Asianet Suvarna News Asianet Suvarna News

ಸೆಕ್ಸ್ಟಿಂಗ್ ಕಂಡುಹಿಡಿದಿದ್ದು ಥಾಮಸ್ ಎಡಿಸನ್ನಾ?

ಲೈಟ್ ಬಲ್ಬ್ ಕಂಡು ಹಿಡಿದಿದ್ದು ಯಾರೆಂದು ಕೇಳಿದ್ರೆ ಥಾಮಸ್ ಎಡಿಸನ್ ಎಂದು 5ನೇ ತರಗತಿಯ ಮಕ್ಕಳೂ ಹೇಳಬಲ್ಲರು. ಆದರೆ, ಈ ಎಡಿಸನ್ ಮಹಾಶಯನ ಮೆದುಳೆಂಬ ಮಂತ್ರದಂಡದಲ್ಲಿ ಇನ್ನೂ ಎಷ್ಟೆಲ್ಲಾ ಐಡಿಯಾಗಳಿದ್ವು ಗೊತ್ತಾ, ಅದು ಏನೇನು ಕಂಡುಹಿಡಿದಿತ್ತು ತಿಳಿದ್ರೆ ಅಚ್ಚರಿ ಪಡ್ತೀರಿ.
 

Bizarre things you never knew Thomas Edison invented
Author
Bangalore, First Published Jun 23, 2019, 11:01 AM IST

ಮನೆಯ ಒಂದೊಂದು ಲೈಟ್ ಬಲ್ಬ್ ಉರಿದಾಗಲೂ ನೀವು ಥಾಮಸ್ ಎಡಿಸನ್‌ನನ್ನು ನೆನೆಯಲೇಬೇಕು. ಆದರೆ ಅಷ್ಟೇ ಸಾಲದು, ಎಡಿಸನ್‌ನ ಅದ್ಭುತ ಅನ್ವೇಷಣೆಗಳು ಇನ್ನೂ ನೂರಾರಿವೆ. ಅವರು 1876ರಲ್ಲಿ ನ್ಯೂಜೆರ್ಸಿಯಲ್ಲಿ ತೆರೆದ ಮೆನ್ಲೋ ಪಾರ್ಕ್ ಲ್ಯಾಬೋರೇಟರಿ ವಿಶ್ವದ ಮೊದಲ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ. ಇಲ್ಲಿ ಹತ್ತಿಪ್ಪತ್ತು ಕೆಮಿಸ್ಟ್ಸ್, ಎಂಜಿನಿಯರ್ಸ್, ಡ್ರಾಫ್ಟ್ಸ್‌ಮೆನ್ ಸೇರಿ 400ಕ್ಕೂ ಹೆಚ್ಚು ಅನ್ವೆಷಣೆಗಳ ಪೇಟೆಂಟ್ ಪಡೆದಿದ್ದರು. ಇವೆಲ್ಲವನ್ನು ತನ್ನ ಸಂಶೋಧನೆ ಎಂದ ಎಡಿಸನ್ ಹೆಸರಲ್ಲಿ 1093 ಪೇಟೆಂಟ್‌ಗಳಿದ್ದವು ಎಂದರೆ ನಂಬುವುದು ಕಷ್ಟ. ಅವೆಲ್ಲವೂ ಯಶಸ್ಸು ಕಾಣಲಿಲ್ಲ ನಿಜ, ಆದರೆ, ಅವು ಬೇರೆ ಅನ್ವೇಷಕರಿಗೆ ಐಡಿಯಾ ನೀಡಿದವು. ಅವುಗಳಲ್ಲಿ ಕೆಲವು ವಿಚಿತ್ರವೂ, ವಿಶಿಷ್ಟವೂ ಆದವು ಇಲ್ಲಿವೆ.

ಸೆಕ್ಸ್ಟಿಂಗ್ ಚಾಳಿ: ನಗ್ನ ಫೋಟೋಗಳು ಲೀಕ್ ಆಗೋ ಚಾನ್ಸ್ ಇದೆ ಹುಷಾರು!

1. ಹೆಲ್ಲೋ

ಟೆಲಿಫೋನ್ ಕಂಡು ಹಿಡಿದ ಎಕ್ಸೈಟ್‌ಮೆಂಟ್‌ನಲ್ಲಿ ಗ್ರಹಾಂ ಬೆಲ್ 1877ರಲ್ಲಿ ಮೊದಲ ಬಾರಿಗೆ ಕರೆ ಮಾಡಿದಾಗ ಆಡಿದ ಮೊದಲ ಮಾತು- 'ಮಿ. ವ್ಯಾಟ್ಸನ್, ಕಮ್ ಹಿಯರ್' ಎಂಬುದಾಗಿತ್ತು. ಫೋನ್ ಕಂಡುಹಿಡಿದಾದ ಬಳಿಕ ಆರಂಭದಲ್ಲಿ ಹೇಗೆ ಗ್ರೀಟ್ ಮಾಡಬೇಕೆಂಬ ಚರ್ಚೆ ಶುರುವಾಯಿತು. ಆಗ ಗ್ರಹಾಂ ಬೆಲ್ ಸಲಹೆ ನೀಡಿದ್ದು 'ಆಹೋಯ್ ಆಹೋಯ್' ಎಂದು. ಉಳಿದವರು ಆರಂಭದ ಮಾತು ಬೇಡವೆಂದರು. ಆದರೆ ಗ್ರಹಾಂ ಬೆಲ್ ತಮ್ಮ ಮೊದಲ ಕಚೇರಿಯನ್ನು ಫೋನ್ ವ್ಯವಸ್ಥೆಯೊಂದಿಗೆ ತೆರೆದಾಗ ಗೆಳೆಯ ಡೇವಿಡ್ ಬಳಿ ಮಾತನಾಡುತ್ತಾ 'ಹೆಲ್ಲೋ' ಹೇಳಿದರು. ಈ ಸಂದರ್ಭದಲ್ಲಿ ಎಡಿಸನ್ ಹೇಳಿದ ಮಾತು ಡಿಕ್ಷನರಿ ಸೇರಿತು. ಸ್ವಲ್ಪ ದಿನಗಳಲ್ಲೇ ಟೆಲಿಫೋನ್ ಆಪರೇಟರ್‌ಗಳ ಹೆಸರು 'ಹೆಲ್ಲೋ ಗರ್ಲ್ಸ್' ಎಂದಾಯಿತು. 

2. ಟಾಕಿಂಗ್ ಡಾಲ್ಸ್

ಎಡಿಸನ್ ಕಂಡು ಹಿಡಿದ ಫೋನೋಗ್ರಾಫ್ 1877ರ ಕಾಲಕ್ಕೆ ರೆಕಾರ್ಡ್ ಮಾಡಿ ಅದನ್ನು ಮತ್ತೆ ರಿಪ್ರೊಡ್ಯೂಸ್ ಮಾಡಬಲ್ಲ ಮೊದಲ  ಉಪಕರಣ. 1890ರಲ್ಲಿ ಎಡಿಸನ್‌ಗೆ ಒಂದು ಐಡಿಯಾ ಬಂದಿತು. ಫೋನೋಗ್ರಾಫ್ ಉಪಕರಣದಲ್ಲಿ ಮಕ್ಕಳ ರೈಮ್ಸ್ ರೆಕಾರ್ಡ್ ಮಾಡಿ ಅದನ್ನು ಗೊಂಬೆ ಹೊಟ್ಟೆಯಲ್ಲಿಡುವುದು. ಜಾಕ್ ಆ್ಯಂಡ್ ಜಿಲ್, ಟ್ವಿಂಕಲ್ ಟ್ವಿಂಕಲ್ ಮುಂತಾದ ಹಾಡುಗಳನ್ನು ರೆಕಾರ್ಡ್ ಮಾಡಲಾಯಿತು. ಆದರೆ, ಮಕ್ಕಳ ಕೈಗೆ ಹೋಗುತ್ತಲೇ ಬಹುತೇಕ ಗೊಂಬೆಗಳು ಹಾಳಾಗಿ, ಹಾಡು ಅರ್ಥವೇ ಆಗದ ಗಿಬ್ಬರಿಶ್ ಭಾಷೆಯಲ್ಲಿ ಕರ್ಕಶವಾಗಿ ಕೇಳಿಬಂತು. ಗೊಂಬೆ ಹಾಡತೊಡಗಿದರೆ ಭೂತವೇನೋ ಎಂದು ಭಯವಾಗುವಷ್ಟು ಕರ್ಕಶ ಧ್ವನಿ ಹೊರಬಂತು. ಮಾರಾಟವಾಗಿದ್ದೇ 500 ಗೊಂಬೆಗಳು. ಕೆಲ ವಾರಗಳಲ್ಲೇ ಅವೂ ಹಿಂತಿರುಗಿ ಬರಲಾರಂಭಿಸಿದವು. ಅಲ್ಲಿಗೆ ಆರಂಭವಾದ ಒಂದೇ ತಿಂಗಳಿಗೆ ಎಡಿಸನ್ ಗೊಂಬೆಗಳ ಕತೆ ಮುಗಿಯಿತು. 

3. ವ್ಯಾಕ್ಯೂಮ್ ಸೀಲ್ಡ್ ಫ್ರೂಟ್

ಅಗತ್ಯವೇ ಅನ್ವೇಷಣೆಯ ತಾಯಿ ಎಂಬುದು ನಿಜವಾದರೆ, ಎಡಿಸನ್ ಲ್ಯಾಬ್‌ನಲ್ಲಿ ಯಾರಿಗೋ ಬಾಳೆಹಣ್ಣಿನ ಅಗತ್ಯ ತುಂಬಾ ಇತ್ತೆಂದು ಕಾಣುತ್ತದೆ. ಬಲ್ಬ್‌ಗಳ ಅಭಿವೃದ್ಧಿಯಲ್ಲಿದ್ದ ಸಂದರ್ಭದಲ್ಲಿ ಎಡಿಸನ್ ಸಹಾಯಕ ವಿಜ್ಞಾನಿಗಳ ಬಳಿ ಹಲವು ವ್ಯಾಕ್ಯೂಮ್ ಪಂಪ್‌ಗಳಿದ್ದವು. ಇದನ್ನೇ ಬಳಸಿಕೊಂಡ ವಿಜ್ಞಾನಿಯೊಬ್ಬರು ಬಾಳೆಹಣ್ಣನ್ನು ಏರ್ ಟೈಟ್ ಗ್ಲಾಸ್ ಜಾರ್‌ಗೆ ಹಾಕಿ, ವ್ಯಾಕ್ಯೂಮ್ ಪಂಪ್ ಬಳಸಿ ಒಳಗಿನ ಗಾಳಿಯನ್ನೆಲ್ಲ ತೆಗೆದರು. 1881ರಲ್ಲಿ ಈ ಹಣ್ಣುಗಳನ್ನು ಸಂರಕ್ಷಿಸುವ ವಿಧಾನಕ್ಕೆ ಎಡಿಸನ್ ಪೇಟೆಂಟ್ ಮಾಡಿಸಿಕೊಂಡರು. ಇಂದಿಗೂ ಕೂಡಾ ಮೆಶಿನ್ ಬಳಸಿ ಹಣ್ಣು ತರಕಾರಿಗಳನ್ನು ವ್ಯಾಕ್ಯೂಮ್ ಸೀಲ್ ಮಾಡಿ ರಕ್ಷಿಸಲಾಗುವುದನ್ನು ಕಾಣಬಹುದು. 

ಸೆಕ್ಸ್ಟಿಂಗ್ ಬಗ್ಗೆ ಹದಿವಯಸ್ಸಿನ ಮಕ್ಕಳು ತಿಳಿದಿರಲೇಬೇಕಾದ ಸಂಗತಿಗಳಿವು!

4. ಹಾಲಿವುಡ್

'ಫೋನೋಗ್ರಾಫ್ ಕಿವಿಗೆ ಮಾಡುವ ಕೆಲಸವನ್ನು ಕಣ್ಣಿಗೆ ಮಾಡುವಂಥ ಮೆಶಿನ್‌ನ್ನು ನಾನು ಕಂಡುಹಿಡಿಯುತ್ತಿದ್ದೇನೆ' ಎಂದು 1888ರಲ್ಲಿ ಎಡಿಸನ್ ಬರೆದಿದ್ದರು. ಕೆಲವೇ ವರ್ಷಗಳಲ್ಲಿ ಮೊದಲ ಮೋಷನ್ ಪಿಕ್ಚರ್ ಕ್ಯಾಮೆರಾಗೆ ಅವರು ಪೇಟೆಂಟ್ ಪಡೆದರು. ಅಮೆರಿಕಾದ ಮೊದಲ ಮೂವಿ ಸ್ಟೂಡಿಯೋ ಸ್ಥಾಪಿಸಿ, ವಿಟಾಸ್ಕೋಪ್ ಎಂಬ ಫಿಲ್ಮ್ ಪ್ರೊಜೆಕ್ಟರ್ ಪಡೆದುಕೊಂಡು 'ಫ್ರೆಡ್ ಓಟ್ಸ್ ಸ್ನೀಜ್' ಎಂಬ ಮೊದಲ ಮೋಷನ್ ಪಿಕ್ಚರ್ ತೆಗೆದರು. 1896ರ ಹೊತ್ತಿಗೆ ಎಡಿಸನ್ ಅಮೆರಿಕಾದ್ಯಂತ ಮೂವಿ ಸ್ಕ್ರೀನಿಂಗಿಗೆ ಸಾರ್ವಜನಿಕರಿಂದ ಹಣ ಪಡೆದು ಟಿಕೆಟ್ ನೀಡಲು ಶುರು ಮಾಡಿದರು. ಪ್ರೊಡಕ್ಷನ್, ಡಿಸ್ಟ್ರಿಬ್ಯೂಶನ್ ಹಾಗೂ ಪ್ರದರ್ಶನಕ್ಕೆ ಪೇಟೆಂಟ್ ಪಡೆದು ಮೋಶನ್ ಪಿಕ್ಟರ್ಸ್ ಪೇಟೆಂಟ್ ಕಂಪನಿ ತೆರೆದು ಈ ವಿಷಯದಲ್ಲಿ ಏಕಚಕ್ರಾಧಿಪತ್ಯ ನಡೆಸಿದರು. ಈ ಪೇಟೆಂಟ್ ಕಂಪನಿಯೇ ನಿಧಾನವಾಗಿ ಹಾಲಿವುಡ್ ಆಯಿತು.

5. ಸೆಕ್ಸ್ಟಿಂಗ್

ಸೆಕ್ಸ್ಟಿಂಗ್ ಎಡಿಸನ್ ಅನ್ವೇಷಣೆ ಹೌದೋ ಅಲ್ಲವೋ ಎಂಬುದನ್ನು ಓದುಗರೇ ನಿರ್ಧರಿಸಬೇಕು. ಆದರೆ, ಎಡಿಸನ್ ತಮ್ಮ ಎರಡನೇ ಪ್ರೇಯಸಿ ಮಿನಾ ಮಿಲ್ಲರ್‌ಗೆ ಆಕೆಯ ಪೋಷಕರು ಎದುರಿದ್ದಾಗ ತನ್ನೊಂದಿಗೆ ಖಾಸಗಿಯಾಗಿ ಸಂಭಾಷಿಸಲು ಮೋರ್ಸ್ ಕೋಡ್ ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದರು. ಪೋಷಕರಿಗೆ ಗೊತ್ತಾಗದ ಹಾಗೆ ಮೆಸೇಜ್‌ನಲ್ಲಿ ಖಾಸಗಿ ಸಂಭಾಷಣೆ ಎಂದರೆ ಅದು ಸೆಕ್ಸ್ಟಿಂಗ್ ಇರಬಹುದೇನೋ ಅಲ್ಲವೇ? ಎಡಿಸನ್ ಮಿನಾಗೆ ಮ್ಯಾರೇಜ್ ಪ್ರಪೋಸ್ ಮಾಡಿದ್ದು ಕೂಡಾ ಕೋಡ್‌ನಲ್ಲೇ. ಅದಕ್ಕೆ ಆಕೆ '-.--. ...' ಎಂದು ಪ್ರತಿಕ್ರಿಯಿಸಿದ್ದರು. 

ಇಂಥ ಇನ್ನೂ ನೂರಾರು ಅನ್ವೇಷಣೆಗಳಿವೆ ಎಡಿಸನ್ ಮಾಡಿದ್ದು. ಆದರೆ ನಾವು ಕೇವಲ ಬಲ್ಬ್ ವಿಷಯದಲ್ಲಿ ಅವರನ್ನು ನೆನೆಸಿಕೊಳ್ಳುತ್ತೇವೆ. 

Follow Us:
Download App:
  • android
  • ios