Asianet Suvarna News Asianet Suvarna News

ಭಾಗ 3 :ಕವಿ ಸಿದ್ಧಲಿಂಗಯ್ಯ ಆತ್ಮಕಥೆ

ಕವಿ ಸಿದ್ಧಲಿಂಗಯ್ಯ ತಮ್ಮ ಆತ್ಮಚರಿತ್ರೆಯ ಮೂರನೆ ಕಂತು ಬರೆದು ಮುಗಿಸಿದ್ದಾರೆ. ಮುಂದಿನ ಭಾನುವಾರ ಅದು ಲೋಕಾರ್ಪಣೆಯಾಗುತ್ತದೆ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಕೃತಿಯ ಅಯ್ದ ಕತೆಗಳು ಇಲ್ಲವೆ. ಇದು ಸಿದ್ಧಲಿಂಗಯ್ಯ ಅಭಿಮಾನಿಗಳಿಗೆ ಭಾನುಪ್ರಭ ವಿಶೇಷ.

Autobiography of  Author Siddalingaiah
Author
Bengaluru, First Published Sep 3, 2018, 3:42 PM IST

ವಿವಾಹಿತನಿಗೆ ಪಂಗನಾಮ

ಮತ್ತೊಬ್ಬ ಸಂಸದೀಯ ಪಟು ಕೆ.ಎನ್. ನಾಗೇಗೌಡರು. ಅವರು ಅತ್ಯಂತ ಸಮಯ ಪ್ರಜ್ಞೆಯಿಂದ ಮಾತನಾಡುತ್ತಿದ್ದರು. ಅವರು ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳಿಗೆ ಕಡಿಮೆ ಇರಲಿಲ್ಲ. ನಾನಾಗ ವಿಧಾನ ಪರಿಷತ್ತಿನ ಸದಸ್ಯನಾಗಿರಲಿಲ್ಲ. ಆಗ ನಡೆದ ಘಟನೆಯೊಂದನ್ನು ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಶ್ರೀಮತಿ ಬಿ.ಟಿ. ಲಲಿತಾನಾಯಕ್ ಅವರು ಸರ್ಕಾರದ ಮುಂದೆ ಒಂದು ಪ್ರಶ್ನೆಯನ್ನು ಎತ್ತಿದ್ದರು. ಮಹಿಳಾಪರ ಹೋರಾಟಗಾರರಾದ ಶೋಷಿತರಪರ ನಿಲುವುಳ್ಳ ಬಿ.ಟಿ. ಲಲಿತಾನಾಯಕ್ರು ಎತ್ತಿದ ಪ್ರಶ್ನೆ ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತಿತ್ತು. ಗಂಡಸರು ಮದುವೆಯಾಗಿದ್ದಾರೋ ಇಲ್ಲವೋ ಗೊತ್ತಾಗುವುದಿಲ್ಲ. ಯಾಕೆಂದರೆ ಮದುವೆಯಾಗಿದ್ದರೆಂದು ಗುರುತಿಸಲು ಹೆಂಗಸರಿಗೆ ಇರುವಂತೆ ತಾಳಿ ಯಾಗಲಿ, ಕಾಲುಂಗುರವಾಗಲಿ ಗಂಡಸರಿಗೆ ಇರುವುದಿಲ್ಲ. ಹೆಂಗಸರನ್ನು ನೋಡಿದ ಕೂಡಲೆ ಇವರು ವಿವಾಹಿತರೊ, ಅವಿವಾಹಿತರೊ ಎಂದು ಹೇಳಬಹುದು. ಆದರೆ ಗಂಡಸರಿಗೆ ಯಾವುದೇ ಗುರುತಿಲ್ಲವಾದ್ದರಿಂದ ಅವರು ಬೇರೆ ಬೇರೆ ಕಡೆ ಹೋಗಿ ಬೇರೆ ಬೇರೆ ಮದುವೆ ಆಗಿಬಿಡುತ್ತಾರೆ. ತಾವು ಮದುವೆಯಾಗಿಲ್ಲವೆಂದು ಹೇಳುವುದನ್ನು ನಂಬಿ ಅನೇಕ ಹೆಂಗಸರು ಗಂಡಸರ ಮೋಸದ ಬಲೆಗೆ ಬಿದ್ದಿದ್ದಾರೆ. ಆದ್ದರಿಂದ ಸರ್ಕಾರ ಏನಾದರೂ ಒಂದು ತೀರ್ಮಾನ ಮಾಡಿ ಮದುವೆಯಾದ ಎಲ್ಲ ಗಂಡಸರಿಗೂ ಇವರು ವಿವಾಹಿತರು ಎಂದು ಗೊತ್ತಾಗುವಂತೆ ಒಂದು ಗುರುತನ್ನು ನೀಡಬೇಕೆಂದು ಆಗ್ರಹಿಸಿದರು. ಈ ವಿಷಯದಲ್ಲಿ ಯಾವುದೇ ಉತ್ತರ ಕೊಡಲು ಸರ್ಕಾರ ತಡಕಾಡ ಬೇಕಾಯಿತು. ಎಲ್ಲರನ್ನು ಗೊಂದಲದಲ್ಲಿ ಮುಳುಗಿಸಿದ ಈ ಪ್ರಶ್ನೆಗೆ ಕೆ.ಎನ್. ನಾಗೇಗೌಡರು ನೀಡಿದ ಉತ್ತರ ಸ್ವಾರಸ್ಯಕರವಾಗಿತ್ತು. ಅವರು ‘ಮಾನ್ಯ ಸಭಾಪತಿಗಳೇ ಶ್ರೀಮತಿ ಬಿ.ಟಿ. ಲಲಿತಾ ನಾಯಕರ ಪ್ರಶ್ನೆ ಸರಿಯಾಗಿದೆ. ಮದುವೆಯಾದ ಪ್ರತಿ ಗಂಡಸಿಗೂ ಒಂದು ಗುರುತು ಇರಲೇಬೇಕು ಹಿರಿಯರಾದ ಮಾನ್ಯ ಶ್ರೀ ಖಾದ್ರಿ ಶಾಮಣ್ಣನವರು ಸದನದ ಸದಸ್ಯರಾಗಿದ್ದಾರೆ. ಹೇಗೊ ಅವರು ಮೇಲುಕೋಟೆಯಿಂದ ಬಂದವರು. ಇನ್ನು ಮೇಲೆ ಮದುವೆಯಾದ ಪ್ರತಿ ಗಂಡಸನ್ನು ಖಾದ್ರಿ ಶಾಮಣ್ಣನವರ ಬಳಿಗೆ ಕಳುಹಿಸಿ ಅವರ ಕೈಯಿಂದ ಮದುವೆಯಾದ ಗಂಡಸರ ಹಣೆಯ ಮೇಲೆ ಮೇಲುಕೋಟೆಯ ಪಂಗನಾಮವನ್ನು ಎದ್ದು ಕಾಣುವಂತೆ ಹಾಕಿಸಬೇಕು. ಈ ನಾಮವನ್ನು ನೋಡಿದ ಕೂಡಲೆ ಇವರಿಗೆ ಈಗಾಗಲೇ ಮದುವೆಯಾಗಿದೆ ಮತ್ತೆ ಪಂಗನಾಮ ಹಾಕುವ ಅವಶ್ಯಕತೆ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ನಾಗೇಗೌಡರು ಹೇಳಿದಾಗ ಇಡೀ ಸದನ ನಗೆಗಡಲಿನಲ್ಲಿ ಮುಳುಗಿ ಮಾನ್ಯ ಖಾದ್ರಿ ಶಾಮಣ್ಣನವರು ನಕ್ಕು ಉರುಳಾಡುವಂತಾಯಿತು. ಈ ಪ್ರಕರಣವನ್ನು ಪರಿಷತ್ತಿನ ದಾಖಲೆಗಳಲ್ಲಿ ನೋಡಿದ್ದ ನನಗೆ ನಾಗೇಗೌಡರು ಭಾಷಣ ಮಾಡಲು ಎದ್ದು ನಿಂತಾಗ ಏನಾದರೂ ಹೊಸದನ್ನು ಹೇಳುತ್ತಾರೆಂಬ ನಿರೀಕ್ಷೆ ಯಾವಾಗಲೂ ಇರುತ್ತಿತ್ತು. ಒಮ್ಮೆ ವಿಜಯಪುರದ ಹಿರಿಯ ಸದಸ್ಯರಾದ ಗದ್ದಿಯವರು ಬಹುಶಃ ಕಡ್ಲೆಕಾಯಿ ಎಣ್ಣೆಯ ಬಗ್ಗೆ ಮಾತನಾಡುತ್ತಾ ಎಣ್ಣೆಯ ಸಮಸ್ಯೆಯನ್ನು ಪದೇ ಪದೇ ಒತ್ತಿ ಹೇಳುತ್ತಿದ್ದಾಗ, ಎದ್ದುನಿಂತ ನಾಗೇಗೌಡರು ಸಭಾಪತಿಗಳ ಕಡೆ ತಿರುಗಿ ‘ಮಾನ್ಯ ಸಭಾಪತಿಗಳೇ, ಇವರು ಎಣ್ಣೆ ಪಾರ್ಟಿ’ ಎಂದು ಹೇಳಿ ಎಲ್ಲರನ್ನು ನಗಿಸಿದರು.


ಪೊರಕೆ ಎತ್ತಿ ಹಿಡಿದ ತಾಯಿ

ಬಹಳ ಹಿಂದಿನ ಮಾತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾನಾಗ ಅಂತಿಮ ಎಂ.ಎ ವಿದ್ಯಾರ್ಥಿಯಾಗಿದ್ದೆ. ಅಷ್ಟು ಹೊತ್ತಿಗಾಗಲೇ ನನ್ನ ‘ಹೊಲೆಮಾದಿಗರ ಹಾಡು’ ಕವನ ಸಂಕಲನ ಬಿಡುಗಡೆಯಾಗಿ ನನ್ನ ಹೆಸರು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಇದು ಹೇಗೋ ನಾನು ಓದಿದ ಆರ್. ಗೋಪಾಲಸ್ವಾಮಿ ಅಯ್ಯರ್ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಕಿವಿಗೂ ಬಿದ್ದಿತ್ತು. ತಮ್ಮ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಯೊಬ್ಬ ಕವಿಯಾಗಿ ಹೆಸರು ಮಾಡಿದ್ದಾನೆ ಎಂಬುದು ಅಲ್ಲಿಯ ವಿದ್ಯಾರ್ಥಿ ಗಳಿಗೆ ಅಭಿಮಾನದ ಸಂಗತಿಯಾಗಿತ್ತು. ಆಗ ಆ ಹಾಸ್ಟೆಲ್ ಕಟ್ಟಡದಲ್ಲಿ ಪ್ರೌಢಶಾಲೆ ಯೊಂದು ಪ್ರಾರಂಭವಾಗಿತ್ತು. ಹಾಸ್ಟೆಲ್ ಮತ್ತು ಪ್ರೌಢಶಾಲೆ ಎರಡರಲ್ಲೂ ಓದುತ್ತಿದ್ದ ವಿದ್ಯಾರ್ಥಿಗಳೆಲ್ಲ ದಲಿತರೇ ಆಗಿದ್ದರು. ಆ ಶಾಲೆಯ ದೈಹಿಕ ಶಿಕ್ಷಣದ ಅಧ್ಯಾಪಕರಾಗಿದ್ದ ತಿಮ್ಮದಾಸು ಅವರು ಅಂಬೇಡ್ಕರ್‌ವಾದಿಯಾಗಿದ್ದರು. ಅವರಿಗೆ ನನ್ನ ಕವಿತೆಗಳ ಬಗ್ಗೆ ಬಹಳ ಪ್ರೀತಿ. ಒಳ್ಳೆಯ ಸಂಘಟಕರು ಅವರಿಗೆ ಏನು ಹೊಳೆಯಿತೊ? ಅವರು ನನ್ನನ್ನು ಆ ವಿದ್ಯಾರ್ಥಿನಿಲಯದಲ್ಲಿ ಸನ್ಮಾನಿಸಬೇಕೆಂದು ತೀರ್ಮಾನಿಸಿದರು. ನಿಮ್ಮನ್ನು ಸನ್ಮಾನಿಸಲು ಸಮಾರಂಭ ಇಟ್ಟುಕೊಂಡಿರುವುದಾಗಿ ಆ ದಿನ ತಪ್ಪದೇ ಬರಬೇಕೆಂದು ನನ್ನನ್ನು ಕೇಳಿಕೊಂಡರು. ಸನ್ಮಾನಗಳ ವಿರೋಧಿಯಾಗಿದ್ದ ನಾನು ಇದಕ್ಕೆ ಮೊದ-ಮೊದಲು ಒಪ್ಪಲಿಲ್ಲ. ನಿಮ್ಮನ್ನು ಅನ್ನ ಕೊಟ್ಟು ಬೆಳೆಸಿದ ವಿದ್ಯಾರ್ಥಿನಿಲಯದ ಸಮಾರಂಭಕ್ಕೆ ಬರಲು ಆಗುವುದಿಲ್ಲ ಎನ್ನುವುದು ಸರಿಯಲ್ಲ ಎಂದು ಅವರು ಒತ್ತಾಯ ಮಾಡಿದ ಮೇಲೆ ನಾನು ವಿಧಿಯಿಲ್ಲದೆ ಒಪ್ಪಿಕೊಂಡೆನು. ನಾನು ನಿಗದಿತ ಸಮಾರಂಭಕ್ಕೆ ಹೋದಾಗ ವಿದ್ಯಾರ್ಥಿನಿಲಯದಿಂದ ಸ್ವಲ್ಪ ದೂರದಲ್ಲೇ ತಿಮ್ಮದಾಸು ಅವರ ನೇತೃತ್ವ ದಲ್ಲಿ ಕಾದು ನಿಂತಿದ್ದ ವಿದ್ಯಾರ್ಥಿಗಳ ಗುಂಪು ನನಗೆ ಮಾಲಾರ್ಪಣೆ ಮಾಡಿ ವಿದ್ಯಾರ್ಥಿ ನಿಲಯದ ಒಳ ಆವರಣಕ್ಕೆ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಕರೆದೊಯ್ದಿತ್ತು. ಒಳ ಆವರಣದ ಜಾಗ ವಿಶಾಲವಾಗಿತ್ತು. ಅದರ ನಡುವೆ ನಾನು ವಿದ್ಯಾರ್ಥಿಯಾಗಿದ್ದಾಗ ನೋಡುತ್ತಿದ್ದ ಸಂಪಿಗೆ ಮರ ದೊಡ್ಡದಾಗಿ ಬೆಳೆದು ನಿಂತಿತ್ತು. ಸ್ವಾಗತ ಸನ್ಮಾನ ಆದ ಮೇಲೆ ಒಳ್ಳೆಯ ಅಭಿನಂದನಾ ಭಾಷಣವು ಆಯಿತು. ನಾನು ಸನ್ಮಾನಕ್ಕೆ ಕೃತಜ್ಞತೆ ಹೇಳಲು ಎದ್ದು ನಿಂತು ಮಾತನಾಡಲು ಆರಂಭಿಸಿದೆ. ಕೆಲವು ವಾಕ್ಯಗಳನ್ನು ಮಾತಾಡಿದ ಮೇಲೆ ಅಚಾನಕ್ಕಾಗಿ ತಲೆ ಎತ್ತಿ ಮುಂಭಾಗದ ಮೊದಲ ಮಹಡಿಯನ್ನು ನೋಡಿದೆ. ಆಗಲೂ ಆ ವಿದ್ಯಾರ್ಥಿನಿಲಯದಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ನನ್ನ ತಾಯಿ ಪೊರಕೆ ಹಿಡಿದು ನಿಂತು ನನ್ನ ಕಡೆಯೇ ನೋಡುತ್ತಿದ್ದಳು. ನಾನು ನನ್ನ ತಾಯಿಯನ್ನು ನೋಡಿದ ಮೇಲೆ ನನ್ನ ತಾಯಿ ಕಸಗುಡಿಸಿ ನನ್ನನ್ನು ಓದಿಸಿದ್ದು ನೆನಪಾಗಿ ಭಾವುಕನಾದೆ. ಭಾಷಣವನ್ನು ಮುಂದುವರೆಸಿದ ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿಯ ದುಡಿಮೆಯೇ ಕಾರಣ ಈ ವಿದ್ಯಾರ್ಥಿನಿಲಯದಲ್ಲಿ ಕಸ ಗುಡಿಸುವ ಕೆಲಸ ಮಾಡಿ ನನ್ನನ್ನು ನನ್ನ ತಾಯಿ ಈ ಮಟ್ಟಕ್ಕೆ ತಂದಿದ್ದಾಳೆ. ಎದುರಿನ ಮಹಡಿಯಲ್ಲಿ ನಿಂತು ನನ್ನ ತಾಯಿ ಈ ಸಮಾರಂಭ ವನ್ನು ನೋಡುತ್ತಿದ್ದಾಳೆ. ನನ್ನ ತಾಯಿಗೆ ಕೃತಜ್ಞತೆಯನ್ನು ಹೇಳಬಯಸುತ್ತೇನೆ ಎಂದೆ. ಇದರಿಂದ ಆಶ್ಚರ್ಯಗೊಂಡ ಸಭಿಕರು ಹಿಂದಕ್ಕೆ ತಿರುಗಿ ಮೊದಲ ಮಹಡಿಯಲ್ಲಿ ನಿಂತಿದ್ದ ನನ್ನ ತಾಯಿಯನ್ನು ನೋಡಿದರು. ಇದರಿಂದ ಪುಳಕಗೊಂಡ ನನ್ನ ತಾಯಿ ಕೈಲಿದ್ದ ಪೊರಕೆಯನ್ನು ಮೇಲಕ್ಕೆತ್ತಿ ಅತ್ತಇತ್ತ ಬೀಸಿ ಸಂತೋಷ ವ್ಯಕ್ತಪಡಿಸಿದಳು. ಅವಳ ಮುಖ ಅರಳಿತ್ತು. ಒಂದು ರೀತಿಯ ಸಾರ್ಥಕ ಭಾವನೆ ಎದ್ದು ಕಾಣುತ್ತಿತ್ತು. ಅವಳು ಪೊರಕೆಯನ್ನು ಎಡಕ್ಕೆ ಬಲಕ್ಕೆ ಬೀಸುತ್ತಲೆ ಇದ್ದಳು. ಸಭಿಕರು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು. ಅಂದಿನ ಸಭೆಯಲ್ಲಿ ನನಗೆ ನಡೆದ ಸನ್ಮಾನವನ್ನು ನನ್ನ ಭಾಷಣದಲ್ಲಿ ನನ್ನ ತಾಯಿಯನ್ನು ಕುರಿತು ಹೇಳಿದ ಮಾತುಗಳನ್ನು ಅವಳು ಎಂದೂ ಮರೆಯಲಿಲ್ಲ. ಇದನ್ನು ಬಹಳ ಜನರಿಗೆ ಹೇಳಿ ಸಂತೋಷಪಟ್ಟಳು.

ಮೋಸ ಹೋದ ನಾಡಿಗರು

ಸುಮತೀಂದ್ರ ನಾಡಿಗರು ಕಟ್ಟುನಿಟ್ಟಿನ ವ್ಯಕ್ತಿ. ಅವರು ಆಗ ತಾನೇ ಅಮೇರಿಕಾದಿಂದ ಭಾರತಕ್ಕೆ ಮರಳಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಅವರಿಗೆ ಅಮೇರಿಕಾದ ಶಿಸ್ತು ಸಮಯಪಾಲನೆ ಇಷ್ಟವಾಗಿತ್ತು. ಅವರು ತಮ್ಮನ್ನು ತಾವು ದವಳಕೇಶಿ ಎಂದು ಕರೆದುಕೊಂಡು ಹೆಮ್ಮೆಪಡುತ್ತಿದ್ದರು. ದವಳಕೇಶಿ ಎಂಬ ಕಾವ್ಯನಾಮದಲ್ಲಿ ಆಗಾಗ ಪತ್ರಿಕೆಗಳಲ್ಲಿ ಕವಿತೆಗಳ್ನು ಪ್ರಕಟಿಸುತ್ತಿದ್ದರು. ಅಮೇರಿಕಾದಲ್ಲಿ ಒಂದು ಉಪನ್ಯಾಸ ನೀಡಿದರೆ ಇಂತಿಷ್ಟು ಡಾಲರ್ ಸಂಭಾವನೆ ಕೊಡುತ್ತಾರೆಂಬುದನ್ನು ಆಗಾಗ ಹೇಳುತ್ತಿದ್ದರು. ನೀವು ಕನ್ನಡ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರಬೇಕೆಂದು ನಾವು ಕೇಳಿದಾಗ ಅವರು ಸಂಘಟಕರಿಗೆ ನಾನು ಖಂಡಿತಾ ಬರುತ್ತೇನೆಂದು, ಅಮೇರಿಕಾದಲ್ಲಿ ಕೊಡುವಂತೆ ಭಾಷಣಕ್ಕೆ ಸಂಭಾವನೆ ಕೊಡಬೇಕಾಗುತ್ತೆಂದು ಅದರ ಜೊತೆಗೆ ಹೋಗಿ ಬರುವ ಆಟೋ ಚಾರ್ಜ್ ಕೊಡಬೇಕಾಗುತ್ತದೆಂದೂ ಶಾಲು ಹಣ್ಣು ಕೊಡುವುದು ನಿಮಗೆ ಬಿಟ್ಟಿದ್ದೆಂದು ಹೇಳಿದರು. ಆಗ ಸಂಘಟಕರಲ್ಲೊಬ್ಬ ಸ್ವಾಮಿ ತಮ್ಮ ಸಂಭಾವನೆ ಎಷ್ಟು ಎಂದು ಕೇಳಿದ. ಆಗ ನಾಡಿಗರು ಅಮೇರಿಕಾದ ಸಂಭಾವನೆಯನ್ನು ಹೇಳಿದರೆ ನೀವು ಗಾಬರಿಯಾಗುತ್ತೀರೆಂದು ಬಡಭಾರತದ ಪರಿಸ್ಥಿತಿಗೆ ಅನುಗುಣವಾಗಿ ನನ್ನ ಸಂಭಾವನೆ ಅತಿ ಕಡಿಮೆ ಮಟ್ಟಕ್ಕೆ ಇಳಿಸಿದ್ದೆನೆಂದು ಹೇಳಿದರು. ಆಗ ಸಂಘಟಕನು ಸ್ವಾಮಿ ದಯವಿಟ್ಟು ರೂಪಾಯಿ ಲೆಕ್ಕದಲ್ಲಿ ಸಂಭಾವನೆ ತಿಳಿಸಬೇಕೆಂದು ಕೇಳಿಕೊಂಡನು. ಆಗ ನಾಡಿಗರು ನನ್ನ ಭಾಷಣದ ಸಂಭಾವನೆ ನೂರೈವತ್ತು ರೂಪಾಯಿಗಳೆಂದೂ, ಹೋಗಿ ಬರುವ ಆಟೋ ಖರ್ಚನ್ನು ಪ್ರತ್ಯೇಕವಾಗಿ ಕೊಡಬೇಕಾಗುತ್ತದೆಂದು ಹೇಳಿದರು. ಅದಕ್ಕೆ ಸಂಘಟಕನು ತಮ್ಮ ಸಂಭಾವನೆಯನ್ನು ನೂರು ರೂಪಾಯಿಗೆ ಇಳಿಸಬೇಕೆಂದು ಕೇಳಿಕೊಂಡನು. ನಾಡಿಗರು ಕೋಪಗೊಂಡು ಸಾವಿರಾರು ಖರ್ಚು ಮಾಡಿ ರಾಜ್ಯೋತ್ಸವ ಮಾಡುವಾಗ ಮುಖ್ಯ ಅತಿಥಿಗೆ ನೂರೈವತ್ತು ರೂ. ಸಂಭಾವನೆ ಕೊಡಲು ಆಗದವರು ಎಂಥ ಉತ್ಸವ ಮಾಡುತ್ತೀರಿ ಎಂದರು. ಆಗ ಸಂಘಟಕರು ಗೊಣಗುತ್ತಲೆ ನೂರೈವತ್ತು ರೂಪಾಯಿಗೆ ಒಪ್ಪಿಕೊಂಡರು. ನಿಗದಿತ ದಿನ ಸಮಯಕ್ಕೆ ಸರಿಯಾಗಿ ಡಾ. ಸುಮತೀಂದ್ರ ನಾಡಿಗರು ಸಭೆ ನಡೆಯುವ ಸ್ಥಳಕ್ಕೆ ಆಟೋದಲ್ಲಿ ಬಂದರು. ಆಟೋ ಖರ್ಚನ್ನು ಪಾವತಿಸಿ ಕೆಳಗಿಳಿದು ವೇದಿಕೆಯ ಕಡೆ ಬರುತ್ತಿದ್ದಂತೆ ಸಂಘಟಕರು ಆದರದಿಂದ ನಾಡಿಗರನ್ನು ಸ್ವಾಗತಿಸಿದರು. ನಾಡಿಗರು ಅಂದಿನ ಸಭೆಯಲ್ಲಿ ಅತ್ಯುತ್ತಮವಾಗಿ ಭಾಷಣ ಮಾಡಿ ಹಾಸ್ಯ ಚಟಾಕಿಗಳನ್ನು ಹಾರಿಸಿ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಸಮಾರಂಭ ಮುಗಿದ ನಂತರ ನಾಡಿಗರು ಸಂಘಟಕರನ್ನು ಹುಡುಕತೊಡಗಿದರು. ಅವರು ಅಲ್ಲೆಲ್ಲೂ ಕಾಣಲಿಲ್ಲ. ಕೊನೆಗೆ ಯಾರದೋ ಸಹಾಯದಿಂದ ಸಂಘಟಕರ ಮನೆಗೆ ಹೋಗಿ ಅವರನ್ನು ಪತ್ತೇ ಹಚ್ಚಲು ಪ್ರಯತ್ನಿಸಿದರು. ಅವರು ಮನೆಯಲ್ಲಿಯೂ ಇರಲಿಲ್ಲ. ಬಹಳ ಬೇಸರವಾಗಿ ನಾಡಿಗರು ಸಂಭಾವನೆಯೂ ಇಲ್ಲದೆ ಆಟೋ ಖರ್ಚು ಇಲ್ಲದೆ ತಮ್ಮ ಬಡಾವಣೆ ಕಡೆಗೆ ಹೋಗುವ ಬಸ್‌ವೊಂದನ್ನು ಹತ್ತಿದರು.

Follow Us:
Download App:
  • android
  • ios