ಮೂವತ್ತು ವರ್ಷಗಳ ಹಿಂದಿನ ಒಂದು ಘಟನೆ ಹಳ್ಳಿಗಾಡಿನ ವ್ಯಕ್ತಿಯೊಬ್ಬರಲ್ಲಿ ಬೆಳಕು ಮೂಡಿಸುತ್ತೆ. ಆ ಬೆಳಕು ಇಂದು ದೊಡ್ಡದಾಗಿ ಸುಮಾರು ೩೦೦ಕ್ಕೂ ಅಧಿಕ ಮನೆಗಳಲ್ಲಿ ಬೆಳಗುತ್ತಿದೆ. ಆ ಘಟನೆ ಏನು ಎಂದರೆ, ಚಿಕ್ಕಮಗಳೂರು ಚಿಲ್ಲೆಯ ಕೊಪ್ಪ ತಾಲೂಕಿನ ಪುಟ್ಟ ಗ್ರಾಮವಾದ ಹಳ್ಳಿ ಗುಡ್ಡೆ ಎಂಬಲ್ಲಿಗೆ ವಿದ್ಯುತ್ ಬಂದದ್ದು. ಅರೆ ವಿದ್ಯುತ್ ಬಂದದ್ದು ಒಳ್ಳೆಯ ಸುದ್ದಿಯಲ್ಲವೇ ಎಂದು ಕೇಳಿದರೆ ಅಲ್ಲೇ ಇರುವುದು ಸ್ವಾರಸ್ಯ.

ಆರ್ಥಿಕ ಸಮಸ್ಯೆಯೇ ಶಕ್ತಿ
ಆರ್ಥಿಕ ಸಮಸ್ಯೆಯಿಂದಾಗಿ ಓದನ್ನು ಎಸ್‌ಎಸ್‌ಎಲ್‌ಸಿಗೇ ಮುಗಿಸಿದ ರತ್ನಾಕರ್ ಅವರು ದೀಪದ ಬುಡ್ಡಿಯಲ್ಲಿ ರಾತ್ರಿಗಳನ್ನು ಕಳೆಯುತ್ತಿರುವಾಗ ಕೆಇಬಿಯಿಂದ ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತೆ. ಆಗ ಒಟ್ಟು ಇದ್ದ ಹದಿನೆಂಟು ಮನೆಯಲ್ಲಿ ಒಂಭತ್ತು ಮನೆಗಳು ವಿದ್ಯುತ್ ಸಂಪರ್ಕ ಪಡೆದರೆ, ಉಳಿದ ಮನೆಗಳು ಆರ್ಥಿಕವಾಗಿ ಹೆಚ್ಚು ಶಕ್ತವಾಗಿಲ್ಲದ ಕಾರಣ ವಿದ್ಯುತ್ ಸಂಪರ್ಕದಿಂದ ವಂಚಿತವಾಗುತ್ತವೆ. ಅದರಲ್ಲಿ ರತ್ನಾಕರ್ ಅವರ ಮನೆಯೂ ಒಂದು. ಹೀಗೆ ಅಕ್ಕ ಪಕ್ಕದ ಮನೆಗಳಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿದ್ದರೆ ಇತ್ತ ದೀಪದ ಬೆಳಕಲ್ಲಿ ಕೂರುತ್ತಿದ್ದ ರತ್ನಾಕರ್ ಅವರ ಮನಸ್ಸಿನಲ್ಲಿ ನಮ್ಮ ಮನೆಯಲ್ಲೂ ಕರೆಂಟ್ ಬರುವಂತೆ ಮಾಡಬೇಕು ಎನ್ನುವ ಹಠ ಹುಟ್ಟುತ್ತೆ. ಆದರೆ ಅದಕ್ಕೆ ಬೇಕಾದ ಹಣವಿರುವುದಿಲ್ಲ. ಆದರೂ ಛಲ ಬಿಡದ ರತ್ನಾಕರ್ ಮೊರೆ ಹೋಗಿದ್ದು ಕಿರುಜಲ ವಿದ್ಯುತ್ ಉತ್ಪಾದನೆಗೆ.

ಪಠ್ಯದಲ್ಲಿ ಓದಿದ್ದು, ಕಣ್ಣಾರೆ ಕಂಡಿದ್ದು
‘ಪಕ್ಕದ ಮನೆಯಲ್ಲಿ ಕರೆಂಟ್‌ನಿಂದ ಬಲ್ಬ್ ಉರಿಯುವಾಗ ನನ್ನ ಮನೆಗೂ ಬೆಳಕು ಬೇಕು ಎನ್ನಿಸುತ್ತಿತ್ತು. ಆದರೆ ಏನು ಮಾಡುವುದು ನಾವು ಅಷ್ಟೊಂದು ಶಕ್ತಿವಂತರಾಗಿರಲಿಲ್ಲ. ಆದರೆ ನಾನು ಎಸ್‌ಎಸ್‌ಎಲ್‌ಸಿ ಓದುವಾಗ ಚಕ್ರ ತಿರುಗಿಸಿದರೆ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಕೇಳಿದ್ದೆ. ಅಲ್ಲದೇ ನಮ್ಮ ಪಕ್ಕದ ಮನೆಯಲ್ಲಿ ಇದ್ದ ಡೈನಮೋ ಸೈಕಲ್‌ನಲ್ಲಿ ಬೆಳಕು ಬರುತ್ತಿದ್ದದ್ದನ್ನು ನೋಡಿದ್ದೆ. ಇದನ್ನೇ ಇಟ್ಟುಕೊಂಡು ನಮ್ಮ ತೋಟದಲ್ಲಿ ಹರಿಯುತ್ತಿದ್ದ ನೀರನ್ನು ಬಳಸಿಕೊಂಡು ವಿದ್ಯುತ್ ತಯಾರು ಮಾಡಲು ಮುಂದಾದೆ’ ಎನ್ನುವ ರತ್ನಾಕರ್ ತಮ್ಮ ಆಲೋಚನೆಯನ್ನು ಕಾರ್ಯ ರೂಪಕ್ಕೆ ಇಳಿಸಿದ್ದು ಹೀಗೆ. ‘ನನಗೊಬ್ಬ ಸೈಕಲ್ ಶಾಪ್‌ನ ಸ್ನೇಹಿತ ಇದ್ದ. ಅವನ ಬಳಿ ಹೋಗಿ ಹಳೆಯ ಸೈಕಲ್‌ಗಳ ರಿಮ್ ತೆಗೆದುಕೊಂಡೆ. ನೂರು ರುಪಾಯಿ ಬಂಡವಾಳ ಹಾಕಿ ಒಂದು ಡೈನಮೋ ಕೊಂಡುಕೊಂಡೆ. ಆಮೇಲೆ ಅವರಿವರನ್ನು ಕೇಳಿ, ತಿಳಿದು ಡೈನಮೋ ಸೆಟ್ ಮಾಡಿದೆ. ನಮ್ಮ ಹೊಲದಲ್ಲೇ ಹರಿಯುತ್ತಿದ್ದ ನೀರಿಗೆ ಅಡ್ಡಲಾಗಿ ಸೈಕಲ್ ಚಕ್ರ ಇಟ್ಟಾಗ ಅದು ತಿರುಗಿತು. ಸಣ್ಣದಾಗಿ ಲೈಟ್ ಹೊತ್ತುಕೊಂಡಿತು. ಇದು ನನ್ನ ಮೊದಲ ಪ್ರಯೋಗ. ಅಲ್ಲಿಯೇ ಯಶ ಕಂಡೆ. ಆ ಒಂದು ಬಲ್ಬ್‌ನಿಂದ ನಮ್ಮ ಮನೆ ಸ್ವಲ್ಪ ಬೆಳಕಾಯಿತು. ಆದರೆ ಅಷ್ಟಕ್ಕೆ ಸುಮ್ಮನೆ ಕೂರದೇ, ಶಿವಮೊಗ್ಗದಿಂದ ಡಿಸಿ ಡೈನಮೋ ತೆಗೆದುಕೊಂಡು ಬಂದೆ. ನನ್ನ ಐಡಿಯಾವನ್ನೇ ಮತ್ತಷ್ಟು ವಿಸ್ತರಿಸಿದೆ. ಅದರ ಪರಿಣಾಮ ಸುಮಾರು ಹತ್ತು ಬಲ್ಬ್‌ಗಳು ಹುರಿಯುವಷ್ಟು ವಿದ್ಯುತ್ ಉತ್ಪಾದನೆಯಾಯಿತು’ ಎನ್ನುವ ರತ್ನಾಕರ್ ಆಮೇಲೆ ಡಿಸಿ ಡೈನಮೋದಿಂದ ಎಸಿ ಡೈನಮೋಗೆ ಬದಲಾವಣೆ ಮಾಡಿಕೊಂಡು ಟರ್ಬೋ ಮೂಲಕ ಜಲ ವಿದ್ಯುತ್ ಕ್ರಾಂತಿ ಮಾಡಿದವರು.

300ಮನೆಗಳಿಗೆ ಬೆಳಕು
ತಮ್ಮದೇ ಆದ ಸ್ವಂತ ತಂಡ ಕಟ್ಟಿಕೊಂಡು ಅದರಲ್ಲಿ ಯಾವುದೇ ಇಂಜಿನಿಯರಿಂಗ್ ಪದವಿ ಗಳಿಸದ ಆರು ಜನರನ್ನು ಇಟ್ಟುಕೊಂಡು ‘ಟರ್ಬೊ ಜಲವಿದ್ಯುತ್ ದೀಪಗಳು’ ಎಂಬ ಹೆಸರಿನ ಸಂಸ್ಥೆಯನ್ನು ಜಯಪುರದಲ್ಲಿ ಶುರು ಮಾಡಿರು ರತ್ನಾಕರ್ ಇವತ್ತಿಗೆ ಅಳವಡಿಸಿರುವ ಒಟ್ಟು ಟರ್ಬೈನ್‌ಗಳ ಸಂಖ್ಯೆ ೪೬೭. ಇವುಗಳು ಒಂದಕ್ಕಿಂತ ಒಂದು ಭಿನ್ನ. ಬೆಂಗಳೂರಿನ ವರ್ತೂರು ಕೆರೆಯ ಬಳಿ ಚರಂಡಿ ನೀರಿನಿಂದಲೂ ವಿದ್ಯುತ್ ಉತ್ಪಾದಿಸಬಹುದು ಎಂದು ತೋರಿಸಿಕೊಟ್ಟಿರುವ ಇವರು ದೂರದ ಉತ್ತರಾಖಂಡ್ ನಲ್ಲಿಯೂ ಬೆಳಕು ಹೊತ್ತಿಸಿದ್ದಾರೆ. ಅಲ್ಲದೇ ಮಲೆನಾಡು (ಕುದುರೆಮುಖ ರಾಷ್ಟ್ರೀಯ ಉದ್ಯಾನವನ) ಭಾಗದ ನಕ್ಸಲ್ ಪೀಡಿತ ಪ್ರದೇಶಗಳು, ಕಾಡಿನ ನಡುವಿನ ಮನೆಗಳೂ ಸೇರಿದಂತೆ ಒಟ್ಟು ೩೦೦ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಒದಗಿಸುವಲ್ಲಿ ಯಶ ಕಂಡಿದ್ದಾರೆ ಟರ್ಬೋ ರತ್ನಾಕರ್. ದೂ. 9448407703 

ರಾಷ್ಟ್ರ ಪ್ರಶಸ್ತಿ ಪುರಸ್ಕೃತರು
ಮೊದಲು ತಮ್ಮ ಮನೆಗಾಗಿ ವಿದ್ಯುತ್ ಉತ್ಪಾದನೆ ಮಾಡಿದ ರತ್ನಾಕರ್ ಅವರು ಕ್ರಮೇಣ ತಮ್ಮ ಸುತ್ತಮುತ್ತಲಿನವರಿಗೆ ಅರಿವು ಮೂಡಿಸಿ ಅವರೂ ಕಿರು ಜಲ ವಿದ್ಯುತ್‌ನತ್ತ ಮುಖ ಮಾಡುವಂತೆ ಮಾಡಿದವರು. ಓದಿದ್ದು ಕಡಿಮೆಯಾದರೂ ಮಾಡಿದ ಕೆಲಸ ಹೆಚ್ಚು ಪ್ರಯೋಜನಕಾರಿಯಾಗಿದ್ದರಿಂದ ಇವರಿಗೆ ಕೇಂದ್ರ ಸರಕಾರ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ ವತಿಯಿಂದ ರಾಷ್ಟ್ರ ಪ್ರಶಸ್ತಿ ನೀಡಿದೆ