ಭಾರತೀಯ ಸಂಸ್ಕೃತಿಯಲ್ಲಿ ಪಾನ್ ಎಲೆಗೆ ಉನ್ನತ ಸ್ಥಾನವಿದೆ. ಮಹಿಳೆಯರಿಗೆ ನೀಡುವ ಬಾಗೀನದೊಂದಿಗೆ ಎಲೆ ಅಡಿಕೆ ಇಡಲೇಬೇಕು. ಮನೆಗೆ ಬಂದವರಿಗೆ ಎಲೆ ಅಡಿಕೆ ಕೇಳುವುದು ಸತ್ ಸಂಪ್ರದಾಯ. ಹಿರಿಯರನೇಕರಿಗೆ ಊಟವಾದೊಡನೆ ಎಲೆ ಅಗಿಯುವ ಅಭ್ಯಾಸ. ಮಲೆನಾಡ ಮನೆಗಳಲ್ಲಿ ಎಲೆಯ ಮಾತಿಲ್ಲದೆ ಮಾತು ಶುರುವಾಗದು. ಇಷ್ಟೆಲ್ಲ ಪ್ರಾಮುಖ್ಯತೆ ಪಡೆದಿರುವ ಎಲ ಎಲವೋ ಎಲೆಯೇ, ಏನೆಲ್ಲ ನಿನ್ನಲ್ಲಿದೆಯೇ? ಎಂದರೆ ವಿಟಮಿನ್ ಸಿ, ಥೈಮಿನ್, ನಿಯಾಸಿನ್, ರೈಬ್ಲೋಫ್ಲೇವಿನ್, ಕೆರೋಟಿನ್, ಕ್ಯಾಲ್ಶಿಯಂ ಎಂದು ಉದ್ದ ಪಟ್ಟಿ ನೀಡುತ್ತದೆ ಈ ಹಸಿರು ಹೊನ್ನು. ವಾತ ಮತ್ತು ಕಫ ನಿವಾರಣೆಗೆ ಪಾನ್ ಎಲೆ ಅತ್ಯುತ್ತಮ ಔಷಧಿ ಎನ್ನುತ್ತದೆ ಆಯುರ್ವೇದ. ಮೌತ್ ಫ್ರೆಷನರ್‌ ಆಗಿಯೂ ಬಳಕೆಯಾಗುವ ಪಾನ್‌ನ ಇತರೆ ಪ್ರಯೋಜನಗಳೇನೇನು ನೋಡೋಣ ಬನ್ನಿ.

  • ಹೊಟ್ಟೆ ಕಟ್ಟಿದೆಯೇ? ಹಾಗಿದ್ದರೆ ಎಲೆ ತಿಂದು ಬಿಸಿ ನೀರು ಕುಡಿದಲ್ಲಿ ಮಲಬದ್ಧತೆ ನಿವಾರಣೆಯಾಗುವುದು. ಪಾನ್ ದೇಹದಿಂದ ವಿಷಕಾರಿ ಅಂಶ ಹೊರಹಾಕಲು ನೆರವಾಗುತ್ತದೆ.
  • ಗಾಯವಾಗಿದ್ದರೆ ಸ್ವಲ್ಪ ಪಾನ್ ರಸ ಹಾಕಿ. ಪೇನ್ ಕಿಲ್ಲರ್‌ನಂತೆ ಕೆಲಸ ಮಾಡುತ್ತದೆ ಪಾನ್ ಎಲೆ. 
  • ಅಜೀರ್ಣ ಸಮಸ್ಯೆ ಇರುವವರು ಪ್ರತಿದಿನ ಎಲೆ ಅಗಿದು ತಿಂದರೆ ಜೀರ್ಣಕ್ರಿಯೆ ಸರಿಯಾಗುವುದು. ಶಿಶು ಹೊಟ್ಟೆನೋವಿನಿಂದ ಅಳುತ್ತಿದ್ದರೆ ಹರಳೆಣ್ಣೆ ಹಚ್ಚಿದ ಎಲೆಯನ್ನು ತುಸು ಬಿಸಿ ಮಾಡಿ ಹೊಕ್ಕುಳ ಮೇಲಿಡಿ. ಇನ್ನು ಸಣ್ಣ ಮಕ್ಕಳಿಗೆ ಎಲೆಯ  ರಸ ತೆಗೆದು ಪೆಪ್ಪರ್ ಪುಡಿಯೊಂದಿಗೆ ಪ್ರತಿದಿನ ಸೇವಿಸಲು ನೀಡಿದರೆ ಜೀರ್ಣಕ್ರಿಯೆ ಸರಾಗವಾಗಿರುವುದು. 

ಚುಯಿಂಗ್ ಗಮ್‌ನಿಂದ ಕಾಡಬಹುದು ಅಜೀರ್ಣ!

  • ಅಸಿಡಿಟಿಗೆ ಪಾನ್ ರಾಮಬಾಣವಾಗಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಪ್ರತಿ ದಿನ ಎಲೆ ಅಗಿದು ರಸ ನುಂಗುವ ಅಭ್ಯಾಸ ಮಾಡಿಕೊಳ್ಳಬಹುದು.
  • ಪಾನ್ ರಸವನ್ನು ಎರಡು ಹನಿ ಜೇನುತುಪ್ಪದೊಂದಿಗೆ ಸೇರಿಸಿ ಪ್ರತಿದಿನ ಸೇವಿಸಿದರೆ  ಏಕಾಗ್ರತೆ ಹೆಚ್ಚುವುದು. 
  • ಪ್ರತಿದಿನ ಎಲೆ ತಿನ್ನುವುದರಿಂದ ದೇಹದಲ್ಲಿ ವಿಷಕಾರಿ ಅಂಶ ಶೇಖರವಾಗುವುದು ತಪ್ಪುತ್ತದೆ. ಇದರಿಂದ ಹಸಿವು ಹೆಚ್ಚುತ್ತದೆ. ಜೊತೆಗೆ ಬಾಯಿಯ ಆರೋಗ್ಯವನ್ನೂ ಕಾಪಾಡುತ್ತದೆ. 
  • ಸುಧೀರ್ಘ ಕಾಲದ ಕೆಮ್ಮಿಗೆ ಪಾನ್ ಎಲೆ ಉತ್ತಮ ಮದ್ದು. ಇದರಲ್ಲಿರುವ ಆ್ಯಂಟಿ ಬಯೋಟಿಕ್ ಅಂಶಗಳು ನಿಮ್ಮನ್ನು ಹಲವು ಕಾಯಿಲೆಗಳಿಂದ ದೂರವಿಡುತ್ತದೆ