ಕೂದಲುದುರೀ ಉದುರಿ ಬ್ಯಾಂಡ್ ಸುತ್ತೀ ಸುತ್ತೀ ಸಾಕಾಗುವಷ್ಟು ತೆಳುವಾಗುವ ಸಮಸ್ಯೆ ಇಂದು ವಯಸ್ಸಿನ ಹಂಗು ಮೀರಿ ಬಹುತೇಕರನ್ನು ಕಾಡುತ್ತಿದೆ. ಕೂದಲು ವ್ಯಕ್ತಿಯ ಆರೋಗ್ಯ ಹಾಗೂ ಅಂದವೆರಡನ್ನೂ ಮೊದಲ ನೋಟದಲ್ಲೇ ಹೇಳಿಬಿಡುತ್ತದೆ.

ಹೀಗಾಗಿ, ಆರೋಗ್ಯವಂತ ದಪ್ಪ ಕೂದಲು ವ್ಯಕ್ತಿಯನ್ನು, ವ್ಯಕ್ತಿತ್ವವನ್ನೂ ಆಕರ್ಷಕಗೊಳಿಸುತ್ತದೆ. ಇಂದಿನ ಸವಳು ನೀರು, ಅತಿಯಾದ ಶಾಂಪೂ ಸೇರಿದಂತೆ ಇತರೆ ಕೆಮಿಕಲ್ಸ್ ಬಳಕೆ, ಹೀಟ್ ಹಾಗೂ ಡ್ರೈಯರ್ ಬಳಕೆ, ಕಲಬೆರಕೆ ಆಹಾರ, ಹಾರ್ಮೋನಿನಲ್ಲಿ ಬದಲಾವಣೆ, ಪರಿಸರ ಮಾಲಿನ್ಯ ಎಲ್ಲವೂ ಸೇರಿ ತಲೆಯಲ್ಲಿರಬೇಕಾದ ಕೂದಲು ನೆಲದಲ್ಲಿ ಬಿದ್ದು ಹೊಳಕುವಂತೆ ಮಾಡುತ್ತವೆ. ಆದರೆ, ನಿಮ್ಮ ಪ್ರೀತಿಯ ಕೂದಲು ನಿಮ್ಮನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಮತ್ತಷ್ಟು ಹೊಸ ಕೂದಲುಗಳು ಹುಟ್ಟಿ ಸೊಂಪಾಗಿ ಬೆಳೆಸಬೇಕೆಂದರೆ ಸ್ವಲ್ಪ ಹೆಚ್ಚಿನ ಗಮನ ವಹಿಸಿ ಆರೈಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕೆಲ ಮನೆಮದ್ದುಗಳಿವೆ. 

1. ಮೊಟ್ಟೆಗಳು

ಆರೋಗ್ಯವಂತ ಕೂದಲಿನ ಮೂಲಸತ್ವವೇ ಪ್ರೋಟೀನ್. ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿರುವುದರಿಂದ ಅವುಗಳು ಕೂದಲನ್ನು ದಪ್ಪವಾಗಿಯೂ, ಬಲಶಾಲಿಯಾಗಿಯೂ ಇರಿಸಬಲ್ಲವು. ಕೂದಲಿನ ಬಹುತೇಕ ಎಲ್ಲ ಚಿಕಿತ್ಸೆಯಲ್ಲೂ ಮೊಟ್ಟೆಗಳನ್ನು ಬಳಸಲಾಗುತ್ತದೆ. ವಾರಕ್ಕೆರಡು ಬಾರಿ ಹೀಗೆ ಮಾಡಿ. 

ಎರಡು ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ತಿರುವಿ. ಇದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಹಾಗೂ ಎರಡು ಚಮಚ ನೀರು ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿನ ಬುಡ ಹಾಗೂ ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ಬಳಿಕ ಸೀಗೇಪುಡಿ ಹಾಗೂ ದಾಸವಾಳ ಅಥವಾ ಮತ್ತಿ ಸೊಪ್ಪಿನ ಗುಳದಿಂದ ಚೆನ್ನಾಗಿ ತೊಳೆಯಿರಿ. ಈ ಗುಳಕ್ಕೆ ಸ್ವಲ್ಪ ನಿಂಬೆರಸ ಹಾಕಿಕೊಂಡರೆ ಕೂದಲಿನ ಕಾಂತಿಯೂ ಹೆಚ್ಚುತ್ತದೆ, ಮೊಟ್ಟೆಯ ವಾಸನೆಯೂ ಹೋಗುತ್ತದೆ. 

2. ನೆಲ್ಲಿಕಾಯಿ

ನೆಲ್ಲಿಕಾಯಿಗಳು ವಿಟಮಿನ್ ಸಿಯಿಂದ ಶ್ರೀಮಂತವಾಗಿದ್ದು, ಆ್ಯಂಟಿಆಕ್ಸಿಡೆಂಟ್ಸ್ ಹಾಗೂ ಆ್ಯಂಟಿ ಇನ್ಫೇಮೇಟರಿ ಗುಣ ಹೊಂದಿವೆ. ಬಹಳ ಹಿಂದಿನಿಂದಲೂ ಭಾರತೀಯ ಮಹಿಳೆಯರು ನೆಲ್ಲಿಕಾಯಿಯ ಆರೈಕೆಯನ್ನು ಕೂದಲಿಗೆ ಮಾಡುತ್ತಲೇ ಬಂದಿದ್ದಾರೆ. ಹೇಗೆ ಕೇಳಿದ್ರಾ? ಸಣ್ಣ ಬಾಣಲೆಯಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ. ಕಂದು ಬಣ್ಣಕ್ಕೆ ಬಂದ ಬಳಿಕ ಸ್ಟೌ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಮುಕ್ಕಾಲು ಗಂಟೆಯ ಬಳಿಕ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆಯಂತೆ ನಾಲ್ಕು ವಾರಗಳ ಕಾಲ ಮಾಡಿ ನೋಡಿ.

3. ಅಲೋವೆರಾ

ವಿಟಮಿನ್ ಎ,ಬಿ, ಸಿ ಹಾಗೂ ಇಯಿಂದ ತುಂಬಿರುವ ಲೋಳೆಸರ ಕೂದಲನ್ನು ಮಾಯಿಶ್ಚರೈಸ್ ಮಾಡಿ, ಹೊಟ್ಟನ್ನು ತಡೆಯುತ್ತದೆ. ಜೊತೆಗೆ ಕಾಂತಿಯನ್ನೂ ನೀಡುತ್ತದೆ. ಹೊಟ್ಟು ಕಡಿಮೆಯಾದರೆ ಕೂದಲುದುರುವುದೂ ನಿಲ್ಲುತ್ತದೆ. ತನ್ನಂತಾನೇ ದಪ್ಪನೆಯ ಕೂದಲು ನಿಮ್ಮದಾಗುತ್ತದೆ. ಇದರಲ್ಲಿರುವ ಪ್ರೋಟಿಯೋಲಿಟಿಕ್ ಎಂಜೈಮ್ಸ್ ಸತ್ತ ಕೋಶಗಳಿಗೆ ಬೈಬೈ ಹೇಳಿಸಿ ಆರೋಗ್ಯವಂತ ಕೋಶಗಳು ನೆತ್ತಿಯಲ್ಲಿರುವಂತೆ ನೋಡಿಕೊಳ್ಳುತ್ತವೆ. 5 ಚಮಚ ಅಲೋವೆರಾ ಜೆಲ್ಲನ್ನು 3 ಚಮಚ ಕೊಬ್ಬರಿ ಎಣ್ಣೆಗೆ ಬೆರೆಸಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಹತ್ತು ನಿಮಿಷ ಮಸಾಜ್ ಮಾಡಿ. 30 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಚೆನ್ನಾಗಿ ತಲೆಸ್ನಾನ ಮಾಡಿ. ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕೂಡಾ ಕೂದಲು ಸದೃಢವಾಗುತ್ತದೆ.

4. ಮೆಂತ್ಯೆ

ಮೆಂತ್ಯೆ ಕಾಳುಗಳು ಅಮೈನೋ ಆ್ಯಸಿಡ್ಸ್, ಪ್ರೋಟೀನ್ ಹಾಗೂ ಲೆಸಿತಿನ್ ಹೊಂದಿವೆ. ಅವು ಕೂದಲನ್ನು ದಪ್ಪಗೊಳಿಸುವ ಜೊತೆಗೆ ಹೊಟ್ಟಿಗೆ ರಾಮಬಾಣ.
ಮೆಂತ್ಯೆ ಪೌಡರ್ ಮಾಡಿಟ್ಟುಕೊಂಡು, ಒಂದು ಚಮಚ ಮೆಂತ್ಯೆ ಪುಡಿಗೆ 5 ಚಮಚ ಮೊಸರು ಹಾಗೂ ಎರಡು ಚಮಚ ಕೊಬ್ಬರಿ ಎಣ್ಣೆ ಬೆರೆಸಿ. ಅದನ್ನು ತಲೆಯ ಬುಡ ಹಾಗೂ ಕೂದಲಿಗೆ ಹಚ್ಚಿ ಎರಡು ಗಂಟೆಗಳ ಕಾಲ ಬಿಡಿ. ನಂತರ ತಲೆಸ್ನಾನ ಮಾಡಿ. ವಾರದಲ್ಲೊಮ್ಮೆಯಂತೆ ನಾಲ್ಕು ವಾರಗಳ ಕಾಲ ಮಾಡಿ ನೋಡಿ. ಬದಲಾವಣೆ ನಿಮ್ಮ ಅನುಭವಕ್ಕೆ ಸಿಗುತ್ತದೆ.