ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್‌ನಿಂದ ಗೀಚುವುದು ಸಾಮಾನ್ಯ. ಗೋಡೆ ಮೇಲಿನ ಕಲೆಯನ್ನು ಹೇಗೆ ರಿಮೂವ್ ಮಾಡಬಹುದು. ಅದು ಹೇಗೆ? ಸ್ಟೋರಿ ಓದಿ.

ಮಕ್ಕಳಿರುವ ಮನೆ ಚೆಂದ! ಆದರೆ ಮಕ್ಕಳು ಮಾಡುವ ಕಿತಾಪತಿಗಳು ಮಾತ್ರ ತಡ್ಕೊಳ್ಳಿಕ್ಕೆ ಆಗದಷ್ಟು. ಮಕ್ಕಳೆಂದ್ರೆ ಕಿತಾಪತಿ, ತುಂಟಾಟ ಅವೆಲ್ಲ ಸಾಮಾನ್ಯ. ಇನ್ನೂ ಕೆಲವು ಮಕ್ಕಳಿಗೆ ಒಂದು ಅಭ್ಯಾಸ ಇರುತ್ತದೆ. ಕೈಗೆ ಪೆನ್ನು, ಪೆನ್ಸಿಲ್, ಸ್ಕೆಚ್‌ಪೆನ್ ಸಿಕ್ಕರೆ ಸಾಕು ಕಂಡ ಕಂಡಲ್ಲಿ ಗೀಚಿ ಗಬ್ಬೆಬ್ಬಿಸಿ ಇಡ್ತಾರೆ.

ಮನೆಯ ಗೋಡೆ ಮೇಲೆಯೇ ಇದನ್ನು ಹೆಚ್ಚಾಗಿ ಮಾಡ್ತಾರೆ. ಮಕ್ಕಳು ಅಂದ್ರೆ ಇದೆಲ್ಲ ಕಾಮನ್. ಈ ಗೋಡೆಯ ಮೇಲಿನ ಗೀಚುಗಳು ಸಾಮಾನ್ಯವಾಗಿ ಹೋಗೋದಿಲ್ಲ. ಜೊತೆಗೆ ಗೋಡೆಯ ಅಂದವನ್ನು ಹಾಳು ಮಾಡಿಬಿಡುತ್ತದೆ. ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್‌ನಿಂದ ಏನನ್ನಾದರೂ ಬರೆದಿದ್ದರೆ ನೀವು ಭಯಪಡುವ ಅಗತ್ಯವಿಲ್ಲ. ಪೆನ್ಸಿಲ್ ಗುರುತುಗಳು ಬಣ್ಣ ಬಿಡದಂತೆ ಅಂಟಿಕೊಳ್ಳುವುದಿಲ್ಲ. ಅವುಗಳನ್ನ ಸರಳವಾಗಿ ಸ್ವಚ್ಛ ಮಾಡಬಹುದಾಗಿದೆ. ಹೇಗೆ ಅನ್ನೋದ್ರ ಟಿಪ್ಸ್ ಇಲ್ಲಿದೆ.

ಎರೇಸರ್‌ನಿಂದ ಒರೆಸಿ

ಪೆನ್ಸಿಲ್ ಗುರುತನ್ನು ತೆಗೆದು ಹಾಕಲು ಇರುವ ಸುಲಭ ಉಪಾಯ ಎರೇಸರ್. ಮೃದುವಾದ ಎರೇಸರ್‍‌ನಿಂದ ಸುಲಭವಾಗಿ ಒರೆಸಬಹುದು. ಇಲ್ಲಿ ಇನ್ನೊಂದು ವಿಚಾರವನ್ನು ಗಮನದಲ್ಲಿ ಇಡಬೇಕು. ಎರೇಸರ್‍‌ನಿಂದ ಜೋರಾಗಿ ಉಜ್ಜಬಾರದು. ನಿಧಾನಕ್ಕೆ ಒರೆಸಬೇಕು. ಒಂದು ವೇಳೆ ನೀವು ಜೋರಾಗಿ ಒರೆಸಿದರೆ ಗೋಡೆಗೆ ಹಾನಿ ಆಗುವ ಸಾಧ್ಯತೆ ಇರುತ್ತದೆ. ಗೋಡೆಗೆ ಕೊಳಕು ಅಂಟಿಕೊಳ್ಳದಂತೆ ಸ್ವಚ್ಛವಾಗಿರುವ ಎರೇಸರ್‍‌ ಅನ್ನೇ ಬಳಸಿ

ಮೈಕ್ರೋಫೈಬರ್ ಬಟ್ಟೆ ಬಳಸಿ

ಎರೇಸರ್‍‌ನಿಂದ ಗುರುತು ತೆಗೆದ ನಂತರವೂ ಗೋಡೆಯ ಮೇಲೆ ಸ್ವಲ್ಪ ಕೊಳೆ ಉಳಿದಿರುತ್ತದೆ. ಆಗ ನೀವು ಮೈಕ್ರೋಫೈಬರ್ ಬಟ್ಟೆ ಬಳಸಬಹುದು. ಬಟ್ಟೆಯನ್ನು ಸ್ವಲ್ಪ ತೇವಗೊಳಿಸಿ, ಹೆಚ್ಚುವರಿ ನೀರನ್ನು ಹಿಂಡಿ ಅಲ್ಲಿರುವ ಕಲೆ ಮೇಲೆ ನಿಧಾನಕ್ಕೆ ಉಜ್ಜಿ ಹಾಗ ಆ ಕಲೆಯೂ ಮಾಯವಾಗಿರುತ್ತದೆ.

ಅಡುಗೆ ಸೋಡಾ

ಇನ್ನು, ಪೆನ್ಸಿಲ್ ಗುರುತು ಸ್ವಲ್ಪ ಹಳೆಯದಾಗಿದ್ದರೆ ಎರೇಸರ್‌ನಿಂದ ಹೋಗೋದಿಲ್ಲ. ಅದಕ್ಕಾಗಿ ನೀವು ಸ್ವಲ್ಪ ಅಡಿಗೆ ಸೋಡಾ ಮತ್ತು ನೀರನ್ನು ಬಳಸಬಹುದು. ಎರಡನ್ನೂ ಒಟ್ಟಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನೇರವಾಗಿ ಇಡೀ ಗೋಡೆಗೆ ಹಚ್ಚುವ ಬದಲು, ಮೊದಲು ಸಣ್ಣ ಪ್ರದೇಶದಲ್ಲಿ ಪರೀಕ್ಷಿಸಿ. ಬಣ್ಣದ ಮೇಲೆ ಯಾವುದೇ ಬದಲಾವಣೆ ಆಗದಿದ್ದರೆ ಗುರುತಿಸಲಾದ ಜಾಗಕ್ಕೆ ಹಚ್ಚಿ. ನಂತರ ಅದನ್ನು ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ.

ನೀರು, ಸೋಪು

ಗೋಡೆ ಮೇಲಿನ ಪೆನ್ಸಿಲ್ ಗುರುತು ತೆಗೆಯಲು ಡಿಶ್ ಸೋಪಿನಿಂದ ಸ್ವಚ್ಛಗೊಳಿಸಬಹುದು. ಈ ದ್ರಾವಣದಲ್ಲಿ ಬಟ್ಟೆಯನ್ನು ಸ್ವಲ್ಪ ತೇವಗೊಳಿಸಿ ನಿಧಾನವಾಗಿ ಒರೆಸಿ. ಹೆಚ್ಚುವರಿ ನೀರನ್ನು ನೇರವಾಗಿ ಗೋಡೆಯ ಮೇಲೆ ಸುರಿಯುವುದನ್ನು ಅಥವಾ ಸಿಂಪಡಿಸುವುದನ್ನು ತಪ್ಪಿಸಿ.

ಮ್ಯಾಜಿಕ್ ಎರೇಸರ್

ನಿಮ್ಮ ಮನೆಯಲ್ಲಿ ಮ್ಯಾಜಿಕ್ ಎರೇಸರ್ ಇದ್ದರೆ ಪೆನ್ಸಿಲ್ ಗುರುತುಗಳನ್ನು ತೆಗೆದುಹಾಕಲು ಬಳಸಬಹುದು.

ಗುರುತುಗಳು ಮಾಯವಾಗದಿದ್ದರೆ..

  • ಗೋಡೆಯನ್ನು ಪದೇ ಪದೇ ಉಜ್ಜುವುದನ್ನು ತಪ್ಪಿಸಿ
  • ಅತಿಯಾಗಿ ಉಜ್ಜುವುದರಿಂದ ಬಣ್ಣಕ್ಕೆ ಹೆಚ್ಚು ಹಾನಿ
  • ಆ ಪ್ರದೇಶಕ್ಕೆ ಟಚ್-ಅಪ್ ಬಣ್ಣವನ್ನು ಹಾಕಬಹುದು
  • ಚಿತ್ರಿಸುವ ಮೊದಲು ಮೇಲ್ಮೈಯನ್ನು ಸ್ವಚ್ಛಗೊಳಿಸಿ, ಒಣಗಿಸಿ

ಮಕ್ಕಳು ಮತ್ತೆ ಮತ್ತೆ ಗೋಡೆ ಮೇಲೆಯೇ ಬರೆಯುತ್ತಿದ್ದರೆ ನೀವು ಆ ಜಾಗದ ಮೇಲೆ ಪ್ರತ್ಯೇಕ ಡ್ರಾಯಿಂಗ್ ಬೋರ್ಡ್‌ ಅಥವಾ ಕಾಗದವನ್ನು ಇರಿಸಬಹುದು. ಮಕ್ಕಳು ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ ಮತ್ತು ಗೋಡೆಗಳು ಪದೇ ಪದೇ ಕೊಳಕಾಗುವುದನ್ನು ತಡೆಯುತ್ತದೆ.