ಜಗತ್ತಿನಲ್ಲಿ ಹಲವಾರು ನಿಗೂಢಗಳು, ವಿಚಿತ್ರಗಳು, ವೈಪರೀತ್ಯಗಳು ಅಲ್ಲಲ್ಲಿ ಎದುರಾಗಿ ನಮ್ಮನ್ನು ಮೂಕವಿಸ್ಮಿತರಾಗಿಸುತ್ತವೆ. ಅಬ್ಬಬ್ಬಾ! ಇದು ನಾನಿರುವ ಜಗತ್ತೆನಾ ಎಂದು ಅನುಮಾನ ಹುಟ್ಟಿಸುತ್ತವೆ. ಅಂಥ ಕೆಲವು ಸ್ಥಳಗಳನ್ನು ಇಲ್ಲಿ ನೀಡಲಾಗಿದೆ. 

1. ಹಿಲ್ಲಿಯರ್ ಲೇಕ್,  ಆಸ್ಟ್ರೇಲಿಯಾ

ದೇವರು ಸ್ಟ್ರಾಬೆರಿ ಜ್ಯೂಸ್ ಮಾಡಿ ಕುಡಿಯುವಾಗ ಅದು ಕೈತಪ್ಪಿ ಬಿದ್ದಿದ್ದರೆ ಬಹುಷಃ  ಆಸ್ಟ್ರೇಲಿಯಾದ ಈ ಕೆರೆಗೆ ಬಿದ್ದಿರಬೇಕು. ಅಷ್ಟು ಪಿಂಕಿ ಪಿಂಕಿಯಾಗಿದೆ ಈ ಹಿಲ್ಲಿಯರ್ ಲೇಕ್‌ನ ನೀರು.  ನಿಜವೆಂದರೆ, ಸ್ಯಾಲಿನಿಟಿ ಹೆಚ್ಚಿರುವುದು ಹಾಗೂ ನೀರಿನಲ್ಲಿರುವ ಕೆಂಪು ಆಲ್ಗೇಗಳಿಂದಾಗಿ ಈ ಕೆರೆ ಪೂರ್ತಿ ಪಿಂಕ್ ಆಗಿದೆ. ಅಷ್ಟಾಗಿಯೂ ಕೆರೆಯ ನೀರು ವಿಷರಹಿತವಾಗಿದ್ದು, ಭಯವಿಲ್ಲದೆ ಯಾರು ಬೇಕಾದರೂ ಇಧರಲ್ಲಿ ಈಜಾಡಬಹುದು. ಇಲ್ಲಿಗೆ ತಲುಪಲು ಹೆಚ್ಚು ಸಾರಿಗೆ ವ್ಯವಸ್ಥೆಗಳಿಲ್ಲವಾದರೂ ಹೆಲಿಕಾಪ್ಟರ್ ಅಥವಾ ದೋಣಿ ಮೂಲಕ ಇಲ್ಲಿಗೆ ತಲುಪಬಹುದು.

ಚಾರಣಿಗರು ಮಿಸ್ ಮಾಡಬಾರದ ಟ್ರೆಕ್ಕಿಂಗ್ ತಾಣಗಳಿವು

2. ಮಾರ್ಬಲ್ಸ್ ಕೇವ್, ಚಿಲಿ

ಚಿಲಿಯ ಈ ಗುಹೆಯೊಳಗೆ ದೇವರು ಕಲ್ಲಿನಲ್ಲೇ ಕಲೆ ರಚಿಸಿದ್ದಾನೆ. ಈ ಅಬ್ಸ್‌ಟ್ರ್ಯಾಕ್ಟ್ ಆರ್ಟ್‌ನ ಅಂದ ಹೆಚ್ಚಿಸುವ ಕಡುಹಸಿರ ನೀರು ಗುಹೆಯಲ್ಲಿ ಹರಿಯುತ್ತದೆ. 6000 ವರ್ಷಗಳ ಕ್ಯಾಲ್ಶಿಯಂ ಕಾರ್ಬೋನೇಟ್ ವೆದರಿಂಗ್‌ನಿಂದಾಗಿ ಈ ಗುಹೆಯ ಕಲ್ಲುಗಳು ಕಲಾಕೃತಿಯ ವಿನ್ಯಾಸ ಪಡೆದಿವೆ. ನೀರಿನ ಪ್ರತಿಫಲನದಿಂದಾಗಿ ಅವು ಬಣ್ಣವನ್ನೂ ಪಡೆದಿವೆ. ಜೆನೆರಲ್ ಕೆರಿರಾ ಕೆರೆಯ ನೀರಿನ ಮಧ್ಯೆ ಇರುವ ಈ ಗುಹೆಗೆ ಹೋಗಲು ಇರುವ ಒಂದೇ ಮಾರ್ಗವೆಂದರೆ ಅದು ದೋಣಿ ಮೂಲಕ ಮಾತ್ರ. ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.

3. ಮೌಂಟ್ ಎಲ್ ಟೈಡ್, ಸ್ಪೇನ್

ಈ ಪರ್ವತ ಜ್ವಾಲಾಮುಖಿಯ ತಣ್ಣನೆಯ ರೂಪವಾಗಿದ್ದರೂ, ಇದನ್ನೇರಿದಿರಾದರೆ, ಸನ್‌ಸೆಟ್ ಹಾಗೂ ಸ್ಟಾರ್‌ಲೈಟ್‌ಗಳ ಮ್ಯಾಜಿಕಲ್ ಶೋ ವೀಕ್ಷಿಸಬಹುದು. ನಕ್ಷತ್ರಗಳೆಲ್ಲವೂ ಕೈಗೆಟುಕುವಷ್ಟು ಕೆಳಗೆ ಬಂದು  ಕುಳಿತಿವೆಯೇನೋ ಎಂದು ಭಾಸವಾಗುವ ಈ ಪ್ರದೇಶ ಭೂಮಿ ಮೇಲಿನ ವಿಶಿಷ್ಠ ಸ್ಥಳಗಳಲ್ಲೊಂದು ಎಂದು ಅಳುಕಿಲ್ಲದೆ ಘೋಷಿಸಬಹುದು.

ಜಂಟಿ ತಿರುಗಾಡೋರ ಲೈಂಗಿಕ ಬದುಕೂ ಬಿಂದಾಸ್!

4. ದರ್ವಾಜಾ ಗ್ಯಾಸ್ ಕ್ರೇಟರ್, ಟರ್ಕ್‌ಮೆನಿಸ್ತಾನ್

ನೋಡಿದರೆ ಇದ್ಯಾವುದೋ  ಫ್ಯಾಂಟಸಿ ಚಿತ್ರದ ಫೋಟೋ ಎನಿಸಬಹುದು. ಆದರೆ, ಇದು ಭೂಮಿಯಿಂದ ನೇರ ನರಕಕ್ಕೆ ಬಾಗಿಲು! ದೊಡ್ಡ ಫೂಟ್‌ಬಾಲ್ ಅಂಗಳದಷ್ಟು ಅಗಲವಾಗಿರುವ ಈ ಗ್ಯಾಸ್ ಕ್ರೇಟರ್, ಭೂವಿಜ್ಞಾನಿಗಳ ತಪ್ಪು ಲೆಕ್ಕಾಚಾರದದಿಂದ ನಿರಂತರ ಹೊತ್ತಿ ಉರಿಯುತ್ತಲೇ ಇದೆ. ಮಿಥೇನ್ಅನಿಲ ಹರಡುವುದನ್ನು ತಡೆಯುತ್ತದೆ ಎಂದು ನಂಬಿಕೊಂಡು ಭೂವಿಜ್ಞಾನಿಗಳು ಇಲ್ಲಿ ಬೆಂಕಿ ಹೆಚ್ಚಿದ್ದೇ ಹಚ್ಚಿದ್ದು, ಇತಿಹಾಸದಲ್ಲೇ ಮರೆಯಲಾಗದ ಬಹಳ ಸುಂದರ ತಪ್ಪಾಗಿ ಉಳಿಯಿತು. 

5. ವೇಯ್ಟೋಮೋ ಗ್ಲೋವಾರ್ಮ್ ಕೇವ್ಸ್, ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್‌ನ ಈ ಗುಹೆಯಲ್ಲಿ ಗ್ಯಾಲಕ್ಸಿಯ ಮಿನಿಯೇಚರ್ ವಿಶ್ವರೂಪ ದರ್ಶನ ಕಾಣಬಹುದು. ಇಲ್ಲಿನ ಗೋಡೆಗಳಲ್ಲಿ ಬಯೋಲುಮಿನಿಸೆಂಟ್ ಫಂಗಸ್ ಇದ್ದು, ಇವು ಇಡೀ ಗುಹೆಗೆ ಲೈಟಿಂಗ್ಸ್ ಅಳವಡಿಸಿದಂತೆ ಫಳಫಳ ಹೊಳೆಯುತ್ತವೆ. ಇದು ಪ್ರಕೃತಿಯ ಬೆಸ್ಟ್ ಲೈಟ್ ಶೋ. ಇಲ್ಲಿ ಪ್ರವಾಸಿಗರು ವರ್ಷದ ಎಲ್ಲ ದಿನ ಮಿಜಿಗುಡುವ ಕಾರಣ ನ್ಯೂಜಿಲ್ಯಾಂಡ್ ಹೋಗುವ ಪ್ಲ್ಯಾನ್ ಇದ್ದರೆ ಮುಂಚಿತವಾಗಿ ಈ ಗುಹೆಗೆ ರಿಸರ್ವೇಶನ್ ಬುಕ್ ಮಾಡಿ. 

6. ಸಲಾರ್ ಡಿ ಯೂನಿ, ಬೊಲಿವಿಯಾ

'ಅನ್‌ರಾವೆಲ್' ಚಿತ್ರದ ಓಪನಿಂಗ್ ಸೀನ್‌ನಂತೆ ಕಾಣುತ್ತದೆ ಬೊಲಿವಿಯಾದ ಈ ಮರುಭೂಮಿಯ ಪ್ರದೇಶ. ಸ್ವಲ್ಪ ಮಳೆ ಬಂದರೆ ಸಾಕು, ಇಲ್ಲಿ ಆಕಾಶಕ್ಕೂ ಭೂಮಿಗೂ ಕಿಂಚಿತ್ತೂ ವ್ಯತ್ಯಾಸ ಹುಡುಕಲಾರಿರಿ. ಈ ನೆಲ ಅದೆಷ್ಟು ಪ್ರತಿಫಲಿಸುತ್ತದೆಂದರೆ ಸರ್ಕಾರವು ಉಪಗ್ರಹ ಉಡಾವಣೆಗೆ ಕೂಡಾ ಇದನ್ನು ಬಳಸುತ್ತದೆ. ಸಾಲ್ಟ್ ಬ್ರೈನ್ ಸರ್ಫೇಸ್ ಈ ನೆಲವನ್ನು ಸಂಪೂರ್ಣ ಚಪ್ಪಟೆಯಾಗಿಸಿದೆ. ಮಾರ್ಚ್ ಹಾಗೂ ಏಪ್ರಿಲ್ ಇಲ್ಲಿ ಭೇಟಿ ನೀಡಲು ಉತ್ತಮ ಸಮಯ.

ಭಾರತದಲ್ಲಿದ್ದರೂ ಈ ತಾಣಕ್ಕೆ ಭಾರತಿಯರಿಗೆ ಪ್ರವೇಶ ನಿಷೇಧ!

7. ದ ಗ್ರೇಟ್ ಬ್ಲೂ ಹೋಲ್, ಬೆಲಿಜ್

ಸ್ವಚ್ಛ, ಪಾರದರ್ಶಕ ನೀರಿನ ಮಧ್ಯೆ ಇರುವ ಈ ನೀಲಿ ಪ್ರಪಾತ ನೋಡಿದರೆ, ಯಾವುದೋ ಕತ್ತಲೆಯ ಕೂಪ ನಮ್ಮನ್ನು ನುಂಗಲು ನಿಂತಂತೆ ಭಾಸವಾಗುತ್ತದೆ. ಆದರೆ, ಇದು ಕಂಡಷ್ಟು ಅಪಾಯಕಾರಿಯಲ್ಲ. ಇದೊಂದು ಅಂಡರ್‌ವಾಟರ್ ಸಿಂಕ್‌ಹೋಲ್ ಆಗಿದ್ದು, ಸ್ಕೂಬಾ ಡೈವಿಂಗ್‌ಗೆ ಜನಪ್ರಿಯತೆ ಪಡೆದಿದೆ. ಇಲ್ಲಿ ಡೈವ್ ಮಾಡಲು ಹೋದವರಿಗೆ ಹಲವಾರು ಜಾತಿಯ ಮೀನುಗಳು ವೆಲ್‌ಕಮ್ ಹೇಳಬಹುದು. ಅದೃಷ್ಟ ಕೆಟ್ಟಿದ್ದರೆ ಅಪರೂಪಕ್ಕೆ ತಿಮಿಂಗಿಲ ಹಾಗೂ ಹ್ಯಾಮರ್‌ಹೆಡ್ ಮೀನುಗಳು ಬಾಯ್ದೆರೆದು ನಿಮಗಾಗೇ ಕಾಯುತ್ತಿರಬಹುದು!

8.ಸೆನೋಟ್ ಏಂಜಲೀಟಾ, ಮೆಕ್ಸಿಕೋ

ಇದು ನೋಡಲು ಉಳಿದ ಸ್ಥಳಗಳಂತೆ ಬಹಳ ವಿಶೇಷವಾಗೇನೂ ಇಲ್ಲ. ಆದರೆ, ಇಧರ ವಿಶಿಷ್ಠತೆ ಕೇಳಿದರೆ ಉಳಿದವುಗಳಿಗಿಂತ ಒಂದು ಕೈ ಮೇಲೆಯೇ ನಿಲ್ಲುತ್ತದೆ. ಈ ನದಿಯು ಸಮುದ್ರದ ಆಳದಲ್ಲಿ ಬರೋಬ್ಬರಿ 180 ಅಡಿಗಳ ಕೆಳಗೆ ತನ್ನದೇ ಮರಗಳಿಂದ ಸುತ್ತುವರಿದು ಹಾಗೂ ಗುಹೆಯ ನಡುವೆ ಹರಿಯುತ್ತಿದೆ! ಸಮುದ್ರದ ಉಪ್ಪು ನೀರಿನ ಗಂಧಗಾಳಿಯೂ ಸೋಕದಂತೆ ಅದರಡಿಗೇ ಅಂದರೆ, ಒಂದೇ ಜಾಗದಲ್ಲಿ ಎರಡು ನೀರಿನ ಮೂಲಗಳು ಇರುವುದು ಪ್ರಪಂಚದ ಅತ್ಯದ್ಭುತವಲ್ಲದೆ ಮತ್ತೇನು? ಹೈಡ್ರೋಜನ್ ಸಫೇಟ್ ಫಾಗ್ ಇವೆರಡೂ ನೀರಿನ ಮೂಲಗಳನ್ನು ಬೇರ್ಪಡಿಸಿದೆ.