ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!
ಮಾಜಿ ಸಚಿವ ಆರ್. ಎಲ್. ಜಾಲಪ್ಪ ಅವರ ಒಡೆತನದ ಸಂಸ್ಥೆ ಪರಿಶೀಲನೆ ಸಂದರ್ಭ ಐಟಿ ಅಧಿಕಾರಿಗಳು ಕ್ಯಾಷಿಯರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಫೋನ್ ಕೇಳಿದಾಗ ಸಿಮ್ ಎಸೆದ ಕ್ಯಾಷಿಯರ್ ನಡೆಯಿಂದ ಅಧಿಕಾರಿಗಳು ಕೋಪಗೊಂಡಿದ್ದಾರೆ.
ಕೋಲಾರ(ಅ.13): ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಒಡೆತನದ ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ದಾಳಿ ಶನಿವಾರ ಮುಕ್ತಾಯವಾಗಿದೆ.
ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಯಲ್ಲಿ ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಸತತ 60 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯ ನಡೆಸಿದರು. ಕಾಲೇಜಿನ ವಿವರವನ್ನು ಹಾರ್ಡ್ ಡಿಸ್ಕ್‌ನಲ್ಲಿ ಭದ್ರ ಮಾಡಿಕೊಂಡಿದ್ದಾರೆ.
ಜಾಲಪ್ಪ ಅವರ ವಿಚಾರಣೆ:
ಮೂರು ವರ್ಷಗಳ ಕಾಲ ಕಾಲೇಜಿನಲ್ಲಿ ನಡೆದ ದಾಖಲಾತಿ ವಿವರ, ಎನ್.ಆರ್.ಐ ಹಾಗೂ ಮ್ಯಾನೇಜ್ಮೆಂಟ್ ಖೋಟಾದಲ್ಲಿ ಎಷ್ಟುಸೀಟು ನೀಡಿದ್ದೀರಾ ಅಂತ ಕಾಲೇಜಿನ ಅಧ್ಯಕ್ಷ ಆರ್.ಎಲ್ ಜಾಲಪ್ಪ, ಮಗ ರಾಜೇಂದ್ರ, ಪತ್ನಿ ಸುಜಾತ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡು ಅನುಮಾನ ಬಂದ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರದಲ್ಲಿ ಜಾಲಪ್ಪ ಸಂಸ್ಥೆಗಳ ಮೇಲೆ ಐಟಿ ದಾಳಿ
ಶುಕ್ರವಾರ ಸಂಜೆ 7.30 ರ ವೇಳೆಯಲ್ಲಿ ಜಾಲಪ್ಪ ಅವರ ಅಳಿಯ ಹಾಗೂ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ನಾಗರಾಜ್ ಅವರನ್ನು ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಕರೆತಂದು 30 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ತೋರಿಸಿ ಪ್ರಶ್ನೆಗಳನ್ನು ಕೇಳುವ ಮೂಲಕ ಮತ್ತಷ್ಟುಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಕ್ಯಾಷಿಯರ್‌ಗೆ ಕಪಾಳ ಮೋಕ್ಷ?
ಎರಡನೇ ದಿನದ ರಾತ್ರಿ ಜಾಲಪ್ಪ ಗೆಸ್ಟ್ ಹೌಸ್ ನಲ್ಲೇ ತಂಗಿದ್ದ 13 ಕ್ಕೂ ಹೆಚ್ವು ಐಟಿ ಅಧಿಕಾರಿಗಳು, ಮೂರನೇ ದಿನವಾದ ಶನಿವಾರ ಐಟಿ ಶೋಧ ಕಾರ್ಯವನ್ನು ಬೆಳಿಗ್ಗೆ 6 ಗಂಟೆಗೆ ಮುಂದುವರೆಸಿದರು. ಕಾಲೇಜಿನ ಪ್ರಾಂಶುಪಾಲ ಶ್ರೀ ರಾಮುಲು, ರಿಜಿಸ್ಟಾ್ರರ್ ಕೆ.ಎಂ.ವಿ ಪ್ರಸಾದ್, ಆಸ್ಪತ್ರೆಯ ಮೆಡಿಕಲ್ ಸೂಪರ್ ಡೆಂಟ್ ಲಕ್ಷ್ಮಯ್ಯ ಅವರನ್ನು ಸಂಜೆ 4 ಗಂಟೆವರೆಗೂ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ದೇವರಾಜ ಅರಸು ಮೆಡಿಕಲ್ ಕಾಲೇಜಿನ ಕ್ಯಾಷಿಯರ್ ನಾರಾಯಣಸ್ವಾಮಿ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದರು ಎನ್ನಲಾಗಿದೆ.
ಕೈ ಮುಖಂಡನ ಅಳಿಯನ ಮನೆಯಲ್ಲಿತ್ತು ದಾಖಲೆ ಇಲ್ಲದ ಲಕ್ಷ ಲಕ್ಷ ಹಣ
ಅಧಿಕಾರಿಗಳು ಮೊಬೈಲ್ ಕೇಳಿದಾಗ ನಾರಾಯಣಸ್ವಾಮಿ ಅದರಲ್ಲಿದ್ದ ಸಿಮ್ ಕಾರ್ಡ್ ಬಿಸಾಡಿದರೆಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಐಟಿ ಅಧಿಕಾರಿಗಳು ನಾರಾಯಣಸ್ವಾಮಿ ಕಪಾಳಕ್ಕೆ ಹೊಡೆದರು ಎನ್ನಲಾಗಿದೆ. ಬಳಿಕ ಅಧಿಕಾರಿಗಳು ಸಿಮ್ ಪಡೆದುಕೊಂಡರು ಎಂದು ಹೇಳಲಾಗುತ್ತಿದೆ.
ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾಳಿ