Asianet Suvarna News Asianet Suvarna News

ಕೀಟಗಳಿಗೆ ಅಲರ್ಜಿ ತರೋ ಈ ಗಿಡಗಳು ಮನುಷ್ಯನಿಗೆ ಹಿತ !

ಒಳಾಂಗಣ ಸಸ್ಯಗಳನ್ನು ಆರಿಸುವಾಗ ಈ ಸಸ್ಯಗಳು ಮೊದಲ ಆಯ್ಕೆಯಾಗಲಿ. ಏಕೆಂದರೆ ಇವು ಮನೆಯ ಅಂದವನ್ನೂ ಹೆಚ್ಚಿಸುತ್ತವಲ್ಲದೆ, ಸೊಳ್ಳೆಗಳನ್ನೂ ದೂರವಿಡುತ್ತವೆ.
 

7 Mosquitoe repel Plants
Author
Bangalore, First Published May 27, 2019, 4:02 PM IST

ಸಸ್ಯಗಳು ಬಾಲ್ಕನಿಯಲ್ಲಿರಲಿ, ಬೆಡ್‌ರೂಂನಲ್ಲಿರಲಿ ಅಥವಾ ಡೈನಿಂಗ್ ಟೇಬಲ್ ಮೇಲಿರಲಿ, ಅವು ಮನೆಗೆ ಜೀವಂತಿಕೆ ತಂದುಕೊಡುತ್ತವೆ. ಮನೆಯೊಳಗಿನ ಗಾಳಿಯನ್ನು ಸ್ವಚ್ಛಗೊಳಿಸುತ್ತವೆ. ಅಷ್ಟೇ ಅಲ್ಲ ಔಷಧೀಯ ಗುಣಗಳಿರುವ ಸಸ್ಯಗಳನ್ನು ಅಡುಗೆಯಲ್ಲೂ ಬಳಸಬಹುದು. ಇಲ್ಲೊಂದಿಷ್ಟು ಸಸ್ಯಗಳಿವೆ ನೋಡಿ, ಇವು ಸೊಳ್ಳೆಗಳನ್ನೂ ಓಡಿಸುತ್ತವೆ. ಹೌದು, ಇವೆಲ್ಲ ಕೆಮಿಕಲ್‌ರಹಿತ ಮಸ್ಕಿಟೋ ರೆಪೆಲ್ಲೆಂಟ್ಸ್, ಹೀಗಾಗಿ, ಒಳಾಂಗಣಕ್ಕೆ ಇವು ಸ್ಮಾರ್ಟ್ ಆಯ್ಕೆ. ಇನ್ನು ಬಾಲ್ಕನಿಯಲ್ಲಿ ತರಕಾರಿಗಳನ್ನು ಬೆಳೆಯುತ್ತಿರಾದರೆ ಮಧ್ಯೆ ಮಧ್ಯೆ ಈ ಗಿಡಗಳನ್ನೂ ನೆಟ್ಟಲ್ಲಿ ಕ್ರಿಮಿಕೀಟಗಳನ್ನು ದೂರವಿಡಬಹುದು. 

ಸಾಮಾನ್ಯವಾಗಿ, ಕೆಲವೊಂದು ಹೂವಿನ ಗಿಡಗಳು ಹಾಗೂ ಗಾಢ ಸುವಾಸನೆ ಇರುವ ಔಷಧೀಯ ಸಸ್ಯಗಳು ಸೊಳ್ಳೆಗಳಿಗೆ ರೆಪೆಲ್ಲೆಂಟ್ ಆಗಿ ಕೆಲಸ ಮಾಡುತ್ತವೆ. ಅಂಥ ಕೆಲ ಸಸ್ಯಗಳ ಪಟ್ಟಿ ಇಲ್ಲಿದೆ.

ರೋಸ್ಮರಿ ಗಿಡ
ಮೀನು ಅಥವಾ ಕುರಿ ಅಡುಗೆಗೆ ರೋಸ್ಮರಿ ಉತ್ತಮ ಫ್ಲೇವರ್ ಕೊಡುತ್ತದೆ ಎಂದು ಗೊತ್ತು. ಆದರೆ, ರೋಸ್ಮರಿ ಗಿಡವು ಸೊಳ್ಳೆಗಳನ್ನು ದೂರವಿಡುತ್ತದೆ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಇದರ ಗಾಢ ಸುಗಂಧವು ಸೊಳ್ಳೆಗಳನ್ನಷ್ಟೇ ಅಲ್ಲ, ಇತರೆ ಕೀಟಗಳನ್ನೂ ಹತ್ತಿರ ಬರಗೊಡದು. ಒಣಗಿಸಿದ ರೋಸ್ಮರಿಯನ್ನು ನೀರಿನಲ್ಲಿ ಕುದಿಸಿ, ಸೊಳ್ಳೆಗಳನ್ನು ಓಡಿಸಲು ಸ್ಪ್ರೇ ತಯಾರಿಸಬಹುದು. 

ಲೆಮನ್ ಬಾಮ್ ಗಿಡ
ಪುದೀನಾ ಸಸ್ಯವರ್ಗಕ್ಕೆ ಸೇರಿದ ಲೆಮನ್ ಬಾಮ್ ಗಿಡದ ಸಿಟ್ರಿಕ್ ಪರಿಮಳವೇ ಆಹಾ ಎನಿಸುವಂತಿರುತ್ತದೆ. ಇನ್ನಿದರ ಬಿಳಿ ಪುಟಾಣಿ ಹೂವುಗಳು ಗಿಡಕ್ಕೆ ಅಲಂಕಾರಿಕ ರೂಪ ನೀಡುತ್ತವೆ. ಈ ಗಿಡ ಸುಮ್ಮನೆ ಹೆಚ್ಚಿನ ಜಾಗ ತಿನ್ನುತ್ತದೆ ಎಂದು ಮೊದಮೊದಲು ನಿಮಗನಿಸಬಹುದು. ಆದರೆ, ಇದು ಕೀಟಗಳನ್ನು ದೂರವಿಡುವ ಜಾದೂ ನೋಡಿದರೆ ಮತ್ತಿದು ನಿಮ್ಮ ಫೇವರೇಟ್ ಗಿಡವಾಗುವುದರಲ್ಲಿ ಅಚ್ಚರಿಯಿಲ್ಲ. 

ಸೊಳ್ಳೆ ನಾಶಕ್ಕೆ ಕಾಫಿ ಬೀಜ ಮದ್ದು!

ಮಾಚಿಪತ್ರೆ (ವಾರ್ಮ್‌ವುಡ್)
ಹೆಚ್ಚು ಸೂರ್ಯರಶ್ಮಿ ಸಿಗುವ ಜಾಗದಲ್ಲಿ ಮಾಚಿಪತ್ರೆ ಚೆನ್ನಾಗಿ ಬೆಳೆಯುತ್ತದೆ. ಹೀಗಾಗಿ ಇದು ನಿಮ್ಮ ಟೆರೇಸ್ ಅಥವಾ ಬಾಲ್ಕನಿಗೆ ಉತ್ತಮ ಆಯ್ಕೆ. ಇದರ ಗಾಢ ಗಂಧವು ಸೊಳ್ಳೆ, ನೊಣ, ನುಸಿ, ಚಿಗಟ ಸೇರಿದಂತೆ ಹಲವು ಕೀಟಗಳಿಗೆ ಆಗದು. ಅವುಗಳು ಈ ಗಿಡದ ಪರಿಮಳ ಬರುತ್ತಿದ್ದಂತೆಯೇ ದಾರಿ ಬದಲಿಸಿ ದೂರ ಹೋಗುತ್ತವೆ. ಹೀಗಾಗಿ, ಮನೆಯ ಸುತ್ತ ಮಾಚಿಪತ್ರೆ ನೆಟ್ಟರೆ ಮನೆ ಕ್ರಿಮಿಕೀಟಮುಕ್ತವಾಗಿರುತ್ತದೆ. 

ಜೆರೇನಿಯಂ ಸಸ್ಯ
ನಮಗೆಲ್ಲರಿಗೂ ಬಾಲ್ಕನಿ ಅಥವಾ ಮನೆಯಂಗಳ ಎಲ್ಲರ ಕಣ್ಮನ ಸೆಳೆಯುವಂತಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹಾಗೆ ಮನೆಯ ಅಂದ ಹೆಚ್ಚಿಸಿ ಎಲ್ಲರ ಗಮನ ಸೆಳೆವ ಸಾಮರ್ಥ್ಯವಿರುವ ಗಿಡ ಜೆರೇನಿಯಂ. ಇದರ ಬಣ್ಣಬಣ್ಣದ ನೂರಾರು ಹೂಗಳು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತವೆ. ಅಲ್ಲದೆ ಇವು ಮಸ್ಕಿಟೋ ರೆಪೆಲ್ಲೆಂಟ್ ಕೂಡಾ. ಜೆರೆನಿಯಂ ಹೂಗಳ ಸಿಟ್ರಸ್ ಪರಿಮಳ ನಮಗೆ ಹಿತವೆನಿಸಿದರೆ ಕೀಟಗಳಿಗೆ ತಲೆನೋವು ತರುತ್ತದೆ. 

ತುಳಸಿ
ಸಾಮಾನ್ಯವಾಗಿ ಭಾರತೀಯರ ಮನೆಯಂಗಳದಲ್ಲಿ ತುಳಸಿ ಗಿಡ ದಟ್ಟವಾಗಿ ಹರಡಿ ನಿಂತಿರುತ್ತದೆ. ಧಾರ್ಮಿಕವಾಗಿ ಇದನ್ನು ಪವಿತ್ರವೆಂದು ಭಾವಿಸುವುದರಿಂದ ಈ ಸಸ್ಯಕ್ಕೆ ಪ್ರತಿದಿನ ಪೂಜೆಯನ್ನೂ ಸಲ್ಲಿಸಲಾಗುತ್ತದೆ. ಕೆಮ್ಮು, ಕಫ, ಚರ್ಮರೋಗಗಳು ಸೇರಿ ಹಲವು ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆಯಾಗುವ ತುಳಸಿ, ಅಡುಗೆಗೂ ಉತ್ತಮ ಅರೋಮಾ ನೀಡುತ್ತದೆ. ಇದರ ಗಾಢಪರಿಮಳವು ಸೊಳ್ಳೆಗಳನ್ನು ದೂರವಿಡುತ್ತದೆ. ತುಳಸಿರಸವನ್ನು ನೈಸರ್ಗಿಕ ಸೊಳ್ಳೆ ರೆಪೆಲ್ಲೆಂಟ್ ಸ್ಪ್ರೇಯಲ್ಲಿ ಬಳಸಬಹುದು. 

ಬೆಳ್ಳುಳ್ಳಿ ಗಿಡ
ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲ ಅಡುಗೆಯಲ್ಲಿ ಬಳಕೆಯಾಗುತ್ತದೆ. ಆದರೆ ಬೆಳ್ಳುಳ್ಳಿ ಎಷ್ಟು ತಿಂದರೂ ನಮ್ಮನ್ನು ನೋಡಿ ಸೊಳ್ಳೆ ಓಡದು. ಬದಲಿಗೆ ಸುತ್ತ ಬೆಳ್ಳುಳ್ಳಿ ಇದ್ದರೆ ಸೊಳ್ಳೆಗಳು ದೂರವುಳಿಯುತ್ತವೆ! ನಿಮ್ಮ ವೆಜಿಟೇಬಲ್ ಗಾರ್ಡನ್‌ನಲ್ಲಿ ಬೆಳ್ಳುಳ್ಳಿ ಗಿಡ ಬೆಳೆಸಲು ಮರೆಯದಿರಿ. ಇವು ಸೊಳ್ಳೆಯನ್ನೂ ದೂರವಿಡುತ್ತವೆ, ಅಡುಗೆಗೂ ಸಾಕಷ್ಟು ಬೆಳ್ಳುಳ್ಳಿ ದೊರೆಯುತ್ತದೆ.

ಪುದೀನಾ
ಪುದೀನಾ ಪರಿಮಳವೆಂದರೆ ಬಹಳಷ್ಟು ಕೀಟಗಳಿಗೆ ಅಲರ್ಜಿ. ಆದರೆ, ನಮ್ಮ ಆರೋಗ್ಯಕ್ಕೆ ಪುದೀನಾ ಒಳ್ಳೆಯದು. ಪರಿಮಳವೂ ರಿಫ್ರೆಶಿಂಗ್ ಗುಣ ಹೊಂದಿದೆ. ಅಲ್ಲದೆ, ಬೆಳೆಯುವುದೂ ಸುಲಭ. ಯಾವುದಾದರೂ ಕೀಟ ಕಚ್ಚಿದರೆ, ಪುದೀನಾ ಸೊಪ್ಪನ್ನು ಉಜ್ಜುವುದರಿಂದ ತಕ್ಷಣ ರಿಲೀಫ್ ಸಿಕ್ಕುತ್ತದೆ. ಹೀಗಾಗಿ, ಮನೆಯ ಸುತ್ತಮುತ್ತಲೂ, ಒಳಹೊರಗೂ ಪುದೀನಾ ಗಿಡಗಳನ್ನು ಬೆಳೆಸಿ. 

Follow Us:
Download App:
  • android
  • ios