ಮಗಳಿಗೊಂದು ಹಿತವಚನ, ತಂದೆ ಜೋಗಿಯಿಂದ

An emotional letter to a daughter by her loving caring father Jogi
Highlights

ಮಕ್ಕಳ ಆತಂಕ, ಆಲೋಚನೆಗಳು, ಒತ್ತಡ ನೋಡಿದರೆ ಎಂಥ ಪೋಷಕರಿಗಾದರೂ ಹೃದಯ ಕಲಕುತ್ತೆ. ಶಾಲೆಯಲ್ಲಾಗಲೇ ಸಿಕ್ಕಾಪಟ್ಟೆ ಒತ್ತಡ ಇರುವ ಮಗು, ಕೈಯಲ್ಲೊಂದು ಮೊಬೈಲ್ ಹಿಡಿದು, ವೀಕೆಂಡ್ ಮಸ್ತಿಯಲ್ಲಿ ಕಳೆದುಹೋಗುವುದರೊಂದಿಗೆ, ಮತ್ತಷ್ಟು ಒತ್ತಡದಲ್ಲಿ ಸಿಲುಕುವುದು ದುರಂತ. ಇಂಥ ಮಗಳಿಗೆ ಕನ್ನಡದ ಪ್ರಖ್ಯಾತ ಲೇಖಕ ಜೋಗಿ ಬರೆದ ಪತ್ರ ಇಲ್ಲಿದೆ ನೋಡಿ. ಇದು ಪ್ರತಿಯೊಬ್ಬ ಪೋಷಕರೂ ಮಕ್ಕಳಿಗೆ ಹೇಳಬೇಕೆಂದು ಬಯಸುತ್ತಿರುವ ಹಿತವಚನ.

-  ಜೋಗಿ

ಮಗಳೇ,
ನಿನ್ನ ಗೊಂದಲಗಳನ್ನು ನಾನು ಬಲ್ಲೆ. ಮನಸ್ಸಿಗೂ ದೇಹಕ್ಕೂ ಸಂಬಂಧ ಇದೆಯೋ ಇಲ್ಲವೋ ಅಂತ ನೀನು ಕೇಳಿದರೆ, ನನಗೆ ಉತ್ತರ ಗೊತ್ತಿಲ್ಲ ಅಂತ ಒಪ್ಪಿಕೊಳ್ಳುತ್ತೇನೆ. ನಿನ್ನ ವಯಸ್ಸಿನಲ್ಲಿ ಅಂಥ ಪ್ರಶ್ನೆಗಳಿಗೆ ನನಗೂ ಉತ್ತರ ಗೊತ್ತಿರಲಿಲ್ಲ. ಕ್ರಮೇಣ ನನ್ನ ತಪ್ಪುಗಳು ನನ್ನನ್ನು ಗಟ್ಟಿಗೊಳಿಸುತ್ತಾ ಹೋದವು. ಅವುಗಳನ್ನು ತಪ್ಪು ಅಂತ ಹೇಳಿದ್ದು ಬೇರೆಯವರು.  ನನ್ನ ಪ್ರಕಾರ ಅವು ಪ್ರಯೋಗಗಳು.

ನನಗೆ ಈಗಲೂ ತೀವ್ರವಾಗಿ ಅನ್ನಿಸುವುದು ಇಷ್ಟೇ. ಹಾಲು ಮಾರುವವನ ಹತ್ತಿರ ನೀರಿನ ರೇಟು ಕೇಳಬಾರದು. ನೀರು ಮಾರುವವನ ಬಳಿ ಹಾಲಿನ ಬೆಲೆ ವಿಚಾರಿಸಬಾರದು. ನಾವು ಯಾರ‍್ಯಾರ ಹತ್ತಿರವೋ ನಮ್ಮ ಸಂಕಟಗಳನ್ನೋ ನೋವುಗಳನ್ನೋ ಸಂತೋಷಗಳನ್ನೋ ಹಂಚಿಕೊಳ್ಳಲು ನೋಡುತ್ತೇವೆ. ಆಸರೆಗಾಗಿ ಯಾರಾದರೂ ಸಿಕ್ಕಿಯಾರೆಂದು ಕಾಯುತ್ತೇವೆ. ಈ  ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೊರಲಾರದಷ್ಟು ಹೊರೆ ಹೊತ್ತುಕೊಂಡೇ ಬದುಕುತ್ತಿರುತ್ತಾರೆ. ಆ ಹೊರೆಯನ್ನು ಯಾರ ತಲೆ ಮೇಲೆ ಇಳಿಸಲಿ ಎಂದು ಕಾಯುತ್ತಿರುತ್ತಾರೆ. ಅವರ ಬಳಿಗೆ ಹೋಗಿ, ಒಂಚೂರು ನನ್ನ ಹೊರೆಯನ್ನು ಕಡಿಮೆ ಮಾಡುತ್ತೀರಾ ಅಂತ ಕೇಳುವುದು ವ್ಯರ್ಥ. ಅವರು ತಾವು ಹೊತ್ತ ಭಾರದಲ್ಲಿ ಒಂದಷ್ಟನ್ನು ನಿನಗೆ ವರ್ಗಾಯಿಸಿ, ನಿನ್ನ ಒಂದಷ್ಟು ಭಾರವನ್ನು ತಾವು ಹೊತ್ತುಕೊಳ್ಳುತ್ತಾರೆ ಅಷ್ಟೇ. ಯಾಕೆ ನಿನಗೆ ಬದುಕು ಭಾರ ಅನ್ನಿಸತೊಡಗಿದೆ ಅನ್ನುವುದು ಕೂಡ ನನಗೆ ಅರ್ಥವಾಗುತ್ತದೆ. ನಿನ್ನನ್ನು ನಿನ್ನ ಶಿಕ್ಷಣ ದಾರಿತಪ್ಪಿಸಿದೆ. ನೀನು ಒಂಬತ್ತನೇ ತರಗತಿಯಲ್ಲಿ ಬೀಟಾ, ಗಾಮ, ತೀಟ ಅಂತೆಲ್ಲ ಒದ್ದಾಡುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತಿತ್ತು. ಹಾಗೆ ಕಲಿತದ್ದೆಲ್ಲ ನಿನಗೆ ಎಲ್ಲಿ ಉಪಯೋಗಕ್ಕೆಬರುತ್ತದೆ ಅಂತ ನನಗೆ ನಿನ್ನಾಣೆಗೂ ಗೊತ್ತಿಲ್ಲ. ಹಾಗಂತ ಅದನ್ನೆಲ್ಲ ಕಲಿಯಬೇಡ ಅಂತ ಹೇಳುವ ಧೈರ್ಯ ನನಗಿರಲಿಲ್ಲ. ಎಲ್ಲಿ ನೀನು ಈ ವ್ಯವಸ್ಥೆಯೆಂಬ ತಿರುಗುಚಕ್ರ ದಿಂದ ಹೊರಗೆ ಬಿದ್ದುಬಿಡುತ್ತೀಯೋ ಅನ್ನುವ ಭಯ ನನಗೂ ಇದೆ. ನಾವು ನಿಂತಿರುವ ಚಕ್ರ ತಿರುಗುತ್ತಿರುವ ತನಕ ನಾವು ಭದ್ರವಾಗಿರುತ್ತೇವೆ. ಅದು ನಿಂತ ತಕ್ಷಣ ಅದರಿಂದ ಹೊರಗೆ ಎಸೆಯಲ್ಪಡುತ್ತೇವೆ. ಸೆಂಟ್ರಿಫ್ಯೂಗಲ್ ಮತ್ತು ಸೆಂಟ್ರಿಪೆಟಲ್ ಫೋರ್ಸುಗಳಿಗೆ ಇರುವ ವ್ಯತ್ಯಾಸವೇ ಅದು. ನೀನು ಅಗತ್ಯಕ್ಕಿಂತ ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಿ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. 

ನಿನ್ನ ಓದು, ನಿನ್ನ ಗೆಳೆಯರು ಕಳಿಸುವ ಸಂದೇಶಗಳು, ನೀನು ನೋಡುವ ಟೀವಿ, ನಿನ್ನ ವಾಟ್ಸ್ಯಾಪು ಗ್ರೂಪುಗಳು, ನಿನ್ನ ಫೇಸ್‌ಬುಕ್ ಪುಟಗಳೆಲ್ಲ ನಿನಗೆ ಬೇಡದ ಮಾಹಿತಿಗಳನ್ನು ಕ್ಷಣಕ್ಷಣಕ್ಕೂ ನಿನಗೆ ತಂದು ಸುರಿಯುತ್ತಲೇ ಇರುತ್ತವೆ. ನೀನೊಂದು ಮಾಹಿತಿಯ ಡಂಪ್‌ಯಾರ್ಡ್ ಆಗಿದ್ದಿ ಅನ್ನುವುದು ನಿನಗೇ ಗೊತ್ತಾಗುತ್ತಿಲ್ಲ. ಆ ಕಸವನ್ನು ಬೇರ್ಪಡಿಸುವ,  ಅವುಗಳಲ್ಲಿ ಯಾವುದು ಬಯೋಡಿಗ್ರೇಡಬಲ್, ಯಾವುದು ಪ್ಲಾಸ್ಟಿಕ್ಕು ಎಂದು ಕೂಡ ನಿನಗೆ ಗೊತ್ತಾಗುತ್ತಿಲ್ಲ. ಮಾಹಿತಿ ಜ್ಞಾನವಾಗದೇ ಹೋದಾಗ ಎದುರಾಗುವ ಸಮಸ್ಯೆಗಳಿವು. ಜಂಕ್‌ಫುಡ್ ನಮ್ಮ ಸಮಸ್ಯೆ ಅಂದುಕೊಂಡಿದ್ದೆವು. ಜಂಕ್ ಮಾಹಿತಿ ಅದಕ್ಕಿಂತ ದೊಡ್ಡ ಅಪಾಯ ಅಂತ ನಮಗೆ ಇವತ್ತಿಗೂ ಗೊತ್ತಾಗುತ್ತಿಲ್ಲ. ವಾಟ್ಸ್ಯಾಪು ಗ್ರೂಪುಗಳಲ್ಲಿ ಇಲ್ಲದೇ ಹೋದರೆ ಏನನ್ನೋ ಕಳೆದುಕೊಳ್ಳುತ್ತೇವೆ ಎಂಬ ನಿರಾಧಾರ ಭಯ ನಿನ್ನನ್ನು ಆವರಿಸಿಕೊಂಡುಬಿಟ್ಟಿದೆ. ನಿನ್ನ ಫೋನು ಠಣ್ಣೆನ್ನದೇ ಹೋದರೆ ನಿನ್ನನ್ನು ಹೊರಗಿಟ್ಟಿದ್ದಾರೆ ಎಂದು ನಿನಗೆ ಅನ್ನಿಸುವಂತೆ ಈ ಮಾಹಿತಿ ತಂತ್ರಜ್ಞಾನದ ಜಗತ್ತು ಮಾಡಿಬಿಡುತ್ತದೆ.

ಅಮ್ಮ ಮಾಡುವ ರುಚಿಯಾದ ಅಡುಗೆ ಹೇಗೆ ಪ್ರೋಟೀನು ಮತ್ತು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತಿತ್ತೋ, ಹೇಗೆ ಅದು ನಿನ್ನೊಳಗೆ ಆರೋಗ್ಯವಂತ ಕೊಬ್ಬಾಗಿ ಶೇಖರಗೊಳ್ಳುತ್ತಿತ್ತೋ ಅದೀಗ ಸಾಧ್ಯವಾಗುತ್ತಿಲ್ಲ. ಜಂಕ್‌ಫುಡ್‌ಗಳನ್ನು ದೇಹ ಹೊರಗೆ ಹಾಕಲು ನೋಡುತ್ತಿರುತ್ತದೆ. ಹಾಗೆಯೇ ಜಂಕ್‌ಇನ್‌ಫಾರ್ಮೇಷನ್ ಕೂಡಾ. ಅದನ್ನು ಮನಸ್ಸು ಹೊರಗೆ ಹಾಕಲು ನೋಡುತ್ತದೆ. ಮನಸ್ಸಿಗೆ ಬೇಕಾದ ಫೋಷಕಾಂಶಗಳು ಈ ಮಾಹಿತಿಗಳಿಂದ ದೊರಕುತ್ತಿಲ್ಲ. ನಾನು ಬಾಲ್ಯದಲ್ಲಿ ಓದುತ್ತಿದ್ದ ಪುಸ್ತಕಗಳಿಗೆ ನಮಗೆ ಮಾಹಿತಿಯಜೊತೆ ಜ್ಞಾನವೆಂಬ ಫೋಷಕಾಂಶ ಕೂಡ ದಕ್ಕುತ್ತಿತ್ತು. ಹೀಗಾಗಿಯೇ ಮನಸ್ಸು ಮತ್ತು ದೇಹ ಎರಡೂ ಹದವಾಗಿ ಹುರಿಗೊಳ್ಳುತ್ತಿದ್ದವು. ಆತಂಕವಾಗಲೀ ಒತ್ತಡವಾಗಲೀ ನಮಗೆ ಇರುತ್ತಿರಲೇ ಇಲ್ಲ. ಮೊನ್ನೆ ಮೊನ್ನೆ ನೀನು ಸಿನಿಮಾ ನೋಡಲು ಹೊರಟಾಗ ಪಟ್ಟ ಪಾಡನ್ನು ನಾನು ಅಸಹಾಯಕನಂತೆ ನೋಡುತ್ತಿದ್ದೆ. 

ಮೂರು ದಿನಗಳ ಹಿಂದೆ ಟಿಕೆಟ್ ಬುಕ್ ಮಾಡಲು ಹೆಣಗಾಡಿದ್ದು, ಆವತ್ತು ಎಷ್ಟು ಗಂಟೆಗೆ ಹೊರಡಬೇಕು ಅಂತ ಲೆಕ್ಕಾಚಾರ ಹಾಕಿದ್ದು, ಬರಬೇಕಾದ ಹೊತ್ತಿಗೆ ಕ್ಯಾಬ್ ಬಾರದೇ ಇದ್ದದ್ದು, ದಾರಿಯಲ್ಲಿ ಯಾವುದೋ ಮೆರವಣಿಗೆ ಅಡ್ಡಬಂದು ತಡವಾದದ್ದು, ಏದುಸಿರು ಬಿಡುತ್ತಾ ಓಡಿ ಹೋಗಿ ಥೇಟರಿನಲ್ಲಿ ಕೂತದ್ದು, ಅಷ್ಟರಲ್ಲಿ ಹೊರಗೆ ಮಳೆ ಶುರುವಾದದ್ದು, ವಾಪಸ್ಸು ಹೋಗಲು ಕ್ಯಾಬ್ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಸಿನಿಮಾ ನೋಡಿದ್ದು. ಇದರಲ್ಲಿ ಮನರಂಜನೆ ಎಲ್ಲಿದೆ? ಮನವನ್ನು ರಂಜಿಸಬೇಕಾದ್ದೇ ಇವತ್ತು ಮನಸ್ಸನ್ನು ಹಿಂಸಿಸುವಂತಾಗಿದೆ. ಬಿಡುವೆಂಬುದು ನಿನ್ನ ಪಾಲಿಗೆ ಎಲ್ಲಿದೆ ಎಂದು ನಾನೂ ಹುಡುಕುತ್ತಿರುತ್ತೇನೆ. ನೀನು ನಿನ್ನ ಜೊತೆ ಮಾತಾಡುವುದಕ್ಕೆ ಇಲ್ಲಿ ಪುರುಸೊತ್ತೇ ಇಲ್ಲ. ನಿನ್ನೆಲ್ಲ ಸಮಸ್ಯೆಗಳಿಗೂ ಅದೇ ಮೂಲ.

ಏಕಾಂತವನ್ನು ಸವಿಯುವುದನ್ನು ನೀನು ಕಲಿಯದ ಹೊರತು ನಿನಗೆ ಸಂತೋಷ ಸಿಗಲಾರದು. ನಿನ್ನ ಆಯ್ಕೆಗಳೇನು ಅನ್ನುವುದು ನಿನಗೆ ಗೊತ್ತಿಲ್ಲ. ನಿನ್ನನ್ನು ಬೇರೆ ಯಾರೋ ಆಳುತ್ತಿದ್ದಾರೆ. ನಿನ್ನ ಆಯ್ಕೆಗಳನ್ನು ಬೇರೆಯವರು ನಿರ್ಧರಿಸುತ್ತಿರುತ್ತಾರೆ. ನೀನು ನಿನ್ನ ಗೆಳತಿಯ ಇಚ್ಛೆಗೆ ತಕ್ಕಂತೆ ಬದುಕುತ್ತಿರುತ್ತೀಯ. ನಿನ್ನ ಗೆಳತಿ ನಿನ್ನಿಚ್ಛೆಗೆ ತಕ್ಕಂತೆ ಬದುಕುತ್ತಿರುತ್ತಾಳೆ. ನಿಮ್ಮಿಬ್ಬರ ಇಚ್ಛೆಗಳೂ ಅವಾಗಿರುವುದೇ ಇಲ್ಲ. ನೀನು ತೊಡುವ ಬಟ್ಟೆಗಳನ್ನು ನಿನ್ನ ಕಾಲದ ಫ್ಯಾಷನ್ ಜಗತ್ತು, ನೀನು ತಿನ್ನುವ ಆಹಾರವನ್ನು ನಿನ್ನ ಮಿತ್ರರು, ನೀನು ಏನು ಯೋಚಿಸಬೇಕು ಅನ್ನುವುದನ್ನು ನಿನ್ನ ಪರಿಸರ ನಿರ್ಣಯಿಸುತ್ತದೆ ಅಂತಾದರೆ ನೇನು ಮಾಡುತ್ತಿದ್ದೀಯಾ? ನಿನ್ನ ಬದುಕು ಪ್ಯಾರಾ ಸೈಲಿಂಗ್ ಥರ ಸಾಗುತ್ತಿದೆ ಅನ್ನಿಸುತ್ತಿಲ್ಲವೇ? ನೀನು ಗಾಳಿಯಲ್ಲಿ ಹಾರುತ್ತಿದ್ದೀಯ ನಿಜ? ಆದರೆ ಆ ಫೋರ್ಸ್ ನಿನ್ನದಲ್ಲ, ಗುರಿ ನಿನ್ನದಲ್ಲ, ದಿಕ್ಕು ನಿನ್ನದಲ್ಲ, ನಿಯಂತ್ರಣವೂ ನಿನ್ನ ಕೈಯಲ್ಲಿಲ್ಲ. ಯಾರೋ ನಿನ್ನನ್ನು ಎಳೆದುಕೊಂಡು ಹೋಗುತ್ತಿರುತ್ತಾರೆ. ಅವರು ಯಾವಾಗ ಬೇಕಿದ್ದರೂ ನಿನ್ನ ದಿಕ್ಕನ್ನು, ವೇಗವನ್ನು ನಿಯಂತ್ರಿಸಬಹುದು. ಬಿಟ್ಟುಬಿಡಲೂಬಹುದು. 

ಗಾಳಿಯಲ್ಲಿ ತೇಲುವ ಸಂತೋಷಕ್ಕೆ ನಮ್ಮ ಮೇಲಿನ ನಿಯಂತ್ರಣವನ್ನು ನಾವು ಕಳೆದುಕೊಳ್ಳಬೇಕೇ? ಯೋಚಿಸು. ?

loader