ಬೆಂಗಳೂರು: ಸಲಿಂಗಿಕಾಮಿಗಳ ನಡುವಿನ ಸಮ್ಮತ ಲೈಂಗಿಕ ಕ್ರಿಯೆಗೆ ಸುಪ್ರೀಂ ಕೋರ್ಟ್ ಓಕೆ ಎಂದಿದೆ. ಸತತ ಚರ್ಚೆಗಳ ನಂತರ ಸೆಪ್ಟೆಂಬರ್ 6ರಂದು ಈ ಕುರಿತ ಮಹತ್ವದ ತೀರ್ಪು ಹೊರ ಬಿದ್ದಿರುವುದು ನಿಮಗೆ ಗೊತ್ತಿದೆ. ಈ ತೀರ್ಪು LGBT Communityಯ ಹೋರಾಟಕ್ಕೆ ಸಿಕ್ಕ ಜಯವೆಂದು ಪ್ರತಿಬಿಂಬಿಸಲಾಗುತ್ತಿದೆ. ಆದರೆ, ಇದು ಲೈಂಗಿಕ ವಿಷಯವಾಗಿರುವುದರಿಂದ ಕೇವಲ ನಾಲ್ಕು ಕೋಣೆಗಳಿಗೆ ಸೀಮಿತವಾಗಿದ್ದು, ಖಾಸಗೀತನದ ಹಕ್ಕಿನೆಡೆಗೆ ಚರ್ಚೆಯಾಗುತ್ತಿರುವ ವಿಷಯ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿಯೂ ಕೋರ್ಟಿನ ಐತಿಹಾಸಿಕ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದ್ದು, ಸಮ್ಮತ ಲೈಂಗಿಕ ಕ್ರಿಯೆ ಓಕೆ, ಆದರೆ ಮದುವೆ ಯಾಕೆ? ಎಂಬ ಮಾತೂ ಕೇಳಿ ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ವಿಷಯವೂ ಚರ್ಚೆಯಾಗುತ್ತಿದ್ದು, 'ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಲು ಸಿದ್ಧರಿದ್ದೀರಾ?' ಎಂಬ ವಿಷಯವೂ ಪ್ರಸ್ತಾಪವಾಗುತ್ತಿದೆ. 

'ಸಲಿಂಗ ಜೋಡಿಗಳಿಗೆ ಎಷ್ಟು ಜನ ಬಾಡಿಗೆ ಕೊಡುತ್ತೀರಿ? ಕೈ ಎತ್ತಿ,' ಎಂಜು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ಟ್ವೀಟ್ ಮಾಡಿದ್ದು, ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ತೀರ್ಪನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ. ಜತೆಗೆ ತೀರ್ಪು ಓಕೆ, ಆದರೆ ನಮ್ಮ ಮನೆ ಬಾಡಿಗೆ ನೀಡಲು ಸಮ್ಮತವಿಲ್ಲವೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಅಮಿತ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್,  'ನಾನು ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಲು ಸಿದ್ಧ,' ಎಂದು ಕೈ ಎತ್ತುವ ಮೂಲಕ, ಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ. ಎಲ್‌ಜಿಬಿಟಿ‌ಗಳ ಮಾನಸಿಕ ತಳಮಳಕ್ಕೆ ಕೋರ್ಟ್ ಅಂತ್ಯ ಹಾಡಿದೆ, ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಸಿ ಸೆಕ್ಷನ್‌ 377 ಏನು ಹೇಳುತ್ತೆ?
ಪ್ರಕೃತಿಗೆ ವಿರುದ್ಧವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜತೆ ಯಾರಾದರೂ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧ. ಅಂಥವರಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು ಅಥವಾ 10 ವರ್ಷದವರೆಗೂ ವಿಸ್ತರಿಸಬಹುದಾದ ಒಂದು ನಿರ್ದಿಷ್ಟಾವಧಿಯ ಶಿಕ್ಷೆ ಹೇರಬಹುದು ಹಾಗೂ ದಂಡ ವಿಧಿಸಬಹುದು. ಗುದ ಸಂಭೋಗ, ಮುಖ ಮೈಥುನ ಕೂಡ ಅಪರಾಧ. ಪರಸ್ಪರ ಸಮ್ಮತಿಯಿಂದ ಖಾಸಗಿಯಾಗಿ ನಡೆಸಿದರೂ ಅದು ಅಪರಾಧ.

ಏನಿದು ಪ್ರಕರಣ?
ಸಲಿಂಗಕಾಮವನ್ನು ಅಪರಾಧ ಎಂದು ಸಾರುವ ಐಪಿಸಿ ಸೆಕ್ಷನ್‌ 377 ಅನ್ನು ರದ್ದುಗೊಳಿಸಬೇಕು ಎಂದು ನಾಝ್‌ ಫೌಂಡೇಶನ್‌ ಎಂಬ ಎನ್‌ಜಿಒ 2001ರಲ್ಲಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಸುದೀರ್ಘ ವಿಚಾರಣೆ ಬಳಿಕ 2009ರಲ್ಲಿ ಇಂಥ ಲೈಂಗಿಕ ಕ್ರಿಯೆಯನ್ನು ಅಪರಾಧಮುಕ್ತಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. 2013ರಲ್ಲಿ ದೆಹಲಿ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯ ಸಲಿಂಗಕಾಮವನ್ನು ಮತ್ತೆ ಅಪರಾಧಗೊಳಿಸಿತ್ತು. ಇದರ ವಿರುದ್ಧ ಕ್ಯುರೆಟಿವ್‌ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಹಂತದಲ್ಲಿ ಇಡೀ ವಿಚಾರದ ಕುರಿತು ಹೊಸದಾಗಿ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿತ್ತು. ಕೇಂದ್ರ ಸರ್ಕಾರ ಸ್ಪಷ್ಟವಾಗಿ ತನ್ನ ನಿಲುವು ತಿಳಿಸದೇ, ನ್ಯಾಯಾಲಯದ ವಿವೇಚನೆಗೇ ಬಿಟ್ಟಿತ್ತು.

LGBTಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಮ್ಮತಿ ಇಲ್ಲದ ಸೆಕ್ಸ್‌ಗಿಲ್ಲ ಅನುಮತಿ
ಪರಸ್ಪರ ಸಮ್ಮತಿಯಿಂದ ಸಲಿಂಗಿಗಳು ಲೈಂಗಿಕ ಕ್ರಿಯೆ ನಡೆಸಬಹುದು. ಅದನ್ನು ಅಪರಾಧ ಎಂದು ಸಾರುತ್ತಿದ್ದ ಐಪಿಸಿ ಸೆಕ್ಷನ್‌ 377ರ ಒಂದು ಭಾಗವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆದರೆ ಸಮ್ಮತಿ ಇಲ್ಲದೇ ಸಲಿಂಗಕಾಮ ನಡೆಸಿದರೆ, ಪ್ರಾಣಿ ಅಥವಾ ಮಕ್ಕಳನ್ನು ಸಲಿಂಗಕಾಮಕ್ಕೆ ಬಳಸಿಕೊಂಡರೆ ಅದು ಈಗಲೂ ಅಪರಾಧ.