ವಯಸ್ಸು ನಿಲ್ಲುವುದಿಲ್ಲ. ಅದನ್ನು ನಿಲ್ಲಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಆದರೆ, ವಯಸ್ಸಾದಂತೆ ಕಾಣುವುದರಿಂದ ತಪ್ಪಿಸಿಕೊಳ್ಳಲು ಹಲವು ಸರಿದಾರಿಗಳು ಹಾಗೂ ಕೆಲವು ಕಳ್ಳದಾರಿಗಳಿವೆ. ಫಿಟ್ ಆಗಿರುವುದು, ಚರ್ಮದ ಕಾಂತಿಯನ್ನು ಕಾಯ್ದುಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳುವುದು, ಮನಸ್ಸಿಗೆ ವಯಸ್ಸಾಗದಂತೆ ನೋಡಿಕೊಳ್ಳೋದು ವಯಸ್ಸನ್ನು ಮರೆ ಮಾಚಲು ಸರಿಯಾದ ದಾರಿಗಳು. ಇನ್ನು ಕಣ್ಣ ಕೆಳಗೆ ಬಂದಿರುವ ಸುಕ್ಕಿನ ಗೆರೆಗಳು, ಅಲ್ಲಲ್ಲಿ ಬಾಂಗಿನಂತೆ ಎದ್ದ ಕಪ್ಪು ಕಲೆಗಳು ಇಂಥ ವಯಸ್ಸಿನ ರೇಖೆಗಳನ್ನು ಮರೆ ಮಾಚಲು ಮಾಡುವ ಮೇಕಪ್, ಹೇರ್‌ಸ್ಟೈಲ್ ಇವೆಲ್ಲ ಕಳ್ಳದಾರಿಗಳು. ಮೇಕಪ್ ಮಾಡಿದ ಆ ಒಂದೆರಡು ಗಂಟೆಗಳ ಕಾಲ ನೀವು ಚಿಕ್ಕವರಂತೆ ಕಾಣಬಹುದು. ಆದರೆ, ಹೀಗೆ ಚಿಕ್ಕವರಂತೆ ಕಾಣುವ ಮೇಕಪ್ ಮಾಡಲು ಎಲ್ಲರಿಗೂ ಬರುವುದಿಲ್ಲ. ಹಾಗಿದ್ದರೆ, ಮೇಕಪ್‌ನಿಂದ ವಯಸ್ಸನ್ನು ಮರೆ ಮಾಚುವುದು ಹೇಗೆ? ಇಲ್ಲಿವೆ ನೋಡಿ ಟಿಪ್ಸ್.

- ವಯಸ್ಸಾದ ಮೆಚ್ಯೂರ್ಡ್ ಚರ್ಮಕ್ಕೆ ಫೌಂಡೇಶನ್ ಅತ್ಯಗತ್ಯ. ಆದರೆ, ಫೌಂಡೇಶನ್ ಹಚ್ಚುವ ಮೊದಲು ಪ್ರೈಮರ್ ಬಳಸಲೇಬೇಕು. ಇದು ಮುಖದಲ್ಲಿರುವ ಕಪ್ಪು ಕಲೆಗಳು ಹಾಗೂ ಮೊಡವೆಗಳನ್ನು ಮುಚ್ಚಲು ಸಹಾಯಕ. ಇನ್ನು, ಫೌಂಡೇಶನ್ ಆರಿಸುವಾಗ ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಕ್ರೀಮ್ ಆಗಿದ್ದರೆ ಮಾತ್ರ ಅದು ಮುಖವನ್ನು ಬ್ರೈಟ್ ಆಗಿಸುತ್ತದೆ.

ಎಲ್ಲ ಸ್ಟಾರ್ ನಟಿಯರಿಗೂ ಮೇಕಪ್‌ ಮಾಡೋ ಮಂಡ್ಯದ ಹುಡುಗಿ!

- ಮುಖಕ್ಕೆ ಸ್ವಲ್ಪ ಹೆಚ್ಚಿನ ಕಾಂತಿ ನೀಡಲು ಹೈಲೈಟರ್ಸ್ ಬಳಸಿ. ಲಿಕ್ವಿಡ್ ಹೈಲೈಟರ್ ಆಗಿದ್ದಲ್ಲಿ ಅದು ಮುಖಕ್ಕೆ ಹೆಚ್ಚಿನ ಜೀವಕಳೆ ತುಂಬುತ್ತದೆ. ಹೈಲೈಟರನ್ನು ಫೌಂಡೇಶನ್ ಜೊತೆ ಬೆರೆಸಿ ಹಚ್ಚಬಹುದು. 

- ಶಿಮ್ಮರಿ ಶಾಡೋಗಳನ್ನು ದೂರವಿಡಿ. ಕಣ್ಣಿನ ಸುತ್ತ ಹೊಳೆವ ಶಿಮ್ಮರಿ ಶಾಡೋ ಹಾಗೂ ಪೌಡರ್ ಬಳಕೆಯಿಂದಾಗಿ ಸಣ್ಣ ಸುಕ್ಕಿನ ಗೆರೆಗಳು ಎದ್ದು ಕಾಣುತ್ತವೆ. 

- ಆದಷ್ಟು ಪೌಡರ್ ಆಗಿರುವ ಉತ್ಪನ್ನಗಳ ಬದಲಿಗೆ ಲಿಕ್ವಿಡ್ ಮಾದರಿಯಲ್ಲಿರುವ ಮೇಕಪ್ ಪ್ರಾಡಕ್ಟ್‌ಗಳನ್ನೇ ಬಳಸಿ. 

- ಮೇಕಪ್ ಮಾಡುವ ಮೊದಲು ಐಸ್ ಕ್ಯೂಬ್‌ನಿಂದ ಮುಖವನ್ನು ಮಸಾಜ್ ಮಾಡಿ. ಇದರಿಂದ ಮೇಕಪ್ ಹೆಚ್ಚು ಕಾಲ ನಿಲ್ಲುವುದು.

- ಮಾಯಿಸ್ಚರೈಸರ್ ಹಾಗೂ ಪ್ರೈಮರ್ ನಿಮ್ಮ ಮೊದಲ ಸುತ್ತಿನ ಆಪತ್ಬಾಂದವರು ಎಂಬುದನ್ನು ನೆನಪಿಡಿ. 

 - ವಯಸ್ಸಾದಂತೆಲ್ಲ ತುಟಿಯ ಸುತ್ತ ಸಣ್ಣ ಗೆರೆಗಳು ಬರುತ್ತವೆ. ಅವನ್ನು ಮುಚ್ಚಲು ಕನ್ಸೀಲರ್ ಬಳಸಿ ಹಾಗೂ ತುಟಿಯ ಹೊರಭಾಗಕ್ಕೆ ಲಿಪ್‌ಲೈನರ್ ಹಚ್ಚಿ ಹೈಲೈಟ್ ಮಾಡಿ. ತೆಳು ವರ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್. ಅವು ನಿಮ್ಮ ತುಟಿಯನ್ನು ಹೆಚ್ಚು ಯಂಗ್ ಕಾಣುವಂತಿಡುತ್ತವೆ.

ಸನ್‌ಸ್ಕ್ರೀನ್ ಕಂಪನಿಗಳು ಹೆದರಿಸುವಷ್ಟು ಸೂರ್ಯರಶ್ಮಿ ಕೆಟ್ಟದ್ದೇ?

- ಕಣ್ಣುಗಳಿಗೆ ದಪ್ಪವಾಗಿ ಲಿಕ್ವಿಡ್ ಐಲೈನರ್ ಬಳಿಯುವುದಕ್ಕಿಂತಾ ತೆಳು ಪೆನ್ಸಿಲ್‌ನಲ್ಲಿ ಕಪ್ಪು ತೀಡಿ. 

- ವಯಸ್ಸಾದಂತೆಲ್ಲ ಕಡಿಮೆ ಮೇಕಪ್ ಮಾಡಿದಷ್ಟೂ ಹೆಚ್ಚು ಯಂಗ್ ಕಾಣಬಹುದು ಎಂಬುದನ್ನು ನೆನಪಿಡಿ. ವಯಸ್ಸಿನ ಗೆರೆಗಳನ್ನು ಮುಚ್ಚುವುದಕ್ಕೋಸ್ಕರವೇ ಮೇಕಪ್ ಮಾಡಿದ್ದೀರಿ ಎಂಬುದು ಎಲ್ಲರಿಗೂ ಸಾರಿ ಹೇಳುವಷ್ಟು ದಪ್ಪನಾದ ಮೇಕಪ್ ಬೇಡವೇ ಬೇಡ.