ನಾನು ಸತ್ಯವನ್ನೇ ನುಡಿಯುತ್ತೇನೆ. ಸತ್ಯ ಬಿಟ್ಟು ಬೇರೇನೂ ನುಡಿಯುವುದಿಲ್ಲ ಎಂದು ನಮ್ಮ ಬಳಿ ಯಾರಾದರೂ ಹೇಳಿದಾಗ ಅದರಲ್ಲೂ ಒಂದು ಸುಳ್ಳಿದೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಾವು ಸೋಲುತ್ತೇವೆ. ಹಾಗಂತ ಎಲ್ಲರಿಗೂ ಸತ್ಯಹರಿಶ್ಚಂದ್ರನಂತೆ ಸದಾ ಸತ್ಯವನ್ನೇ ನುಡಿಯಲು ಸಾಧ್ಯವೂ ಇಲ್ಲ. ಕೆಲವೊಂದು ಸಂದರ್ಭದಲ್ಲಿ ಕೆಲಸ ಕೆಡದಿರಲು ಪುಟ್ಟದೊಂದು ಸುಳ್ಳು ಹೇಳುವುದು ಅನಿವಾರ್ಯ. ಕೆಲವು ಸುಳ್ಳುಗಳಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ, ಕೆಲವು ಸುಳ್ಳುಗಳು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿಬಿಡಬಲ್ಲವು. ಎಷ್ಟೋ ಬಾರಿ ನೀವು ಕೂಡ ಸುಳ್ಳನ್ನೇ ಸತ್ಯವೆಂದು ನಂಬಿ ದೊಡ್ಡ ಇಕ್ಕಟ್ಟಿಗೆ ಸಿಲುಕಿರಬಹುದು.ಅಂಥ ಸಮಯದಲ್ಲೆಲ್ಲ ಆತ ಸುಳ್ಳು ಹೇಳುತ್ತಿದ್ದಾನೆ ಎನ್ನುವುದು ಮೊದಲೇ ತಿಳಿದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಭಾವನೆ ನಿಮ್ಮಲ್ಲಿ ಖಂಡಿತ ಮೂಡಿರುತ್ತದೆ. ಪ್ರಯತ್ನಪಟ್ಟರೆ ನಿಮ್ಮ ಎದುರಿಗಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಯಾರಾದರೂ ನಿಮ್ಮ ಬಳಿ
ಮಾತನಾಡುವಾಗ ಹೀಗೆಲ್ಲ ಮಾಡುತ್ತಾರಾ ಎಂಬುದನ್ನು ಗಮನಿಸಿ. 

1.ಕಥೆ ಹಣೆಯುವುದರಲ್ಲಿ ಎಕ್ಸ್ಫರ್ಟ್: ಸುಳ್ಳು ಹೇಳುವ ವ್ಯಕ್ತಿಗಳು ಕಥೆ ಹಣೆಯುವುದರಲ್ಲಿ ಎಕ್ಸ್ಫರ್ಟ್ ಆಗಿರುತ್ತಾರೆ. ಯಾರಾದರೂ ಪಿನ್ ಟೂ ಪಿನ್ ಡಿಟೈಲ್ಸ್ ಕೊಡದಿದ್ದಾಗ ಆ ವ್ಯಕ್ತಿ ಸುಳ್ಳು ಹೇಳುತ್ತಿರಬಹುದು ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಅದೇ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದಾಗ ಅದು ಸತ್ಯವೆಂದೇ ನಂಬುತ್ತೇವೆ. ಆದರೆ, ನಿಮಗೊಂದು ಮಜಾ ಗೊತ್ತಾ? ಸುಳ್ಳು ಹೇಳುವಾಗ ವ್ಯಕ್ತಿ ಎಷ್ಟು ಸಾಧ್ಯವೋ ಅಷ್ಟು ಮಾಹಿತಿ ನಿಮಗೆ ಲಭಿಸುವಂತೆ ಕಥೆ ಕಟ್ಟಿರುತ್ತಾನೆ. ಅಷ್ಟೇ ಅಲ್ಲ, ಕೆಲವೊಮ್ಮೆ ನೀವು ಕೇಳಿರದ ಮಾಹಿತಿಯನ್ನೂ ನೀಡಿರುತ್ತಾನೆ. ಹಾಗಾಗಿ ಇನ್ನು ಮುಂದೆ ಯಾರಾದರೂ ನಿಮಗೆ ಸವಿಸ್ತಾರವಾಗಿ ಎಲ್ಲವನ್ನೂ ವಿವರಿಸಲು ಪ್ರಾರಂಭಿಸಿದ ತಕ್ಷಣ ಮಿದುಳಿಗೆ ಕೆಲಸ ಕೊಡಿ. ಇಲ್ಲವಾದರೆ ನೀವು ಸುಳ್ಳಿಗೆ ಬಲಿಯಾಗುವ ಎಲ್ಲ ಸಾಧ್ಯತೆಗಳೂ ಇವೆ.

ಗುರಿ ಸಾಧನೆ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆಯಾಗಬೇಕೇ? ಈ ಟಿಪ್ಸ್ ಅನುಸರಿಸಿ!

2.ಕಣ್ಣಿನಲ್ಲಿ ಕಣ್ಣನಿಟ್ಟು ನೋಡಲಾರೆ:  ಅನನುಭವಿ ಸುಳ್ಳುಗಾರ ತಾನು ಹಣೆದ ಕಲ್ಪಿತ ಕಥೆಯನ್ನು ಹೇಳುವಾಗ ನಿಮ್ಮ ಕಣ್ಣನ್ನು ನೇರವಾಗಿ ನೋಡಲಾರ. ಇದಕ್ಕೆ ಕಾರಣ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದರೆ ತಾನು ಹೇಳುತ್ತಿರುವ ಸುಳ್ಳನ್ನು ಪತ್ತೆ ಹಚ್ಚಿಬಿಟ್ಟರೆ ಎಂಬ ಭಯ. ಜೊತೆಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಕೂಡ ಆತನನ್ನು ಕಾಡುತ್ತಿರುತ್ತದೆ. ನಿಮ್ಮ ಬಳಿ ಮಾತನಾಡುವಾಗ ಯಾರಾದರೂ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲು ಹಿಂಜರಿದರೆ ಅವರ ಮಾತಿನ ಮೇಲೆ ಅನುಮಾನ ಪಡಿ. ಆದರೆ, ಇದೇ ಸಮಯದಲ್ಲಿ ಇನ್ನೊಂದು ವಿಷಯವೂ ನೆನಪಿರಲಿ, ಸುಳ್ಳು ಹೇಳುವುದರಲ್ಲಿ ಎಕ್ಸ್ಫರ್ಟ್ ಆಗಿರುವ ವ್ಯಕ್ತಿ ನಿಮ್ಮ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡುತ್ತಾನೆ. ತನ್ನ ಮಾತಿನ ಮೇಲೆ ಅನುಮಾನ ಮೂಡದಿರಲಿ ಎಂಬ ಕಾರಣಕ್ಕೆ ಆತ ಹೀಗೆ ಮಾಡುತ್ತಾನೆ. 

3.ರಕ್ಷಣಾತ್ಮಕ ಆಟ: ಸುಳ್ಳುಗಾರನಿಗೆ ನೀವು ಯಾವುದಾದರೊಂದು ಪ್ರಶ್ನೆ ಕೇಳಿದ ತಕ್ಷಣ ಆತ ಜಾಗೃತಗೊಳ್ಳುತ್ತಾನೆ. ತನ್ನ ಗುಟ್ಟು ರಟ್ಟಾಗಬಹುದು ಎಂಬ ಅನುಮಾನದಿಂದ ನೀವು ಕೇಳಿದ ಪ್ರಶ್ನೆ ನಿಮಗೇ ತಿರುಗುಬಾಣವಾಗುವಂತೆ ಮಾಡುವುದರಲ್ಲಿ ಚಾಣಕ್ಷನಾಗಿರುತ್ತಾನೆ. ಕೊನೆಯಲ್ಲಿ ನಾನು ಆ ರೀತಿ ಪ್ರಶ್ನಿಸಬಾರದಿತ್ತು ಎಂಬ ಪಾಪಪ್ರಜ್ಞೆ ನಿಮ್ಮಲ್ಲಿ ಮೂಡುವಂತೆ ಮಾಡುತ್ತಾನೆ.

4.ಮೂಗು ಮುಟ್ಟುತ್ತಿದ್ದರೆ ಜಾಗೃತರಾಗಿ: ಸುಳ್ಳು ಹೇಳುವುದಕ್ಕೂ, ತುರಿಸುವುದಕ್ಕೂ ಸಂಬಂಧವಿದೆಯೇ? ಇದೆ ಎನ್ನಲಾಗುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಸುಳ್ಳು ಹೇಳುವಾಗ ಮುಖಕ್ಕೆ ರಕ್ತ ಒಮ್ಮೆಗೆ ಪ್ರವೇಶಿಸುವುದರಿಂದ ಸ್ವಲ್ಪ ಮಟ್ಟಿಗೆ ನವೆ ಕಾಣಿಸಿಕೊಳ್ಳುತ್ತದೆ. ತುರಿಕೆಗೆ ಬೇರೆ ಕಾರಣಗಳೂ ಇರಬಹುದು. ಹೀಗಾಗಿ ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಮುಖ ತುರಿಸಿಕೊಂಡ ತಕ್ಷಣ ಆತನನ್ನು ಅನುಮಾನಿಸಬೇಕಾದ ಅಗತ್ಯವಿಲ್ಲ. ಆದರೆ, ನರ್ವಸ್‍ನಿಂದ ಪದೇಪದೆ ಮೂಗನ್ನು ತುರಿಸಿಕೊಳ್ಳುತ್ತಿದ್ದರೆ ಆ ವ್ಯಕ್ತಿಯ ಮಾತಿನ ಬಗ್ಗೆ ಅನುಮಾನಪಡಿ.

ಗಂಡೆಂದು ಅಟ್ಟಕ್ಕೇರಿಸಿ ಕೂರಿಸಿದರೆ ಹಾದಿ ತಪ್ಪಬಹುದು ಎಚ್ಚರ!

5.ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು: ಸುಳ್ಳು ಹೇಳುತ್ತಿರುವ ವ್ಯಕ್ತಿಗೆ ಆತನ ಮಾತಿನ ನಡುವೆ ನೀವು ಪ್ರಶ್ನೆ ಕೇಳಿದರೆ ತಡವರಿಸುವ ಜೊತೆಗೆ ನೀವು ಕೇಳಿದ ಪ್ರಶ್ನೆಯನ್ನೇ ಹಿಂತಿರುಗಿಸಿ ನಿಮಗೆ ಕೇಳುತ್ತಾನೆ. ಆ ಕ್ಷಣದಲ್ಲಿ ಉತ್ತರಕ್ಕಾಗಿ ಆತನ ಮಿದುಳು ತಡಕಾಡುತ್ತಿರುತ್ತದೆ. ಪರಿಣಾಮ ಆತ ಮಾತನಾಡುವಾಗ ತಡವರಿಸುತ್ತಾನೆ. ಕೊನೆಗೂ ಆತನಿಗೆ ನಿಮ್ಮ ಸರಳ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗುವುದೇ ಇಲ್ಲ.

6.ಹತ್ತು ಬಾರಿ ಕೇಳಿದರೂ ಅದೇ ಉತ್ತರ:  ಸುಳ್ಳು ಹೇಳುತ್ತಿರುವ ವ್ಯಕ್ತಿಗೆ ನೀವು ಒಂದೇ ಪ್ರಶ್ನೆಯನ್ನು ಹತ್ತು ಬಾರಿ ಕೇಳಿದರೂ ಆತನ ಉತ್ತರ ಒಂದೇ ಆಗಿರುತ್ತದೆ. ಅದರಲ್ಲಿ ಎಳ್ಳಷ್ಟೂ ಬದಲಾವಣೆ ಇರುವುದಿಲ್ಲ. ಇದಕ್ಕೆ ಕಾರಣ ಇಂಥ ಪ್ರಶ್ನೆ ಕೇಳಿದರೆ ಹೀಗೆ ಉತ್ತರಿಸಬೇಕು ಎಂಬುದನ್ನು ಆತ ಮೊದಲೇ ಪ್ರ್ಯಾಕ್ಟೀಸ್ ಮಾಡಿರುತ್ತಾನೆ.