ದುಬಾರೆ ಬಿಡಲೊಲ್ಲದೆ ಕಣ್ಣೀರಿಟ್ಟ ಆನೆಯ ಆತ್ಮಕಥೆ

An elephant which cried while leaving Dubhare
Highlights

ಅಜ್ಜಯ್ಯ ಎಂಬೀ ಆನೆಗೆ ದುಬಾರೆ ಎಂದರೆ ಪ್ರಾಣ. ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಛತ್ತೀಸ್‌ಗಡ ರಾಜ್ಯದಲ್ಲಿ ಸಾಕಾನೆಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ಈ ಅಜ್ಜಯ್ಯನನ್ನು ಸಾಗಿಸಲು ಚಿಂತಿಸಲಾಯಿತು. ದುಬಾರೆಯನ್ನು ಬಿಡುವಾಗಿ ಈ ಆನೆ ಅತ್ತ ಪರಿ ನೋಡಿದರೆ, ಎಂಥವರಿಗೂ ಕಣ್ಣೀರು ತರಿಸುವಂತಿತ್ತು.

- ವಿಘ್ನೇಶ್ ಎಂ ಭೂತನಕಾಡು ಮಡಿಕೇರಿ

ಅದು 2008ನೇ ಇಸವಿ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದ ಮೀಸಲು ಅರಣ್ಯದಿಂದ ೩ ಕಿ.ಮೀ ದೂರದಲ್ಲಿ ದೈತ್ಯ ಆನೆಯೊಂದನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಮಾವುತ ಅಣ್ಣಯ್ಯ ಹಾಗೂ ಕಾವಾಡಿಗ ಪ್ರತಾಪ್ ಕ್ರಾಲ್‌ನಲ್ಲಿ ಆನೆಯನ್ನು ಪಳಗಿಸಿದರು. ತಾವು ಪೂಜಿಸುವ ಅಮ್ಮಾಳೆ ದೇವರ ಆರಾಧಕ ಅಜ್ಜಯ್ಯನ ಹೆಸರನ್ನೇ ಈ ಆನೆಗಿಡಲಾಯ್ತು. 35 ವರ್ಷ ಪ್ರಾಯದ ಅಜ್ಜಯ್ಯ ಆನೆಗೆ ಅಮ್ಮಾಳೆ ದೇವರ ಶಕ್ತಿ ಇದೆ ಎಂಬ ನಂಬಿಕೆ ಇಂದಿಗೂ ಮಾವುತರಲ್ಲಿದೆ. ಈ ಆನೆ ಮೊನ್ನೆ ಸುದ್ದಿಯ ಕೇಂದ್ರವಾಗಿತ್ತು.

ದುಬಾರೆ ಶಿಬಿರದ ಅಸಹಜ ಮೌನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಛತ್ತೀಸ್‌ಗಡ ರಾಜ್ಯದಲ್ಲಿ ಸಾಕಾನೆಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ದುಬಾರೆಯ ಮೂರು ಆನೆಗಳನ್ನು ಛತ್ತೀಸ್‌ಗಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಅದರಂತೆ ಅಜ್ಜಯ್ಯ, ತೀರ್ಥರಾಮ, ಪರಶುರಾಮ ಆನೆಗಳನ್ನು ಜ.೨೨ರಂದು ರಾತ್ರಿ ಲಾರಿಗಳಲ್ಲಿ ಒಯ್ಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆನಡೆಸುತ್ತಿದ್ದರು. ಶಿಬಿರದ ಮಾವುತರಿಗಿದು ನುಂಗಲಾರದ ತುತ್ತು. ಆದರೆ ಏನೂ ಮಾಡಲಾಗದ ಅಸಹಾಯಕತೆ. ಅಂದು ದುಬಾರೆ ಶಿಬಿರದಲ್ಲಿ ಅಸಹಜ ಮೌನ ಆವರಿಸಿತ್ತು. ಕಣ್ಣೀರಿಟ್ಟ ಅಜ್ಜಯ್ಯ ಛತ್ತೀಸ್‌ಗಡಕ್ಕೆ ಆನೆ ಸಾಗಿಸಲು ಲಾರಿ ಬಂದು ನಿಂತಿತ್ತು. ಮೂರು ಆನೆಗಳನ್ನು ಲಾರಿ ಏರಿಸಬೇಕಿತ್ತು. ಎರಡು ಆನೆಗಳು ಲಾರಿ ಏರಿದವು. ಎಷ್ಟೇ ಪ್ರಯತ್ನಿಸಿದರೂ ಅಜ್ಜಯ್ಯ ಮಾತ್ರ ಲಾರಿ ಹತ್ತಲಿಲ್ಲ. ಅಧಿಕಾರಿಗಳು ಮತ್ತಿಗೋಡು ಶಿಬಿರದಿಂದ ರಾತ್ರಿ 12.30ಕ್ಕೆ ಅಭಿಮನ್ಯು ಆನೆಯನ್ನು ತರಿಸಿದರು. ಅಭಿಮನ್ಯು, ಅಜ್ಜಯ್ಯ ಆನೆಯನ್ನು ಲಾರಿಗೆ ಏರಿಸಲು ನೂಕಾಟ, ತಳ್ಳಾಟದಲ್ಲಿ ತೊಡಗಿತ್ತು. ಎಷ್ಟೇ ಹರಸಾಹಸ ಪಟ್ಟರೂ ಅಜ್ಜಯ್ಯ ಆನೆ ಘೀಳಿಡುತ್ತಾ ಲಾರಿ ಏರದೇ ಕಣ್ಣೀರಿಟ್ಟಿತ್ತು. ಅಭಿಮನ್ಯು ತಳ್ಳುವ ಸಂದರ್ಭ ಮಗುಚಿ ಬಿದ್ದಾಗ ಸರಪಳಿ ಕಿತ್ತುಕೊಂಡು ಅಜ್ಜಯ್ಯಅಲ್ಲಿಂದ ಕಾಲ್ಕಿತ್ತಿತು!

ನಂತರ ಕಾವೇರಿ ನದಿಯಲ್ಲೇ ಕುಳಿತುಕೊಂಡು ರಾತ್ರಿ ಕಳೆಯಿತು. ಆನೆಯನ್ನು ಹುಡುಕಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾವುತರು ಪರದಾಡಿದರು. ಮರುದಿನ ಬೆಳಗ್ಗೆ 8.30ಕ್ಕೆ ಕಾವೇರಿ ನದಿಯಲ್ಲಿ ಆನೆ ಕುಳಿತಿದ್ದದ್ದು ಗೋಚರಿಸಿತು. ಮಾವುತ ಅಣ್ಣಯ್ಯ ಅವರ ಧ್ವನಿ ಕೇಳಿದೊಡನೆ ಆನೆ ನದಿಯಿಂದ ಹೊರಕ್ಕೆ ಬಂತು. ಅಷ್ಟೊತ್ತಿಗಾಗಲೇ ಎರಡು ಆನೆಗಳನ್ನಷ್ಟೇ ತುಂಬಿಕೊಂಡ ಲಾರಿ ಛತ್ತೀಸ್‌ಗಡದತ್ತ ಪ್ರಯಾಣ ಬೆಳೆಸಿತ್ತು. ಊಟ ಬಿಟ್ಟಿದ್ದ ಮಕ್ಕಳು ತಮ್ಮ ಪ್ರೀತಿಯ ಆನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಾರೆಂಬ ಸುದ್ದಿ ತಿಳಿದ ಅಜ್ಜಯ್ಯ ಆನೆಯ ಮಾವುತ ಅಣ್ಣಯ್ಯ, ಕಾವಾಡಿಗ ಪ್ರತಾಪ್ ಹಾಗೂ ಕುಟುಂಬಸ್ಥರು ಇಡೀ ದಿನ ಕಣ್ಣೀರಿಟ್ಟಿದ್ದರು. ಮನೆಯ ಮಕ್ಕಳು ಪ್ರೀತಿಯ ಆನೆಯನ್ನು ಬಿಟ್ಟಿರಲು ಸಾಧ್ಯವಾಗದೇ ದುಃಖದಲ್ಲಿದ್ದರು. ಯಾರೂ ಊಟವನ್ನೇ ಮಾಡಿರಲಿಲ್ಲ, ಇಡೀ ಮನೆಯಲ್ಲಿ ಮೌನ ಆವರಿಸಿತ್ತು. ಮಕ್ಕಳೆಂದರೆ ಪ್ರೀತಿ ಅಜ್ಜಯ್ಯ ಆನೆ ತನ್ನ ಶಾಂತ ಸ್ವಭಾವದಿಂದ ಇಲ್ಲಿನವರ ಮನ ಗೆದ್ದಿದೆ. 35 ವರ್ಷ ಪ್ರಾಯದ ಈ ಆನೆ ನೋಡಲು ದಷ್ಟಪುಷ್ಟವಾಗಿದೆ ಮಕ್ಕಳೆಂದರೆ ಅಜ್ಜಯ್ಯನಿಗೆ ಪ್ರೀತಿ. ಮಾವುತ ಅಣ್ಣಯ್ಯ ಅವರ ಮಕ್ಕಳನ್ನು ತನ್ನ ಬೆನ್ನ ಮೇಲೆ ಏರಿಸಿಕೊಂಡು ಸುತ್ತಾಡುತ್ತದೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಎರಡು ಬಾರಿ ಅಜ್ಜಯ್ಯ ಆನೆಯ ಹೆಸರು ಕೇಳಿ ಬಂದಿತ್ತು.?

ಈಗ ಹೇಗಿದ್ದಾನೆ ಅಜ್ಜಯ್ಯ?

ಲಾರಿ ಏರಿಸುವ ಭರದಲ್ಲಿ ಅಭಿಮನ್ಯು ಆನೆಯ ತಳ್ಳಾಟ ಹಾಗೂ ನೂಕಾಟದಿಂದ ಅಜ್ಜಯ್ಯ ಗಾಯಗೊಂಡಿದೆ. ನೋವಿನಿಂದ ಬಳಲುತ್ತಿದೆ. ಕಾಲು ಕುಂಟುತ್ತಿದ್ದು ಮುಖದಲ್ಲಿ ಗಾಯಗಳಾಗಿದೆ. ಈ ಆನೆಯನ್ನು ಈಗ ಮಾವುತ ಅಣ್ಣಯ್ಯ ಅವರ ಮನೆಯ ಮುಂಭಾಗದಲ್ಲಿ ಪೋಷಿಸಲಾಗುತ್ತಿದೆ. ಸೊಪ್ಪು, ಬೆಲ್ಲ, ಗೆಣಸು, ನೀರು, ಕುಸುರೆಯನ್ನು ನೀಡಲಾಗುತ್ತಿದೆ. ನೋವಿನ ನಡುವೆಯೂ ತನ್ನ ಮಾವುತ, ಕಾವಾಡಿಗನ ಪೋಷಣೆಯಲ್ಲಿ ಅಜ್ಜಯ್ಯ ನೆಮ್ಮದಿಯಾಗಿದ್ದಾನೆ.  ಅಜ್ಜಯ್ಯ ನಮ್ಮನೆ ಮಗನಂತಿತ್ತು. ಅದಕ್ಕೂ ನಮ್ಮ ಮೇಲೆ ಅಪಾರ ಪ್ರೀತಿ. ಇದರಿಂದಲೇ ಅದು ನಮ್ಮನ್ನು ಬಿಟ್ಟು ಹೋಗಲಿಲ್ಲ. ಆನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದ ಹಿನ್ನೆಲೆ ನಮ್ಮ ಮೂರೂ ಮಕ್ಕಳು ಕಣ್ಣೀರಿಟ್ಟರು. ಊಟವೂ ಮಾಡಲಿಲ್ಲ. ಪ್ರೀತಿಯಿಂದ ಸಾಕಿದ ಅಜ್ಜಯ್ಯ ಆನೆಯನ್ನು ಕಳೆದುಕೊಳ್ಳುವ ಶಕ್ತಿ ನಮಗಿಲ್ಲ. 
- ಸರಿತ ಪಾಲಕಿ

ನಾವು ತಲ ತಲಾಂತರ ವರ್ಷಗಳಿಂದ ಆನೆಗಳನ್ನು ಪಳಗಿಸುತ್ತಿದ್ದೇವೆ. ಅದರಲ್ಲಿ ಅಜ್ಜಯ್ಯನನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆವು. ಅದನ್ನು ದೇವರೆಂದು ನಂಬಿದ್ದೆವು. ಹತ್ತು ವರ್ಷ ಸಾಕಿದ ಅಜ್ಜಯ್ಯ ಆನೆಯನ್ನು ಬೇರೆಡೆಗೆ ಕಳುಹಿಸಲು ಮನಸಿರಲಿಲ್ಲ. ಆನೆಯನ್ನು ಲಾರಿಯಲ್ಲಿ ಏರಿಸುವ ಸಂದರ್ಭ ನಾವು ಹೊರಗೇ ಬರಲಿಲ್ಲ. ಸುದ್ದಿ ಗೊತ್ತಾದಾಗಿಂದ ದುಃಖದಲ್ಲೇ ದಿನ ದೂಡುತ್ತಿದ್ದೆವು. ಈಗ ಅಜ್ಜಯ್ಯ ನಮ್ಮೊಂದಿಗೇ ಉಳಿದಿರುವ ಕಾರಣ ಎಲ್ಲರಿಗೂ ಸಂತೋಷವಾಗಿದೆ.
- ಅಣ್ಣಯ್ಯ ಮಾವುತ

loader