Asianet Suvarna News Asianet Suvarna News

ಮುತ್ತಿನಲ್ಲಿರೋದು ಮತ್ತು ಮಾತ್ರವಲ್ಲ...

'ಮುತ್ತು' ಎಂಬ ಶಬ್ದ ಕಿವಿಗೆ ಬಿದ್ದೊಡನೆಯೇ ನಮ್ಮ ಹೃದಯದ ಬಡಿತ ಜೋರಾಗುತ್ತದೆ. ಮದವೇರಿಸುವ ಕರಾಮತ್ತು ಮುತ್ತಿನಲ್ಲಿದೆ. ಹಾಗಂತ ಎಚ್ಚರ ತಪ್ಪಿದರೆ ಕ್ಷಣಾರ್ಧದಲ್ಲಿ ಮುತ್ತಿನ ಜೊತೆಗೆ ಲಕ್ಷಾಂತರ ಬ್ಯಾಕ್ಟೀರಿಯಾಗಳು ವಿನಿಮಯವಾಗಿ ಜೀವಕ್ಕೆ ಕುತ್ತು ತರುವ ಕುಖ್ಯಾತಿಯೂ ಮುತ್ತಿಗಿದೆ.

Be aware of kisses which may bring various diseases

- ಡಾ.ಮುರಲೀಮೋಹನ್ ಚೂಂತಾರು

ಮುತ್ತಿನಲ್ಲಿ ಹಲವು ವಿಧ. ನೊಂದವರಿಗೆ ಸಾಂತ್ವನ ಹೇಳಿ ಹಣೆ ಮೇಲೆ ನೀಡುವ ಕೇರಿಂಗ್ ಮುತ್ತು, ಮುದ್ದಾದ ಮಗು ನೀಡುವ ಮುಗ್ಧ ಮುತ್ತು, ಮನದನ್ನೆಯ ಕೈ ಹಿಡಿದು, ಮುಂಗೈಯ ಮೇಲ್ಭಾಗವನ್ನು ಮೆಲ್ಲಗೆ ಮುದ್ದಿಸುವ ಪ್ರಪೋಸಲ್ ಮುತ್ತು, ಏಕಾಂತದಲ್ಲಿ ನಲ್ಲೆ-ನಲ್ಲ ರೋಮಾಂಚಿತರಾಗಿ ವದನದ ಮೇಲೆಲ್ಲಾ ತುಟಿಯಾಡಿಸುತ್ತಾ ನೀಡುವ ರೋಮ್ಯಾಂಟಿಕ್ ಮುತ್ತು ..ಹೀಗೆ . ಪ್ರತಿ ಬಾರಿ ನೀಡುವ ಅಥವಾ ಪಡೆಯುವ ಒಂದೊಂದು ಮುತ್ತಿನಲ್ಲೂ ಪ್ರೀತಿ, ಪ್ರೇಮ, ಮಮತೆ, ಕಾಳಜಿ, ಸಂತಸ ಭರವಸೆ, ಧೈರ್ಯ ಹೀಗೆ ನೂರಾರು ಭಾವನೆಗಳು ಅಡಗಿರುತ್ತದೆ.

ಮುತ್ತಿನ ಹಿಂದಿನ ವೈಜ್ಞಾನಿಕ ಸತ್ಯಗಳು
ಪ್ರತಿ ಬಾರಿ ಮುತ್ತಿಡುವಾಗಲೂ ದೇಹದ ರಸದೂತಗಳು ಪ್ರಪುಲ್ಲಗೊಳ್ಳುತ್ತ ದೆ. ಒಂದು ಸಣ್ಣ ಸಿಹಿ ಮುತ್ತು ನಮ್ಮ ದೇಹದ ರಸದೂತಗಳಿಗೆ ಹೊಸ ಚೈತನ್ಯ ನೀಡುತ್ತದೆ. ಏನೋ ಒಂದು ರೋಮಾಂಚನ ಆ ಕ್ಷಣದಲ್ಲಿ ಉಂಟಾಗಿ ಹೊಸ ಚೈತನ್ಯದ ಚಿಲುಮೆ ಉಕ್ಕಿ ಹರಿಯುತ್ತದೆ. ಒಮ್ಮೆ ಭಾವನಾತ್ಮಕವಾಗಿ ಮುತ್ತಿಡುವಾಗ ಮೆದುಳಿನಲ್ಲಿ ಸೆರಟೋನಿನ್ ಡೋಪಮಿನ್, ಆಕ್ಸಿಟಾಸಿನ್ ಮುಂತಾದ ರಾಸಾಯನಿಕಗಳು ಮತ್ತು ಅಡ್ರಿನಲೀನ್ ಮುಂತಾದ ರಸದೂತಗಳು ಹೆಚ್ಚು ಕ್ರಿಯಾತ್ಮ ಕವಾಗಿ ಕೆಲಸ ಮಾಡಿ ವ್ಯಕ್ತಿಯ ಮೇಲೆ ಧನಾತ್ಮಕ ಪರಿಣಾಮ ಬೀರಿ ವ್ಯಕ್ತಿತ್ವವನ್ನು ಉಲ್ಲಸಿತವಾಗುವಂತೆ ಮಾಡುತ್ತದೆ. 

ಮುತ್ತಿಂದ ಕುತ್ತು!
ಅಧರಕ್ಕೆ ಅಧರ ಸೇರಿಸಿ ರಸ ಹೀರುವ ಪ್ರಣಯದಾಟದ ಮುತ್ತು, ಕೆಲವೊಮ್ಮೆ ಜೀವಕ್ಕೆ ಕುತ್ತು ತರುವ ಸಾಧ್ಯತೆಯೂ ಇದೆ. ನಮ್ಮ ಬಾಯಿ ಬ್ಯಾಕ್ಟೀರಿಯಾಗಳ ಗುಂಡಿ. ಸುಮಾರು 700 ವಿವಿಧ ಬಗೆಯ, ಹಲವು ಲಕ್ಷಗಳಷ್ಟು ಬ್ಯಾಕ್ಟೀರಿಯಗಳು ನಮ್ಮ ಬಾಯಿಯಲ್ಲಿವೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ ಸುಮಾರು 10  ಸೆಕೆಂಡ್‌ಗಳ ಮುತ್ತಿನ ಸಮಯದಲ್ಲಿ ಏನಿಲ್ಲವೆಂದರೂ 80 ಮಿಲಿಯನ್ ಬ್ಯಾಕ್ಟೀರಿಯಾಗಳು ಪರಸ್ಪರ ವಿನಿಮಯವಾಗುತ್ತದೆ ಎಂದು ತಿಳಿದು ಬಂದಿದೆ. 21 ಜೋಡಿಗಳು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದು, ದಿನಕ್ಕೆ 10ಕ್ಕಿಂತ ಹೆಚ್ಚು ಬಾರಿ 10 ಸೆಕೆಂಡ್‌ಗಳ ಕಾಲ ಮುತ್ತು ನೀಡಿದ ಜೋಡಿಗಳ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ಒಂದೇ ರೀತಿಯಲ್ಲಿರುವುದು ಸಾಬೀತಾಗಿದೆ. ಇದರಿಂದ ರೋಗ ಹರಡುವ ಸಾಧ್ಯತೆ ಹೆಚ್ಚು ಇದೆ ಎಂದೂ ತಿಳಿದು ಬಂದಿದೆ. 

ಮುತ್ತಿನಿಂದ ಬರಬಹುದಾದ ರೋಗಗಳು ಅತೀ ಪ್ರಮುಖವಾದುದ್ದು ಏಬ್‌ಸ್ಟೈನ್ ಬಾರ್ ವೈರಸ್‌ನಿಂದ ಹರಡುವ ಇನ್ಫೆಕ್ಷಿಯಸ್ ಮೊನೋನೂಕ್ಸಿಯಾಸಿಸ್ ಎಂಬ ರೋಗ. ಈ ರೋಗ ಮುತ್ತಿನ ಖಾಯಿಲೆ ಎಂದೇ ಕುಖ್ಯಾತಿ ಪಡೆದಿದೆ. ವೈರಸ್ ಜ್ವರದಂತೆ ಕಾಡುವ ಈ ರೋಗದಲ್ಲಿ ಜ್ವರ, ಗಂಟಲು ನೋವು, ಕೆರೆತ, ಸ್ನಾಯ ಸೆಳೆತ ಮತ್ತು ಉಬ್ಬಿಕೊಂಡ ಕುತ್ತಿಗೆಯ ದುಗ್ಧ ಗ್ರಂಥಿಗಳು ಹೆಚ್ಚಾಗಿರುತ್ತದೆ. 15 ರಿಂದ 30 ಹರೆಯದಲ್ಲಿ ಹೆಚ್ಚು ಕಾಣಿಸುವ ಈ ರೋಗ ಸುಮಾರು 2 ತಿಂಗಳವರೆಗೆಕಾಡಬಹುದು. ದ್ರವಹಾರ, ವಿಶ್ರಾಂತಿ, ನೋವು ನಿವಾರಕ ಹಾಗೂ ಜ್ವರದ ಔಷಧದಿಂದ ಗುಣ ಪಡಿಸಲಾಗುತ್ತದೆ. ಇದಲ್ಲದೆ ಸೈಟೋಮೆಗಾಲೋ ವೈರಸ್ ಜ್ವರ, ವಸಡು ರೋಗಗಳು, ಹರ್ಪಿಸ್ ಎಂಬ ವೈರಾಣು ರೋಗ, ಮೆನಿಂಜೈಟಿಸ್ ಎನ್ನುವ ಮೆದುಳು ಪದರದ ಉರಿಯೂತ, ಪೋಲಿಯೋ ಎಂಬ ವೈರಾಣು ರೋಗ, ಮಂಪ್ಸ್ ಅಥವಾ ಜೊಲ್ಲು ರಸಗ್ರಂಥಿಗಳನ್ನು ಕಾಡುವ ಮಂಗಬಾವು ಎನ್ನುವ ವೈರಾಣು ರೋಗ, ರುಬೆಲ್ಲಾ ಎನ್ನುವ ವೈರಾಣು ರೋಗ ಮತ್ತು ಇನ್ ಪ್ಲುಯೆಂಜಾ ಎನ್ನುವ ರೋಗ ಮುತ್ತಿನ ಮೂಲಕ ಪರಸ್ಪರ ವಿನಿಮಯ ವಾಗುವ ಎಂಜಲಿನಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಹೆಪಟೈಟಿಸ್ 'ಬಿ' ರೋಗಾಣು ಕೂಡಾ ಬಹಳ ಸುಲಭವಾಗಿ ಹರಡುವ ಸಾಧ್ಯತೆ ಇದೆ. ಏಡ್ಸ್ ರೋಗ  ಉಂಟು ಮಾಡುವ ವೈರಾಣು ಎಂಜಲಿನ ಮುಖಾಂತರವೂ ಹರಡಬಹುದು. ಊಗಿ ವೈರಾಣು ಹುಣ್ಣು ಅಥವಾ ಗಾಯದ ಮೂಲಕ ಪಸರಿಸುತ್ತದೆ. ದಂತ ಕ್ಷಯ ಉಂಟು ಮಾಡುವ ಬ್ಯಾಕ್ಟೀರಿಯಾಗಳೂ ಕೂಡಾ ಎಂಜಲಿನ ಮುಖಾಂತರ ಪರಸ್ಪರ ವಿನಿಮಯವಾಗಿ ಹಲ್ಲು ತೂತಾಗುವ ಸಾಧ್ಯತೆ ಹೆಚ್ಚು.

ಆರೋಗ್ಯಕಾರಿ ಆಹಾರ

ವರ್ಕ್‌ಔಟ್‌ಗೆ ಟಿಪ್ಸ್

ಅನೇಕ ಸಮಸ್ಯೆಗೆ ರಾಮಬಾಮ ಹುಣಸೆಹಣ್ಣು

ಮಧುಮೇಹಕ್ಕೂ ಮದ್ದು ಮಾವಿನ ಎಲೆ

 

Follow Us:
Download App:
  • android
  • ios