ಉತ್ತರ ಕನ್ನಡ ಜಿಲ್ಲೆಯ 40 ಊರುಗಳಲ್ಲಿ ಜನರೇ ಇಲ್ಲವಂತೆ.. ಹಾಗಿದ್ದರೆ ಅವರೆಲ್ಲ ಎಲ್ಲಿಗೆ ಹೋದರು? ಏನಾಗಿ ಹೋದರು? ಸ್ಟೋರಿ ಓದಿ..
ಉತ್ತರ ಕನ್ನಡ: ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಇಡೀ ರಾಜ್ಯವನ್ನೇ ದಿಗಿಲು ಹುಟ್ಟಿಸುವಂತೆ ಇದೆ. ಒಂದು ಕಾಲದಲ್ಲಿ ಮಕ್ಕಳು, ಯುವಕರು, ಹಿರಿಯರು ಹಾಗೂ ಸಾಕು ಪ್ರಾಣಿಗಳ ಸದ್ದಿನಿಂದ ಕೂಡಿರುತ್ತಿದ್ದ ಗ್ರಾಮಗಳು ಇಂದು ನೀರವ ಮೌನಕ್ಕೆ ಆವರಿಸಿವೆ. ಒಂದು ಎರಡು ಗ್ರಾಮಗಳಲ್ಲ ಬರೋಬ್ಬರಿ 40ಕ್ಕೂ ಹೆಚ್ಚುಗ್ರಾಮಗಳು!
ಏನಾಯ್ತು ಗ್ರಾಮಗಳಿಗೆ?
ಹೌದು, ಸುಮಾರು 40 ಗ್ರಾಮಗಳು 0% ಜನಸಂಖ್ಯೆ ಹೊಂದಿದೆ. ಅಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಡ್ ವಿಲೇಜ್ ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದು ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಹಾಯಾಗಿದ್ದ ಊರುಗಳಲ್ಲಿನ ಜನ ಎಲ್ಲಿಗೆ ಹೋದರು? ಅವರಿಗೆಲ್ಲ ಏನಾಯಿತು? ಮತ್ತೆ ಅವರು ಬರುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮೌನ. ಅಲ್ಲಿ ಉತ್ತರವೇ ಇಲ್ಲ. ಹಾಗಾದರೆ ಈ ಗ್ರಾಮದ ನಿವಾಸಿಗಳು ಎಲ್ಲಿಗೆ ಹೋದರು? ಭೀಕರ ಬರದ ಹಿನ್ನೆಲೆಯಲ್ಲಿ ಊರು ಬಿಟ್ಟು ವಲಸೆ ಹೋದರಾ? ಅಥವಾ ಅಭಿವೃದ್ಧಿ ಕುಂಟಿತ ಅರಣ್ಯ ಆವರಿಸಿದ ಹಳ್ಳಿ ಬಿಟ್ಟು ಪಟ್ಟಣ ಸೇರಿದರಾ? ಅಥವಾ ಮಹಾ ಪ್ರವಾಹ ಬಂದು ಕೊಚ್ಚಿ ಹೋದರಾ ಅನ್ನೋದು ಸದ್ಯದ ಪ್ರಶ್ನೆ.
ವಿಚಾರ ಹೇಗೆ ಗೊತ್ತಾಯ್ತು?
ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಮೊದಲು ಜನ ವಾಸ್ತವ್ಯಿದ್ದ 40 ಗ್ರಾಮಗಳು ಈಗ ಖಾಲಿ ಖಾಲಿ ಆಗಿವೆ. ಜನ ವಾಸವಿದ್ದ ಮನೆಗಳು ಈಗ ಇತಿಹಾಸ ನೆನಪಿಸುವ ಪಳೆಯುಳಿಕೆಗಳಷ್ಟೇ ನೆನಪುಗಳಾಗಿವೆ. ಜಾನುವಾರುಗಳು ಇಲ್ಲ, ಸಾಕು ಪ್ರಾಣಿಗಳಿಲ್ಲದ ಊರಿನಲ್ಲಿ ಈಗ ಭೀಕರ ಮೌನ ಆವರಿಸಿದೆ. ಅದೊಂದು ನಿರ್ವಾತ ಹಳ್ಳಿಯಾಗಿ ಮಾರ್ಪಟ್ಟಿದೆ.
ಮೂಢನಂಬಿಕೆಗೆ ಊರು ಬಿಟ್ಟರಂತೆ..
ಕೆಲವು ಸಂಬಂಧಿಕರು, ಪಕ್ಕದ ಊರಿನ ಜನರು ಹೇಳುವ ಮಾಹಿತಿ ಪ್ರಕಾರ.. ಅದೆಷ್ಟೋ ಮಂದಿ ಮೂಢನಂಬಿಕೆಗೆ ಹೆದರಿ ಊರು ಬಿಟ್ಟಿದ್ದಾರಂತೆ. ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ಊರುಗಳು ದಟ್ಟ ಕಾಡಿನ ಮಧ್ಯೆ ಇವೆ. ಕೆಲವೊಂದಿಷ್ಟು ಕುಗ್ರಾಮಗಳಲ್ಲಿಯೇ, ಕುಗ್ರಾಮವಾಗಿ ಉಳಿದುಕೊಂಡಿದ್ದವು. ನೆಗೆಟಿವ್ ಎನರ್ಜಿಗಳಿಗೆ ಹೆದರಿ ಊರು ಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಬರುತ್ತಿವೆ.
ಎಲ್ಲೆಲ್ಲಿ ಜಾಸ್ತಿ?
ಜಿಲ್ಲೆಯ ಜೊಯಿಡಾ, ದಾಂಡೇಲಿ, ಹಳಿಯಾಳ ಮತ್ತು ಮುಂಡಗೋಡ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮಗಳು ಖಾಲಿಯಾಗಿವೆ. ಜೋಯಿಡಾ ತಾಲೂಕಿನ ಬಾಡಗುಂದ ಎಂಬಲ್ಲಿ ಸುಮಾರು 15 ಕುಟುಂಬಗಳು ಮೂಢನಂಬಿಕೆಯಿಂದ ಗ್ರಾಮವನ್ನೇ ಬಿಟ್ಟು ಹೋಗಿದ್ದಾರಂತೆ. ಹಳಿಯಾಳ ತಾಲೂಕಿನ ಚೆನ್ನಾಪುರ, ಬಬಲಿಕೊಪ್ಪ, ಹರವಳ್ಳಿ, ಮಾವಿನಕೊಪ್ಪ, ಬೆಗೂರು, ಮಂಡಕಿ, ವಿಂಚೊಳ್ಳಿ, ಚಿಮನಳ್ಳಿ, ಮಾಲವಾಡ, ಮಲವಡಿ, ಮಾಚಾಪುರ, ಚಿನಗಿನಕೊಪ್ಪ, ಅಂಬಡಗ, ಅಟ್ಲೆ ಗ್ರಾಮಗಳ ಜನ ಅಭಿವೃದ್ಧಿ ಶೂನ್ಯ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ ಎನ್ನಲಾಗಿದೆ.
ಇನ್ನು, ಮುಂಡಗೋಡ ತಾಲೂಕಿನ ಬಂಕಾಸಾಳಿ, ಬೇಚಾರಕ, ಇಂಗಳಿಕಿ, ಹುಡೆಲಕೊಪ್ಪದ ಜನ ಬರದ ಹಿನ್ನೆಲೆಯಲ್ಲಿ ಊರುಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವರು ವರ್ಷದ ಆರು ತಿಂಗಳು ಪಟ್ಟಣಕ್ಕೆ ದುಡಿಯಲು ಹೋಗಿ ಮಳೆಗಾಲದ ಸಂದರ್ಭದಲ್ಲಿ ಹಳ್ಳಿಗಳಿಗೆ ಮರಳುವರು ಇದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರು ಗ್ರಾಮಬಿಟ್ಟು ವಲಸೆಹೋಗುತ್ತಿರುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಲಸೆಗೆ ನಿಖರ ಕಾರಣ ಕಂಡುಕೊಂಡು ಸಮಸ್ಯೆ ಬಗೆಹರಿಸಬೇಕಿದೆ.


