ನನ್ನ ಮಾತೃಭಾಷೆ ಕನ್ನಡ. ಸುಮಾರು ಅರವತ್ತು ಮಿಲಿಯನ್ಗೂ ಹೆಚ್ಚು ಜನರು ಈ ಭಾಷೆಯ ಮೂಲಕ ಸಂವಹಿಸುತ್ತಾರೆ. ನನ್ನ ಬಾಲ್ಯ ಮತ್ತು ಶಿಕ್ಷಣ ಈ ಭಾಷೆಯಲ್ಲಿಯೇ ನಡೆದಿವೆ. ಆದ್ದರಿಂದ ಕನ್ನಡ ಭಾಷೆಯಲ್ಲಿಯೇ ನಾನು ಸಾಹಿತ್ಯವನ್ನು ರಚಿಸುತ್ತೇನೆ. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿತೆನಾದರೂ, ಅದರಲ್ಲಿ ಸಾಹಿತ್ಯವನ್ನು ರಚಿಸುವಷ್ಟು ಪ್ರಾವಿಣ್ಯತೆಯಿಲ್ಲ. ಆದರೆ ಇಂಗ್ಲಿಷಿನ ಓದು, ಮಾತು-ಕತೆ, ವ್ಯವಹಾರಕ್ಕೆ ಯಾವುದೇ ಸಮಸ್ಯೆಯಿಲ್ಲ.

ನನ್ನ ಹುಟ್ಟೂರು ಸುಮಾರು ಹತ್ತು ಸಾವಿರ ಜನಸಂಖ್ಯೆಯುಳ್ಳದ್ದಾಗಿತ್ತು. ಭಾರತದ ಲೆಕ್ಕದಲ್ಲಿ ಇದೊಂದು ಚಿಕ್ಕ ಊರು. ಒಂದು ಸಿನಿಮಾ ಮಂದಿರ, ಎರಡು ಹೊಟೇಲ್ ಮತ್ತು ಎರಡು ಶಾಲೆಯಿದ್ದ ಊರು. ಪ್ರತಿಯೊಬ್ಬರಿಗೂ ಮತ್ತೊಬ್ಬರ ಪರಿಚಯ ಇದ್ದೇ ಇರುತ್ತಿತ್ತು. ಆದ್ದರಿಂದ ಯಾವುದೇ ಕುಟುಂಬ ಅಥವಾ ವ್ಯಕ್ತಿಯ ವಿಚಾರಗಳು ಎಲ್ಲರಿಗೂ ತಿಳಿದು ಬಿಡುತ್ತಿತ್ತು. ಗೌಪ್ಯತೆ ಎನ್ನುವುದು ಅಲ್ಲಿ ಕಷ್ಟ. ಗೌಪ್ಯತೆಯಿಂದ ಬದುಕುವ ಕ್ರಮವೂ ಗೌರವಕ್ಕೆ ಪಾತ್ರವಾಗುತ್ತಿರಲಿಲ್ಲ.

'ಗೇ'ಲಿ ಮಾಡುತ್ತಿದ್ದರು..
ಸುಮಾರು ಹದಿಮೂರು-ಹದಿನಾಲ್ಕರ ವಯಸ್ಸಿಗೆ ನನಗೆ ಪುರುಷರ ಆಕರ್ಷಣೆ ಶುರುವಾಯ್ತು. ಮೊದಮೊದಲಿಗೆ ಚಂದ ಕಾಣುವ ಸಹಪಾಠಿ ಹುಡುಗನ ಒಡನಾಟಕ್ಕೆ ಹಂಬಲಿಸುವುದು, ಕಾಲೇಜಿಗೆ ಹೋಗುವ ವಯಸ್ಕ ಯುವಕರನ್ನು ವಿಶೇಷ ಆಸಕ್ತಿಯಿಂದ ಗಮನಿಸುವುದು, ಪುರುಷ ಉಪಾಧ್ಯಾಯರ ಕುರಿತಾಗಿ ಅಶ್ಲೀಲವಾಗಿ ಕನಸು ಕಾಣುವುದು, ಮನೆಯಲ್ಲಿ ಅಪ್ಪನ ಪಕ್ಕವೇ ಮಲಗುವೆನೆಂದು ಹಟ ಮಾಡುವುದು – ಇತ್ಯಾದಿ ಸ್ವಭಾವದ ಮೂಲಕ ಗೋಚರಿಸತೊಡಗಿತು. ಬಾಲ್ಯದಿಂದಲೂ ನನ್ನಲ್ಲಿದ್ದ ಹೆಣ್ಣಿನ ಹಾವಭಾವಗಳನ್ನು ಸಹಪಾಠಿಗಳು, ಸ್ನೇಹಿತರು, ಹಿರಿಯರು ಗೇಲಿ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದರು. ಅದನ್ನು ಎದುರಿಸಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಉಳಿಸಿಕೊಂಡಿದ್ದೇ ಒಂದು ಸಾಧನೆಯಾಗಿತ್ತು. 
ಉಳಿದ ಹುಡುಗರಲ್ಲಿ ಕಾಣದ ಈ ಹೆಣ್ತನದ ಬಗ್ಗೆ ನನ್ನಲ್ಲಿ ಈಗಾಗಲೇ ವಿಪರೀತ ಕೀಳರಿಮೆ ಮೂಡಿತ್ತು. ಈಗ ಹೊಸದಾಗಿ ಶುರುವಾದ ಪುರುಷರ ಮೇಲಿನ ಆಕರ್ಷಣೆಯನ್ನು ಮತ್ತೊಬ್ಬರಲ್ಲಿ ಹೇಳಿಕೊಂಡು ನನ್ನ ಪರಿಸ್ಥಿತಿಯನ್ನು ಮತ್ತಷ್ಟು ನಗೆಪಾಟಲಿಗೆ ಗುರಿ ಮಾಡಿಕೊಳ್ಳುವ ಧೈರ್ಯ ನನ್ನಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ದೈಹಿಕ ಅಭಿಲಾಷೆಗಳನ್ನು ಮನಸ್ಸಿನೊಳಗೆ ಹತ್ತಿಕ್ಕಿವುದು, ಅಂತಹ ಭಾವನೆಗಳು ನನ್ನಲ್ಲಿ ಮೂಡಿಯೇ ಇಲ್ಲ ಎನ್ನುವಂತೆ ನಟಿಸುವುದು ನನ್ನ ಬದುಕಿಗೆ ಅವಶ್ಯಕವಾಗಿತ್ತು. ಉಳಿದವರೊಡನೆ ಹಂಚಿಕೊಳ್ಳದೆ ನನ್ನಲ್ಲಿಯೇ ಹಲವು ಸಂಗತಿಗಳನ್ನು ಗೌಪ್ಯವಾಗಿ ಇರಿಸಿಕೊಂಡ ಕ್ರಮ ಒಂದು ರೀತಿಯಲ್ಲಿ ಪಾಪಪ್ರಜ್ಞೆಯನ್ನೂ, ಮತ್ತೊಂದು ರೀತಿಯಲ್ಲಿ ಭಯವನ್ನೂ ಮೂಡಿಸುತ್ತಿತ್ತು.

ಅದೊಂದು ಸಮಸ್ಯೆ ಎಂದುಕೊಂಡಿದ್ದೆ
ನನ್ನ ಊರಿನಲ್ಲಿ 'ಗೇ' ಎನ್ನುವ ಸಂಗತಿಯ ಕುರಿತು ಯಾರೂ ಮಾತನಾಡುತ್ತಿರಲಿಲ್ಲ. ಅಂತಹ ಶಬ್ದವೇ ಅವರಿಗೆ ಗೊತ್ತಿರಲಿಲ್ಲ. ಚಿಕ್ಕ ಊರಿನ ಸಮಾಚಾರವನ್ನು ಬಿಟ್ಟು ಬಿಡಿ, ರಾಜ್ಯದ ಪ್ರಮುಖ ದೈನಿಕಗಳಲ್ಲೂ ಈ ವಿಷಯದ ಕುರಿತು ಯಾವುದೇ ಮಾಹಿತಿ ಇರುತ್ತಿರಲಿಲ್ಲ. ಎರಡು ಸಾವಿರ ವರ್ಷ ಹಳೆಯದಾದ ನನ್ನ ಮಾತೃಭಾಷೆಯಲ್ಲಿ 'ಗೇ' ಪದಕ್ಕೆ ಸಮಾನಾರ್ಥಕವಾದ ಪದವೊಂದು ಇಲ್ಲ ಎಂದರೆ ನೀವೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಇತ್ತೀಚಿನ ವರ್ಷಗಳಲ್ಲಿ ಸಮಾನಾರ್ಥಕ ಪದವನ್ನು ಹೊಸದಾಗಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಸ್ವಲ್ಪ ಮಟ್ಟಿಗೆ ಆಗಿನ ಇಂಗ್ಲಿಷ್ ಪತ್ರಿಕೆಗಳಲ್ಲಿ 'ಗೇ' ಜಗತ್ತಿನ ಕುರಿತ ವಿಷಯ ಇರುತ್ತಿತ್ತು. ಆದರೆ ನನಗೆ ಆಗ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ. ಜೊತೆಗೆ ಆಗ ಇಂಟರ್ನೆಟ್, ಮೊಬೈಲ್ ಇತ್ಯಾದಿಗಳೇನೂ ಇರಲಿಲ್ಲ. ನಮ್ಮ ಪುಟ್ಟ ಊರೇ ನಮ್ಮ ಪ್ರಪಂಚವಾಗಿತ್ತು. ಬಡತನದ ಕುಟುಂಬ ನಮ್ಮದಾದ್ದರಿಂದ ಪ್ರವಾಸಕ್ಕೆ ದೊಡ್ಡ ಊರಿಗೆ ಹೋಗುವ ಸಂಪ್ರದಾಯವೂ ನಮ್ಮಲ್ಲಿರಲಿಲ್ಲ. ಆದ್ದರಿಂದ ನನ್ನ ವಿಚಿತ್ರ ಪರಿಸ್ಥಿತಿ ಏನೆಂಬುದು ನನಗಂತೂ ಅರ್ಥವಾಗುತ್ತಿರಲಿಲ್ಲ. ಏನೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂಬ ಭಾವ ನನ್ನಲ್ಲಿ ಮೂಡಿತ್ತು. ಅದರಿಂದ ಹೇಗಾದರೂ ತಪ್ಪಿಸಿಕೊಂಡು ಎಲ್ಲರಂತೆ 'ಸಾಮಾನ್ಯ'ನಾಗಿ ಬಿಡಬೇಕೆಂದು ಹಪಹಪಿಸುತ್ತಿದ್ದೆ.

ಕನ್ನಡ ಸಾಹಿತ್ಯದಲ್ಲಿಯೂ ಇಲ್ಲದ 'ಗೇ' ಸ್ವಭಾವ
ನಮ್ಮ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ವಿಶೇಷವಾಗಿದೆ. ಸಾವಿರ ವರ್ಷಗಳಿಂದಲೇ ಮಹಾಕಾವ್ಯಗಳನ್ನು ಇವರು ರಚಿಸುತ್ತಾ ಬಂದಿದ್ದಾರೆ. ನಮ್ಮ ಸೃಜನಶೀಲ ಸಾಹಿತ್ಯವು ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲುವಷ್ಟು ಪ್ರಬುದ್ಧವಾಗಿದೆ. ಆದರೆ ವ್ಯಂಗ್ಯವೇನೆಂದರೆ ಇಲ್ಲಿಯೂ ಗೇ ಜಗತ್ತನ್ನು ಪರಿಚಯಿಸುವ ಧೈರ್ಯ, ಆಸಕ್ತಿಯನ್ನು ಯಾರೂ ತೋರಿಸಿಲ್ಲದಿರುವುದು. ಬಾಲ್ಯದಿಂದಲೇ ನಾನು ವಿಪರೀತವಾಗಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡವನು. ಯಾವುದಾದರೂ ಪುಸ್ತಕದಲ್ಲಿ ನನ್ನ ಸ್ವಭಾವದಂತಹ ಪಾತ್ರವೊಂದು ಬಂದು ಬಿಡುತ್ತದೆಯೋ ಎಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಪುಸ್ತಕ ಓದುತ್ತಿದ್ದೆ. ಮೂರು ನಾಲ್ಕು ಹಿರಿಯ ಲೇಖಕರು ಈ ಕುರಿತು ಬರೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರೆಲ್ಲರೂ ಒಂದೇ ಬಗೆಯ ನಿಲುವನ್ನು ತಾಳುತ್ತಾರೆ. 'ಸಮಾಜದ ಅತ್ಯಂತ ದುರುಳ ವ್ಯಕ್ತಿ ಮಾತ್ರ ಸಲಿಂಗ ವ್ಯಕ್ತಿಯೊಡನೆ ಕಾಮದಲ್ಲಿ ತೊಡಗುತ್ತಾನೆ. ಹೆಣ್ಣಿನ ಸಂಪರ್ಕವೇ ಸಿಗದ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಅವನು ಗಂಡಿನ ದೇಹವನ್ನು ಬಯಸುತ್ತಾನೆ. ಆ ದೇಹವನ್ನು ಅವನು ಹೆಣ್ಣಿನ ದೇಹವೆಂದೇ ಊಹಿಸಿಕೊಂಡು ರತಿಕ್ರೀಡೆ ನಡೆಸುತ್ತಾನೆ. ಒಮ್ಮೆ ಹೆಣ್ಣಿನ ಸಂಪರ್ಕ ಸಿಕ್ಕ ತಕ್ಷಣ ಅವನ ಈ 'ವ್ಯಾಧಿ' ಸರಿ ಹೋಗುತ್ತದೆ' ಎಂಬುದು ಅವರ 'ಗೇ' ನೋಟದ ಒಟ್ಟಾರೆ ತಿರುಳು. ಆದರೆ ಇದು ನನ್ನ ಪಾತ್ರ ಚಿತ್ರಣವಲ್ಲವೆಂದು ನನಗೆ ಚೆನ್ನಾಗಿ ಗೊತ್ತಾಗುತ್ತಿತ್ತು. ದೇವರಾಣೆಗೂ ನಾನು ದುರುಳ ವ್ಯಕ್ತಿಯಾಗಿರಲಿಲ್ಲ. ಜೊತೆಗೆ ಕಣ್ಣಿನ ಮುಂದೆ ಹಲವಾರು ಚೆಂದುಳ್ಳೆ ಚೆಲುವೆಯರು ಅಡ್ಡಾಡುತ್ತಿದ್ದರೂ ನನಗೆ ಆಕರ್ಷಕವಾಗಿ ಕಾಣುತ್ತಿದ್ದುದು ಗಂಡಿನ ದೇಹವೇ ಹೊರತು ಹೆಣ್ಣಿನದಲ್ಲ ಎಂಬುದು ಸ್ಪಷ್ಟವಿತ್ತು.

ಲೈಂಗಿಕತೆ ಗೌಪ್ಯವಾಗಿರಿಸಿಕೊಂಡ ಸಾಹಿತಿಗಳು
ಹಾಗಂತ ಕನ್ನಡ ಸಾಹಿತ್ಯ ಲೋಕದಲ್ಲಿ ಯಾವ ಲೇಖಕನೂ ಈ ಹಿಂದೆ 'ಗೇ' ಆಗಿರಲಿಲ್ಲ ಎಂದು ನೀವು ಊಹಿಸಿದರೆ ತಪ್ಪಾಗುತ್ತದೆ. ಹಲವಾರು 'ಗೇ' ಮತ್ತು 'ಲೆಸ್ಬಿಯನ್' ಲೇಖಕರು 'ಸ್ಟ್ರೇಟ್' ಸಾಹಿತ್ಯವನ್ನು ರಚಿಸಿ ಹೋಗಿದ್ದಾರೆ ಮತ್ತು ಈಗಲೂ ಕೆಲವರು ತಮ್ಮ ಲೈಂಗಿಕತೆಯನ್ನು ಗೌಪ್ಯದಲ್ಲಿರಿಸಿ ಬೇರೆ ಬಗೆಯ ಸಾಹಿತ್ಯ ರಚಿಸುತ್ತಿದ್ದಾರೆ. ಅವರೊಡನೆ ಒಡನಾಡಿದ, ಇನ್ನೂ ಬದುಕಿರುವ ಹಲವಾರು ಸಾಹಿತಿಗಳು ಅಂತಹವರ ಲೈಂಗಿಕತೆಯನ್ನು ಕುರಿತು ಇತ್ತೀಚೆಗೆ ನನ್ನೊಡನೆ ಮುಕ್ತವಾಗಿ ಮಾತಾಡುತ್ತಿದ್ದಾರೆ. ಸಾಹಿತ್ಯ ಸಮಾರಂಭಗಳಿಗೆ ಪರ ಊರಿಗೆ ಹೋದಾಗ ಸಾಮಾನ್ಯವಾಗಿ ಇಬ್ಬರು ಪುರುಷ ಲೇಖಕರು ಒಂದೇ ಕೊಠಡಿಯನ್ನು ಹಂಚಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ರಾತ್ರಿಯ ಯಾವುದೋ ಹೊತ್ತಿನಲ್ಲಿ ಆ 'ಗೇ' ಸಾಹಿತಿಗಳು ತಮ್ಮೊಡನೆ ದೈಹಿಕ ಸಮಾಗಮವನ್ನು ಬಯಸಿ ಹತ್ತಿರ ಬಂದಾಗ, ಅವರ ಕೆನ್ನೆಗೆ ಬೀಸಿ ಬಿಗಿದು ಹೇಗೆ ತಾವು ತಮ್ಮ 'ಮಾನರಕ್ಷಣೆ' ಮಾಡಿಕೊಂಡೆವೆಂಬುದನ್ನು 'ಹೆಮ್ಮೆ'ಯಿಂದ ನನಗೆ ಹೇಳಿದ್ದಾರೆ. ಆದರೆ ಅಂತಹ ಯಾವುದೇ 'ಕ್ವೀರ್' ಲೇಖಕರೂ ತಮ್ಮ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಬರೆಯುವ ಧೈರ್ಯವನ್ನು ತೋರಿಸಲಿಲ್ಲ. ಅದರಿಂದಾಗಿ ನನ್ನಂತಹ ಪುಟ್ಟ ಊರಿನ ಕನ್ನಡ ಮಾತ್ರ ಗೊತ್ತಿರುವ ಹುಡುಗರು ಕತ್ತಲೆಯಲ್ಲಿಯೇ ಉಳಿಯುವಂತಾಯ್ತು; ಅಪರಾಧಿ ಭಾವದಲ್ಲಿ ಬಳಲುವಂತಾಯ್ತು. ಬಹುಶಃ ಅಂತಹ ಧೈರ್ಯ ತೋರುವುದಕ್ಕೆ ಅವರ ಕಾಲವೂ ಅಷ್ಟೊಂದು ಪಕ್ವವಾಗಿರಲಿಲ್ಲವೇನೋ ಎಂಬ ಅನುಮಾನವೂ ನನಗೆ ಮೂಡುತ್ತದೆ.

ಓದಿ'ಗೇ' ಆಗದ ಸಮಸ್ಯೆ...
ಸುಮಾರು 1985ರ ಹೊತ್ತಿಗೆ ನಾನು ಇಂಜಿನಿಯರಿಂಗ್ ಕಲಿಯಲು ದೂರದ ಊರಿಗೆ ಹೋದೆ. ವಿದ್ಯಾಭ್ಯಾಸದಲ್ಲಿ ನಾನು ತುಂಬಾ ಚುರುಕಾಗಿದ್ದರಿಂದ, ಒಳ್ಳೆಯ ಕಾಲೇಜಿನಲ್ಲಿಯೇ ಓದುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ ಅಷ್ಟೇನೂ ಬೇರೆಯಾಗಿರಲಿಲ್ಲ. ಹುಡುಗಿಯರ ಬಗ್ಗೆ ನನ್ನ ಗೆಳೆಯರು ವಿಪರೀತವಾಗಿ ಮಾತನಾಡುತ್ತಿದ್ದರು. ಅವರನ್ನು ಮೆಚ್ಚಿಸುವ ಸಲುವಾಗಿ ನಾನೂ ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಮಾತಾಡಿ ನನ್ನ 'ಗಂಡಸುತನ'ವನ್ನು ಪ್ರತಿಷ್ಠಾಪಿಸಲು ಹೆಣಗಾಡುತ್ತಿದ್ದೆ. ಆದರೆ 'ಗೇ' ಜಗತ್ತಿನ ಬಗ್ಗೆ ಯಾರಿಗೂ ತಿಳಿವಳಿಕೆ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಆ ವಿಷಯ ಬಂದರೂ, 'ಗೇ' ಜಗತ್ತಿನ ಬಗೆಗಿನ ಅವರ ಊಹೆಗಳೆಲ್ಲವೂ ಅಜ್ಞಾನದಿಂದ ತುಂಬಿರುತ್ತಿದ್ದವು. ಬಹುತೇಕರು ನನ್ನಂತಹದೇ ಪುಟ್ಟ ಊರಿನ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಅವರ ಅನುಭವ ಬೇರೆಯಾಗಿಯೇನೂ ಇರುತ್ತಿರಲಿಲ್ಲ.

ಮೂತ್ರಕ್ಕೆ ಹೋದಾಗ ಪರದಾಟ
ನನ್ನ ದೈಹಿಕ ಭಾವನೆಗಳನ್ನು ಎಷ್ಟು ದಿನವೆಂದು ಹತ್ತಿಕ್ಕಲು ಸಾಧ್ಯ? ಅದು ಬೇರೆಯದೇ ರೂಪದಲ್ಲಿ ನನಗೆ ವಿಪರೀತ ತೊಂದರೆಗಳನ್ನು ಕೊಡಲು ಪ್ರಾರಂಭಿಸಿತು. ಕಾಲೇಜು ಸೇರುವ ಹೊತ್ತಿಗಾಗಲೇ ನನಗೆ ಇಪ್ಪತ್ತರ ಹರೆಯ. ದೈಹಿಕ ಬಯಕೆಗಳು ವಿಪರೀತವಾಗಿ ಕಾಡುವ ಹೊತ್ತದು. ಈ ಹೊತ್ತಿನಲ್ಲಿ ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಲು ಹೋದಾಗ ನನಗೆ ಒಂದು ವಿಚಿತ್ರ ಸಮಸ್ಯೆ ಕಾಡಲು ಶುರುವಿಟ್ಟಿತು. ನನ್ನ ಪಕ್ಕದಲ್ಲಿಯೇ ಹರೆಯದ ಹುಡುಗನೊಬ್ಬ ಮೂತ್ರ ವಿಸರ್ಜಿಸಲು ನಿಂತಿದ್ದರೆ ನಾನು ಉದ್ರೇಕಗೊಳ್ಳುತ್ತಿದ್ದೆ. ಆ ಕಾರಣದಿಂದಾಗಿ ನನಗೆ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಸಾಮಾನ್ಯವಾಗಿ ಪೀರಿಯಡ್‌ಗಳ ಮಧ್ಯದಲ್ಲಿ ಒಂದೈದು ನಿಮಿಷ ಮಾತ್ರ ಮೂತ್ರ ವಿಸರ್ಜಿಸಲು ಬಿಡುವು ಕೊಡುತ್ತಿದ್ದರು. ಆಗ ಇಡೀ ಕಾಲೇಜಿನ ಹುಡುಗರೆಲ್ಲರೂ ಶೌಚಾಲಯಕ್ಕೆ ನುಗ್ಗುತ್ತಿದ್ದರು. ನಾನು ಮುಜುಗರದಿಂದ ಒದ್ದಾಡುತ್ತಿದ್ದೆ. ಮತ್ತೆ ವಾಪಾಸು ಸಂಜೆ ಹಾಸ್ಟೆಲ್ಗೆ ಹೋಗುವ ತನಕ ಮೂತ್ರ ಬಿಗಿ ಹಿಡಿದುಕೊಂಡು ಅವಸ್ಥೆ ಪಡುತ್ತಿದ್ದೆ.

ರೈಲಲ್ಲಾದ ಅವಮಾನ
ಹಾಗಂತ ಊರಿನಲ್ಲಿ ಅಥವಾ ಕಾಲೇಜಿನಲ್ಲಿ ಗೇ ಹುಡುಗರೇ ಇರಲಿಲ್ಲ ಎಂದರೆ ನಾನು ಒಪ್ಪುವುದಿಲ್ಲ. ಸಾಕಷ್ಟು ಜನರು ಇದ್ದಿರಲೇ ಬೇಕು. ಆದರೆ ಯಾರು ನಮ್ಮವರೆಂದು ಅರ್ಥ ಮಾಡಿಕೊಳ್ಳಲು ಗೊತ್ತಾಗುತ್ತಿರಲಿಲ್ಲ. ಭಾವನೆಗಳೆಲ್ಲವನ್ನೂ ಗೌಪ್ಯದಲ್ಲಿಯೇ ಇಟ್ಟು ವಿಭಿನ್ನವಾಗಿ ನಟಿಸುತ್ತಿರುವಾಗ, ಒಬ್ಬರಿಗೊಬ್ಬರು ಭೇಟಿಯಾಗುವುದಾದರೂ ಹೇಗೆ? ಈ ಪರಿಸ್ಥಿತಿ ಮತ್ತೊಂದು ಸಮಸ್ಯೆಗೆ ನನ್ನನ್ನು ನೂಕುತ್ತಿತ್ತು. ದೇಹದ ಬಯಕೆ ವಿಪರೀತವಾದಾಗ ಬಸ್ಸಿನಲ್ಲಿಯೋ, ರೈಲಿನಲ್ಲಿಯೋ ಪಕ್ಕದಲ್ಲಿ ಕುಳಿತ ಯಾರಾದರೂ ಅಪರಿಚಿತ ಗಂಡಸರ ಹತ್ತಿರ ಸಲಿಗೆ ತೋರಲು ಪ್ರಚೋದಿಸುತ್ತಿತ್ತು. ಆದರೆ 'ಗೇ' ಅಲ್ಲದ ವ್ಯಕ್ತಿ ಹೀಗೆ ಅಪರಿಚಿತ ಹುಡುಗನ ಕುಚೇಷ್ಟೆಯನ್ನು ಹೇಗೆ ಸಹಿಸಿಯಾನು? ಒಮ್ಮೆಯಂತೂ ರೈಲಿನಲ್ಲಿ ಒಬ್ಬ ಯುವಕ ನನ್ನ ಕೆನ್ನೆಗೆ ಹೊಡೆದು ಎಲ್ಲರೆದುರು ಅವಮಾನ ಮಾಡಿ ಬಿಟ್ಟಿದ್ದ. ಅದರ ವಿವರಗಳನ್ನು ನಿಮಗೆ ನಾನು ಹೇಳಲೇ ಬೇಕು.

ಭಾರತದಲ್ಲಿ ರೈಲುಗಳು ಬಹು ನಿಧಾನಗತಿಯಲ್ಲಿ ಚಲಿಸುತ್ತವೆಯಾದ ಕಾರಣ, ನಾವು ರಾತ್ರಿಯ ಹೊತ್ತು ನಿದ್ದೆ ಮಾಡುತ್ತಾ ಪ್ರಯಾಣ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಅದಕ್ಕಾಗಿ ರೈಲಿನಲ್ಲಿ 'ಬರ್ತ್'ಗಳನ್ನು ಕಾದಿರಿಸಬಹುದು. ಆದರೆ ವಿಪರೀತ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರಾದ್ದರಿಂದ, ಕೆಲವೊಮ್ಮೆ ನಮಗೆ ಮಲಗಲು ಸಂಪೂರ್ಣವಾಗಿ ಬರ್ತ್ ಸಿಗುವುದಿಲ್ಲ. ಅದಕ್ಕೆ ಬದಲು ಒಂದೇ 'ಬರ್ತ್' ಅನ್ನು ಇಬ್ಬರಿಗೆ ಕೊಡುತ್ತಾರೆ. ಅಂತಹ ಒಂದು ಪ್ರಯಾಣದಲ್ಲಿ ಬರ್ತ್ ಒಂದನ್ನು ನಾನು ಸುಂದರನಾದ ಯುವಕನೊಂದಿಗೆ ಹಂಚಿಕೊಳ್ಳಬೇಕಾಯ್ತು. ಇಬ್ಬರೂ 'ಬರ್ತ್'ನಲ್ಲಿ ಮಲಗಿಕೊಳ್ಳದೆ ಕುಳಿತುಕೊಂಡು ಪ್ರಯಾಣ ಮಾಡುತ್ತಿದ್ದೆವು. ಆದರೆ ರಾತ್ರಿ ಸರಿಯುತ್ತಿದ್ದಂತೆಯೇ ಕಣ್ಣುಗಳು ಎಳೆಯತೊಡಗಿದವು. ಮಲಗಿಕೊಳ್ಳಲು ಮನಸ್ಸು ಪೀಡಿಸತೊಡಗಿತು. 

ಆದರೆ 'ಬರ್ತ್' ಕೇವಲ ಒಬ್ಬರಿಗೆ ಮಾತ್ರ ಮಲಗಲು ಸಾಕಾಗುವಷ್ಟಿರುತ್ತದೆ. ಆದರೆ '69' ರೀತಿಯಲ್ಲಿ ಮಲಗಿದರೆ, ಇಬ್ಬರು ಹೇಗೋ ಹೊಂದಿಕೊಂಡು ಮಲಗಬಹುದು. ಆಗ ಆ ಯುವಕನೇ ನನ್ನನ್ನು '69 ರೀತಿ ಮಲಗಿಕೊಳ್ಳೋಣವೇ?' ಎಂದು ಕೇಳಿಕೊಂಡ. ಸ್ವರ್ಗವೇ ಮನೆ ಬಾಗಿಲಿಗೆ ಬಂದಾಗ ಬೇಡವೆನ್ನಲಾಗುತ್ತದೆಯೆ? ನಾನು ಸಂತೋಷದಿಂದಲೇ ಒಪ್ಪಿಕೊಂಡೆ. ಇಬ್ಬರೂ ಹೊದಿಕೆ ಹೊದೆದುಕೊಂಡು ಮಲಗಿಕೊಂಡೆವು. ರಾತ್ರಿಯ ಹೊತ್ತಾದ್ದರಿಂದ ಇಡೀ ರೈಲಿನಲ್ಲಿ ದೀಪವನ್ನು ಆರಿಸಿ, ಎಲ್ಲರೂ ನಿದ್ರೆ ಮಾಡತೊಡಗಿದರು. ನನಗೆ ನಿದ್ರೆ ಬರುವುದಾದರೂ ಹೇಗೆ ಸಾಧ್ಯ? ನಿಧಾನಕ್ಕೆ ಆತನಿಗೆ ತೊಂದರೆ ಕೊಡಲು ಪ್ರಾರಂಭಿಸಿದೆ. ಆ ಮನುಷ್ಯ ಸಂಪೂರ್ಣವಾಗಿ 'ಸ್ಟ್ರೇಟ್' ಆಗಿರಬೇಕು. ಆದ್ದರಿಂದ ಒಂದು ಹೊತ್ತಿಗೆ ಅವನಿಗೆ ಸಿಟ್ಟು ಬಂತು. ಅವನು ಜೋರಾಗಿ ಗಲಾಟೆ ಮಾಡಲಾರಂಭಿಸಿದ. ಇಡೀ ಭೋಗಿಯಲ್ಲಿದ್ದ ಜನರೆಲ್ಲಾ ಎದ್ದು ಬಿಟ್ಟರು. ಅವನು ನನ್ನ ಅತ್ಯಂತ ಕೀಳು ಭಾಷೆಯಿಂದ ನಿಂದಿಸಲಾರಂಭಿಸಿದ. 

ನಾನು ವಿರೋಧಿಸಲು ಪ್ರಯತ್ನಿಸಿದೆ. ಲೋಕದ ಕಣ್ಣಲ್ಲಿ ನಾನೇ ತಪ್ಪಿತಸ್ಥನಾಗಿದ್ದೆ. ಆದರೆ ನನ್ನನ್ನು ಅಂತಹ ಪರಿಸ್ಥಿತಿಗೆ ದೂಡಿದ ಸಮಾಜದ ಅಪರಾಧವನ್ನು ಅವರಿಗೆ ವಿವರಿಸುವುದು ಹೇಗೆ? ಸಮಾಜದ ಸಹಮತವಿಲ್ಲದ ಅಲ್ಪಸಂಖ್ಯಾತನೊಬ್ಬ ಎಷ್ಟೆಂದು ವಿರೋಧ ಮಾಡಲು ಸಾಧ್ಯ? ಒಂದು ಹಂತದಲ್ಲಿ ಅವನು ಬೀಸಿ ನನ್ನ ಕೆನ್ನೆಗೆ ಹೊಡೆದ. ಸಾರ್ವಜನಿಕವಾಗಿ ಎಲ್ಲರೆದುರು ಏಟು ತಿಂದಿದ್ದು ನನಗೆ ತುಂಬಾ ದುಃಖವನ್ನುಂಟು ಮಾಡಿತು. ತಕ್ಷಣ ನನ್ನ ಲಗೇಜನ್ನು ತೆಗೆದುಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದುಬಿಟ್ಟೆ. ಯಾವುದೋ ಅಪರಿಚಿತ ರೈಲುನಿಲ್ದಾಣದಲ್ಲಿ ರಾತ್ರಿಯನ್ನು ಏಕಾಂಗಿಯಾಗಿ ಅಳುತ್ತಾ ಕಳೆದಿದ್ದೆ.

ನನ್ನೊಂದಿಗೆ ಪಯಣಿಸಲು ಕಂಗಾಲಾದ ಯುವತಿ
ಈ ಘಟನೆಯ ನಂತರ ನನಗೆ ರೈಲಿನಲ್ಲಿ ಪ್ರಯಾಣಿಸುವುದಕ್ಕೇ ಭಯವಾಗುತ್ತಿತ್ತು. ಎಷ್ಟೇ ಅಪರಿಚಿತ ಜನರೆಂದರೂ ಅವರೆದುರು ಅವಮಾನಗೊಳ್ಳುವುದು ಯಾರಿಗೆ ತಾನೆ ಸಹಿಸಲು ಸಾಧ್ಯ? ಆದರೆ ದೇಹದ ಬಯಕೆ ನನ್ನ ಮನಸ್ಸಿನ ಮಾತುಗಳನ್ನು ಕೇಳುತ್ತಲೇ ಇರಲಿಲ್ಲ. ಪಕ್ಕದಲ್ಲಿ ಮಲಗಿದ್ದ ಗಂಡಿನ ಆಕರ್ಷಣೆಯನ್ನು ಕಳಚಿಕೊಂಡು ನಿದ್ರಿಸುವ ಶಕ್ತಿ ಆ ಹರೆಯದಲ್ಲಿ ನನಗೆ ಇರಲಿಲ್ಲ. ಇಡೀ ರಾತ್ರಿ ಚಲಿಸುವ ರೈಲಿನ ಬಾಗಿಲ ಬಳಿ ನಿಂತು ಪ್ರಯಾಣ ಮಾಡುತ್ತಿದ್ದೆ. ರಾತ್ರಿಯೆಲ್ಲಾ ನಿದ್ದೆಗೆಡುತ್ತಿದ್ದರಿಂದ ಮರುದಿನ ತುಂಬಾ ಸುಸ್ತಾಗಿ ಹೋಗುತ್ತಿತ್ತು. 

ಇಂತಹ ಸಂದರ್ಭದಲ್ಲಿ ಒಂದು ವಿಶೇಷ ಸಂಗತಿ ನಡೆಯಿತು. ಒಮ್ಮೆ ನಾನು ಪ್ರಯಾಣ ಮಾಡುವಾಗ ಮತ್ತೊಮ್ಮೆ 'ಬರ್ತ್' ಅನ್ನು ಹಂಚಿಕೊಳ್ಳುವ ಪರಿಸ್ಥಿತಿ ಬಂತು. ಯಾರು ನಮ್ಮೊಡನೆ 'ಬರ್ತ್' ಹಂಚಿಕೊಳ್ಳುತ್ತಾರೆ ಎಂಬ ಸಂಗತಿ ನಾವು ರೈಲನ್ನು ಹತ್ತುವ ತನಕವೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರಯಾಣದ ಸಮಯ ಹತ್ತಿರವಾದಂತೆಲ್ಲಾ ನಾನು ಆತಂಕಗೊಳ್ಳುತ್ತಿದ್ದೆ. ಹಲವಾರು ಬಾರಿ ದೇವರಲ್ಲಿ 'ಯಾರಾದರೂ ಅನಾಕರ್ಷಕನಾದ ಯುವಕನೋ ಅಥವಾ ಮುದುಕನೊಂದಿಗೆ ಬರ್ತ್ ಹಂಚಿಕೊಳ್ಳುವಂತೆ ಮಾಡು ತಂದೆ. ಚಂದದ ಯುವಕನೊಡನೆ ಬರ್ತ್ ಹಂಚಿಕೊಳ್ಳದ ಹಾಗೆ ನೋಡಿಕೋ. ಮತ್ತೊಂದು ಅವಮಾನವನ್ನು ನಾನು ಸಹಿಸಲಾರೆ' ಎಂದು ಬೇಡಿಕೊಳ್ಳತೊಡಗಿದೆ. ಆದರೆ ಅತ್ಯಂತ ವಿಶೇಷವಾಗಿ ಆ ದಿನ ನನ್ನ ಬರ್ತ್ ಅನ್ನು ಹಂಚಿಕೊಳ್ಳುವ ವ್ಯಕ್ತಿಯು ಒಬ್ಬ ಸುಂದರ ಕಾಲೇಜು ಯುವತಿಯಾಗಿದ್ದಳು. ನನಗೆ ಸಮಾಧಾನವಾಗಿ ಬಿಟ್ಟಿತ್ತು. ಯುವತಿ ಯಾವತ್ತೂ ನನ್ನನ್ನು ಆಕರ್ಷಿಸುವುದಿಲ್ಲವಾದ್ದರಿಂದ ಯಾವುದೇ ಸಮಸ್ಯೆಯಿಲ್ಲದೆ ರಾತ್ರಿ ನಿದ್ದೆ ಮಾಡಬಹುದು, ಆತಂಕವಿಲ್ಲದೆ ಪ್ರಯಾಣ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದೆ. ಆದರೆ ಆ ಯುವತಿ ಮಾತ್ರ ಕಂಗಾಲಾಗಿ ಬಿಟ್ಟಳು. ತನ್ನ ತಂದೆಗೆ ಫೋನಾಯಿಸಿ ತೆಲುಗು ಭಾಷೆಯಲ್ಲಿ (ದಕ್ಷಿಣ ಭಾರತದ ಮತ್ತೊಂದು ರಾಜ್ಯದ ಭಾಷೆ) ಮಾತನಾಡಿ, ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸ ತೊಡಗಿದಳು. ನನಗೆ ತೆಲುಗು ಬರುವುದಿಲ್ಲ ಎಂದು ಭಾವಿಸಿದ ಆಕೆ ಸ್ವಲ್ಪ ಜೋರಾಗಿಯೇ ಮಾತನಾಡುತ್ತಿದ್ದಳು. ಆದರೆ ಎರಡು ರಾಜ್ಯಗಳ ಗಡಿ ಪ್ರದೇಶದ ಜಿಲ್ಲೆಯಲ್ಲಿ ಬೆಳೆದ ನನಗೆ ಆಕೆಯ ಮಾತು ಅರ್ಥವಾಗುತ್ತಿತ್ತು. 'ಈ ಯುವಕನನ್ನ ನೋಡಿದರೆ ಯಾಕೋ ನಂಗೆ ನಂಬಿಕೆ ಬರ್ತಾ ಇಲ್ಲ. ರಾತ್ರಿಯ ಹೊತ್ತು ಈತ ಖಂಡಿತವಾಗಿಯೂ ನನಗೆ ತೊಂದರೆ ಕೊಡ್ತಾನೆ ಅನ್ನಿಸ್ತಾ ಇದೆ' ಎಂದೆಲ್ಲಾ ಹೇಳ ತೊಡಗಿದಳು. ಕೊನೆಗೆ ರೈಲಿನ ಟಿಕೆಟ್ ಕಲೆಕ್ಟರ್ ಜೊತೆಗೆ ಮಾತನಾಡಿ, ಆತನಿಗೆ ಸಾಕಷ್ಟು ಲಂಚವನ್ನು ನೀಡಿ ಆಕೆ ಬೇರೊಂದು ಬರ್ತ್ಗೆ ಲಗೇಜ್ ಸಮೇತ ಹೊರಟು ಹೋದಳು. ಆಕೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಬ್ಬ ಹರೆಯದ ಸುಂದರ ಹುಡುಗನೊಬ್ಬ ತನ್ನ ಲಗೇಜ್ ಸಮೇತ ನನ್ನ ಬರ್ತ್ ಕಡೆಗೆ ಬಂದು 'ಟಿಕೆಟ್ ಕಲೆಕ್ಟರ್ ನನಗೆ ಈ ಬರ್ತ್ ಅನ್ನು ನಿಮ್ಮೊಡನೆ ಹಂಚಿಕೊಳ್ಳಲು ಹೇಳಿದರು' ಎಂದ. 'ಅಯ್ಯೋ ನನ್ನ ಗ್ರಹಚಾರವೇ!' ಎಂದು ಹಣೆಯ ಮೇಲೆ ನನ್ನ ಕೈಯನ್ನಿಟ್ಟೆ.

ಅಂತೂ ಇಂತೂ ಸಿಕ್ಕಿದ ಸಂಗಾತಿ
ಕಾಲೇಜು ಶಿಕ್ಷಣ ಮುಗಿದ ನಂತರ ನನಗೆ ಒಬ್ಬ ಸಂಗಾತಿಯ ಜೊತೆ ಸಿಕ್ಕಿತು. ಅಚ್ಚರಿಯ ವಿಷಯವೆಂದರೆ ಅವನು ನನ್ನ ಸಹಪಾಠಿಯೇ ಆಗಿದ್ದ. ಕಾಲೇಜಿನಲ್ಲಿ ಒಮ್ಮೆಯೂ ನಮ್ಮ ಅಭಿಲಾಷೆಯನ್ನು ಹಂಚಿಕೊಳ್ಳದ ನಾವು, ಓದು ಮುಗಿದ ನಂತರ ಜೊತೆಗೂಡಿದ್ದು ನನಗೆ ವಿಶೇಷವೆನ್ನಿಸುತ್ತೆ. ಸಂವಹನ ಮಾಧ್ಯಮಗಳೇ ಇಲ್ಲದ ಕಾರ್ಗತ್ತಲಿನಲ್ಲಿ ಬದುಕುವಾಗ, ಅಕ್ಕ-ಪಕ್ಕದಲ್ಲಿದ್ದ ನಮ್ಮವರೇ ನಮಗೆ ಕಾಣದೆ ಹೋಗುವ ಸಾಧ್ಯತೆಗಳಿರುತ್ತವೆ. ಅದು ಹೇಗೋ ಆಕಸ್ಮಿಕವಾಗಿ ನಾವಿಬ್ಬರು ನಮ್ಮ ಸಮಾನ ಲೈಂಗಿಕ ಆಸಕ್ತಿಯನ್ನು ಗುರುತಿಸಿಕೊಂಡೆವು. ಒಂದು ವರ್ಷ ಕಾಲ ಹಗಲು-ಇರುಳೆನ್ನದೆ ಒಬ್ಬರಿಗೊಬ್ಬರು ದೇಹವನ್ನು ಹಂಚಿಕೊಂಡು ಸವಿದೆವು. ಅದು ನನ್ನ ಬದುಕಿನ ಅತ್ಯಂತ ಸಂತೋಷದ ಸಮಯ. ಆದರೆ ಆ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಅವನು ಬೈಸೆಕ್ಷುಯಲ್; ಹೆಣ್ಣು ಮತ್ತು ಗಂಡಿನ ಮೇಲೆ ಆಸಕ್ತಿ ಹೊಂದಿರುವಂತಹವನು. ಮದುವೆಯ ಆಹ್ವಾನ ಬಂದ ತಕ್ಷಣ ಒಪ್ಪಿಕೊಂಡು ಬಿಟ್ಟ. ಮದುವೆ ಅವನಿಗೆ ಸಾಮಾಜಿಕ ಭದ್ರತೆಯನ್ನು ಕೊಡುತ್ತಿತ್ತು. ಆದರೆ ಗಂಡಿನ ಹೊರತಾಗಿ ಹೆಣ್ಣಿನಲ್ಲಿ ಆಸಕ್ತಿಯಿಲ್ಲದ ನಾನು ತಬ್ಬಲಿಯಾಗಿ ಉಳಿದುಬಿಟ್ಟೆ. ಮದುವೆಯಾದ ನಂತರ ಅವನೆಂದೂ ಮತ್ತೆ ನನ್ನೊಡನೆ ಕೂಡಲು ಆಸಕ್ತಿ ತೋರಲಿಲ್ಲ. ತನ್ನ ಪುರುಷತ್ವಕ್ಕೆ ಅದು ಕುಂದೆನ್ನುವಂತೆ ವರ್ತಿಸಿ ದೂರ ಸರಿದುಬಿಟ್ಟ. ವಿಚಿತ್ರ ಅನಾಥ ಭಾವ ನನ್ನನ್ನು ಮುತ್ತಿಕೊಂಡಿತು.

ನಾನು ತಬ್ಬಲಿಯಾದೆ..
ಈ ಘಟನೆಯ ನಂತರ ನಾನು ಚಿಪ್ಪಿನಲ್ಲಿ ಸೇರಿಕೊಂಡು ಬಿಟ್ಟೆ. ಕಾಮವನ್ನೇ ತೊರೆದು ಮನುಷ್ಯ ಬದುಕಬಹುದು ಎಂಬ ವಿಚಿತ್ರ ನಂಬಿಕೆ ನನ್ನಲ್ಲಿ ಮೂಡತೊಡಗಿತ್ತು. ಆ ಹೊತ್ತಿನಲ್ಲಿಯೇ ನಾನು ಸಾಹಿತ್ಯಲೋಕಕ್ಕೆ ತೆರೆದುಕೊಳ್ಳತೊಡಗಿದ್ದೆ. ಸಾಹಿತ್ಯದ ಒಡನಾಟ ನನ್ನ ದೈಹಿಕ ಬಯಕೆಯನ್ನು ಹತ್ತಿಕ್ಕುವಷ್ಟು ಗಾಢವಾಗಿ ನನ್ನನ್ನು ಆವರಿಸಿಕೊಂಡು ಬಿಟ್ಟಿತು. ಸುಮಾರು ಇಪ್ಪತ್ತು ವರ್ಷಗಳ ಕಾಲ ಯಾವುದೇ ಗಂಡಿನ ಸಹವಾಸ ಇಲ್ಲದಂತೆ, ಅದಕ್ಕಾಗಿ ಹಾತೊರೆಯದಂತೆ ಬದುಕಿಬಿಟ್ಟೆ. ಕೆಲವು ವರ್ಷಗಳ ಕಾಲ ಒಬ್ಬ ಸ್ಟ್ರೇಟ್ ಹುಡುಗನೊಡನೆ ಗೆಳೆತನ ಮಾಡಿದೆನಾದರೂ, ಆ ಸಂಬಂಧ ಎಲ್ಲಿಗೂ ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಅಲ್ಲಿ ಗಳಿಸಿದ್ದಕ್ಕಿಂತಲೂ ಕಳೆದುಕೊಂಡಿದ್ದೇ ಹೆಚ್ಚಿತ್ತು. ಸಂತಸಕ್ಕಿಂತಲೂ ನೋವನ್ನು ಉಂಡಿದ್ದೇ ಹೆಚ್ಚು. ಅಷ್ಟರಲ್ಲಾಗಲೇ ನನ್ನ ವಯಸ್ಸು ನಲವತ್ತು ದಾಟಿ ಬಿಟ್ಟಿತ್ತು. ಇನ್ಯಾಕೆ ಕಾಮದ ಕಿರಿಕಿರಿ, ಸಾಹಿತ್ಯ ಸಾಗರದಲ್ಲಿಯೇ ಮುಳುಗಿಬಿಟ್ಟು ಉಳಿದ ಆಯುಷ್ಯವನ್ನು ಸವೆಸಿ ಬಿಟ್ಟರೆ ಆಯ್ತು ಎಂದುಕೊಂಡೆ. ಆದರೆ ಕಾಮವನ್ನು ಗೆಲ್ಲುವುದು ಅಷ್ಟು ಸುಲಭವೇನೂ ಅಲ್ಲ. ಅದು ತನ್ನ ವಿರಾಟ ಶಕ್ತಿಯನ್ನು ನಮಗೆ ಪರಿಚಯ ಮಾಡಿಕೊಡದೆ ಮರೆಯಾಗುವುದಿಲ್ಲ. ನನಗೆ ಕೆಟ್ಟ ದಿನಗಳು ಕಾದು ಕುಳಿತಿದ್ದವು.

ಶಾಪಗ್ರಸ್ಥನಂತೆ ಏಕಾಂಗಿಯಾದೆ..
ನನಗೂ ಮನೆಯಲ್ಲಿ ಮದುವೆಗಾಗಿ ವಿಪರೀತ ಒತ್ತಡಗಳಿದ್ದವು. ಆದರೆ ಏನೇನೋ ನೆಪಗಳನ್ನು ಕೊಡುತ್ತಾ ಅದನ್ನು ಮುಂದೂಡುತ್ತಲೇ ಬಂದಿದ್ದೆ. ಅಪ್ಪ-ಅಮ್ಮ ಇನ್ನಿಲ್ಲದಂತೆ ಹೇಳಿದರು, ಇತರರ ಮೂಲಕ ಹೇಳಿಸಿದರು. ಬೈದರು, ಅತ್ತರು, ಅಂಜಿಸಿದರು. ಯಾವುದಕ್ಕೂ ನಾನು ಬಗ್ಗಲಿಲ್ಲ. ಒಂದು ಹೆಣ್ಣನ್ನು ಸುಖಿಸಲು ಸಾಧ್ಯವಾಗದ ಮೇಲೆ ಮದುವೆಯಾಗುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ನನಗೆ ಸ್ಪಷ್ಟತೆಯಿತ್ತು. ಆ ಮದುವೆಯಿಂದಾಗಿ ಅವಳ ಬದುಕೂ ಹಾಳಾಗುತ್ತದೆ, ನನ್ನ ಬದುಕೂ ಹಾಳಾಗುತ್ತದೆ ಎಂಬುದು ನನಗೆ ತಿಳಿದಿತ್ತು. ನನ್ನ ವಿಭಿನ್ನ ಲೈಂಗಿಕತೆಯ ಸಂಗತಿಯನ್ನು ಅವರಿಗೆ ತಿಳಿಸುವುದೂ ಕಷ್ಟವಾಗಿತ್ತು. ಅವರಿಗೆ ಅದು ಎಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ನನಗೆ ಗೊತ್ತಿಲ್ಲ. ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದ ಅಪ್ಪ-ಅಮ್ಮ ಒಂದು ಹಂತದ ಮೇಲೆ ಸುಮ್ಮನಾಗಿಬಿಟ್ಟರು. 'ನಿನ್ನಿಷ್ಟ' ಎಂದು ಕೈಚೆಲ್ಲಿ ಬಿಟ್ಟರು. ನನ್ನ ಮೂವತ್ತನೆಯ ವಯಸ್ಸಿನಲ್ಲಿ ಅವರಿಬ್ಬರೂ ತೀರಿಕೊಂಡರು. ಅವರಿಗಾಗಿ ನಾನು ಎಷ್ಟೇ ದುಃಖ ಪಟ್ಟರೂ ಮನಸ್ಸಿನ ಮೂಲೆಯಲ್ಲಿ ಇನ್ನು ನನಗೆ ಮದುವೆಯಾಗೆಂದು ಒತ್ತಾಯ ಮಾಡುವವರು ಯಾರೂ ಇಲ್ಲ ಎಂಬ ನೆಮ್ಮದಿಯೂ ಮನೆ ಮಾಡಿತ್ತು. ಆದರೆ ಮುಂಬರುವ ದಿನಗಳಲ್ಲಿ ಶಾಪಗ್ರಸ್ಥನಂತೆ ಏಕಾಂಗಿಯಾಗಿ ಬದುಕುವ ಘೋರ ಸಂಕಷ್ಟದ ಕಲ್ಪನೆ ಆಗ ನನಗಿರಲಿಲ್ಲ.

ಮಾನಸಿಕ ಖಿನ್ನತೆಗೊಳಗಾದೆ
ಕೆಲವೇ ವರ್ಷಗಳಲ್ಲಿ ನಾನು ಮಾನಸಿಕ ಖಿನ್ನತೆಗೆ ಒಳಗಾದೆ. ಆ ಖಿನ್ನತೆ ಯಾವ ಹಂತವನ್ನು ತಾಳಿತೆಂದರೆ, ನನಗೆ ನಿದ್ರಾಹೀನತೆ ಶುರುವಾಯ್ತು. ದಿನಗಟ್ಟಲೆ, ವಾರಗಟ್ಟಲೆ ಒಂದು ಕ್ಷಣವೂ ನಿದ್ರೆಯಿಲ್ಲದೆ ಬಳಲಿದೆ. ನನ್ನ ಸಾಫ್ಟ್‌ವೇರ್ ವೃತ್ತಿಯಲ್ಲಿಯೂ, ಸಾಹಿತ್ಯದ ಪ್ರವೃತ್ತಿಯಲ್ಲಿಯೂ ನಾನು ಆಸಕ್ತಿಯನ್ನು ಕಳೆದುಕೊಳ್ಳತೊಡಗಿದೆ. ನನ್ನ ತಂದೆ-ತಾಯಿಗಳು ತೀರಿಕೊಂಡು ಆಗಲೇ ಹಲವು ವರ್ಷಗಳು ದಾಟಿದ್ದವು. ಇಬ್ಬರು ಅಕ್ಕಂದಿರಿದ್ದರೂ, ಅವರು ಬಹು ದೂರದ ಊರುಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ತಮ್ಮದೇ ಆದ ಸಂಸಾರದ ಜವಾಬ್ದಾರಿಗಳಿದ್ದವು. ಬೆಂಗಳೂರಿನ ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದೆನಾದ ಕಾರಣ ಖಿನ್ನತೆ ಇನ್ನಷ್ಟು ಹೆಚ್ಚಾಗತೊಡಗಿತು. ಒಂದು ಹಂತದಲ್ಲಂತೂ ನನಗೆ ಬದುಕುವುದೇ ಅರ್ಥಹೀನ ಎನ್ನಿಸಲಾರಂಭಿಸಿತ್ತು. ಯಾವುದಾದರೂ 'ಸುಲಭದ' ಆತ್ಮಹತ್ಯೆಯ ಮಾರ್ಗದ ಮೂಲಕ ಬದುಕನ್ನು ಕೊನೆಗೊಳಿಸಬೇಕು ಎಂದು ಬಹಳ ಸಲ ಆಲೋಚಿಸುತ್ತಿದ್ದೆ. ಈ ಹೊತ್ತಿನಲ್ಲಿ ಮನೋವೈದ್ಯರ ಬಳಿ ಹೋಗಿ ತೋರಿಸಿಕೊಂಡೆ. ಭಾರತದಲ್ಲಿ 'ಗೇ' ಸ್ನೇಹಿತ ಮನೋವೈದ್ಯರು ಸಿಗುವುದು ತುಂಬಾ ಅಪರೂಪ. ಬಹಳಷ್ಟು ವೈದ್ಯರು ಹೋಮೋಫೋಬಿಯಾದಿಂದ ಬಳಲುತ್ತಾರೆ. ನಾವು ಗೇ ಎಂದು ಗೊತ್ತಾದ ತಕ್ಷಣ ಚಿಕಿತ್ಸೆ ಮಾಡುವುದಕ್ಕೂ ನಿರಾಕರಿಸಿ ಬಿಡುತ್ತಾರೆ. ಒಬ್ಬ ಕ್ಯಾಥೊಲಿಕ್ ವೈದ್ಯನಂತೂ ನಾನು 'ಗೇ' ಬದುಕಿನ ಆಲೋಚನೆಯನ್ನು ಮನಸ್ಸಿನಿಂದ ಆಚೆ ತಳ್ಳಿ ಹಾಕದಿದ್ದರೆ ಯಾವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲವೆಂದು ಖಚಿತವಾಗಿ ಹೇಳಿದ. ಜೊತೆಗೆ ನಾನು 'ಗೇ' ಬದುಕಿನಲ್ಲಿ ಮುಂದುವರೆದರೆ ಬಹುಬೇಗನೆ ಎಚ್ಐವಿ ರೋಗವನ್ನು ಅಂಟಿಸಿಕೊಂಡು ಸತ್ತು ಬಿಡುತ್ತೇನೆಂದು ಹೆದರಿಸಿಬಿಟ್ಟ. ಕೊನೆಗೂ ಸರಿಯಾದ ವೈದ್ಯನನ್ನು ಹುಡುಕಿಕೊಳ್ಳುವುದು ದೊಡ್ಡ ಸಾಹಸದ ಕೆಲಸವಾಗಿತ್ತು.

ಕೈ ಹಿಡಿದ ಕನ್ನಡ ಸಾಹಿತ್ಯ
ಈ ಹೊತ್ತಿಗಾಗಲೇ ನಾನು ಕನ್ನಡದಲ್ಲಿ ಸುಮಾರು ಹನ್ನೆರಡು ಪುಸ್ತಕಗಳನ್ನು ಬರೆದಿದ್ದೆ. ನನ್ನ ಪುಸ್ತಕಗಳು ಬಹಳ ಜನಪ್ರಿಯವಾಗಿ, ನನಗೆ ಸಾಕಷ್ಟು ಅಭಿಮಾನಿಗಳಿದ್ದರು. ಆದರೆ ಯಾವತ್ತೂ 'ಗೇ' ಬದುಕಿನ ವೈಯಕ್ತಿಕ ಸಂಗತಿಗಳನ್ನು ಕಥಾರೂಪಿಯಾಗಿ ಬರೆಯಲು ನಾನು ಧೈರ್ಯ ತೋರಿರಲಿಲ್ಲ. ಅಂತಹ ಕತೆಗಳನ್ನು ಬರೆದರೆ ಯಾರಾದರೂ ಪತ್ರಿಕೆಯಲ್ಲಿ ಪ್ರಕಟಣೆ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನವೂ ನನಗಿತ್ತು. ಈ ಹಿಂದೆ ನಮ್ಮ ಹಿರಿಯ ಸಾಹಿತಿಗಳು ಹೇಗೆ ತಮ್ಮ 'ಗೇ' ಜೀವನದ ಲೈಂಗಿಕ ಸಂಗತಿಗಳನ್ನು ಮುಚ್ಚಿಟ್ಟು ಬೇರೆಯದನ್ನು ಬರೆದುಕೊಂಡು ಬದುಕು ದೂಡಿದ್ದರೋ, ಅಂತಹದೇ ಅಪ್ರಾಮಾಣಿಕ ದಾರಿಯಲ್ಲಿ ನಾನು ಕೂಡಾ ಸಾಗಿದ್ದೆ. ಆದರೆ ವಿಪರೀತ ಖಿನ್ನತೆಯ ಈ ಕಷ್ಟದ ದಿನಗಳಲ್ಲಿ ನನಗೆ ನನ್ನ ವೈಯಕ್ತಿಕ ಲೈಂಗಿಕ ಸಂಗತಿಗಳನ್ನು ಹೇಳಿಕೊಳ್ಳಲೇ ಬೇಕೆನ್ನಿಸಿತು. ನನ್ನ ಮನೋರೋಗಕ್ಕೆ ಮದ್ದನ್ನು ನಾನೇ ಕಂಡು ಹಿಡಿದುಕೊಳ್ಳಬೇಕೇ ಹೊರತು, ವೈದ್ಯರಿಂದ ಅದು ಸಾಧ್ಯವಿಲ್ಲ ಎನ್ನುವ ನಂಬಿಕೆ ನನ್ನಲ್ಲಿ ದಟ್ಟವಾಗಿ ಮೂಡತೊಡಗಿತು. ಆ ಹೊತ್ತಿನಲ್ಲಿಯೇ ನಾನು ಮೋಹನಸ್ವಾಮಿಯ ಮೂಲಕ ನನ್ನ ಅನುಭವಗಳನ್ನು ಹೇಳಿಕೊಳ್ಳತೊಡಗಿದೆ. ಮೋಹನಸ್ವಾಮಿಯ ಕತೆಗಳನ್ನು ಬರೆದಂತೆಲ್ಲಾ ನನ್ನ ಖಿನ್ನತೆ ಕಡಿಮೆಯಾಗುತ್ತಾ ಬಂದಿತು. ಮನಸ್ಸು ನೆಮ್ಮದಿಯನ್ನು ಕಾಣಲು ಪ್ರಾರಂಭವಾಯ್ತು. ಅನಂತರ 2013ರಲ್ಲಿ ಅದರ ಮೊದಲ ಆವೃತ್ತಿಯನ್ನು ನನ್ನದೇ ಪ್ರಕಾಶನ ಸಂಸ್ಥೆಯ ಮೂಲಕ ಧೈರ್ಯದಿಂದ ಹೊರತಂದೆ. ಒಮ್ಮೆ ನನ್ನ ಲೈಂಗಿಕತೆಯನ್ನು ಎಲ್ಲರೊಡನೆ ಹಂಚಿಕೊಂಡ ಮೇಲೆ ಮನಸ್ಸು ನಿರಾಳವಾಗತೊಡಗಿತು. ಬದುಕಿನಲ್ಲಿ ಧೈರ್ಯ ಮೂಡತೊಡಗಿತು.

ಆತ್ಮ ವಿಶ್ವಾಸ ಬೆಳೆಯಿಸಿಕೊಂಡಿದ್ದು...
ಲೈಂಗಿಕತೆಯನ್ನು ಇನ್ನೊಬ್ಬರೊಡನೆ ಹೇಳಿಕೊಳ್ಳದೆ ಚಿಪ್ಪಿನಲ್ಲಿ ಹುದುಗಿಸಿಟ್ಟು ಬದುಕಿದರೆ ನಮ್ಮ ಸಾಕಷ್ಟು ಶಕ್ತಿಗಳ ಪರಿಚಯ ನಮಗಾಗುವುದೇ ಇಲ್ಲ. ಅದಕ್ಕೆ ನನ್ನದೇ ಬದುಕಿನಲ್ಲಿ ಪುರಾವೆಗಳನ್ನು ಕಂಡುಕೊಂಡೆ. ಬಾಲ್ಯದಲ್ಲಿ ನಾನು ಯಾವತ್ತೂ ಆಟ-ಓಟಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಹುಡುಗರ ಮಧ್ಯದಲ್ಲಿ ಆಟಕ್ಕೆ ಸೇರಿಕೊಳ್ಳಬೇಕೆಂದು ಆಸೆ ತೋರಿದರೂ, ಅವರು ನನ್ನ ಹಾವಭಾವಗಳಲ್ಲಿರುತ್ತಿದ್ದ ಹೆಣ್ಣುತನವನ್ನು ಗೇಲಿ ಮಾಡಿ ದೂರ ಮಾಡಿಬಿಡುತ್ತಿದ್ದರು. ಕ್ರಿಕೆಟ್ ಆಡುವಾಗ ಬಾಲನ್ನು ಎಸೆದರೆ 'ಹುಡುಗಿ ತರಹ ಬಾಲ್ ಎಸೀತಾನೆ' ಎಂದು ಕೇಕೆ ಹಾಕಿ ನಗುತ್ತಿದ್ದರು. ಕಬಡ್ಡಿ ಆಡುವಾಗ ನಾನು 'ಕಬಡ್ಡಿ ಕಬಡ್ಡಿ...' ಎಂದು ಹೇಳುತ್ತಾ ವಿರೋಧಿಗಳ ಕೋರ್ಟಿನಲ್ಲಿ ಪಾದಾರ್ಪಣೆ ಮಾಡಿದರೆ ಸಾಕು, ಅವರು ಮುಸಿಮುಸಿ ನಗಲು ಶುರುವಿಟ್ಟು ಬಿಡುತ್ತಿದ್ದರು. ಅದರಿಂದ ನನ್ನ ಆತ್ಮವಿಶ್ವಾಸವೇ ನಾಶವಾಗಿ, ಬೇಗನೆ ಔಟಾಗಿ ಬಿಡುತ್ತಿದ್ದೆ. ಆದ್ದರಿಂದ ಯಾರೂ ನನ್ನನ್ನು ಆಟದಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ. ನಾನು ಬರೀ ಪುಸ್ತಕಗಳ ಓದಿನಲ್ಲಿಯೇ ಮುಳುಗಿ ಹೋಗಿಬಿಟ್ಟಿದ್ದೆ. ಅಥವಾ ಹುಡುಗಿಯರೇ ಆಡುವ ಟೆನ್ನಿಕಾಯ್ಟ್, ಥ್ರೋಬಾಲ್ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದೆ. ಆ ಕಾರಣಕ್ಕೂ ಸಾಕಷ್ಟು ಗೇಲಿಗೆ ಒಳಗಾಗುತ್ತಿದ್ದೆ.
ಸುಮಾರು ಮೂವತ್ತೈದರ ವಯಸ್ಸಿನಲ್ಲಿ ನಾನು ನಿಧಾನಕ್ಕೆ ನನ್ನ ಹೆಣ್ಣಿನ ಹಾವಭಾವಗಳನ್ನು ಒಪ್ಪಿಕೊಳ್ಳತೊಡಗಿದೆ. ಅದು ದೇವರು ನನಗೆ ಕೊಟ್ಟ ಸಹಜ ಸ್ವಭಾವ ಎಂದು ಯಥಾವತ್ತಾಗಿ ಪ್ರೀತಿಸತೊಡಗಿದೆ. ಆಗ ನನ್ನ ಆತ್ಮವಿಶ್ವಾಸ ಬೆಳೆಯುತ್ತಾ ಹೋಯ್ತು. 

ಆ ಹೊತ್ತಿನಲ್ಲಿ ಒಂದು ವಿಚಿತ್ರ ಬದಲಾವಣೆ ನನ್ನಲ್ಲಿ ಕಂಡು ಬಂತು. ನನಗೆ ಕ್ರೀಡೆಗಳಲ್ಲಿ ವಿಪರೀತ ಆಸಕ್ತಿ ಇದೆಯೆಂಬುದು ಗೊತ್ತಾಯಿತು. ಬ್ಯಾಡ್ಮಿಂಟನ್, ಸ್ಕ್ವಾಷ್,  ರನ್ನಿಂಗ್, ಹೈಕಿಂಗ್ - ಎಲ್ಲ ಬಗೆಯ ಆಟೋಟಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸತೊಡಗಿದೆ. ನನ್ನ ವಯಸ್ಸಿಗೆ ತಕ್ಕಂತೆ ನಾನು ಅವುಗಳಲ್ಲಿ ಸಾಕಷ್ಟು ಯಶಸ್ವಿಯೂ ಆದೆ. ನನಗೆ ಹೈಕಿಂಗ್ (ಚಾರಣ) ತುಂಬಾ ಇಷ್ಟವಾದ ಕಾರಣ ತಾಂಜಾನಿಯಾದಲ್ಲಿರುವ ಕಿಲಿಮಂಜಾರೋ  ಪರ್ವತವನ್ನು ಹತ್ತಿ ಬಂದೆ. ಹಿಮಾಲಯ ಪರ್ವತಗಳನ್ನಂತೂ ಪ್ರತಿ ವರ್ಷವೂ ತಪ್ಪದಂತೆ ಒಂದು ಶಿಖರಾಗ್ರವನ್ನು ಮುಟ್ಟಿ ಬರುತ್ತೇನೆ. ಅಂದ ಮೇಲೆ ಬಾಲ್ಯದಲ್ಲಿ ನಾನು ಆಟೋಟಗಳಲ್ಲಿ ಭಾಗವಹಿಸಿದ್ದರೆ ಖಂಡಿತವಾಗಿಯೂ ಒಳ್ಳೆಯ ಕ್ರೀಡಾಳು ಆಗುತ್ತಿದ್ದೆ. ಇಡೀ ಸಮಾಜವೇ ನನ್ನ ಹೆಣ್ಣಾಡಂಗಿ ಗುಣವನ್ನು ಗೇಲಿ ಮಾಡುತ್ತಿದ್ದರೆ ಕ್ರೀಡೆಗಳಲ್ಲಿ ಧೈರ್ಯದಿಂದ ಭಾಗವಹಿಸುವುದಾದರೂ ಹೇಗೆ? ನಮ್ಮ ಭಾರತೀಯ ಸಮಾಜ ಲೈಂಗಿಕ ಅಲ್ಪಸಂಖ್ಯಾತರ ಹಲವು ಪ್ರತಿಭೆಯನ್ನು ಬಾಲ್ಯದಲ್ಲಿಯೇ ಹೊಸಕಿ ಹಾಕುತ್ತದೆ. ಈಗ ಸ್ವಲ್ಪ ಮಟ್ಟಿಗೆ ಕಾಲ ಬದಲಾಗಿದೆಯಾದರೂ, ಅಂತಹ ದೊಡ್ಡ ವ್ಯತ್ಯಾಸವೇನೂ ನನಗೆ ಕಾಣಿಸುವುದಿಲ್ಲ.

ಬದುಕಿನಲ್ಲಿ ಸಿಕ್ಕ ನೆಮ್ಮದಿ
ನಮ್ಮ ಲೈಂಗಿಕತೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಕುರಿತೇ ತಮಾಷೆ ಮಾಡುವ ಮನೋಭಾವವೂ ನಮ್ಮಲ್ಲಿ ಮೂಡುತ್ತದೆ. ನಿಮಗೊಂದು ಘಟನೆಯನ್ನು ತಿಳಿಸಿದರೆ ಅದು ಅರ್ಥವಾಗುತ್ತದೆ. ಕೆಲವು ದಿನಗಳ ಹಿಂದೆ ನಾನೊಂದು ದೂರದೂರಿಗೆ ಸಾಹಿತ್ಯ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನನ್ನ ಮೋಹನಸ್ವಾಮಿ ಪುಸ್ತಕವನ್ನು ಕುರಿತು ಮತ್ತು 'ಗೇ' ಜನರ ಬದುಕಿನ ಕುರಿತು ಮಾತನಾಡುವವನಿದ್ದೆ. ನನ್ನ ಜೊತೆಗೆ ಮತ್ತೊಬ್ಬ ಕನ್ನಡದ ಸುಂದರ ಯುವಲೇಖಕನೂ ಬಂದಿದ್ದ. ನಮ್ಮಿಬ್ಬರಿಗೂ ಹೋಟೆಲಿನ ಒಂದೇ ಕೋಣೆಯಲ್ಲಿ ವಾಸದ ವ್ಯವಸ್ಥೆಯನ್ನು ಮಾಡಿದ್ದರು. ದಿಟ್ಟವಾಗಿ 'ಗೇ' ಬದುಕನ್ನು ನಡೆಸಲು ಪ್ರಾರಂಭಿಸಿದ ಮೇಲೆ ಮತ್ತೊಬ್ಬ 'ಸ್ಟ್ರೇಟ್' ಗಂಡಸಿನ ಪಕ್ಕ ಒಂದೇ ಕೋಣೆಯಲ್ಲಿ ಮಲಗುವುದು ನನಗೆ ಯಾವುದೇ ಸಮಸ್ಯೆಯನ್ನೂ ತರುವುದಿಲ್ಲ. ಮುಂಚಿನಂತೆ ನಿದ್ದೆಯಿಲ್ಲದೆ ಹೊರಳಾಡುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಆ ವ್ಯಕ್ತಿಯನ್ನು ಮುಟ್ಟಬೇಕೆನ್ನಿಸುವುದಿಲ್ಲ. ಅದೊಂದು ತರಹದ ನೆಮ್ಮದಿ ನನ್ನ ಬದುಕಿನಲ್ಲಿ ಮೂಡಿದೆ.

ಮಾಯವಾದ ಪಾಪಪ್ರಜ್ಞೆ...
ಈ ಪ್ರವಾಸದಲ್ಲಿ ನನಗೆ ವಿಪರೀತ ನೆಗಡಿಯಾಗಿತ್ತು. ಮೂಗನ್ನು ಏರಿಸಿಕೊಳ್ಳುತ್ತಲೇ ಮೋಹನಸ್ವಾಮಿಯ ಕುರಿತು ಭಾಷಣ ಮಾಡಿದೆ. ಎಲ್ಲರೂ ಇಷ್ಟ ಪಟ್ಟರು. ಮರುದಿನ ಯುವ ಲೇಖಕನ ಭಾಷಣವಿತ್ತು. ಆದರೆ ಅವನಿಗೆ ನೆಗಡಿ ಶುರುವಾಗಿತ್ತು. ಎಲ್ಲರ ಹತ್ತಿರ ಹೋಗಿ 'ನೆಗಡಿಯಿಂದ ಧ್ವನಿ ಬದಲಾಗಿ ಬಿಟ್ಟಿದೆ. ಭಾಷಣ ಹೇಗೆ ಮಾಡೋದೋ ಏನೋ...' ಎಂದು ಪೇಚಾಡುತ್ತಿದ್ದ. ನಾನು ಅವನನ್ನು ಹತ್ತಿರ ಕರೆದು 'ಎಲ್ಲರ ಮುಂದೆಯೂ ನಿನಗೆ ನೆಗಡಿ ಬಂದ ವಿಷಯ ಹೇಳ್ತಾ ಇದೀಯ. ನಿನ್ನೆಯ ನನ್ನ ಭಾಷಣದಿಂದ ಅವರಿಗೆ ನನಗೂ ವಿಪರೀತ ನೆಗಡಿ ಬಂದಿದೆಯೆಂದು ಗೊತ್ತಾಗಿದೆ ಮತ್ತು ನಾನೊಬ್ಬ 'ಗೇ' ಎನ್ನುವುದೂ ತಿಳಿದಿದೆ. ನಾವಿಬ್ಬರೂ ಒಂದೇ ರೂಮಿನಲ್ಲಿ ವಾಸ ಮಾಡುತ್ತಿದ್ದೇವೆ. ಅವರು ಬೇರೆ ವಿಪರೀತ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಾರೆ' ಎಂದು ಕಾಲೆಳೆದೆ. ಅವನಿಗೆ ದಿಗಿಲಾಗಿಬಿಟ್ಟಿತು. 'ಅಯ್ಯಯ್ಯಯ್ಯೋ... ಏನೇನೋ ಹೇಳ್ತೀರಲ್ರೀ!' ಎಂದು ಉದ್ಗಾರ ಮಾಡಿದ. ಅವನ ಭಯವನ್ನು ಕಂಡು ನನಗೆ ನಗುವೋ ನಗು. ನನ್ನ ಲೈಂಗಿಕತೆಯ ಬಗ್ಗೆ ಈ ಮೊದಲಿದ್ದ ಮುಜುಗರ ಮತ್ತು ಪಾಪಪ್ರಜ್ಞೆ ಮಾಯವಾಗಿ, ಮತ್ತೊಬ್ಬ 'ಸ್ಟ್ರೇಟ್' ವ್ಯಕ್ತಿಯನ್ನು ಆ ಕಾರಣದಿಂದಲೇ ಕಾಲೆಳೆಯುವಷ್ಟು ಧೈರ್ಯ ನನಗೆ ಹೇಗೆ ಬಂದು ಬಿಟ್ಟಿತು ಎಂದು ವಿಚಿತ್ರ ಸಂಭ್ರಮದಲ್ಲಿ ನಾನು ತೇಲಿದ್ದೆ. ಚಿಪ್ಪಿನಿಂದ ಹೊರಬರುವುದಕ್ಕೆ ಇದಕ್ಕಿಂತಲೂ ದೊಡ್ಡ ಬಹುಮಾನ ಮತ್ತೊಂದು ಬೇಕಿಲ್ಲವೆನ್ನಿಸುತ್ತೆ.

ಮೋಹನಸ್ವಾಮಿಯ ಮೂಲಕ ತೆರೆದ ಹೊಸ ಜಗತ್ತು
'ಮೋಹನಸ್ವಾಮಿ' ಪುಸ್ತಕ ಹೊರಬಂದ ನಂತರ ನನಗೇ ಗೊತ್ತಿಲ್ಲದಂತೆ ಹೊಸ ಜಗತ್ತೊಂದು ನನ್ನ ಕಣ್ಣ ಮುಂದೆ ತೆರೆದುಕೊಂಡು ಬಿಟ್ಟಿತು. ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿದಾಗ ಸಾಮಾನ್ಯವಾಗಿ ನಾವು ನಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿಗಳನ್ನು ಪ್ರಕಟಿಸಿರುತ್ತೇವೆ. ಓದುಗರ ಸಂಖ್ಯೆ ವಿಪರೀತ ದೊಡ್ಡದಲ್ಲದ ಕಾರಣ ಲೇಖಕರಿಗೆ ಅಂತಹ ತೊಂದರೆಯೇನೂ ಬರುವುದಿಲ್ಲ ಎನ್ನುವುದು ನಮ್ಮ ನಂಬಿಕೆ. ಈ ಕಾರಣದಿಂದಾಗಿ ನನಗೆ ರಾಜ್ಯದ ಮೂಲೆಮೂಲೆಗಳಿಂದ ಹಲವಾರು ಗೇ ಜನರು ಫೋನ್ ಮಾಡಲು ತೊಡಗಿದರು. ಇವರೆಲ್ಲಾ ಕೇವಲ ಕನ್ನಡ ಪುಸ್ತಕಗಳನ್ನು ಓದಿಕೊಂಡವರಾಗಿದ್ದರು ಮತ್ತು ಇಂಗ್ಲಿಷ್ ಓದಲು ಬಾರದವರಾಗಿದ್ದರು. ಇವರಿಗೆಲ್ಲಾ ಪ್ರಥಮ ಬಾರಿ ತಮ್ಮ ಬದುಕಿನ ಗುಪ್ತ ಸಂಗತಿಗಳನ್ನು ಕುರಿತು ಹೀಗೆ ಮತ್ತೊಬ್ಬರು ಸಂಕೋಚವಿಲ್ಲದಂತೆ ಬರೆದದ್ದು ರೋಮಾಂಚನವನ್ನು ಉಂಟು ಮಾಡಿತ್ತು. ಅವರಿಗೆಲ್ಲರಿಗೂ ತಮ್ಮ ಕತೆಯನ್ನು ನನ್ನೊಡನೆ ಹೇಳಿಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ನಾನು ಅಂತಹ ನೂರಾರು ಕರೆಗಳನ್ನು ಸ್ವೀಕರಿಸಿದ್ದೇನೆ ಮತ್ತು ಅವರನ್ನು ಭೇಟಿ ಮಾಡಿದ್ದೇನೆ.

ಗೇ ವೈರಸ್...ಏನಿದು?
ಆದರೆ ಗೇ ಜಗತ್ತಿನ ಪರಿಚಯವಿಲ್ಲದವರ ಪ್ರತಿಕ್ರಿಯೆ ಮಾತ್ರ ವಿಶೇಷವಾಗಿತ್ತು. ನನ್ನ ಗೆಳೆಯನೊಬ್ಬ ಕೇಳಿದ ಪ್ರಶ್ನೆಯೊಂದು ನನ್ನನ್ನು ಬೆಚ್ಚಿಬೀಳಿಸಿತ್ತು. ಕನ್ನಡದಲ್ಲಿ ಅವನು ಸಾಕಷ್ಟು ಸಾಹಿತ್ಯವನ್ನು ಓದಿಕೊಂಡವನಾಗಿದ್ದರೂ, ಇಂಗ್ಲಿಷ್ ಅವನಿಗೆ ಬರುವುದಿಲ್ಲ. ಆದ್ದರಿಂದ ಗೇ ಬದುಕಿನ ಸಂಗತಿಗಳು ಅವನಿಗೆ ಗೊತ್ತಿರಲಿಲ್ಲ. 'ನೀನು  ಇಂಗ್ಲೆಡ್‌ನಲ್ಲಿರುವಾಗ ಈ 'ಗೇ' ವೈರಸ್ ನಿನ್ನನ್ನು ಅಟ್ಯಾಕ್ ಮಾಡಿತಾ?' ಎಂದು ಕಾಳಜಿಯಿಂದ ಕೇಳಿದ್ದ. ಅವನ ಪ್ರಶ್ನೆ ಎರಡು ಕಾರಣಕ್ಕೆ ಮುಖ್ಯವಾಗುತ್ತದೆ. 'ಗೇ' ಎನ್ನುವುದು ವೈರಸ್ ಮೂಲಕ ಹರಡುವ ಒಂದು ಸೋಂಕು ಎಂದು ಅವನು ಭಾವಿಸಿದ್ದ ಮತ್ತು ಅದು ಕೇವಲ ಪರದೇಶದಿಂದ ಭಾರತಕ್ಕೆ ಬರುವುದು ಎಂದು ನಂಬಿಕೊಂಡಿದ್ದ. ಬಹುತೇಕ ಭಾರತೀಯರ ಮನೋಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಯೇನೂ ಇಲ್ಲ.

ಗೇ ನಗರ ಜನರ ಶೋಕಿ!?
ವಿದ್ಯಾರ್ಥಿಗಳಿಗೆ ವಿಭಿನ್ನ ಲೈಂಗಿಕತೆಯ ಬಗೆಗಿನ ಗೊಂದಲ ಆದಷ್ಟು ಕಡಿಮೆಯಾಗಲಿ ಎನ್ನುವ ಕಾರಣದಿಂದ ನಾನು ಕಾಲೇಜುಗಳಿಗೆ ಸಾಹಿತಿಯಾಗಿ ಮಾತನಾಡಲು ಹೋದಾಗ ಈ ವಿಷಯದ ಕುರಿತು ವಿವರಿಸಲು ಉತ್ಸಾಹ ತೋರುತ್ತಿದ್ದೆ. ಆದರೆ ಕೇರಳದ (ದಕ್ಷಿಣ ಭಾರತದ ಮತ್ತೊಂದು ರಾಜ್ಯ) ಕಾಲೇಜೊಂದಕ್ಕೆ ಹೋದಾಗ ಮಾತ್ರ ಅಲ್ಲಿಯ ಸಂಘಟಕರು ಹೇಳಿದ ಮಾತು ಸಿಟ್ಟು ತರಿಸಿತು. ಯಾವತ್ತಿನಂತೆ ನಾನು 'ಗೇ' ಬದುಕಿನ ಕುರಿತು ನನ್ನ ಸಾಹಿತ್ಯದ ಭಾಷಣದ ಮಧ್ಯದಲ್ಲಿ ಒಂದಿಷ್ಟು ಹೊತ್ತು ಮಾತನಾಡುವುದಾಗಿ ಅಲ್ಲಿಯ ಆಯೋಜಕರನ್ನು ಕೇಳಿಕೊಂಡೆ. ಅದಕ್ಕೆ ಅವರು 'ಸಾರ್, ನಮ್ಮದು ಹಳ್ಳಿಯ ಶಾಲೆ. ಇಲ್ಲಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಅಷ್ಟೊಂದು ಕೆಟ್ಟವರೇನೂ ಅಲ್ಲ. ಈ ಗೇ ಎನ್ನುವುದೆಲ್ಲಾ ನಗರ ಪ್ರದೇಶದ ಮೇಲ್ವರ್ಗದ ಜನರ ಶೋಕಿ ಮಾತ್ರ. ನಮ್ಮಲ್ಲಿ ಅಂತಹ ಸಮಸ್ಯೆಗಳೇನೂ ಇರುವುದಿಲ್ಲ' ಎಂದು ಹೇಳಿದ್ದರು. 
ಅದಕ್ಕೆ ಕೆರಳಿದ ನಾನು 'ಸ್ವಾಮಿ, ನಾನೂ ಹಳ್ಳಿಯಿಂದ ಬಂದವನೇ! ಅದೂ ಬಡತನದ ಹಿನ್ನೆಲೆಯಿಂದ ಬಂದವನು. ವಿಭಿನ್ನ ಲೈಂಗಿಕತೆಗೆ ಯಾವುದೇ ಕಾಲ, ದೇಶ, ಧರ್ಮಗಳ ಸೀಮೆಗಳು ಇರುವುದಿಲ್ಲ. ನಿಮಗೆ ಬೇಡವೆಂದರೆ ನಾನು ಆ ವಿಷಯದ ಕುರಿತು ಮಾತನಾಡುವುದಿಲ್ಲ. ಆದರೆ ತಪ್ಪು ಅಭಿಪ್ರಾಯಗಳನ್ನು ಮೊದಲು ದೂರ ಮಾಡಿಕೊಳ್ಳಿ' ಎಂದು ಉತ್ತರಿಸಿದ್ದೆ. ಆ ಆಯೋಜಕರ ಮಾತಂತಿರಲಿ, ಭಾರತದಲ್ಲಿ ಹಲವಾರು ಬುದ್ಧಿಜೀವಿಗಳು, ಶಾಸಕರು, ನ್ಯಾಯಾಧೀಶರು ಯಾವುದೇ ಲಜ್ಜೆಯಿಲ್ಲದೆ ಇದೇ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುತ್ತಿರುತ್ತಾರೆ.

ಅವರ ಇಂತಹ ಮನೋಭಾವಕ್ಕೆ ಕಾರಣ ಇಲ್ಲದೇ ಇಲ್ಲ. ಸಾಮಾನ್ಯವಾಗಿ ನಗರ ಪ್ರದೇಶದ ಮೇಲ್ವರ್ಗದ ಜನರಿಗೆ ಇಂಗ್ಲಿಷ್ ಭಾಷೆಯ ಪರಿಚಯವಿರುತ್ತದೆ. ಆದ್ದರಿಂದ ಅವರು ಗೇ ಬದುಕಿನ ಸಂಗತಿಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾರೆ. ಆ ಕಾರಣದಿಂದಾಗಿ ಅವರ ಆತ್ಮಸ್ಥೈರ್ಯವೂ ಹೆಚ್ಚುತ್ತದೆ. ಅವರು ಹೆಚ್ಚು ದಿಟ್ಟವಾಗಿ ಮತ್ತು ಸಾರ್ವಜನಿಕವಾಗಿ ತಮ್ಮ ಭಿನ್ನ ಲೈಂಗಿಕತೆಯ ಕುರಿತು ಮಾತನಾಡುತ್ತಾರೆ. ಆದ್ದರಿಂದಲೇ ಬಹುತೇಕರು ಗೇ ಎನ್ನುವುದು ನಗರದ ಮೇಲ್ವರ್ಗದ ಜನರ ಶೋಕಿಯೆಂದು ಭಾವಿಸುತ್ತಾರೆ. ಇಂಗ್ಲಿಷ್ ಬಾರದ ಹಳ್ಳಿಯ ಹುಡುಗರು, ಕೆಳವರ್ಗದ ಮಕ್ಕಳು ಅಂಧಕಾರದಲ್ಲಿಯೇ ಬಾಳುತ್ತಾರೆ. ಭಾರತದ ಯಾವುದೇ ಪ್ರಾದೇಶಿಕ ಭಾಷೆಯಲ್ಲಿಯೂ ನಿಮಗೆ 'ಗೇ' ಬದುಕಿನ ಕುರಿತಾದ ಆರೋಗ್ಯಕರ ಮಾಹಿತಿಯು ಸಿಕ್ಕುವುದಿಲ್ಲ. ಆದ್ದರಿಂದ ಇಂತಹವರು ತಮ್ಮ ವಿಭಿನ್ನ ಲೈಂಗಿಕತೆಯನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ, ತಂದೆ-ತಾಯಿಯ ಬಲವಂತಕ್ಕೆ ಕಟ್ಟುಬಿದ್ದು ಮದುವೆಯನ್ನು ಮಾಡಿಕೊಂಡು, ತಮಗೆ ಒಗ್ಗದ ಬಂಧನದಲ್ಲಿ ತೊಳಲಾಡುತ್ತಾರೆ. ಕಾನೂನಿನ ಕಣ್ಣಿನಲ್ಲಿಯೂ ಅಪರಾಧಿಗಳೆಂಬಂತೆ ಬಿಂಬಿತರಾಗುತ್ತಾರೆ. ಭಾರತದ ಕಾನೂನು ವಿಭಿನ್ನ ಲೈಂಗಿಕತೆಯನ್ನು ಹೊಂದಿದ ಜನರಿಗೆ ಅತ್ಯಂತ ಕ್ರೂರವಾಗಿದೆ. ಒಂದು ಹೋಲಿಕೆಯನ್ನು ಕೊಟ್ಟರೆ ನಿಮಗೆ ಅರ್ಥವಾದೀತು. ಯಾರಾದರೊಬ್ಬ ಹೆಣ್ಣನ್ನು ಅತ್ಯಾಚಾರ ಮಾಡಿದರೆ ಅವನಿಗೆ ಗರಿಷ್ಠವೆಂದರೆ ಹತ್ತು ವರ್ಷಗಳ ಜೈಲು ಶಿಕ್ಷೆ ಕೊಡುತ್ತಾರೆ. ಆದರೆ ಇಬ್ಬರು 'ಗೇ'ಗಳು ಸರ್ವಸಮ್ಮತದಿಂದ ಒಬ್ಬರಿಗೊಬ್ಬರು ಕಕೂಡಿದ್ದು ಪೋಲೀಸರ ಕಣ್ಣಿಗೆ ಬಿದ್ದರೆ, ಅವರಿಗೆ ಕನಿಷ್ಠ ಜೀವಾವಧಿ ಶಿಕ್ಷೆಯನ್ನು ಕೊಡಬೇಕೆಂದು ನಮ್ಮ ಕಾನೂನು ಹೇಳುತ್ತದೆ! 

(ಇದೀಗ ಸುಪ್ರೀಂ ಕೋರ್ಟ್ ಈ ಕಾನೂನಿಗೆ ತುಸು ಮುಕ್ತಿ ನೀಡಿದ್ದು, ಸಲಿಂಗಿಗಳ ನಡುವೆ ಸಮ್ಮತದ ಲೈಂಗಿಕ ಕ್ರಿಯೆ ಅಪರಾಧವೆಲ್ಲವೆಂದು ತೀರ್ಪು ನೀಡಿದೆ)  

ತಾಯಂದಿರ ಮನಸ್ಥಿತಿ ಬದಲಿಸಿದ 'ಮೋಹನಸ್ವಾಮಿ''ಮೋಹನಸ್ವಾಮಿ' ಪುಸ್ತಕ ಬಂದ ನಂತರ ನನ್ನ ಓದುಗರು ಆ ವಿಷಯವಾಗಿ ಮುಕ್ತವಾಗಿ ಮಾತನಾಡುತ್ತಿರುವುದು ನನಗೆ ಸಂತೋಷ ತಂದಿದೆ. ಮೊನ್ನೆ ಹಿರಿಯ ಮಹಿಳೆಯೊಬ್ಬರು ನನಗೆ ಫೋನಾಯಿಸಿದ್ದರು. ಆಕೆ ಮತ್ತು ಆಕೆಯ ಮಗ – ಇಬ್ಬರೂ ನನ್ನ ಪುಸ್ತಕಗಳ ಓದುಗರು ಮತ್ತು ನನಗೆ ಪರಿಚಿತರು. ಆಕೆ ಹೇಳಿದ ಸಂಗತಿ ಮಾತ್ರ ಬಹು ವಿಶೇಷವಾಗಿತ್ತು. 'ಮಗನಿಗೆ ಮೂವತ್ತು ವಯಸ್ಸು ಆಯ್ತು ಸಾರ್. ಇನ್ನೂ ಮದುವೆ ಆಗಿಲ್ಲ. ಯಾವಾಗ ಕೇಳಿದ್ರೂ ಇನ್ನೊಂದು ವರ್ಷ ಆಗಲಿ ಅಂತಾನೆ. ನಿಮ್ಮ ಪುಸ್ತಕ ಓದಿದ ಮೇಲೆ ಯಾಕೋ ನಂಗೂ ಅನುಮಾನ ಆಯ್ತು. ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. 'ನೀನೂ ಮೋಹನಸ್ವಾಮಿಯೇನೋ?' ಅಂತ. ಅದಕ್ಕೆ ಆತ 'ಥೂ ಹೋಗಮ್ಮ... ಅಂತಹದ್ದೇನೂ ಇಲ್ಲ. ಇನ್ನೊಂದು ವರ್ಷ ಬಿಟ್ಟು ಮದುವೆ ಆಗ್ತೀನಿ' ಅಂತ ನಾಚಿಕೊಂಡು ಹೇಳಿದ. ನಂಗೆ ಪೂರ್ತಿ ಸಮಾಧಾನ ಆಯ್ತು ಸಾರ್. ದೇವರು ದೊಡ್ಡೋನು, ನನ್ನ ಮಗ ಮೋಹನಸ್ವಾಮಿ ಅಲ್ಲ!' ಅವರ ಮಾತಿನಿಂದ ನನಗೂ ಸಮಾಧಾನವಾಯ್ತು. ಭಾರತೀಯ ತಾಯಿಯೊಬ್ಬರು ವಯಸ್ಸಿಗೆ ಬಂದ ತನ್ನ ಮಗನಿಗೆ 'ಆರ್ ಯು ಅ ಗೇ' ಎಂದು ಕೇಳುವಷ್ಟು ನನ್ನ ಪುಸ್ತಕ ಉತ್ತೇಜನ ನೀಡಿದೆ ಎಂದರೆ, ಅದಕ್ಕೂ ಹೆಚ್ಚಿನ ಯಶಸ್ಸನ್ನು ನಾನು ಹೇಗೆ ನಿರೀಕ್ಷಿಸಲಿ?

ಮಗ ಗೇ, ತಾಯಿಯ ಆತಂಕ
ಮತ್ತೊಬ್ಬ ಮಹಿಳೆಯ ಕರೆ ಮಾತ್ರ ಅತ್ಯಂತ ಬೇರೆಯ ರೀತಿಯಲ್ಲಿತ್ತು. ಆಕೆಯ ಮಗ ಧೈರ್ಯವಾಗಿ ತಾನು 'ಗೇ' ಎಂದು ಅವರಮ್ಮನಿಗೆ ಹೇಳಿಕೊಂಡು ಬಿಟ್ಟಿದ್ದ. ಅವರು ಫೋನಿನಲ್ಲಿ ತುಂಬಾ ದುಃಖಿಸಿದರು. ದೇವರು ನಂಗೆ ಅನ್ಯಾಯ ಮಾಡಿ ಬಿಟ್ಟ ಎಂದು ಪರಿತಪಿಸಿದರು. ಅನಂತರ 'ದಯವಿಟ್ಟು ನಂಗೊಂದು ಸಹಾಯ ಮಾಡ್ತೀರಾ ಸಾರ್. ಅವನನ್ನು ನಿಮ್ಮ ಹತ್ತಿರ ಕಳುಹಿಸಿ ಕೊಡ್ತೀನಿ. ಅವನಿಗೆ ಸ್ವಲ್ಪ ಬುದ್ಧಿ ಹೇಳಿ. ನಿಮ್ಮಂತೆ ಅಡ್ಡದಾರಿ ಹಿಡಿದು ಕೆಟ್ಟ ಬದುಕನ್ನು ನಡೆಸುವುದರಿಂದ ಯಾವುದೇ ಲಾಭವಿಲ್ಲ ಎಂದು ಅವನ ಮನಸ್ಸಿಗೆ ತಟ್ಟುವಂತೆ ಹೇಳಿ' ಎಂದು ಬೇಡಿಕೊಂಡರು. ಅವರ ಬೇಡಿಕೆಯಲ್ಲಿ ಯಾವ ವ್ಯಂಗ್ಯವೂ ಇರಲಿಲ್ಲ. ನಾನು ಸಾವಧಾನದಿಂದ ಅವರಿಗೆ ಉತ್ತರಿಸಿದೆ. 'ಮೇಡಂ, ನಾನು ಯಾವತ್ತೂ ಅಡ್ಡದಾರಿ ಹಿಡಿದಿಲ್ಲ. ನಿಮ್ಮ ಮಗನನ್ನು ದಯವಿಟ್ಟು ನನ್ನ ಬಳಿ ಕಳುಹಿಸಿಕೊಡಿ. 'ನೇರ' ದಾರಿ ಹಿಡಿಯಲು ಹೋಗಿ ಅಪ್ರಾಮಾಣಿಕವಾಗಿ ಬದುಕದೆ, 'ಅಡ್ಡದಾರಿ' ಹಿಡಿದು ಪ್ರಾಮಾಣಿಕವಾಗಿ ಧೈರ್ಯದಿಂದ ಬದುಕುವುದು ಹೇಗೆಂದು ತಿಳಿಸಿಕೊಡುತ್ತೇನೆ' ಎಂದೆ. 

ಬದಲಾಗದ ಭಾರತೀಯ ಸಮಾಜ
ಭಾರತದ ಸಮಾಜದಲ್ಲಿ ಜಾತಿ, ವರ್ಗ, ಧರ್ಮಗಳ ಪ್ರಭಾವ ವಿಪರೀತವಾಗಿದೆ. ಅವುಗಳ ಪ್ರಭಾವಳಿಯಿಂದ ಹೊರ ಜಿಗಿದು ಬದುಕುವುದು ತುಂಬಾ ಕಷ್ಟ. ಸಮಾಜದಲ್ಲಿರುವ ಎಲ್ಲ ಸಮಸ್ಯೆಗಳೂ ಗೇ ಜಗತ್ತಿನಲ್ಲಿಯೂ ಬೇರೆಯದೇ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಲೈಂಗಿಕ ಅಲ್ಪಸಂಖ್ಯಾತರೂ ಸಮಾಜದ ಒಂದು ಭಾಗವೇ ಆದ್ದರಿಂದ ಅದು ಅಂತಹ ಅಚ್ಚರಿ ಪಡುವ ಸಂಗತಿಯೇನೂ ಅಲ್ಲ. ಎಲ್ಲಿಯವರೆಗೆ ಈ ಮೌಢ್ಯ ಮನೋಭಾವ ಒಟ್ಟಾರೆ ಸಮಾಜದಿಂದ ತೊಲಗುವುದಿಲ್ಲವೋ, ಅಲ್ಲಿಯವರೆಗೆ 'ಗೇ' ಸಮುದಾಯವೂ ಅದನ್ನು ಎದುರಿಸುತ್ತಾ ಬದುಕಬೇಕಾಗುತ್ತದೆ. ಅಂತಹ ಒಂದು ಉದಾಹರಣೆಯನ್ನು ಹೇಳಿದರೆ ನಿಮಗೆ ನನ್ನ ಮಾತು ಅರ್ಥವಾದೀತು.

ಮುಸ್ಲಿಂ ಯುವಕನೊಂದಿಗೆ ಕಾಮ
ಸಂಪ್ರದಾಯಸ್ಥ ಮುಸ್ಲಿಂ ಯುವಕಯೊಬ್ಬ ಒಮ್ಮೆ ನನ್ನೊಡನೆ ಡೇಟಿಂಗ್ ಆ್ಯಪ್‌ನಲ್ಲಿ ಒಡನಾಡಿದ್ದ. 'ಇನ್ನೆರಡು ದಿನಕ್ಕೆ ರೋಜಾ ಶುರುವಾಗಿ ಬಿಡ್ತದೆ. ಮತ್ತೆ ಒಂದು ತಿಂಗಳ ತನಕ ಸೆಕ್ಸ್‌ನಲ್ಲಿ ನಾನು ಭಾಗವಹಿಸೋ ಹಂಗಿಲ್ಲ. ದಯವಿಟ್ಟು ಇವತ್ತು ರಾತ್ರಿ ಭೇಟಿಯಾಗೋಣ್ವಾ?' ಎಂದು ಕೇಳಿದ್ದ. ಅವನ ಕೋರಿಕೆಯಲ್ಲಿನ ಕಳಕಳಿಯನ್ನು ಕಂಡು ನಾನು ಒಪ್ಪಿಕೊಂಡಿದ್ದೆ. ತಕ್ಷಣ ಮನೆಗೆ ಬಂದಿದ್ದ. ಮುಂದಿನ ಒಂದು ತಿಂಗಳ ಖೋಟಾವನ್ನು ಆ ರಾತ್ರಿಯೇ ಕಬಳಿಸುವಂತಹ ಬಕಾಸುರ ಹಸಿವು ಅವನಲ್ಲಿತ್ತು. ಇಬ್ಬರೂ ಸಾಕಷ್ಟು ಉತ್ಸಾಹದಿಂದ ಒಬ್ಬರನ್ನೊಬ್ಬರಿಗೆ ಕೊಟ್ಟುಕೊಂಡೆವು. ಆದರೆ ಮನೆಗೆ ಹೋಗುವ ಹೊತ್ತಿನಲ್ಲಿ ಅವನು ಸೀದಾ ನನ್ನ ಕಾಲಿಗೆ ಎರಗಿಬಿಟ್ಟ. 'ಕುರಾನ್‌ನಲ್ಲಿ ಒಂದು ಗಂಡು ಮತ್ತೊಬ್ಬ ಗಂಡಿನೊಡನೆ ಕೂಡುವುದು ಘೋರ ಪಾಪವೆಂದು ಹೇಳಿದ್ದಾರೆ. ಅದು ಸೈತಾನ್ ಕೆಲಸ. ಆದ್ದರಿಂದ ನಾನು ಮಾಡಿದ ಪಾಪವನ್ನು ನೀನು ಕ್ಷಮಿಸಿ ಬಿಡು' ಎಂದು ಬೇಡಿಕೊಂಡ. ನಾನು ತಕ್ಷಣ ಕಾಲನ್ನು ಹಿಂದೆಗೆದುಕೊಂಡು ಅವನನ್ನು ಮನೆಗೆ ಕಳುಹಿಸಿದ್ದೆ.

ಮುಂದಿನ ಜನ್ಮದಲ್ಲೂ ನಾನು 'ಗೇ'  ಆಗಲಿ
ಇಷ್ಟೆಲ್ಲಾ ಆದರೂ ವಿಭಿನ್ನ ಲೈಂಗಿಕತೆಯ ಬಗ್ಗೆ ನನಗೆ ಯಾವ ಸಿಟ್ಟೂ ಇಲ್ಲ. ಅದು ಯಾವುದೇ ಬಗೆಯ ಅಂಗವೈಕಲ್ಯವಲ್ಲ. ಅದನ್ನೊಂದು ಶಾಪವೆಂದೂ ಪರಿಗಣಿಸುವುದಿಲ್ಲ. ಸಮಾಜದಲ್ಲಿ ಹಲವು ಬದುಕಿನ ಕ್ರಮಗಳಿವೆ. ಅವುಗಳಂತೆಯೇ ಇದೂ ಒಂದು. ಅದಕ್ಕೂ ತನ್ನದೇ ಆದ ಅನುಕೂಲತೆಗಳಿವೆ, ಅನಾನುಕೂಲತೆಗಳಿವೆ. ಭಾರತದಲ್ಲಿನ ಸಮಸ್ಯೆಯೇನೆಂದರೆ ಇಂಗ್ಲಿಷ್ ಓದಲು ಬಾರದ ಯುವಕರಿಗೆ ಇದನ್ನೆಲ್ಲಾ ತಿಳಿಸಿ ಹೇಳುವ ಪ್ರಾದೇಶಿಕ ಭಾಷೆಯ ಪುಸ್ತಕಗಳು ಇಲ್ಲ. ಶಿಕ್ಷಣದಲ್ಲಿಯೂ ಈ ಕುರಿತು ಯಾರೂ ಹೇಳಿಕೊಡುವುದಿಲ್ಲ. ಸಮಾಜವಂತೂ ಇದರ ಬಗ್ಗೆ ಮಾತನಾಡುವುದು ಬಹಳ ಅಪರೂಪ. ಕಾನೂನೂ ನಮ್ಮ ಪರವಾಗಿಲ್ಲ. ಈ ಎಲ್ಲಾ ಕಾರಣದಿಂದಾಗಿ ತಮ್ಮದಲ್ಲದ ತಪ್ಪಿಗಾಗಿ ಸಾಕಷ್ಟು ಯುವಕರು ಬಹಳ ಕಷ್ಟದ ಬದುಕನ್ನು ನಡೆಸಬೇಕಾದ ಪರಿಸ್ಥಿತಿ ಇಲ್ಲಿದೆ.

ಸಲಿಂಗಕಾಮಿಗಳಿಗೆ ಮನೆ ಬಾಡಿಗೆ ಕೊಡಲು ಒಪ್ತೀರಾ?

ಭಾರತೀಯರು ಪುನರ್ಜನ್ಮವನ್ನು ನಂಬುತ್ತೇವೆ. ಒಂದು ವೇಳೆ ದೇವರು ನನಗೆ ಮುಂದಿನ ಜನ್ಮದಲ್ಲಿ ಯಾವ ಬಗೆಯ ಲೈಂಗಿಕತೆಯನ್ನು ಆಯ್ಕೆ ಮಾಡಿಕೊಳ್ಳುತ್ತೀಯ ಎಂದು ಕೇಳಿದರೆ ಮತ್ತೊಮ್ಮೆ ಭಾರತದಲ್ಲಿ 'ಗೇ' ಆಗಿ ಹುಟ್ಟಿಸಲು ಕೇಳಿಕೊಳ್ಳುತ್ತೇನೆ. ಅಷ್ಟು ಹೊತ್ತಿಗೆ ಭಾರತದ ಸಮಾಜವೂ ಪ್ರಬುದ್ಧವಾಗಿರುತ್ತದೆಂಬುದು ಒಂದು ನಿರೀಕ್ಷೆ. ಈ ಜನ್ಮದಲ್ಲಿ ಮಾಡಿದ ತಪ್ಪುಗಳನ್ನು ಖಂಡಿತಾ ಮುಂದಿನ ಬಾರಿ ಮಾಡದೆ ಬದುಕನ್ನು ಇನ್ನಷ್ಟು ಪ್ರಾಮಾಣಿಕನಾಗಿ ಜೀವಿಸುತ್ತೇನೆ ಎನ್ನುವ ಮತ್ತೊಂದು ನಿರೀಕ್ಷೆಯೊಂದಿಗೆ ಈ ಪ್ರಬಂಧವನ್ನು ಮುಗಿಸುತ್ತೇನೆ.

31ನೇ ಅಕ್ಟೋಬರ್ 2017

ವಸುಧೇಂದ್ರ
ಐ-044, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ 
ಬೆಂಗಳೂರು - 560076