇಜಿನ ಮಾಲೀಕ. ಈಗ ನಾನು ಯಾರೊಬ್ಬರಿಗೂ ಬೇಕಾಗಿಲ್ಲ. ನಾನೀಗ ನನ್ನ ಜೀವನದ ಕೊನೆ ಕ್ಷಣಗಳನ್ನು ಎಣಿಸುತ್ತಿದ್ದೇನೆ.

ನನ್ನದಲ್ಲದ ತಪ್ಪಿಗೆ

ನನ್ನ ಯಜಮಾನ ತುಂಬ ಕಠೋರ ಹೃದಯದವನು. ನನ್ನ ಬಗ್ಗೆ ಕಿಂಚಿತ್ತು ಕಾಳಜಿಯೇ ಇರಲಿಲ್ಲ. ರಸ್ತೆಯಲ್ಲಿ ತಗ್ಗು, ಗುಂಡಿ ಎನ್ನದೆ ಓಡಿಸುತ್ತಿದ್ದ. ಇದರಿಂದಾಗಿ ನನಗೆ ತುಂಬಾ ಖೇದವೆನಿಸುತ್ತಿತ್ತು. ಅವನ ಮೇಲೆನೂ ಸಿಟ್ಟಿರಲಿಲ್ಲ. ಆದರೆ ಅವನ ಮೇಲೆ ಸಿಟ್ಟು ಬಂದಿದ್ದು, ಕುಡಿದ ಮತ್ತಿನಲ್ಲಿ ನನ್ನನ್ನು ಮೂರು ಜೀವಗಳ ಸಾವಿಗೆ ಕಾರಣವಾಗುವಂತೆ ಮಾಡಿದ್ದಕ್ಕೆ. ಅವನು ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಬೇಕಾಯಿತು. ಅದೊಂದು ದಿನ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದ ಆತ ಕಂಠಪೂರ್ತಿ ಕುಡಿದಿದ್ದ. ಕುಡಿದರೆ ನನ್ನನ್ನು ಓಡಿಸುವುದಕ್ಕೆ ನಿಷೇಧವಿದ್ದರೂ ಮತ್ತಿನಲ್ಲಿ ಯರ‌್ರಾಬಿರ‌್ರಿಯಾಗಿ ಚಲಾಯಿಸಿದ.

ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಗುದ್ದಿ, ಮೂರೂ ಜೀವಗಳ ಬಲಿಗೆ ನನ್ನನ್ನು ಬಲಿಪಶು ಮಾಡಿದ. ನನ್ನ ಜಂಘಾಬಲವೇ ಉಡುಗಿತು. ಆದರೂ ನಿಲ್ಲದೆ ಹೆದರಿ ನನ್ನನ್ನು ಇನ್ನಷ್ಟು ಜೋರಾಗಿ ಓಡಿಸಿದ. ವಿಷಯ ತಿಳಿದ ಪೊಲೀಸರು ನನ್ನನ್ನು ಬೆನ್ನಟ್ಟಿದರು. ಇದನ್ನು ತಿಳಿದ ಯಜಮಾನ ಇನ್ನಷ್ಟು ಫ್ಯೂರೀಯಸ್ ಆದ. ಕೊನೆಗೆ ಹೋಗಿ ಮೆಟ್ರೊ ಬ್ರಿಡ್ಜ್ ಒಂದರ ಪಿಲ್ಲರ್‌ಗೆ ಗುದ್ದಿ, ನನ್ನನ್ನು ಇನ್ನಷ್ಟು ಘಾಸಿಗೊಳಿಸಿದ. ರಿಪೇರಿ ಮಾಡಿದ್ದರೆ ದುರಸ್ತಿಯಾಗುತ್ತಿದ್ದೆನೇನೋ.

3 ಜೀವಗಳನ್ನು ಬಲಿಪಡೆದಿದ್ದು ನನ್ನ ಜೀವನದ ಅತ್ಯಂತ ಕೆಟ್ಟ ಘಟನೆ. ನನ್ನದಲ್ಲದ ತಪ್ಪಿಗೆ ನಾನು ಪೊಲೀಸ್ ಸ್ಟೇಷನ್ನು ಸೇರಿದೆ. ಯಜಮಾನ ಜೈಲು ಪಾಲಾದ. ಸ್ಟೇಷನ್ನಿನಲ್ಲಿ ‘ನಾನು ಮೂರು ಜೀವಗಳನ್ನು ಕೊಂದಿದ್ದೇನೆ’ ಎಂಬ ಚಿಂತೆಯೊಂದಿಗೆ ದಿನದಿಂದ ದಿನಕ್ಕೆ ಕೃಶವಾಗತೊಡಗಿದೆ.  

 

-ಮಲ್ಲಪ್ಪ ಸಿ ಪಾರೇಂಗಾಂವ 

Follow Us:
Download App:
  • android
  • ios