Asianet Suvarna News Asianet Suvarna News

ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿ 7 ಗುಟ್ಟು

ಸಮಯವೇ ಹಣವಾಗಿರುವ ಮತ್ತು ಕನಸುಗಳೇ ಗುರಿಯಾಗಿರುವ ಜಗತ್ತಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲು. ದೇಹ ಯಂತ್ರದಂತೆ, ಮೆದುಳು ಎಂಜಿನ್‌ನಂತೆ ಕಾರ್ಯನಿರ್ವಹಿಸುವಾಗ ಇವಕ್ಕೆಲ್ಲ ರಕ್ತಪೂರೈಸುವ ಹೃದಯದ ಮೇಲೆ ಒತ್ತಡ ಬಿದ್ದೇ ಬೀಳುತ್ತದೆ. ನಾವು ಇಷ್ಟೊಂದು ಚಲನಶೀಲರಾಗಿರಲೂ ಹೃದಯವೇ ಕಾರಣ. ಆರೋಗ್ಯಕರ ಹೃದಯವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ ಸಂಗತಿ. ಈ 7 ಸಂಗತಿಗಳಿಂದ ನಾವು ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳಬಹುದು

7 heart health secrets

ಸಮಯವೇ ಹಣವಾಗಿರುವ ಮತ್ತು ಕನಸುಗಳೇ ಗುರಿಯಾಗಿರುವ ಜಗತ್ತಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲು. ದೇಹ ಯಂತ್ರದಂತೆ, ಮೆದುಳು ಎಂಜಿನ್‌ನಂತೆ ಕಾರ್ಯನಿರ್ವಹಿಸುವಾಗ ಇವಕ್ಕೆಲ್ಲ ರಕ್ತಪೂರೈಸುವ ಹೃದಯದ ಮೇಲೆ ಒತ್ತಡ ಬಿದ್ದೇ ಬೀಳುತ್ತದೆ. ನಾವು ಇಷ್ಟೊಂದು ಚಲನಶೀಲರಾಗಿರಲೂ ಹೃದಯವೇ ಕಾರಣ. ಆರೋಗ್ಯಕರ ಹೃದಯವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ ಸಂಗತಿ. ಈ 7 ಸಂಗತಿಗಳಿಂದ ನಾವು ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳಬಹುದು

1. 10 ಸಾವಿರ ಹೆಜ್ಜೆ ಹಾಕಿ

ವೇಗದ ನಡಿಗೆಯು ಹೃದಯಕ್ಕೆ ಅತ್ಯಂತ ಆರೋಗ್ಯಕರ ವ್ಯಾಯಾಮ. ಪ್ರತಿದಿನ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆಯಬೇಕು. ಆದರೆ, ಇಂದು ಬಹುತೇಕ ಜನರು ಕೇವಲ 1500ರಿಂದ 2000 ಹೆಜ್ಜೆಗಳನ್ನಷ್ಟೇ ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ವಿಶ್ವದಲ್ಲಿ ಹೃದ್ರೋಗದ ಸಮಸ್ಯೆಗಳು ಹೆಚ್ಚಾಗಿವೆ. ಒಂದು ಪಿಜ್ಜಾದ ತುಂಡು ಜೀರ್ಣಗೊಳ್ಳಲು 5,238 ಹೆಜ್ಜೆಗಳ ಅಗತ್ಯವಿರುತ್ತದೆ. ಹಾಗೆಯೇ ಬೇರೆ ಬೇರೆ ಆಹಾರ ಪದಾರ್ಥಗಳು ಜೀರ್ಣಗೊಳ್ಳಲು ಇಂತಿಷ್ಟೇ ಹೆಜ್ಜೆಗಳ ಅವಶ್ಯಕತೆ ದೇಹಕ್ಕಿರುತ್ತದೆ. ಪ್ರತಿದಿನ ನಡಿಗೆಗಾಗಿಯೇ 30 ನಿಮಿಷವನ್ನು ವ್ಯಯಿಸುವುದು ಒಳ್ಳೆಯದು. ಇದರಿಂದ ಹೃದ್ರೋಗದ ಸಾಧ್ಯತೆಯನ್ನು ಶೇ.44ರಷ್ಟು ಕಡಿಮೆ ಮಾಡಿಕೊಳ್ಳಬಹುದು.

2. ಗುಣಮಟ್ಟದ ವೈನ್

ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಆಲ್ಕೋಹಾಲ್ ಪರಿಣತರಾಗಿ ಕೆಲಸ ಮಾಡಿದ್ದ ಡಾ. ಕರಿ ಪೊಯ್ಕೊಲೈನೆನ್ ಹೇಳುವಂತೆ, ‘ದಿನವೊಂದಕ್ಕೆ 1 ಅಥವಾ 2 ಗ್ಲಾಸ್‌ನಷ್ಟು ಕೆಂಪು ವೈನ್ ಸೇವಿಸಿದರೆ ಹೃದಯದ ರಕ್ತನಾಳಗಳ ರೋಗಗಳನ್ನು ತಡೆಯಬಹುದು’. ಇದರಲ್ಲಿ ‘ರೆಸ್‌ವಾಟ್ರಾಲ್’ ಎಂಬ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ರಕ್ತನಾಳಗಳು ಮತ್ತು ಹೃದಯವನ್ನು ಸ್ಯಾಚುರೇಟೆಡ್ ಕೊಬ್ಬುಗಳ ಪರಿಣಾಮದ ವಿರುದ್ಧ ರಕ್ಷಿಸುತ್ತದೆ. ಕೆಂಪು ವೈನ್‌ನಲ್ಲಿನ ರೆವರೆಟ್ರಾಲ್‌ನಂಥ ಅಂಶ ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಸಹಾಯಕ. ಪಾಲಿಫಿನಾಲ್ಸ್‌ನಂಥ ಆ್ಯಂಟಿಆಕ್ಸಿಡೆಂಟ್‌ಗಳು ಅಥೆರೊಸ್ಕ್ಲೆರೋಸಿಸ್‌ನಂಥ ರೋಗಗಳನ್ನು ತಡೆಯುತ್ತವೆ. ಗುಣಮಟ್ಟದ ವೈನ್ ಸೇವನೆಯಿಂದ ಮಾನಸಿಕ ಸಂತೋಷವೂ ಸಿಗುತ್ತದೆ ಎನ್ನುತ್ತಾರೆ ಮನಃಶ್ಶಾಸಜ್ಞರು.

3. ಮೀನೆಣ್ಣೆ ಸೇವನೆ

ಮೀನುಗಳನ್ನು ಪ್ರೀತಿಸುವ ಎಲ್ಲರಿಗೂ ಇದು ಸಿಹಿಸುದ್ದಿ. ಮೀನೆಣ್ಣೆಯಲ್ಲಿನ ‘ಓಮೇಗ 3’ಯಿಂದ ಹೃದಯಕ್ಕೆ ದೊಡ್ಡ ಲಾಭವೇ ಇದೆ. ರಕ್ತದೊತ್ತಡ, ರಕ್ತ ಅಂಟಿಕೊಳ್ಳುವುದು, ಉರಿಯೂತ ಮುಂತಾದವುಗಳನ್ನು ತಡೆಯುತ್ತದೆ. ಹೃದಯದ ಮಾಂಸಖಂಡಕ್ಕೆ ಕಳಪೆ ರಕ್ತ ಪೂರೈಕೆಯಾಗುವುದನ್ನು ನಿಲ್ಲಿಸುತ್ತದೆ. ನಿತ್ಯ ಕನಿಷ್ಠ ಒಂದು ಗ್ರಾಮ್ ಓಮೇಗ-3 ಮೀನಿನೆಣ್ಣೆಯನ್ನು ಸೇವಿಸುವುದರಿಂದ ದಿಢೀರ್ ಹೃದಯಾಘಾತವನ್ನು ಶೇ.40ರಿಂದ 45ರಷ್ಟು ಕಡಿಮೆ ಮಾಡಿಕೊಳ್ಳಬಹುದು.

4. ಖಾರದ ಮೆಣಸಿನಕಾಯಿ

ಖಾರದ ಮೆಣಸಿನಕಾಯಿ ಸೇವನೆಯಿಂದ ಕ್ಯಾನ್ಸರ್ ಮತ್ತು ಅಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಹಾರ್ವರ್ಡ್ ವಿವಿಯ ಸಂಶೋಧನೆ ಪತ್ತೆಹಚ್ಚಿದೆ. ಮೆಣಸಿನಕಾಯಿಯಲ್ಲಿ ‘ಕ್ಯಾಪ್ಸೆ ಸಿನ್’ ಎಂಬ ವಸ್ತುವಿದ್ದು, ಇದು ರಕ್ತದ ಕೊಲೆಸ್ಟೆರಾಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರಕ್ತನಾಳಗಳು ಸಂಕುಚಿತವಾಗುವಂತೆ ಮಾಡಿ, ಹೃದಯಾಘಾತಕ್ಕೆ ಪ್ರೇರೇಪಿಸುವ ಜೀನ್ ಅನ್ನು ತಡೆಯುತ್ತದೆ. ಮೆದುಳಿಗೆ ರಕ್ತ ತಲುಪಲು ಸಾಧ್ಯವಾಗದಿದ್ದಾಗ ಉಂಟಾಗುವ ಪಾರ್ಶ್ವವಾಯುವನ್ನೂ ಇದು ದೂರ ಮಾಡುತ್ತದೆ.

5. ಸೂರ್ಯನ ಶಾಖ

ಭಾರತದಂಥ ಉಷ್ಣವಲಯದ ದೇಶದಲ್ಲಿ ಎಂದಿಗೂ ಬಹುತೇಕರು ವಿಟಮಿನ್ ‘ಡಿ’ ಕೊರತೆಯಿಂದ ಬಳಲುತ್ತಿದ್ದಾರೆ. ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಶೇ.77.5ರಷ್ಟು ಪುರುಷರು ಮತ್ತು ಶೇ. 72.68ರಷ್ಟು ಮಹಿಳೆಯರು ಈ ಸಮಸ್ಯೆಗೆ ತುತ್ತಾಗಿದ್ದಾರೆ. ವಿಟಮಿನ್ ಡಿ ಹೃದಯಕ್ಕೆ ಬಹಳ ಒಳ್ಳೆಯದು. ಸೌಥಾಂಪ್ಟನ್ ಮತ್ತು ಎಡಿನ್‌ಬರೊ ವಿವಿ ತಜ್ಞರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, 24 ಆರೋಗ್ಯಕರ ಯುವಜನರನ್ನು ಸನ್ ಲ್ಯಾಂಪ್ ಎದುರಿಗೆ 20 ನಿಮಿಷ ನಿಲ್ಲಿಸಿ ನಂತರ ಅವರ ರಕ್ತದೊತ್ತಡವನ್ನು ಅಳೆಯಲಾಯಿತು. ಇವರೆಲ್ಲರ ಡಯಾಸ್ಟಾಲಿಕ್ ಒತ್ತಡ ಗಮನಾರ್ಹವಾಗಿ ಇಳಿಕೆಯಾಗಿತ್ತು. ಅಲ್ಲದೆ ಲ್ಯಾಂಪ್ ಆರಿಸಿದ ನಂತರವೂ ಕನಿಷ್ಠ ಅರ್ಧ ಗಂಟೆಯವರೆಗೆ ಇದು ಕಡಿಮೆಯಾಗಿಯೇ ಉಳಿದಿತ್ತು. ಸಾಮಾನ್ಯವಾಗಿ ಹೃದ್ರೋಗಗಳು ಚಳಿಗಾಲದಲ್ಲಿ, ಸೂರ್ಯನ ಬೆಳಕಿಲ್ಲದ ಸ್ಥಳಗಳಲ್ಲಿ ಹೆಚ್ಚು ಸಂಭವಿಸುತ್ತವೆ.

6. ಭಲೇ, ಪಾಪ್‌ಕಾರ್ನ್!

ವಾರಾಂತ್ಯದಲ್ಲಿ ಸಿನಿಮಾ ವೀಕ್ಷಿಸುತ್ತಾ ನಾವು ಸೇವಿಸುವ ಪಾಪ್‌ಕಾರ್ನ್ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಕೆಂಪು ವೈನ್‌ನಂತೆಯೇ ಇದೂ ಆ್ಯಂಟಿಆಕ್ಸಿಡೆಂಟ್ಸ್ ಕಣಜ. ಒಳ್ಳೆಯ ಕೊಲೆಸ್ಟೆರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತನಾಳಗಳಲ್ಲಿನ ಹಾನಿಯ ವಿರುದ್ಧ ಹೋರಾಡುತ್ತದೆ. ಪೆನ್ಸಿಲ್ವೇನಿಯಾದ ಸ್ಕ್ರಾಂಟೆನ್ ವಿವಿಯ ತಜ್ಞರ ಪ್ರಕಾರ, ಪಾಪ್‌ಕಾರ್ನ್‌ನಲ್ಲಿ ಲಾಭದಾಯಕ ಪಾಲಿಫಿನಾಲ್‌ಗಳು, ಹಣ್ಣು ಮತ್ತು ತರಕಾರಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿವೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಸರಾಸರಿ ಪಾಲಿಫಿನಾಲ್‌ಗಳ ಸೇವನೆಯ ಶೇ.13ರಷ್ಟು ಭಾಗವನ್ನು ಒಂದು ಪೊಟ್ಟಣದಲ್ಲಿನ ಪಾಪ್‌ಕಾರ್ನ್ ಪೂರೈಸಬಲ್ಲದು. ಬೆಣ್ಣೆ ಅಥವಾ ತೈಲದಲ್ಲಿ ಮಾಡಿದ ಪಾಪ್‌ಕಾರ್ನ್‌ಗಿಂತ, ಗಾಳಿಯಲ್ಲಿ ಸಿಡಿಸಿದ ಪಾಪ್‌ಕಾರ್ನ್ ಒಳ್ಳೆಯದು.

7. ಸಾಕು ಪ್ರಾಣಿಗಳು ನೀಡುವ ಸುಖ

ಸಾಕು ಪ್ರಾಣಿಗಳಿಗೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ. ಪ್ರಾಣಿ ಅಥವಾ ನಾಯಿಗಳನ್ನು ಸಾಕಿದವರು ಸಾಮಾನ್ಯವಾಗಿ ಅದರೊಂದಿಗೆ ವಾಕಿಂಗ್‌ಗೆ ಹೋಗುತ್ತಾರೆ. ಅಥವಾ ಅದರೊಂದಿಗೆ ಆಟವಾಡುತ್ತಾ ಆರೋಗ್ಯ ಲಾಭ ಪಡೆಯುತ್ತಾರೆ. ಸಾಕುಪ್ರಾಣಿಗಳು ಮನುಷ್ಯನಿಗೆ ಮಾನಸಿಕ ಸಂತೋಷವನ್ನೂ ನೀಡುವುದರಿಂದ ರಕ್ತಚಲನೆ ಆರೋಗ್ಯಕರವಾಗಿರುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ಹೇಳಿವೆ.