ಜಂಜಾಟದಿಂದ ಮುಕ್ತಿ ಬೇಕಾ? ಇಲ್ಲಿನ ಶಾಂತಿಯ ಬದುಕಿಗೆ ಜಂಪ್ ಮಾಡಿ
ಒತ್ತಡದ ಬದುಕಿಗೆ ಥೆರಪಿ ಬೇಕೆಂದರೆ ಟ್ರಾವೆಲಿಂಗ್‌ಗಿಂತ ಉತ್ತಮವಾದ ವಿಧಾನ ಯಾವುದಿದೆ? ಇಲ್ಲಿವೆ ನೋಡಿ, ಹೆಚ್ಚು ಜನರ ಗಲಾಟೆಯಿಲ್ಲದ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಕಾಲವೇ ನಿಂತಂತ ಅದ್ಭುತ ತಾಣಗಳು.
ಪದೇ ಪದೇ ಕಿವಿಗಡಚಿಕ್ಕುವ ಹಾರ್ನ್‌ಗಳು, ತಾಳ್ಮೆ ಪರೀಕ್ಷಿಸುವ ಟ್ರಾಫಿಕ್, ಸಮಯದ ಅಭಾವಕ್ಕೆ ಸಿಲುಕಿ ವಿಲವಿಲ ಒದ್ದಾಡುವ ಮನಸ್ಸು, ಒಂದು ಕ್ಷಣ ವ್ಯರ್ಥವಾದರೂ ಬದುಕೇ ಕಳೆದುಹೋದಂತೆ ಚಡಪಡಿಕೆ, ಹಣದ ಹಿಂದೆ ರೇಸ್... ಈ ನಗರ ಜೀವನದ ಜಂಜಾಟದಿಂದ ಸಣ್ಣದೊಂದು ಮುಕ್ತಿ ಬೇಕು ಎನಿಸುತ್ತಿದೆಯೇ, ಎಲ್ಲಾದರೂ ಜನರಿಲ್ಲದ ಪ್ರದೇಶಕ್ಕೆ ಹೋಗಿ ವರ್ಷಕ್ಕಾಗುವಷ್ಟು ರಿಫ್ರೆಶ್ ಆಗಬೇಕು ಎಂಬ ಆಸೆಯೇ? ಇಲ್ಲಿವೆ ಅಂಥ ಕೆಲವು ಮನಮೋಹಕ, ಶಾಂತ, ಸುಂದರ ತಾಣಗಳು.
1. ಲಾಯಿತ್ಮಾವ್ಸಿಂಗ್, ಮೇಘಾಲಯ
ಈ ಪುಟ್ಟ ಜಲಪಾತಗಳ ಸ್ವರ್ಗವು ಗಾರ್ಡನ್ ಆಫ್ ಕೇವ್ಸ್ ಮಧ್ಯದಲ್ಲಿದೆ. ಅಡಗಿಕೊಂಡಂತಿರುವ ಚಿಕ್ಕ ಚಿಕ್ಕ ಜಲಪಾತಗಳ ಗುಂಡಿಯಲ್ಲಿ ನೀವು ಹಗ್ಗ ಕಟ್ಟಿ ಇಳಿಯಬಹುದು.
ಇಲ್ಲಿ ನೀರಿನಲ್ಲಿ ಆಟವಾಡಿದ ಬಳಿಕ ತದೇಕಚಿತ್ತದಿಂದ ನಿಸರ್ಗ ಸೌಂದರ್ಯ ಸವಿಯುತ್ತಾ ಕುಳಿತರೆ ಮನಸ್ಸು ಶಾಂತತೆಯ ಸ್ವರ್ಗದಲ್ಲಿ ತೇಲಲು ಯಾವ ಧ್ಯಾನವೂ ಬೇಡ.
2. ಹಾಫ್ಲಾಂಗ್, ಅಸ್ಸಾಂ
ಎಲ್ಲ ಒತ್ತಡಗಳಿಂದ ಹೊರಗೆ ಬರಬೇಕು, ಈ ಜನರ ಜಂಜಾಟದಿಂದ ದೂರ ಹೋಗಬೇಕು, ಏಕಾಂತಕ್ಕೆ ಜೊತೆಯಾಗಿ ಪರ್ವತಗಳು, ಕಾಡು, ಕೆರೆಗಳು ಬೇಕೆಂದರೆ ಅಸ್ಸಾಂನ ಹಾಫ್ಲಾಂಗ್ ನಿಮಗೆ ಪರ್ಫೆಕ್ಟ್ ಸ್ಥಳ. ವಿಂಡೋಸ್‌ನ ವಾಲ್‌ಪೇಪರ್‌ಗಳನ್ನೆಲ್ಲ ಇಲ್ಲಿ ಸಾಲಾಗಿ ಜೋಡಿಸಿದಂತೆ ಕಾಣುತ್ತದೆ.
ಈ ಮಳೆಯಲ್ಲಿ ರಾಜಸ್ಥಾನದ ರಾಜವೈಭೋಗ ಸವಿದು ಬನ್ನಿ!
3. ಡಾ. ಸಲೀಂ ಅಲಿ ಬರ್ಡ್ ಸ್ಯಾಂಕ್ಚುರಿ, ಗೋವಾ
ಗೋವಾ ಅಷ್ಟು ಶಾಂತ ಪ್ರದೇಶ ಅಲ್ಲ ಎಂಬುದು ನಿಮ್ಮ ನಂಬಿಕೆಯಾಗಿದ್ದಲ್ಲಿ ಅದನ್ನು ಸುಳ್ಳು ಮಾಡುತ್ತದೆ ಇಲ್ಲಿನ ಸಲೀಂ ಅಲಿ ಬರ್ಡ್ ಸ್ಯಾಂಕ್ಚುರಿ. ಮುಖ್ಯನಗರದಿಂದ 1 ಗಂಟೆಯ ಪ್ರಯಾಣ ಮಾಡಿದರೆ ಇಲ್ಲಿನ ಪಕ್ಷಿ ವೈವಿಧ್ಯ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ನಾನೂ ಒಂದು ಹಕ್ಕಿಯಾಗಿದ್ದರೆ ಎಂದು ನೀವು ಕನಸು ಕಾಣುವುದಕ್ಕೂ ಯಾವುದೇ ಡಿಸ್ಟರ್ಬೆನ್ಸ್ ಇರುವುದಿಲ್ಲ.
4. ಅರಕು ವ್ಯಾಲಿ, ಆಂಧ್ರಪ್ರದೇಶ
ಚೀನಾದ ರೇನ್‌ಬೋ ಪರ್ವತಗಳಂತೆ ಕಾಣುವ ಅರಕು ವ್ಯಾಲಿ ಆಂಧ್ರಪ್ರದೇಶದಲ್ಲಿದೆ. ಹಸಿರಿನ ವಿವಿಧ ಶೇಡ್‌ಗಳು, ನೀಲಿಯಾಕಾಶ, ಕೆಂಪಾದ ರಸ್ತೆ ಎಲ್ಲವೂ ಡಲ್ ಆದಮನಸ್ಸಿಗೆ ಬಣ್ಣಗಳನ್ನು ತುಂಬುತ್ತವೆ.
5. ಝನ್ಸ್ಕಾರ್, ಜಮ್ಮುಕಾಶ್ಮೀರ
ಝನ್ಸ್ಕಾರ್ ನದಿಯು ಹಸಿರು ಬಣ್ಣ ತೊಟ್ಟು ಕಣಿವೆಗಳ ನಡುವೆ ಓರೆಕೋರೆಯಾಗಿ ಸಾಗುತ್ತಾ ಸೌಂದರ್ಯದಲ್ಲಿ ಸುತ್ತ ಹಬ್ಬಿದ ಪರ್ವತಗಳಿಗೆ ಸವಾಲೆಸೆಯುವುದನ್ನು ನೋಡುವುದೇ ಸೊಬಗು. ಈ ಕಣಿವೆಯ ರಸ್ತೆಯಲ್ಲಿ ಒಂದು ಡ್ರೈವ್ ಮಾಡಿದರೆ ಮನಸ್ಸಿಗೆ ಸಿಗುವ ಶಾಂತಿ, ನೆಮ್ಮದಿ ಮತ್ತೆ ಒಂದೆರಡು ತಿಂಗಳು ಕದಲದೆ ನಿಂತೀತು.
ಭಾರತದ ಈ ಸುಂದರ ತಾಣಗಳೀಗ ದೆವ್ವ ನಗರಿ...!
6. ಇಡುಕ್ಕಿ, ಕೇರಳ
ಏಷ್ಯಾದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳ ಕುರಿತು ಲೋನ್ಲಿ ಪ್ಲ್ಯಾನೆಟ್ ಮಾಡಿದ ಪಟ್ಟಿಯಲ್ಲಿ ಈ ಸ್ಥಳ ಮೂರನೇ ಸ್ಥಾನ ಪಡೆದಿತ್ತು. ಇಲ್ಲಿನ ಮಲೆಗಳ ತುಂಬಾ ಹೊದ್ದು ಹಾಸಿರುವ ಹಸಿರೋ ಹಸಿರ ಬೆಡ್‌ಶೀಟ್, ನಿಮ್ಮನ್ನು ಪೂರ್ತಿ ಝೆನ್ ಮೋಡ್‌ಗೆ ತೆಗೆದುಕೊಂಡು ಹೋಗುವುದು. ಮಧ್ಯದಲ್ಲಿ ನೆಮ್ಮದಿಯ ಅಮೃತವೇ ಮಲಗಿದಂತೆ ಜಲರಾಶಿ ತಣ್ಣಗೆ ಮಲಗಿದೆ. ನಿಮಗೆ ವನ್ಯಪ್ರಾಣಿಗಳ ಕುರಿತು ಆಸಕ್ತಿ ಇದ್ದಲ್ಲಿ ಹತ್ತಿರದಲ್ಲೇ ಪೆರಿಯಾರ್ ನ್ಯಾಷನಲ್ ಪಾರ್ಕ್ ಇದೆ.
7. ನಾಕೋ, ಹಿಮಾಚಲ ಪ್ರದೇಶ
ಪರ್ವತಗಳ ರಾಶಿ ರಾಶಿ, ಪರ್ವತವೊಂದರ ಮೇಲೆ ಪುಟಾಣಿ ಕೆರೆ, ಕೆಳಗಿಣುಕಿದರೆ ಕಣಿವೆ... ಮುದ್ದಾದ ಪುಟ್ಟ ಪಿಕ್ನಿಕ್ ಹೋಗಬೇಕೆಂದರೆ ಹಿಮಾಚಲ ಪ್ರದೇಶದ ನಾಕೋ ನಾಕಕ್ಕೆ ಸರಿಸಮಾನವಾಗಿ ನಿಂತು ಕೈ ಬೀಸಿ ಕರೆಯುತ್ತದೆ.
8. ಲಿಟಲ್ ಅಂಡಮಾನ್, ಅಂಡಮಾನ್ ಐಸ್‌ಲ್ಯಾಂಡ್
ನಗರ ಜೀವನದಿಂದ ದೂರ ಓಡಿ ಕಾಲವು ಚಲಿಸದೆ ನಿಂತ ಪ್ರದೇಶದಲ್ಲಿ ಕುಳಿತು ಮನಸ್ಸನ್ನು ರಿಫ್ರೆಶ್ ಮಾಡಿಕೊಳ್ಳಬೇಕೆಂಬ ಬಯಕೆಯಿದ್ದರೆ ಲಿಟಲ್ ಅಂಡಮಾನ್ ಪರ್ಫೆಕ್ಟ್ ಸ್ಥಳ. ಸಮುದ್ರದದ ಬೋರ್ಗರೆತ, ಗಾಳಿಯ ಸಂಗೀತದ ಹೊರತಾಗಿ ಬೇರೇನೂ ಕಿವಿಗೆ ಬೀಳದು.