ಸಾವಿರಾರು ವರ್ಷಗಳಿಂದಲೂ ಸಂಗೀತ ಮನುಷ್ಯನ ಜೊತೆಗೇ ಬೆಳೆದು ಬಂದಿದೆ. ಅದು ಮನರಂಜನೆಯ ಜೊತೆಗೆ, ಮನಸ್ಸಿಗೆ ಶಾಂತಿ, ನೆಮ್ಮದಿ , ನಿದ್ರೆ ನೀಡುವ ಕೆಲಸವನ್ನೂ ಮಾಡುತ್ತಾ ಬಂದಿದೆ. ಅದರಲ್ಲೂ ಇಂಪಾದ ಶಾಸ್ತ್ರೀಯ ಸಂಗೀತಕ್ಕೆ ಮನಸ್ಸನ್ನು ರಿಲ್ಯಾಕ್ಸ್ ಮಾಡಿ ಚಿಂತೆಗಳನ್ನು ಮರೆಸುವ ಗುಣವಿದೆ. ಆದ್ದರಿಂದಲೇ ಇಂದು ಶಾಸ್ತ್ರೀಯ ಸಂಗೀತವನ್ನು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಥೆರಪಿಯಂತೆ ಬಳಸಲಾಗುತ್ತಿದೆ. ಶಾಸ್ತ್ರೀಯ ಸಂಗೀತವನ್ನು ನೀವು ದಿನಾ ಏಕೆ ಕೇಳಬೇಕೆಂಬುದಕ್ಕೆ ಇಲ್ಲಿ ಕಾರಣಗಳನ್ನು ಕೊಡಲಾಗಿದೆ. ಈ ಮ್ಯೂಸಿಕ್ ಮ್ಯಾಜಿಕ್ಕನ್ನು ಅನುಭವಿಸಿ, ಈ ಸಂಗತಿಗಳನ್ನು ಸ್ವತಃ ಕಂಡುಕೊಳ್ಳಿ.

1. ನೋವು ನಿವಾರಕ

ಮುಂದಿನ ಬಾರಿ ತಲೆನೋವು ಬಂದಾಗ ಮಾತ್ರೆ ತೆಗೆದುಕೊಳ್ಳುವ ಬದಲು ಅರ್ಧಗಂಟೆಗಳ ಕಾಲ ಕಣ್ಮುಚ್ಚಿ ಕ್ಲಾಸಿಕಲ್ ಮ್ಯೂಸಿಕ್ ಕೇಳಿ ನೋಡಿ. ತಲೆನೋವು ಮಾಯವಾಗುವುದರ ಜೊತೆಗೆ ನಿಮ್ಮ ಕಿಡ್ನಿಗಳು ಶಾಶ್ವತವಾಗಿ ಡ್ಯಾಮೇಜ್ ಆಗುವ ಸಂಭವಗಳಿಂದಲೂ ಇದು ತಪ್ಪಿಸುತ್ತದೆ. ಕ್ಯಾನ್ಸರ್ ರೋಗಿಗಳಲ್ಲಿ, ಶಸ್ತ್ರಕ್ರಿಯೆಗೆ ಒಳಗಾದವರಲ್ಲಿ ಮ್ಯೂಸಿಕ್ ನೋವು ಕಡಿಮೆಗೊಳಿಸಿ ಅವರನ್ನು ಶಾಂತ ಚಿತ್ತರಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. 2006ರಲ್ಲಿ ಈ ಸಂಬಂಧ ನಡೆದ ಅಧ್ಯಯನದ ವರದಿಯಂತೆ, ಅತಿಯಾದ ನೋವಿನಿಂದ ಬಳಲುವವರಲ್ಲಿ ಸಂಗೀತ ಆಲಿಸುವವರು ನೋವನ್ನು ಚೆನ್ನಾಗಿ ನಿರ್ವಹಿಸಬಲ್ಲರಲ್ಲದೆ, ಅವರು ಖಿನ್ನತೆಗೆ ಜಾರುವ ಹಾಗೂ ಅಂಗವಿಕಲರಾಗುವ ಸಂಭವ ಕಡಿಮೆ ಎಂದು ತಿಳಿದುಬಂದಿದೆ. 

ಆರೋಗ್ಯೋಕ್ಕೆ ಒಳ್ಳೆಯದಾಗೋ ದುರಾಭ್ಯಾಸಗಳಿವು....

2. ಆತಂಕ ಶಮನಕಾರಿ

ಆತಂಕವು ಕೋಟ್ಯಂತರ ಜನರಲ್ಲಿ ಹಲವಾರು ಇತರೆ ಕಾಯಿಲೆಗಳನ್ನು ತರಲು ಕಾರಣವಾಗುತ್ತದೆ. ಅಲ್ಲದೆ, ಆತಂಕದಿಂದಾಗಿ ಜನ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದರೆ, ಕ್ಲಾಸಿಕಲ್ ಮ್ಯೂಸಿಕ್ ಕೇಳುವುದರಿಂದ ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್ ಕಾರ್ಟಿಸೋಲ್ ಉತ್ಪತ್ತಿ ಕಡಿಮೆಯಾಗುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ರತಿ ವಾರ ಶಾಸ್ತ್ರೀಯ ಸಂಗೀತ ಕೇಳುವ ಗರ್ಭಿಣಿಯರಲ್ಲಿ ಒತ್ತಡ ಹಾಗೂ ಆತಂಕ ಕಡಿಮೆಯಿರುವುದನ್ನೂ ಅಧ್ಯಯನಗಳು ತಿಳಿಸಿವೆ. ಶಸ್ತ್ರಚಿಕಿತ್ಸೆಯ ಮುಂಚೆ ಹಾಗೂ ನಂತರದ ಅವಧಿಯಲ್ಲಿ ರೋಗಿಗಳು ಶಾಸ್ತ್ರೀಯ ಸಂಗೀತ ಕೇಳುವುದರಿಂದಲೂ ಲಾಭಗಳಿರುವುದನ್ನು ಮತ್ತೊಂದು ಅಧ್ಯಯನ ಸಾಬೀತುಪಡಿಸಿದೆ.

3. ತಗ್ಗುವ ರಕ್ತದೊತ್ತಡ 

ಹೈ ಬಿಪಿಯು ಹಲವಾರು ಹೃದಯ ಸಮಸ್ಯೆಗಳು ಹಾಗೂ ಸಾವಿಗೆ ಕಾರಣವಾಗುತ್ತದೆ. ಆದರೆ, ಮನಸ್ಸು ರಿಲ್ಯಾಕ್ಸ್ ಆಗಿದ್ದಾಗ ಉಸಿರಾಟ ಹಾಗೂ ಹೃದಯ ಬಡಿತವೂ ನಿಧಾನವಾಗುತ್ತದೆ. ಹೀಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡಿ ಬಿಪಿ ತಗ್ಗಿಸುವ ಸಾಮರ್ಥ್ಯ ಕ್ಲಾಸಿಕಲ್ ಮ್ಯೂಸಿಕ್ಕಿಗಿದೆ. 

4. ರಿಲ್ಯಾಕ್ಸೇಶನ್

ದಿನ  ಒತ್ತಡದಿಂದ ಕೂಡಿದ್ದರೆ ಹೆಡ್‌ಫೋನ್ಸ್ ಹಾಕಿಕೊಂಡು ಕೆಲ ಇಂಪಾದ ಶಾಸ್ತ್ರೀಯ ಸಂಗೀತಗಳನ್ನು ಕೇಳಿ. ಆಹಾ! ಅದೆಷ್ಟು ಆರಾಮವೆನಿಸುತ್ತದೆ?!  ಬಿಹೇವಿಯರಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಪದೇ ಪದೆ ಶಾಸ್ತ್ರೀಯ ಸಂಗೀತ ಕೇಳುವ ಜನರ ಮೆದುಳಿನ ಚಟುವಟಿಕೆ ತಹಬಂದಿಯಲ್ಲಿದ್ದು, ಹೃದಯ ಬಡಿತ ನಿಧಾನವಾಗಿ ವಿಶ್ರಾಂತ ಸ್ಥಿತಿಯಲ್ಲಿರುವುದನ್ನು ತಿಳಿಸಿದೆ. 

ಸ್ಕಿನ್ ಡ್ಯಾಮೇಜ್ ಮಾಡೋ ರಾತ್ರಿ ತಪ್ಪುಗಳು!

5. ನೆನಪಿನ ಶಕ್ತಿ ವೃದ್ಧಿ

ಕ್ಲಾಸಿಕಲ್ ಸಂಗೀತ ಆಲಿಸುವುದರಿಂದ ಮೆದುಳಿಗೆ ಸಂಬಂಧಿಸಿದ ಹಲವಾರು ವಿಷಯಗಳಿಗೆ ಲಾಭವಿದೆ. ಅವುಗಳಲ್ಲೊಂದು ನೆನಪಿನ ಶಕ್ತಿ. ಅಧ್ಯಯನವೊಂದರಲ್ಲಿ ಕ್ಲಾಸಲ್ಲಿ ಪಾಠ ನಡೆಯುವಾಗ ಬ್ಯಾಕ್‌ಗ್ರೌಂಡ್‌ನಲ್ಲಿ ಶಾಸ್ತ್ರೀಯ ಸಂಗೀತ ಹಾಕಲಾಗಿತ್ತು. ಇನ್ನೊಂದು ಬ್ಯಾಚ್ ವಿದ್ಯಾರ್ಥಿಗಳಿಗೆ ಈ ಸಂಗೀತದ ಹಿನ್ನೆಲೆ ಇಲ್ಲದೆ ಪಾಠ ಮಾಡಲಾಗುತ್ತಿತ್ತು. ಇದಾದ ಬಳಿಕ ನಡೆಸಿದ ಕ್ವಿಜ್‌ನಲ್ಲಿ ಸಂಗೀತದ ಹಿನ್ನೆಲೆಯಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿದ್ದು ಸ್ವತಃ ಸಂಶೋಧಕರಿಗೇ ಅಚ್ಚರಿ ತಂದಿತು. ಫಲಿಂತಾಶದಲ್ಲಿ ಈ ಮಾಹಿತಿಯನ್ನು ಕ್ಯಾಚ್ ಮಾಡಿಕೊಳ್ಳುವ ಹಾಗೂ ನೆನಪಿಟ್ಟುಕೊಳ್ಳುವ ಕೌಶಲ್ಯದ ಕ್ರೆಡಿಟ್ಸ್ ಸಂಗೀತಕ್ಕೆ ನೀಡಲಾಯಿತು.

6. ನಿದ್ರೆ ಹೆಚ್ಚಳ

ಇದು ಬೋರಿಂಗ್ ಅಥವಾ ನಿಧಾನವಿರುವುದರಿಂದ ನಿದ್ದೆ ಬರುವುದಲ್ಲ. ಇದು ಆತ್ಮಕ್ಕೆ ಸಮಾಧಾನ ನೀಡಿ ಇಂಪಾಗಿ ಕರ್ಣಾನಂದ ನೀಡುವುದರಿಂದಲೇ ಮನಸ್ಸು ಶಾಂತವಾಗುತ್ತದೆ. ಇದರಿಂದ ಸೊಂಪಾದ ನಿದ್ರೆ ಬರುತ್ತದೆ. ನಿದ್ರಾ ಸಮಸ್ಯೆಗಳಿರುವ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಕೇಳತೊಡಗಿದ ಮೇಲೆ ಚೆನ್ನಾಗಿ ನಿದ್ರಿಸಲಾರಂಭಿಸಿದ್ದನ್ನು ಅಧ್ಯಯನವು ಕಂಡುಕೊಂಡಿದೆ. ಸಣ್ಣ ವಾಲ್ಯೂಮ್‌ನಲ್ಲಿ ಹರಿದು ಬರುವ ಶಾಸ್ತ್ರೀಯ ಸಂಗೀತವನ್ನು ಕಣ್ಣು ಮುಚ್ಚಿಕೊಂಡು ಮನಸ್ಸಿಟ್ಟು ಆಲಿಸಿ. ನಿಧಾನವಾಗಿ ನಿದ್ರಾದೇವಿ ನಿಮ್ಮನಾವರಿಸುತ್ತಾಳೆ.

7. ಖಿನ್ನತೆ ತಗ್ಗಿಸಿ ಉತ್ಪಾದಕತೆ ಹೆಚ್ಚಳ

ಶಾಸ್ತ್ರೀಯ ಸಂಗೀತವು ಮನಸ್ಸನ್ನು ಶಾಂತಗೊಳಿಸುವ ಜೊತೆಗೆ ದುಃಖವನ್ನು ಮರೆಸುತ್ತದೆ. ಯಾವುದಾದರೂ ವಿಷಯಕ್ಕೆ ಬೇಜಾರಾಗಿದ್ದರೆ ಸಂಗೀತ ಆಲಿಸಿ. ಮೂಡ್ ಬದಲಾಗುತ್ತದೆ. ಇನ್ನು ಮೂಡ್ ಚೆನ್ನಾಗಿದ್ದರೆ ನಿಮ್ಮ ಕೆಲಸವೂ ಹೆಚ್ಚು ಪ್ರಾಡಕ್ಟಿವ್ ಆಗಿರುತ್ತದೆ. ಬೋರಿಂಗ್ ಕೆಲಸ ಕೂಡಾ ಸಂಗೀತ ಆಲಿಸುವಾಗ ಆಸಕ್ತಿಕರವಾಗಿ ಬದಲಾಗುವುದನ್ನು ಕಾಣಬಹುದು.