Asianet Suvarna News Asianet Suvarna News

ಮಗಳಿಗೆ ಡ್ರೈವಿಂಗ್ ಕಲಿಸೋ ಪೋಷಕರು ಮಗನಿಗ್ಯಾಕೆ ಅಡುಗೆ ಕಲಿಸೋಲ್ಲ?

ಗಂಡು ಮಗು ಎಂಬ ಕಾರಣಕ್ಕೆ ಆತನಿಗೆ ಇಷ್ಟಬಂದಂತೆ ಬೆಳೆಯಲು ಬಿಟ್ಟರೆ ಮುಂದೆ ಹೆತ್ತವರೇ ಪಶ್ಚತ್ತಾಪ ಪಡಬೇಕಾಗಬಹುದು. ಹೆಣ್ಣಿಗೆ ಗೌರವ ನೀಡುವುದೂ ಸೇರಿದಂತೆ ಕೆಲವೊಂದು ಗುಣಗಳನ್ನು ಗಂಡುಮಗುವಿಗೆ ಬಾಲ್ಯದಿಂದಲೇ ಕಲಿಸುವುದು ಕೌಟುಂಬಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಹಿತಕರ.
 

7 things every parent must teach their son
Author
Bangalore, First Published Dec 28, 2019, 12:07 PM IST

ಗಂಡು ಮಗು ಎಂಬ ಕಾರಣಕ್ಕೆ ಕೇಳಿದ್ದನ್ನೆಲ್ಲ ಕೊಡಿಸುವುದು, ಕೂತ ಜಾಗಕ್ಕೆ ಎಲ್ಲವನ್ನೂ ಪೂರೈಸುವ ಅಪ್ಪ-ಅಮ್ಮ ನೀವಾಗಿದ್ದರೆ, ಈಗಲೇ ಎಚ್ಚರಗೊಳ್ಳುವುದು ಒಳಿತು. ಗಂಡು ಕೆಲಸ ಮಾಡಬಾರದು ಎಂಬ ಬೇಲಿಯನ್ನು ಬಾಲ್ಯದಿಂದಲೇ ಹಾಕಿಕೊಟ್ಟರೆ ಬೆಳೆದು ದೊಡ್ಡವರಾದ ಮೇಲೆ ನಿಮ್ಮ ಮುದ್ದು ಮಗ ಸೋಮಾರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕುವುದು ಆತನಿಗೆ ಕಷ್ಟವಾಗಬಹುದು. ಗಂಡು ಮಕ್ಕಳಿಗೆ ಬಾಲ್ಯದಲ್ಲಿ ಕೆಲವೊಂದು ಗುಣಗಳನ್ನು ಕಲಿಸುವುದು ಅತ್ಯಗತ್ಯ. 

ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?

ಗಂಡು ಶ್ರೇಷ್ಠ ಎಂಬ ಭಾವನೆ ಬಿತ್ತಬೇಡಿ: ಗಂಡು ಹೆಣ್ಣಿಗಿಂತ ಶ್ರೇಷ್ಠ ಎಂಬ ಭಾವನೆ ಎಂದಿಗೂ ಮಗುವಿನ ಮನಸ್ಸಿನಲ್ಲಿ ಮೂಡದಂತೆ ಎಚ್ಚರ ವಹಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ನಿಮಗೆ ಮಗನೊಂದಿಗೆ ಮಗಳೂ ಇದ್ದರೆ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ಮಗ ಏನಾದರೂ ಕೆಲಸ ಮಾಡುವಾಗ ‘ನೀನು ಗಂಡು, ಇದನೇಕೆ ಮಾಡುತ್ತೀಯಾ? ಇದು ಹೆಣ್ಣುಮಕ್ಕಳು ಮಾಡುವ ಕೆಲಸ’ ಎಂಬಂತಹ ಮಾತುಗಳನ್ನು ಆಡಬೇಡಿ. ಮಗಳು ಮಾಡುವ ಕೆಲಸಗಳನ್ನು ಮಗನಿಂದಲೂ ಮಾಡಿಸಿ. ಇದರಿಂದ ಆತ ಈಗ ತಾಯಿಗೆ, ಮುಂದೆ ಹೆಂಡತಿಗೆ ಮನೆಗೆಲಸಗಳಲ್ಲಿ ನೆರವು ನೀಡುವುದನ್ನು ಕಲಿಯುತ್ತಾನೆ. ಅಲ್ಲದೆ, ಗಂಡು ಮತ್ತು ಹೆಣ್ಣು ಸರಿಸಮಾನರು ಎಂಬ ಭಾವನೆ ಆತನ ಮನಸ್ಸಿನಲ್ಲಿ ಮೂಡುತ್ತದೆ.

ಮಾಡಿದ್ದೆಲ್ಲ ಸರಿ ಎನ್ನಬೇಡಿ: ಮಗಳು ಮಾಡಿದ್ದೆಲ್ಲ ತಪ್ಪು, ಮಗ ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿದ್ದರೆ ಬಿಡಿ. ಮಗ ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸಿ. ಹಾಗೇ ಮಾಡಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಇಂಥ ತಪ್ಪನ್ನು ಮತ್ತೆ ಮಾಡಬೇಡ ಎಂದು ತಿಳಿ ಹೇಳಿ. ಒಂದು ವೇಳೆ ಮಗ ಮಾಡಿದ್ದೆಲ್ಲ ಸರಿ ಎಂಬಂತೆ ನೀವು ವರ್ತಿಸಿದರೆ ಮುಂದೆ ಆತ ಜೀವನವಿಡೀ ತಪ್ಪು ದಾರಿಯಲ್ಲೇ ಸಾಗಬಹುದು. ಮುಂದೆ ಪಶ್ಚತ್ತಾಪ ಪಡುವ ಬದಲು ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?

ಹೆಣ್ಣಿಗೆ ಗೌರವ ನೀಡುವುದನ್ನು ಕಲಿಸಿ: ಮನೆಯಲ್ಲಿ ಅಪ್ಪ ಅಮ್ಮನನ್ನು ಹೇಗೆ ಗೌರವಿಸುತ್ತಾನೆ ಎನ್ನುವುದನ್ನು ನೋಡಿಯೇ ಮಗ ಹೆಣ್ಣಿನ ಕುರಿತು ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾನೆ. ಒಂದು ವೇಳೆ ತಂದೆಯಾದವನು ಹೆಂಡತಿಯನ್ನು ಕೀಳಾಗಿ ನೋಡುವುದು, ಹೊಡೆಯುವುದು ಬಡಿಯುವುದು ಮಾಡಿದರೆ, ಮಗ ಕೂಡ ಇದು ಗಂಡಿನ ಹಕ್ಕು ಎಂಬಂತೆ ಭಾವಿಸುವ ಸಾಧ್ಯತೆಯಿದೆ. ಇದರಿಂದ ಆತ ಒಡಹುಟ್ಟಿದವಳೂ ಸೇರಿದಂತೆ ಯಾವುದೇ ಹೆಣ್ಣಿಗೂ ಗೌರವ ನೀಡದಿರಬಹುದು. ಆದಕಾರಣ ಹೆಣ್ಣುಮಕ್ಕಳೊಂದಿಗೆ ಹೇಗೆ ಮಾತನಾಡಬೇಕು, ನಡೆದುಕೊಳ್ಳಬೇಕು ಎಂಬುದನ್ನು ಗಂಡು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು.

ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಲು ಬಿಡಿ: ನಮ್ಮ ಸಮಾಜದಲ್ಲಿ ಗಂಡು ಮಕ್ಕಳು ಅತ್ತರೆ ಇಂದಿಗೂ ಗೇಲಿ ಮಾಡುತ್ತಾರೆ. ಅಳುವುದೇನಿದ್ದರೂ ಹೆಣ್ಣುಮಕ್ಕಳಿಗೆ ಸೇರಿದ್ದು ಎಂಬ ಭಾವನೆಯಿದೆ. ಇದು ತಪ್ಪು. ಗಂಡು ಮಕ್ಕಳಿಗೆ ಅವರ ಭಾವನೆಗಳನ್ನು ನಿಮ್ಮೆದುರು ತೋರ್ಪಡಿಸಲು ಅವಕಾಶ ನೀಡಿ. ಇದರಿಂದ ಅವರ ಮನಸ್ಸು ಕೂಡ ಹಗುರವಾಗುತ್ತದೆ. ಅವರೊಂದಿಗೆ ಸ್ನೇಹಿತರಂತೆ ವರ್ತಿಸಿ. ಇದರಿಂದ ಅವರು ಶಾಲೆ, ಕಾಲೇಜು ಅಥವಾ ಸ್ನೇಹಿತರ ಜೊತೆ ನಡೆದ ಎಲ್ಲ ವಿಚಾರಗಳನ್ನು ನಿಮ್ಮ ಬಳಿ ಮುಕ್ತವಾಗಿ ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.  

ಮನೆಗೆಲಸಗಳನ್ನು ಕಲಿಸಿ: ಮನೆ ಕೆಲಸಗಳು ಮಹಿಳೆಯರಿಗೆ ಮೀಸಲು ಎಂಬ ಭಾವನೆ ಇಂದಿಗೂ ಇದೆ. ಇದೇ ಕಾರಣಕ್ಕೆ ಬಹುತೇಕ ಗಂಡಸರು ಮನೆಗೆಲಸಗಳಲ್ಲಿ ಪತ್ನಿಗೆ ನೆರವು ನೀಡುವುದಿಲ್ಲ. ಆಕೆ ಉದ್ಯೋಗಸ್ಥೆಯಾಗಿದ್ದರೂ ಮನೆಗೆಲಸಗಳಲ್ಲಿ ನೆರವಿನ ಹಸ್ತ ಚಾಚಲು ಹಿಂದೇಟು ಹಾಕುತ್ತಾರೆ. ಗಂಡು ಮಕ್ಕಳ ಬಳಿಯೂ ಮನೆಗೆಲಸಗಳನ್ನು ಮಾಡಿಸಿ. ಇದರಿಂದ ಅವರು ಪ್ರತಿ ಕೆಲಸಕ್ಕೂ ತಾಯಿ ಅಥವಾ ಹೆಂಡತಿಯನ್ನು ಅವಲಂಬಿಸಬೇಕಾದ ಅಗತ್ಯವಿರುವುದಿಲ್ಲ.

ಅನುಕಂಪ, ಕರುಣೆಯ ಪಾಠ ಮಾಡಿ: ಹೆಣ್ಣುಮಕ್ಕಳೂ ಸೇರಿದಂತೆ ಅನ್ಯರ ಕಷ್ಟಗಳಿಗೆ ಮರುಗುವ, ಅನುಕಂಪ ತೋರುವ ಗುಣವನ್ನು ಗಂಡು ಮಕ್ಕಳಲ್ಲಿ ಬೆಳೆಸಿ. ಕಷ್ಟದಲ್ಲಿರುವವರಿಗೆ ನೆರವು ನೀಡುವ ಗುಣ ಬೆಳೆಸಿ.

ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?

ದುಡಿಮೆಯ ಸುಖವನ್ನು ಮನಗಾಣಿಸಿ: ಕಷ್ಟಪಟ್ಟು ದುಡಿದರೆ ಮಾತ್ರ ಸುಖ ಸಿಗುತ್ತದೆ ಎಂಬ ಭಾವನೆಯಲ್ಲಿ ಗಂಡುಮಕ್ಕಳಲ್ಲಿ ಬಿತ್ತುವುದು ಅಗತ್ಯ. ದುಡಿಮೆಯ ಹಣದಲ್ಲಿರುವ ಸುಖವನ್ನು ಬಾಲ್ಯದಲ್ಲೇ ಅವರಿಗೆ ಪರಿಚಯಿಸಬೇಕು. ಹೀಗಾಗಿ ಅವರು ಕೇಳಿದ್ದನ್ನೆಲ್ಲ ಕೊಡಿಸುವ ಅಭ್ಯಾಸ ನಿಮ್ಮಗಿದ್ದರೆ ಬಿಟ್ಟು ಬಿಡಿ. ಕೇಳಿದ್ದನ್ನೆಲ್ಲ ಕೊಡಿಸಿದರೆ ಎಲ್ಲವೂ ಸುಲಭವಾಗಿ ಕೈಗೆ ಸಿಗುತ್ತದೆ ಎಂಬ ಭಾವನೆ ಅವರಲ್ಲಿ ಬೆಳೆಯುವ ಸಾಧ್ಯತೆಯಿದೆ. 

ಜವಾಬ್ದಾರಿಗಳನ್ನು ಹೊರೆಸಿ: ಗಂಡುಮಕ್ಕಳಿಗೆ ಬಾಲ್ಯದಿಂದಲೇ ಮನೆಯ ಚಿಕ್ಕಪುಟ್ಟ ಜವಾಬ್ದಾರಿಗಳನ್ನು ಹೊರಿಸಿ. ಉದಾಹರಣೆಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ತರಲು ಅವರನ್ನೇ ಕಳುಹಿಸಿ. ಇದರಿಂದ ದೊಡ್ಡವರಾದ ಬಳಿಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಅವರು ಪ್ರಯತ್ನಿಸುವುದಿಲ್ಲ. 

Follow Us:
Download App:
  • android
  • ios