'ಕನ್ಯಾ'ಕ್ಕೆ ಸುಖವಿಲ್ಲ, ವೃಷಭಕ್ಕೆ ಅಂಗಿ ಪಜೀತಿ, ವೃಷಭಾವತಿಯಲ್ಲಿ ಮುಳುಗಿದರೆ 'ಕಟಕ'ಕ್ಕೆ ಪರಿಹಾರ,

life | Sunday, April 1st, 2018
Suvarna Web Desk
Highlights

ನಿಮ್ಮ ರಾಶಿಗೆ ಭವಿಷ್ಯ ಇದೆಯೇ? ಈ ಪ್ರಶ್ನೆಗೆ ತಲೆಕೆಡಿಸಿಕೊಂಡು ಉತ್ತರ ಕೊಟ್ಟಿದ್ದಾರೆ ಖ್ಯಾತ ಜ್ಯೋತಿಷಿ ಮನೋಹರಾನಂದ ಮಹಾಸ್ವಾಮಿ.

ಮೇಷ

ಮೇಷ ರಾಶಿಯವರಿಗೆ ಈ ಬಾರಿ ಮಿಶ್ರಫಲ. ಮೇಷ ಅಂದ್ರೆ ಟಗರು. ಹಾಗಾಗಿ ಹಣೆಗೆ ಕುಂಕುಮ ನಾಮ, ಕೊರಳಿಗೆ ದಾರ ಹಾಕಲು ಬರುವವರ ಬಗ್ಗೆ ಎಚ್ಚರ ಅಗತ್ಯ. ಇಲ್ಲವಾದರೆ ಬಾಳು ಟಗರು ಚಿತ್ರದ ಡಾಲಿ ಕೈಗೆ ಸಿಕ್ಕ ಟಗರುವಿನಂತಾಗಬಹುದು. ಈ ವರ್ಷ ಎಲ್ಲರನ್ನೂ ಸೇರುವ ಅವಕಾಶವಿದೆ. ಅದು ಬಾಡೂಟದ ರೂಪದಲ್ಲಾದರೂ ಆಗಬಹುದು. ಹಬ್ಬದೂಟದಲ್ಲಾದರೂ ಆಗಬಹುದು. ಗ್ರಹದೋಷ ಪರಿಹಾರಾರ್ಥ ಈ ರಾಶಿಯವರು ೪೮ ದಿನ ಹಸಿ ಹುಲ್ಲು, ಸೊಪ್ಪು ತಿಂದರೆ ಕ್ಷೇಮ.

ವೃಷಭ

ವೃಷಭ ಅಂದರೆ ಹೋರಿ, ಗೂಳಿ, ಎತ್ತು ಎಂಬ ಅರ್ಥವಿದೆ. ಈ ರಾಶಿಯವರಿಗೂ ಮಿಶ್ರ ಫಲ. ವರ್ಷದ ಆರಂಭದಲ್ಲೇ ಗೂಳಿಹಟ್ಟಿ ಶೇಖರ್ ಹಾಗೆ ತಮ್ಮ ಶರ್ಟು ತಾವೇ ಹರಿದು ಹಾಕುವ ಸಂದರ್ಭ ಬರಲಿದೆ. ವರ್ಷದ ಮಧ್ಯದಲ್ಲಿ ಉತ್ತಮ ಮೇವು ಸಿಗುವ ಸಾಧ್ಯತೆ ಇದೆ. ಆದರೆ ಯಾವುದೇ ಮೇವು ಹಗರಣದಲ್ಲಿ ಸಿಗದ ಹಾಗೆ ಕುಲದೇವರಿಗೆ ಸಗಣಿ ಅಭಿಷೇಕ ಮಾಡಿದರೆ ದೋಷ ಪರಿಹಾರವಾಗುವುದು. ಬೆಳಿಗ್ಗೆ ಎದ್ದ ಕೂಡಲೇ ಬೂಸ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.

ಮಿಥುನ

ಈ ರಾಶಿಯವರಿಗೆ ಈ ವರ್ಷ ಉತ್ತಮ ರಾಶಿ ಫಲವಿದೆ. ಈ ರಾಶಿಯವರು ಗಂಡಾದರೆ ಗೆಳತಿಯ ಜೊತೆ ರಾಜರಥದಲ್ಲಿ ತಿರುಗಾಟ. ಹೆಣ್ಣಾದರೆ ದಂಡು ಪಾಳ್ಯದ 3 ಚಿತ್ರದ ಪೂಜಾಗಾಂಧಿಯ ಹಾಗೆ ಪೋಸ್ಟರ್‌ನಲ್ಲಿ ರಾರಾಜಿಸಬಹುದು. ಗ್ರಹಗತಿಗಳೆಲ್ಲಾ ಚೆನ್ನಾಗಿರೋದ್ರಿಂದ ಮನ್ಮಥ ದೇವರ ಪೂಜೆ ಮಾಡುತ್ತಾ ಸುಖವಾಗಿರಬಹುದು. ಬೆಳಿಗ್ಗೆ ಹತ್ತು ಗಂಟೆಗೆ ಎದ್ದು ಸಂಗಾತಿಯೊಂದಿಗೆ ಇಡ್ಲಿ ತಿನ್ನುವುದರಿಂದ ಅನ್ನದಲ್ಲಿ ಸಿಗುವ ಕಲ್ಲಿನಿಂದ ಮುಕ್ತಿ. ಮೂರು ವಾರಗಳ ಕಾಲ ಮುಖ ತೊಳೆಯದೇ ಇದ್ದರೆ ಸೌಂದರ್ಯ ವೃದ್ಧಿಸಲಿದೆ.

ಕಟಕ

ಕಟಕ ಅಥವಾ ಕರ್ಕಾಟಕ ಕೊನೆಯಲ್ಲಿ ಟಕ್ ಇರೋದ್ರಿಂದ ಠಕ್ಕರಿಗಂತೂ ಯಾವುದೇ ಹಗರಣದಲ್ಲಿ ಸಿಗದ ಹಾಗೆ ತಿಜೋರಿ ಸಂಪತ್ತನ್ನೆಲ್ಲಾ ಹೊತ್ತು ವಿದೇಶಕ್ಕೆ ಹಾರುವ ಯೋಗವಿದೆ. ಆದರೆ ಈ ರಾಶಿಯವರು ಈ ವರ್ಷ ಆದಷ್ಟೂ ಎಚ್ಚರ ವಹಿಸಿದರೆ ಒಳ್ಳೆಯದು. ಕಟಕ ಎಂದರೆ ಏಡಿ. ಯಾಮಾರಿದ್ರೆ ರಾಜಕಾರಣಿಗಳ ಊಟದ ತಟ್ಟೆಯಲ್ಲಿ ಮಸಾಲೆ ಬಳ್ಕೊಂಡು ಕಾಣಿಸಿಕೊಳ್ಳುವ ಯೋಗವಿದೆ. ದೋಷ ಪರಿಹಾರಕ್ಕಾಗಿ ಒಂದು ವರ್ಷ ವೃಷಭಾವತಿ ನದಿಯಲ್ಲಿ ಮುಳುಗಿ ಏಳಬೇಕು.

ಸಿಂಹ

ಈ ವರ್ಷ ಈ ರಾಶಿಯವರಿಗೆ ರಾಜಸಿಂಹ ಚಿತ್ರದ ಹಾಗೆ ತಡವಾಗಿ ಬಿಡುಗಡೆ ಭಾಗ್ಯವಿದೆ. ವರ್ಷವೆಲ್ಲಾ ಬನ್ನೇರುಘಟ್ಟ ಸಿಂಹದ ಹಾಗೆ ತುಂಡು ಮಾಂಸಕ್ಕಾಗಿ ನಾಲಿಗೆ ಚಾಚಿ ಕಾಯುವ ಪರಿಸ್ಥಿತಿ. ಈ ರಾಶಿಯ ಸ್ತ್ರೀಯರು ಆಗಾಗ ‘ನಿಗೂಢ ರಾತ್ರಿ’ ಸೀರಿಯಲ್‌ನ ವಿದ್ಯಾಮೂರ್ತಿಯ ಹಾಗೆ ಭ್ರಮೆಗೆ ಒಳಗಾಗುವರು. ಈ ರಾಶಿಯವರು ವರ್ಷವೆಲ್ಲಾ ಶನಿ, ಹರಹರ ಮಹಾದೇವ ಧಾರಾವಾಹಿಯಲ್ಲಿ ಗ್ರಾಂಥಿಕ ಭಾಷೆ ಮಾತಾಡುವಂತೆ ಮಾತಾಡುತ್ತಾ ಇದ್ದರೆ ಶತ್ರುಗಳು ಹತ್ತಿರ ಸುಳಿಯುವುದಿಲ್ಲ.

ಕನ್ಯಾ

ಈ ರಾಶಿಯ ಗಂಡಸರಿಗೆ ಈ ವರ್ಷ ‘ಗೂಗಲ್’ನಲ್ಲಿ ಹುಡುಕಿದರೂ ಸುಖ ಯೋಗವಿಲ್ಲ. ಆದರೆ ಕನ್ಯೆಯರಿಗೆ 30 ದಿನ 30 ಗಂಟೆ 30 ನಿಮಿಷ ಒಳ್ಳೆಯ ಯೋಗವಿದೆ. ಅತ್ತೆಗೊಂದು ಕಾಲ ಕತ್ತೆಗೊಂದು ಕಾಲ ಎಂಬಂತೆ ನಿಮಗೂ ಒಳ್ಳೆ ಯೋಗ ವರ್ಷಾಂತ್ಯದಲ್ಲಿ ಬರಲಿದೆ. ಗಂಡಸರು ಅನಿಷ್ಟ ಪರಿಹಾರಾರ್ಥ ವರ್ಷವೆಲ್ಲಾ ಕನ್ಯೆಯರಂತೆ ಸೀರೆ ಉಟ್ಟು ಓಡಾಡಿದರೆ ಕ್ಷೇಮ. ಇದೂ ಸಾಧ್ಯವಾಗದೇ ಇದ್ದರೆ ಕನ್ಯಾಕುಮಾರಿಗೆ ಹೋಗಿ ಮೂರು ದಿನಗಳ ಕಾಲ ನೀರಿನಲ್ಲಿ ಇದ್ದು ಬರಬಹುದು.

 

ತುಲಾ

ತುಲಾ ಎಂದರೆ ತಕ್ಕಡಿ. ಈ ರಾಶಿಯವರು ಯಾಮಾರಿದರೆ ಬೆಪ್ಪು ತಕ್ಕಡಿಗಳಾಗುವ ಸಂಭವವಿದೆ. ಹಾಗಾಗಿ ಚುನಾವಣೆಗೆ ನಿಂತರೆ ಒಳಚಡ್ಡಿಯಲ್ಲಿ ನಿಲ್ಲುವ ಸ್ಥಿತಿ ಬರಲಿದೆ. ತಕ್ಕಡಿಯಲ್ಲಿ ಯಾವತ್ತೂ ಮೋಸ ನಡೆಯುವುದರಿಂದ ಕೋರ್ಟು ವ್ಯವಹಾರದಲ್ಲಿ ಎಚ್ಚರ ವಹಿಸಬೇಕು. ಅಪ್ಪಿತಪ್ಪಿ ಬಾಹುಬಲಿಯಂತೆ ಬಾಹುಬಲ ತೋರಿಸಲು ಹೋದರೆ ಬಾಡುಬಲಿ ಆಗುವ ಸಂಭವವಿದೆ. ಮನೆಯಿಂದ ಹೊರಗೆ ಬರಬೇಕಾದರೆ ಮುಖ ತುಂಬಾ ಬೆಳ್ಳನೆ ಸುಣ್ಣ ಹಚ್ಚಿಕೊಂಡರೆ ಶತ್ರುಗಳೆಲ್ಲಾ ದೂರವಾಗುವರು.

ವೃಶ್ಚಿಕ

ವೃಶ್ಚಿಕ ಎಂದರೆ ಚೇಳು. ವಿರೋಧ ಪಕ್ಷದವರು ಯಾರಾದರೂ ವೃಶ್ಚಿಕ ರಾಶಿ ಯವ ರಾದರೆ ಆಡಳಿತ ಪಕ್ಷದವರನ್ನು ತಮ್ಮ ಕೊಂಡಿಯಿಂದ ಕುಟುಕುತ್ತಲೇ ಇರುತ್ತಾರೆ. ಆಡಳಿತ ಪಕ್ಷದವರು ಹಂಬಲ್ ಪಾಲಿಟಿಷಿಯನ್ ನೊಗರಾಜನಂತೆ ‘ಸಾಚಾ’ ಆಗಿದ್ದರೂ ತಾನು ಕಟ್ಟಿದ ಪಕ್ಷದಿಂದಲೇ ಉಚ್ಛಾಟಿತನಾದ ನಟನ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ ಈ ವರ್ಷವೆಲ್ಲ ರಕ್ತ ಕಣ್ಣೀರು ಬರಬಹುದು. ರಸ್ತೆಯಲ್ಲಿ ಓಡಾಡುವಾಗ 108 ಚೇಳುಗಳನ್ನು (ಜೀವಂತ) ಮಾಲೆ ಮಾಡಿ ಕೊರಳಲ್ಲಿ ಧರಿಸಿದರೆ ಸುಖ, ಶಾಂತಿ ಲಭಿಸುವುದು

ಧನಸ್ಸು

ಧನುಸ್ಸು ಎಂದರೆ ಬಿಲ್ಲು. ಸುಖ ಎನ್ನುವುದು ಈ ರಾಶಿಯವರಿಗೆ ಕಾಮನಬಿಲ್ಲು. ಒಮ್ಮೊಮ್ಮೆ ದುಬಾರಿ ಹೋಟೆಲ್ ಬಿಲ್ಲು. ಈ ರಾಶಿಯ ರಾಜಕಾರಣಿಗಳಿಗೆ ಬತ್ತಳಿಕೆ ತುಂಬಾ ಬಾಣಗಳು ಇದ್ದರೂ ಚುನಾವಣಾ ನೀತಿ ಸಂಹಿತೆ ಪ್ರಕಾರ ಬಳಸುವಂತಿಲ್ಲ. ಈ ರಾಶಿಯ ಕಾಲೇಜು ತರುಣಿಯರ ಕಣ್ ಬಾಣಕ್ಕೆ ಈ ವರ್ಷ ಅನೇಕ ಹುಡುಗರು ಬಲಿಯಾಗುವರು. ಹಾಗಾಗಿ ಹುಡುಗರೆಲ್ಲ ಧನು ರಾಶಿಯ ಹುಡುಗಿಯರ ಮುಂದೆ ಸ್ಕರ್ಟು, ಬ್ರಾ ಧರಿಸಿ ಓಡಾಡಿದರೆ ಬದುಕು ಕ್ಷೇಮ.

ಮಕರ

ಮಕರ ಅಂದರೆ ಮೊಸಳೆ. ನೀರಲ್ಲಿದ್ದರೆ ಬಲಶಾಲಿ. ದಡದಲ್ಲಿದ್ದರೆ ನಿಶ್ಚಲ. ಈ ರಾಶಿಯ ರಾಜಕೀಯ ಧುರೀಣರು ತಮ್ಮ ಪಕ್ಷದವರದ್ದೇ ಕಾಲೆಳೆಯುವಲ್ಲಿ ನಿಸ್ಸೀಮರು. ಯಾವುದೇ ಬ್ರೇಕಿಂಗ್ ನ್ಯೂಸ್‌ಗೆ ಸಿಗುವುದಿಲ್ಲ. ಇನ್ನು ಕೆಲವರು ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಂತೆ ತೂಕಡಿಸುತ್ತಲೇ ಇರುತ್ತಾರೆ. ಇವರಿಗೆ ಧರ್ನುರಾಶಿಯವರಿಂದ ಅಪಾಯ ಇದೆ.ಹಾಗಾಗಿ ಧರ್ನುರಾಶಿ ಜನರು ಎದುರಾದಾಗ ಅವರ ಮುಂದೆ ನಾಗನೃತ್ಯ ಮಾಡಿದರೆ ಒಳ್ಳೆಯದು. ಅವರು ಹೆದರಿ ದೂರವಾಗುತ್ತಾರೆ.

ಕುಂಭ

ಕುಂಭ ಎಂದರೆ ಮಡಿಕೆ. ಈ ರಾಶಿಯವರ ತಲೆ ಮಡಿಕೆಯ ಹಾಗೆ. ಅದರಲ್ಲಿ ಏನಾದರೂ ತುಂಬಿಸಬಹುದು-ಕೆಟ್ಟದು -ಒಳ್ಳೆಯದು ಯಾವುದನ್ನು ತೋರಿಸಿಕೊಳ್ಳುತ್ತಾರೋ ಅದೇ ಆಗಿರುತ್ತಾರೆ. ಈ ರಾಶಿಯ ಮಹಿಳೆಯರು ಕುಂಭದಂತೆ ಆಕರ್ಷಕವಾಗಿರುತ್ತಾರೆ. ಮೇಷ ರಾಶಿಯವರು ಇವರಿಗೆ ಸಾಲ ಕೊಟ್ಟರೆ ಅದು ಕುಂಭದೊಳಗೆ ಸೇರಿ ವಾಪಸ್ ಬರುವುದಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ. ಆದರೆ ಈ ರಾಶಿಯ ರಾಜಕಾರಣಿಗಳು ಅರ್ಧ ಕೊಡಗಳಾಗಿ ತುಂಬಾ ಸದ್ದು ಮಾಡುತ್ತಾರೆ.

ಮೀನ

ಈ ರಾಶಿಯ ಸಿನಿಮಾ ತಂತ್ರಜ್ಞರು ಗಾಳಕ್ಕೆ ಸಿಕ್ಕ ಮೀನುಗಳು. ಈ ರಾಶಿಯ ರಾಜಕಾರಣಿಗಳು ತಿಮಿಂಗಲ, ಮೀನು ಎಲ್ಲವನ್ನೂ ನುಂಗಬಲ್ಲರು. ರಿಯಲ್ ಎಸ್ಟೇಟ್, ಕಾನೂನು ವಿಭಾಗದವರು ಈ ರಾಶಿಯವರು ಶಾರ್ಕ್ ಮೀನುಗಳು. ಉಳಿದವರೆಲ್ಲ ಬಲೆಗೆ ಬೀಳುವ ಮೀನುಗಳು. ಮೀನಿನ ಎಲುಬನ್ನು ಕೊರಳಿಗೆ ಹಾಕಿಕೊಂಡು ಓಡಾಡಿದರೆ ಉತ್ತಮ. ಇಲ್ಲವಾದರೆ ಫಿಶ್ ಕರಿ, ಫಿಶ್ ಫ್ರೈ, ಫಿಶ್ ಕಬಾಬ್‌ಗಳಾಗಿ ಪ್ಲೇಟುಗಳಲ್ಲಿ ಈರುಳ್ಳಿ, ನಿಂಬೆಹಣ್ಣಿನ ಪಕ್ಕದಲ್ಲಿ ಕುಳಿತು ಅಳಬೇಕಾಗುತ್ತದೆ.

- ( ಏಪ್ರಿಲ್ 1ರ ಪ್ರಯುಕ್ತ ಚಿತ್ರ ಸಾಹಿತಿ ವಿ.ಮನೋಹರ್ ಅವರಿಂದ  ನರ್ಷದ ಮಹಾನ್ ಜಾತಕ ಲೇಖನ : ಸೂಚನೆ - ಇದನ್ನು ಓದಿದವರಿಗೆ ಮನಸ್ಸಿಗೆ ಮಾತ್ರ ಹಿತ ಬದುಕಿಗಲ್ಲ )

 

Comments 0
Add Comment

  Related Posts

  Definitely Karnataka Bund on April 12

  video | Saturday, April 7th, 2018

  Goa CM Visit Kanakumbi

  video | Sunday, January 28th, 2018

  Kurukshetra Abhimanyu Nikhil Teaser

  video | Sunday, December 17th, 2017

  Manoranjan New Look

  video | Sunday, December 17th, 2017

  Definitely Karnataka Bund on April 12

  video | Saturday, April 7th, 2018
  Suvarna Web Desk