ಕೊಡಗಿನಲ್ಲಿ ವಾಡಿಕೆಯಷ್ಟೇ ಮಳೆ, 2 ವರ್ಷದಲ್ಲಿ 42 ಬಲಿ..!
ಮಳೆಗಾಲ ಮುಗಿದಿದ್ದು, ಈ ವರ್ಷ ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ ವಾಡಿಕೆಯಷ್ಟೇ ಮಳೆಯಾಗಿದ್ದು, ವಾಡಿಕೆಗಿಂತ 107.5 ಮಿ.ಮೀ. ಮಳೆ ಮಾತ್ರ ಹೆಚ್ಚು ಸುರಿದಿದೆ. ಆದರೆ ಆಗಸ್ಟ್ ಒಂದೇ ತಿಂಗಳಲ್ಲಿ 1,154 ಮಿ.ಮೀ. ಸುರಿದ ಭಾರಿ ಮಳೆ ಅಪಾರ ಹಾನಿಗೆ ಕಾರಣವಾಗಿತ್ತು.
ಮಡಿಕೇರಿ(ನ.15): ಮಳೆಗಾಲ ಮುಗಿದಿದ್ದು, ಈ ವರ್ಷ ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ ವಾಡಿಕೆಯಷ್ಟೇ ಮಳೆಯಾಗಿದ್ದು, ವಾಡಿಕೆಗಿಂತ 107.5 ಮಿ.ಮೀ. ಮಳೆ ಮಾತ್ರ ಹೆಚ್ಚು ಸುರಿದಿದೆ. ಆದರೆ ಆಗಸ್ಟ್ ಒಂದೇ ತಿಂಗಳಲ್ಲಿ 1,154 ಮಿ.ಮೀ. ಸುರಿದ ಭಾರಿ ಮಳೆ ಅಪಾರ ಹಾನಿಗೆ ಕಾರಣವಾಗಿತ್ತು.
ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ತಿಂಗಳ ವರೆಗೆ ಮಳೆ ಪ್ರಮಾಣ ಕ್ಷೀಣಿಸಿತ್ತು. ಇದರಿಂದಾಗಿ ಜನತೆ ಆತಂಕಕ್ಕೆ ಒಳಗಾಗಿದ್ದರು. ಆದರೆ ಆಗಸ್ಟ್‌ನಲ್ಲಿ ಭಾರಿ ಮಳೆಯಾಯಿತು. ಸತತವಾಗಿ ಸುರಿದ ಮಳೆಯಿಂದಾಗಿ ಜನ ಸಂಕಷ್ಟಕ್ಕೆ ಒಳಗಾಗುವಂತಾಗಿತ್ತು. ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿತ್ತು. ಇದಲ್ಲದೆ ಸೆಪ್ಟಂಬರ್ ತಿಂಗಳಲ್ಲೂ ಭಾರಿ ಮಳೆ ಸುರಿದಿತ್ತು.
ಕೊಡಗು: ಕೊಟ್ಟಿಗೆಯಲ್ಲಿದ್ದ ಹಸುವನ್ನು 100 ಮೀಟರ್ ಎಳೆದೊಯ್ದ ಹುಲಿ
ಜನವರಿಯಿಂದ ಅಕ್ಟೋಬರ್ ವರೆಗೆ 2,781 ಮಿ.ಮೀ. ವಾಡಿಕೆ ಮಳೆ. ಈ ವರ್ಷ 2,889 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ಮಳೆ ಕಡಿಮೆಯಿದ್ದರೂ ಆಗಸ್ಟ್‌ನಲ್ಲಿ ಅಪಾರ ಮಳೆಯಾಗಿತ್ತು. 2017ರಲ್ಲಿ 2,193 ಮಿ.ಮೀ, 2018ರಲ್ಲಿ 3,659 ಮಿ.ಮೀ ಭಾರೀ ಮಳೆಯಾಗಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿತ್ತು.
ಆಗಸ್ಟ್‌ನಲ್ಲಿ ದಾಖಲೆ ಮಳೆ:
ಜನವರಿಯಿಂದ ಏಪ್ರಿಲ್ ತಿಂಗಳ ವರೆಗೆ ಹಿಂಗಾರು ಮಳೆಯಾಗಿದ್ದು, ಜಿಲ್ಲೆಯಲ್ಲಿ 89 ಮಿ.ಮೀ. ಮಳೆಯಾಗಿತ್ತು. ವಾಡಿಕೆ ಮಳೆ 112. ಶೇ.20ರಷ್ಟುಮಳೆ ಕೊರತೆಯಿತ್ತು. ಮೇ ತಿಂಗಳಿನಿಂದ ಸೆಪ್ಟಂಬರ್ ವರೆಗೆ ಜಿಲ್ಲೆಯಲ್ಲಿ ಮುಂಗಾರು ಮಳೆಯಾಗಿದ್ದು, 2,468 ವಾಡಿಕೆ ಮಳೆಯಾಗಬೇಕಿತ್ತು. ಈ ಬಾರಿ 2,497 ಮಿ.ಮೀ. ಮಳೆಯಾಗಿದೆ. ಆದರೆ ಜಿಲ್ಲೆಯಲ್ಲಿ ಆಗಸ್ಟ್ ಒಂದೇ ತಿಂಗಳಲ್ಲಿ ಸುಮಾರು 1,154 ಮಿ.ಮೀ. ಮಳೆಯಾಗಿದೆ. ಈ ತಿಂಗಳಲ್ಲಿ 602 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 2018ರಲ್ಲಿ ಇದೇ ತಿಂಗಳಲ್ಲಿ 1,024 ಮಿ.ಮೀ. ಮಳೆಯಾಗಿತ್ತು.
ಹಿಂಗಾರು ಮಳೆ:
ಅಕ್ಟೋಬರ್ ತಿಂಗಳಲ್ಲಿ ಹಿಂಗಾರು ಮಳೆಯಾಗಿದೆ. ಈ ಬಾರಿ ಸೈಕ್ಲೋನ್ ಪರಿಣಾಮ ವಾಡಿಕೆಗಿಂತ ಅಧಿಕ ಮಳೆಯಾಗಿದೆ. 199 ಮಿ.ಮೀ. ವಾಡಿಕೆ ಮಳೆ. ಆದರೆ ಈ ತಿಂಗಳಲ್ಲಿ 302 ಮಿ.ಮೀ. ಮಳೆಯಾಗಿದ್ದು, ಕಾಫಿ, ಕಾಳು ಮೆಣಸು, ಹಾಗೂ ಕಿತ್ತಳೆ ಬೆಳೆಗಾರರು ಆತಂಕಗೊಂಡಿದ್ದರು.
ತಾಲೂಕುವಾರು ವಿವರ:
ಈ ವರ್ಷವೂ ಮಡಿಕೇರಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಜನವರಿಯಿಂದ ಅಕ್ಟೋಬರ್ ವರೆಗೆ 3,976 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಈ ಬಾರಿ 3,701 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,964 ಮಿ.ಮೀ. ದಾಖಲೆಯ ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವಧಿಯಲ್ಲಿ 2,131 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. 2,008 ಮಿ.ಮೀ ಮಾತ್ರ ಮಳೆಯಾಗಿದೆ. ಕಳೆದ ವರ್ಷ 2,922 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ 2,236 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಈ ವರ್ಷ 2,959 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,091 ಮಿ.ಮೀ ಮಳೆಯಾಗಿತ್ತು.
ಎರಡು ವರ್ಷದಲ್ಲಿ 42 ಬಲಿ!
ಕೊಡಗಿನಲ್ಲಿ 2018 ಹಾಗೂ 2019ರಲ್ಲಿ ಮಳೆಯಿಂದಾಗಿ ಸುಮಾರು 42 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯ ವರೆಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 21 ಮಾನವ ಜೀವ ಬಲಿಯಾಗಿದೆ. 1,141 ಮನೆಗಳಿಗೆ ಹಾನಿಯಾಗಿತ್ತು. ತೋರಾದಲ್ಲಿ ಭೂಕುಸಿತ ಉಂಟಾದ ಪ್ರದೇಶದಲ್ಲಿ ನಾಲ್ವರು ಕಣ್ಮರೆಯಾಗಿದ್ದು, ಇಂದಿಗೂ ಅವರ ಮೃತದೇಹ ಪತ್ತೆಯಾಗಿಲ್ಲ. 84 ಜಾನುವಾರು ಬಲಿಯಾಗಿತ್ತು. 2018ರಲ್ಲಿ 21 ಮಂದಿ ಮೃತಪಟ್ಟಿದ್ದರು. ಪ್ರಕೃತಿ ವಿಕೋಪದಲ್ಲಿ ಜೋಡುಪಾಲದಲ್ಲಿ ಬಾಲಕಿಯೊಬ್ಬಳು ಕಾಣೆಯಾಗಿದ್ದು, ಪತ್ತೆಯಾಗಿಲ್ಲ. ಈ ಅವಧಿಯಲ್ಲಿ ಸುಮಾರು 3,493 ಮನೆಗಳಿಗೆ ಹಾನಿಯಾಗಿತ್ತು. 268 ಜಾನುವಾರು ಬಲಿಯಾಗಿತ್ತು.
ಮಳೆ ವಿವರ
(ಜನವರಿಯಿಂದ ಅಕ್ಟೋಬರ್ ವರೆಗೆ)
ವಾಡಿಕೆಮಳೆ: ಸುರಿದ ಮಳೆ(ಮಿ.ಮೀ.)
2,781 2017 2018 2019
2,193 3,659 2,889
-ವಿಘ್ನೇಶ್ ಎಂ. ಭೂತನಕಾಡು